ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ‘ಗದ್ದರ್’ (ದ್ರೋಹಿ) ಎಂದು ಕರೆದಿದ್ದುದಕ್ಕಾಗಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಅವರು ಕಾರ್ಯಕ್ರಮ ನೀಡಿರುವ ಸ್ಟುಡಿಯೊನಲ್ಲಿ ಶಿವಸೇನೆ ಕಾರ್ಯಕರ್ತರು ಗಲಾಟೆ ನಡೆಸಿ ಧ್ವಂಸ ಮಾಡಿದ್ದಾರೆ. ಕುನಾಲ್ ಅವರನ್ನು ಹೊರದೇಶಕ್ಕೆ ರವಾನಿಸಬೇಕು ಎಂದು ಶಿವಸೇನಾ ಮುಖಂಡರು ಬೆದರಿಕೆ ಹಾಕಿದ್ದಾರೆ.
ಇತ್ತೀಚೆಗೆ ನಡೆದ ‘ನಯಾ ಭಾರತ್’ ಎಂಬ ಕಾರ್ಯಕ್ರಮದಲ್ಲಿ ಪಕ್ಷವನ್ನು ವಿಭಜಿಸಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಕ್ಕಾಗಿ ಕುನಾಲ್ ಕಾಮ್ರಾ ಶಿಂಧೆ ಅವರನ್ನು ‘ದ್ರೋಹಿ’ ಎಂದು ಟೀಕಿಸಿದ್ದರು.
ಕುನಾಲ್ ಕಾಮ್ರಾ ಸ್ವತಃ ಹಂಚಿಕೊಂಡ ಕಾರ್ಯಕ್ರಮದ ಕ್ಲಿಪ್‌ನಲ್ಲಿ, “ಥಾಣೆಯ ನಾಯಕ” ಎಂದು ಉಲ್ಲೇಖಿಸಿ ದಿಲ್ ತೋ ಪಾಗಲ್ ಹೈ ಹಾಡನ್ನು ಅಣಕಿಸುವ ಹಾಡನ್ನು ಹಾಡಿದ್ದರು. ಕಾಮ್ರಾ ಶಿಂಧೆ ಅವರ ಹೆಸರನ್ನು ಸ್ಪಷ್ಟವಾಗಿ ಎಲ್ಲೂ ಉಲ್ಲೇಖಿಸರಲಿಲ್ಲ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿವಸೇನಾ ವಕ್ತಾರ ಕೃಷ್ಣ ಹೆಗ್ಡೆ, ಕುನಾಲ್ ಕಾಮ್ರಾ ಹೇಳಿಕೆಯು ಯಾವೊಬ್ಬ ‘ಶಿವ ಸೈನಿಕ’ನಿಗೂ ಇಷ್ಟವಾಗಿಲ್ಲ. ಅವರಿಗೆ ‘ಶಿವಸೇನಾ ಶೈಲಿಯ ಚಿಕಿತ್ಸೆ’ ನೀಡಲಾಗುವುದು ಎಂದು ಹೇಳಿದ್ದಾರೆ.
“ಈಗಾಗಲೇ ಕುನಾಲ್ ಕಾಮ್ರಾ ಅವರನ್ನು ವಿಮಾನಯಾನ ಸಂಸ್ಥೆಯೊಂದು ಪ್ರಯಾಣಿಸುವುದರಿಂದ ನಿಷೇಧ ಹೇರಿದೆ. ಇನ್ನೊಬ್ಬರನ್ನು ನಿಂದಿಸುವುದು, ಆ ಮೂಲಕ ಅಸಭ್ಯತೆಯನ್ನು ಮೆರೆಯುವ ಅವರ ಪರಿಪಾಠ ಹೆಚ್ಚಿದೆ. ಪೊಲೀಸರು ಈ ರೀತಿಯ ಅಪರಾಧಗಳನ್ನು ಮಾಡುತ್ತಲೇ ಇರುವ ಅಪರಾಧಿಗಳ ವಿರುದ್ಧ ಬಲವಾದ ಕ್ರಮ ತೆಗೆದುಕೊಳ್ಳಬೇಕು” ಎಂದು ಅವರು ಆಗ್ರಹಿಸಿದ್ದಾರೆ. ಆದರೆ, ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಅವರು “ಕುನಾಲ್ ಕಾ ಕಮಲ್” ಎಂಬ ವೀಡಿಯೊವನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನೊಬ್ಬ ಶಿವಸೇನೆ (ಯುಬಿಟಿ) ನಾಯಕ ಮತ್ತು ಶಾಸಕ ಆದಿತ್ಯ ಠಾಕ್ರೆ ಕುನಾಲ್ರಾ ಕಾಮ್ರಾ ಅವರ ಸ್ಟೂಡಿಯೋ ಮೇಲಿನ ದಾಳಿಯನ್ನು ಹೇಡಿಗಳ ಕೃತ್ಯ ಎಂದು ಪ್ರತಿಕ್ರಿಯಿಸಿದ್ದಾರೆ.
ಶಿವಸೇನೆ ಸಂಸದ ನರೇಶ್ ಮಸ್ಕೆ ಅವರು ದೇಶಾದ್ಯಂತ ಸೇನಾ ಕಾರ್ಯಕರ್ತರು ಕಾಮ್ರಾ ಅವರು ಎಲ್ಲೇ ಇದ್ದರು ಅವರನ್ನು ಬೆನ್ನಟ್ಟಿ ಹಿಡಿಯುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ. “ನೀವು ಭಾರತದಿಂದ ಪಲಾಯನ ಮಾಡುವುದಷ್ಟೇ ನಿಮ್ಮ ಮುಂದಿನ ಆಯ್ಕೆ” ಎಂದಿದ್ದಾರೆ.