ಬೆಂಗಳೂರು: ಸನಾತನ ಧರ್ಮ ಕುರಿತು ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ನೀಡಿದ ಹೇಳಿಕೆಯನ್ನು ಆಕ್ಷೇಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಾಲಿನ್ ಅವರಿಗೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.
“ಸನಾತನ ಧರ್ಮ ಸಾಂಕ್ರಾಮಿಕ ರೋಗ ಇದ್ದಂತೆ. ಅದನ್ನು ಬುಡ ಸಮೇತ ಕಿತ್ತು ಹಾಕಿದಾಗ ಮಾತ್ರ ದೇಶದಲ್ಲಿ ವೈಚಾರಿಕತೆ ಬೆಳೆದು ಶಾಂತಿ ನೆಲೆಸುತ್ತದೆ” ಎಂದು ಉದಯನಿಧಿ ಸ್ಟಾಲಿನ್ ‘ಚೆನ್ನೈನ ತೆಯನಂಪೇಟೆಯಲ್ಲಿ 2023ರ ಸೆಪ್ಟೆಂಬರ್ 3ರಂದು ನಡೆದಿದ್ದ, ‘ಸನಾತನ ಧರ್ಮ ನಿರ್ಮೂಲನಾ ಸಮಾವೇಶ’ದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಇದು ಹಿಂದೂಗಳ ಭಾವನೆಗೆ ಧಕ್ಕೆ ತರುತ್ತದೆ ಎಂದು ಬೆಂಗಳೂರಿನ ಬೆಳತ್ತೂರು ಕಾಲೋನಿಯ ವಿ.ಪರಮೇಶ್ ಖಾಸಗಿ ದೂರು ದಾಖಲಿಸಿದ್ದರು.
ದೂರಿನಲ್ಲಿ ‘ಸ್ಟಾಲಿನ್ ಹೇಳಿಕೆಯು ಸಮಾಜದಲ್ಲಿ ಅಶಾಂತಿ, ದಂಗೆ ಎಬ್ಬಿಸಲು ಪ್ರಚೋದನೆ ನೀಡುವಂತಿದೆ. ಇದರಿಂದ ನನ್ನ ಧಾರ್ಮಿಕ ಭಾವನೆಗೆ ದಕ್ಕೆಯುಂಟಾಗಿದೆ’ ಎಂದು ಆರೋಪಿಸದ್ದರು.
ದೂರಿನ ಅನುಸಾರ ಭಾರತೀಯ ದಂಡ ಸಂಹಿತೆ–1860ರ ಕಲಂ 153, 298 ಮತ್ತು 500ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ವಿಚಾರಣಾ ನ್ಯಾಯಾಲಯ ಸಚಿವ ಉದಯನಿಧಿ ಸ್ಟಾಲಿನ್ ಹಾಗೂ ಅರ್ಜಿದಾರರಿಗೆ ಸಮನ್ಸ್ ಜಾರಿಗೊಳಿಸಿತ್ತು.
ಈ ಸಂಬಂಧ ನೋಟಿಸ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಸಚಿವ ಉದಯ ನಿಧಿ ಸ್ಟಾಲಿನ್ ಅವರು ಮಂಗಳವಾರ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಮುಂದೆ ಖುದ್ದು ಹಾಜರಾಗಿದ್ದರು.
ಹಾಜರಾತಿಯನ್ನು ದಾಖಲಿಸಿಕೊಂಡ ನ್ಯಾಯಾಧೀಶರು, ₹5 ಸಾವಿರ ನಗದು ಹಾಗೂ ₹50 ಸಾವಿರ ಮೊತ್ತದ ಆರೋಪಿಯ ವೈಯಕ್ತಿಕ ಬಾಂಡ್ ಮೇರೆಗೆ ಜಾಮೀನು ನೀಡಿದರು. ವಿಚಾರಣೆಯನ್ನು ಆಗಸ್ಟ್ 8ಕ್ಕೆ ಮುಂದೂಡಲಾಗಿದೆ.
ಉದಯನಿಧಿ ಪರ ಹೈಕೋರ್ಟ್ ವಕೀಲರಾದ ಬಾಲಾಜಿ ಸಿಂಗ್, ಚೆನ್ನೈನ ವಿಲ್ಸನ್ ಹಾಗೂ ದೂರುದಾರರ ಪರ ಕರ್ನಾಟಕ ಹೈಕೋರ್ಟ್ ವಕೀಲ ಧರ್ಮಪಾಲ್ ಹಾಜರಿದ್ದರು.