(ಈ ವರೆಗೆ…)
ಲಕ್ಷ್ಮಿಯ ದೇಹ ಸೇರಿದ ಶಕ್ತಿ ಕೇಳಿದ ಎಲ್ಲ ವಸ್ತುಗಳನ್ನು ಮನೆಯವರು ಲಗುಬಗನೆ ಹೊಂದಿಸಿದರಾದರೂ ಅದು ಮಾತ್ರ ಮನಸು ಬದಲಾಯಿಸಿ ಗಟ್ಟಿಯಾಗಿ ಲಕ್ಷ್ಮಿಯನ್ನು ಹಿಡಿದೇ ಕುಳಿತಿತು. ಅಪ್ಪ ಮಂತ್ರವಾದಿಯನ್ನು ಕರೆತರಲು ನಿರ್ಧರಿಸುತ್ತಾನೆ. ಆಗಲೇ ಮನೆಗೆ ಬಂದಿದ್ದ ಸಂಬಂಧಿ ನಂಜಪ್ಪನಿಗೆ ಸ್ವಲ್ಪ ಹೊತ್ತು ಲಕ್ಷ್ಮಿಯನ್ನು ನೋಡಿಕೊಳ್ಳಲು ಹೇಳಿ ಮಂತ್ರವಾದಿಯ ಬಳಿಗೆ ತೆರಳುತ್ತಾರೆ. ನಂಜಪ್ಪ ಏನು ಮಾಡಿದ? ಓದಿ.. ವಾಣಿ ಸತೀಶ್ ಅವರ ತಂತಿ ಮೇಲಣ ಹೆಜ್ಜೆಯ ಇಪ್ಪತ್ತನೆಯ ಕಂತು.
ಮಿಲಿಟರಿ ಸೈನ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಂಜಪ್ಪ ಒಂದು ತಿಂಗಳ ರಜೆಯ ಮೇಲೆ ಊರಿಗೆ ಬಂದಿದ್ದ. ನಾರಿಪುರದ ಜನ ಇವನನ್ನು ಮಿಲಿಟರಿ ಮನುಷ್ಯ, ದೇಶ ಸುತ್ತಿ ಬಂದವನು, ತಿಳುವಳಿಕಸ್ತ ಎಂದು ವಿಶೇಷವಾಗಿ ಆದರಿಸಿ ಗೌರವಿಸುತ್ತಿದ್ದರು. ಇವನು ಏನೇ ಮಾತಾಡಿದರು ವೇದವಾಕ್ಯ ಎಂಬಂತೆ ಕಿವಿ ನಿಮಿರಿಸಿ ಕೇಳುತ್ತಿದ್ದರು. ಇವನು ಕೂಡ ಶಿಸ್ತು ಪ್ರದರ್ಶಿಸುತ್ತಾ ದೊಡ್ಡಸ್ತಿಕೆ ಮೆರೆಯುತ್ತ ಬಂಧು ಬಳಗದವರನ್ನು ತುಸು ಭಯ ಭಕ್ತಿಯಿಂದಲೇ ಇಟ್ಟುಕೊಂಡಿದ್ದ.
ಅಪ್ಪನ ಕಡೆ ದೂರದ ಸಂಬಂಧಿಯಾಗಿದ್ದ ಈ ನಂಜಪ್ಪ ಲಕ್ಷ್ಮಿಗಿಂತ ಸುಮಾರು ಐದಾರು ವರ್ಷಗಳಷ್ಟು ದೊಡ್ಡವನಾಗಿದ್ದ. ಒಳಗೊಳಗೇ ಲಕ್ಷ್ಮಿಯ ಬಗ್ಗೆ ಆಸೆ ಇಟ್ಟು ಕೊಂಡಿದ್ದ ಈತ, ಸಾಲು ಸಾಲು ಗಂಡುಗಳು ಲಕ್ಷ್ಮಿ ಯ ಮನೆಯ ಕದ ತಟ್ಟ ತೊಡಗಿದಾಗ ತಡೆಯಲಾರದೆ ತಾನೂ ಒಂದು ಕಲ್ಲೆಸೆದು ನೋಡೇ ಬಿಡುವ ಎಂದು ತನ್ನ ಅವ್ವನಿಂದ ಹೆಣ್ಣು ಕೇಳಿಸಿದ್ದ. ಅಪ್ಪ ನಿಷ್ಠೂರವಾಗಿ ರಕ್ತ ಸಂಬಂಧಕ್ಕೆ ಹೆಣ್ಣು ಕೊಡುವುದಿಲ್ಲ ಎಂದು ಹೇಳಿದ್ದರಿಂದಾಗಿ, ಈಗ್ಗೆ ಎರಡು ವರ್ಷದ ಹಿಂದೆ ಪಕ್ಕದ ತಂತ್ರಾಪುರದಿಂದ ರೇಣುಕಾಂಬಿಕೆಯನ್ನು ತಂದು ಮದುವೆ ಆಗಿ ಅವಳಿ ಮಕ್ಕಳ ತಂದೆಯೂ ಆಗಿದ್ದ.
ಹೆಂಡತಿ ಮಕ್ಕಳನ್ನು ನೋಡಿ ಹೋಗಲು ವರ್ಷಕ್ಕೊಮ್ಮೆ ರಜೆ ಮೇಲೆ ಊರಿಗೆ ಬರುತ್ತಿದ್ದ ಈತ, ಹೀಗೆ ಬಂದಾಗೆಲ್ಲಾ ಗಿರಿಧರನನ್ನು ಬೆನ್ನಿಗೆ ಹಾಕಿಕೊಂಡು ಸುತ್ತುತ್ತಿದ್ದ. ಮದುವೆಯಾಗಿ ಎರಡು ವರ್ಷ ಕಳೆದರು ನಂಜಪ್ಪನಿಗೆ ಲಕ್ಷ್ಮಿಯ ಮೇಲಿನ ಮೋಹವೇನು ತಗ್ಗಿರಲಿಲ್ಲ. ಮನೆಯಿಂದ ಹೊರಗೆ ಮುಖಾ ತೋರದಿದ್ದ ಅವಳ ದರುಶನಕ್ಕಾಗಿ, ಕಾಫಿಯ ನೆಪದಲ್ಲೋ, ಅತ್ತೆ ಮಾವನನ್ನು ಮಾತಾಡಿಸುವ ನೆಪದಲ್ಲೋ, ಒಟ್ಟಿನಲ್ಲಿ ಆಗಾಗ ಮನೆಗೆ ಎಡ ತಾಕುತ್ತಲೇ ಇದ್ದ. ಈಗ ಎಂಟ್ಹತ್ತು ದಿನದಿಂದ ಲಕ್ಷ್ಮಿಯ ಆರೋಗ್ಯ ಕೆಡಲಾಗಿ ಅವನಿಗೆ ಅವಳನ್ನು ಸರಿಯಾಗಿ ನೋಡಲಾಗಿರಲಿಲ್ಲ. ಅಂದು ಬೆಳಗ್ಗೆಯೇ ಹೊಲಕ್ಕೆ ನೀರು ಬಿಟ್ಟು ಬರಲು ಹೊರಟಿದ್ದ ನಂಜಪ್ಪ, ಅವ್ವನೊಂದಿಗೆ ರಾಗಿ ಹಿಡಿದು ವಿಶೇಷ ಕಳೆಯೊಂದಿಗೆ ಕಂಗೊಳಿಸುತ್ತಾ ಬಾಗಿಲಲ್ಲಿ ಕುಳಿತ ಲಕ್ಷ್ಮಿಯನ್ನು ಕಂಡು ಪುಳಕಗೊಂಡಿದ್ದ. “ಕಾಫಿ ಕುಡ್ದೋಗಿವಂತೆ ಬಾರ್ಲಾ ನಂಜ ವಳಿಕೆ” ಎಂದು ಕರೆದ ಅವ್ವನಿಗೆ “ತಡ್ಯತ್ತೆ ಹೊಲುಕ್ಕೊಂದಿಷ್ಟ್ ನೀರ್ ಬುಟ್ ಬಿರ್ರುನ್ ಬಂದ್ಬುಡ್ತಿನಿ” ಎಂದು ಹೇಳಿ ಹೋಗಿದ್ದ.
ನಂಜಪ್ಪ ತನ್ನ ಹೊಲಕ್ಕೆ ನೀರು ಬಿಟ್ಟು, ಎದುರು ಸಿಕ್ಕ ತನ್ನ ಬಾಲ್ಯದ ಗೆಳೆಯ ಕಂದಪ್ಪನೊಂದಿಗೆ ಒಂದಷ್ಟು ಹರಟಿ ಮನೆಗೆ ಹಿಂದಿರುಗುವುದರೊಳಗೆ ಲಕ್ಷ್ಮಿ ತನ್ನ ಅವತಾರವನ್ನು ಬಿಚ್ಚಿ ಎಲ್ಲರನ್ನು ಬೆಚ್ಚಿ ಕೂರುವಂತೆ ಮಾಡಿದ್ದಳು. ತಂಗಿಯ ಅಪರಾವತಾರದ ರುಚಿ ಕಂಡಿದ್ದ ಚಂದ್ರಹಾಸ ಚಕಾರವೆತ್ತದೆ ಮುಗುಮ್ಮಾಗಿ ಒಂದು ಮೂಲೆ ಹಿಡಿದು ಕುಳಿತು ಬಿಟ್ಟಿದ್ದ. ಅಟ್ಟ ಏರಿದ್ದ ಗಿರಿಧರ, ಸೋಮ, ಶಂಕರರು ಇದರ ಪರಿವೇ ಇಲ್ಲದಂತೆ ಗಡದ್ದಾಗಿ ನಿದ್ದೆ ಹೊಡೆಯುತ್ತಾ ಮಲಗಿ ಬಿಟ್ಟಿದ್ದರು.
ಅಂತಹ ಸಂದಿಗ್ಧದ ಸಂಧರ್ಭದಲ್ಲಿ ದೇವರಂತೆ ಒಳ ಬಂದ ನಂಜಪ್ಪನನ್ನು ಅಪ್ಪ ” ಒಂದ್ ಅರ್ಧ ಗಂಟೆ ಹೆಂಗಾರು ಸಂಭಾಳ್ಸಪ್ಪ ನಂಜ ಬಿರ್ರುನ್ ಬಂದ್ಬುಡ್ತಿನಿ” ಎಂದು ಹೇಳಿ ಹೊರಟಿದ್ದೆ ತಡ, ನಂಜಪ್ಪನಿಗೆ ಸೈನ್ಯದಲ್ಲಿ ವೈರಿಗಳನ್ನು ಹಿಮ್ಮೆಟ್ಟಿಸುವಾಗಿನ ಹುರುಪು ತುಂಬಿಕೊಂಡು ಬಿಟ್ಟಿತು. ಮಾವ ಬರುವುದರೊಳಗೆ ಹೇಗಾದರೂ ಮಾಡಿ ಈ ಪೀಡೆಯನ್ನು ಅಟ್ಟಿ ತನ್ನ ತಾಕತ್ತು ಪ್ರದರ್ಶಿಸ ಬೇಕೆಂದು ಉತ್ಸಾಹಿತನಾದ. ಇಡೀ ಸನ್ನಿವೇಶವನ್ನೇ ತನ್ನ ಹಿಡಿತಕ್ಕೆ ತೆಗೆದುಕೊಂಡು, ತನಗೆ ಗೊತ್ತಿದ್ದ ಎಲ್ಲಾ ವಿದ್ಯೆಗಳನ್ನು ಪ್ರಯೋಗಿಸಿ ಅದರ ಬಾಯಿ ಬಿಡಿಸಲು ಹರಸಾಹಸ ಮಾಡಿ ಸೋತು, ಕೊನೆಗೆ ಮೆಣಸಿನ ಹೊಗೆ ಹಾಕುವಲ್ಲಿಗೆ ಬಂದು ನಿಂತಿದ್ದ.
ಬೆಳಿಗ್ಗೆ ಅಷ್ಟೇ ಮಹಾಲಕ್ಷ್ಮಿಯಂತೆ ಕಳೆ ಕಳೆಯಾಗಿ ಲಕಲಕಿಸುತ್ತಿದ್ದ ಮಗಳು, ಗಳಿಗೆ ಗಂಟೆ ಎನ್ನುವುದರೊಳಗೆ ಕಣ್ಣಿಗೆ ಕಾಣದ ಕೆಟ್ಟ ಶಕ್ತಿಯ ಹಿಡಿತಕ್ಕೆ ಸಿಕ್ಕು, ಹೀಗೆ ನಲುಗಿ ಹೋಗುತ್ತಿರುವುದನ್ನು ಕಂಡು ಅವ್ವನ ಜಂಘಾಬಲವೇ ಉಡುಗಿದಂತಾಗಿತ್ತು. ಮಂಡಿಯ ಮೇಲೆ ಮುಖವಿಟ್ಟು ನಿಸ್ತೇಜ ಕಣ್ಣುಗಳಿಂದ ಮಗಳನ್ನೇ ನೋಡುತ್ತಾ ಕುಳಿತಿದ್ದ ಅವ್ವ, ನಂಜಪ್ಪ ಮೆಣಸಿನ ಹೊಗೆ ಹಾಕುವ ಮಾತು ಎತ್ತಿದ್ದೆ ತಡಬಡಾಯಿಸಿ ಹೋದಳು. ಸಿಟ್ಟಿನಿಂದ “ನಿಂಗೇನಾರ ತಲೆಗಿಲೆ ಕೆಟ್ಟದೆನ್ಲಾ ನಂಜ. ಎಂಥಾ ಮಾತು ಅಂತ ಆಡ್ತಿ. ಮಗ ಉಸ್ರುಗಿಸ್ರು ಕಟ್ಟಿ ಏನಾರ ಆದ್ರೆ ಏನ್ ಮಾಡದು. ನಿನ್ನ ಕೈ ಮುಗ್ದುಬುಡ್ತಿನಿ ಕನಪ್ಪ ದೊರೆ ನೀನೇನು ಮಾಡಬೇಡ ಸುಮ್ನೆ ಕೂತ್ಕೋ ಬುಡು ಸಾಕು” ಎಂದಳು.
ತನ್ನ ಪಟ್ಟು ಬಿಡದ ನಂಜಪ್ಪ, ಈ ರೀತಿಯ ಎಷ್ಟೋ ದಯ್ಯಗಳನ್ನ ನಾನು ಹೇಗೇಗೆಲ್ಲಾ ಹಿಮ್ಮೆಟ್ಟಿಸಿದ್ದೇನೆಂದು ಅವ್ವನ ಮುಂದೆ ರಾಶಿ ರಾಶಿ ಕತೆ ಕಟ್ಟಿ ಹರವಿ ” ಆ ಹೊಗೆ ಕುಡಿಯದು ನಮ್ಮ ಲಕ್ಷ್ಮಿ ಅಲ್ಲ ಕನತ್ತೆ. ಅವುಳುನ್ನ ಮೆಟ್ಕೊಂಡ್ ಕೂತಿರೊ ದಯ್ಯ. ನೀನು ಸುಮ್ನೆ ಹುಂ ಅನ್ನು ಸಾಕು ಮಾವ ಬರೋದ್ರೊಳಗೆ ಅದು ಕಿತ್ಕೊಂಡ್ ಹೊಂಟೋಗೊ ಹಂಗ್ ನಾನ್ ಮಾಡ್ತಿನಿ” ಎಂದು ಅವ್ವನೊಳಗೆ ಆಸೆ ಹುಟ್ಟಿಸಿದ ನಂಜಪ್ಪನ ಮಾತಿನ ಚಾಕಚಕ್ಯತೆಗೆ ಹುಂ ಗುಟ್ಟಿದ ಅವ್ವ “ಅದೇನ್ ಮಾಡ್ತಿಯೋ ಮಾಡು ನನ್ ಕೈಲಂತೂ ಇದುನ್ನೆಲ್ಲಾ ನೋಡಕಾಗಕಿಲ್ಲ . ಒಟ್ನಲ್ಲಿ ನನ್ನ ಮಗ್ಳುನ್ನ್ ಸರಿ ಮಾಡು ಸಾಕು” ಎಂದು ಹೇಳಿ ಬೀದಿಯ ಬಾಗಿಲಿಗೆ ಬಂದು ಚಡಪಡಿಸುತ್ತಾ ಕೂತಳು.
ನಂಜಪ್ಪ ಚಂದ್ರಹಾಸನಿಗೆ ಹೇಳಿ ಒಂದು ದೊಡ್ಡ ಕಬ್ಬಿಣದ ಬಾಣಲೆಯಲ್ಲಿ ನಿಗಿನಿಗಿ ಕೆಂಡ ತರಿಸಿ ಹೊರಗಿನ ಜಗಲಿ ಕಟ್ಟಿಯ ಬಳಿ ಇರಿಸಿದ. ತಾನೇ ಎದ್ದು ಹೋಗಿ ಮೂಲೆಯಲ್ಲಿ ಕಟ್ಟಿಟ್ಟಿದ್ದ ಮೆಣಸಿನ ಚೀಲದಿಂದ ಹಿಡಿ ಮೆಣಸಿನ ಕಾಯಿ ತೆಗೆದು ಚಂದ್ರಹಾಸನ ಕೈಗೆಟ್ಟು “ನಡಿಲ ಆ ಕೆಂಡುದ್ ವಳಿಕಾಕು” ಎಂದು ಹೇಳಿದ. ಬಾಗಿಲ ಹಿಂದೆ ಬಂಡೆಯಂತೆ ಕುಳಿತಿದ್ದ ಲಕ್ಷ್ಮಿಯ ಕೂದಲನ್ನು ಗಟ್ಟಿಯಾಗಿ ಹಿಡಿದು, ದರ ದರನೆ ಎಳೆದು ಹೊರ ತಂದ. ಅವಳು ಮಿಸುಕಾಡಲು ತುಸುವು ಅವಕಾಶ ಕೊಡದಂತೆ ಬಗ ಬಗನೆ ಎದ್ದ ಮೆಣಸಿನ ಹೊಗೆಗೆ ಅವಳ ಮುಖವಿಡಿದು ನಿಂತ. ಗಿರಿಧರ ಅವಳು ಕೈ ಕೊಸರದಂತೆ ಎರಡು ಕೈಗಳನ್ನು ಗಟ್ಟಿಯಾಗಿ ಹಿಡಿದು ನಿಂತಿದ್ದ.
ಕ್ಷಣದಲ್ಲಿಯೇ ಲಕ್ಷ್ಮಿಯ ಕಣ್ಣು ಮೂಗುಗಳಿಂದ ನೀರು ಸುರಿಯ ತೊಡಗಿತು. ಉಸಿರು ಎಳೆದು ಕೊಳ್ಳಲಾರದೆ ಏದುಸಿರು ಬಿಡುತ್ತಾ ವಿಲಿಗುಟ್ಟ ತೊಡಗಿದಳು. ಲಕ್ಷ್ಮಿಯ ಸೆರಗು ಜಾರಿ ಮುಖ ಕೆಂಪಡರಿಕೊಂಡಿತು. ಅವ್ವ ಎನ್ನಲು ಬಾಯಿ ತೆರೆದಳು ಬಾಯ ಒಳಗೆಲ್ಲಾ ಘಾಟು ತುಂಬಿ ಕೆಮ್ಮ ತೊಡಗಿದಳು. ಉಸಿರು ಕಟ್ಟಿ ಇನ್ನೇನು ಜೀವವೇ ಹೋಗಿ ಬಿಡುತ್ತದೆ ಎನ್ನಿಸಿ, ತನ್ನ ಬಲವನ್ನೆಲ್ಲ ಒಗ್ಗೂಡಿಸಿ ಬಿರುಸಾಗಿ ತಲೆ ಮೇಲೆತ್ತಿ ಆಕಾಶಕ್ಕೆ ಮುಖಮಾಡಿ ಗಾಳಿ ಎಳೆದು ಕೊಳ್ಳಲು ಪರದಾಡ ಹತ್ತಿದಳು. ಇದ್ದಕ್ಕಿದ್ದಂತೆ ಯಾರೋ ತನ್ನ ರವಿಕೆಯ ಒಳಗೆ ಕೈ ಹಾಕಿ ಬಲವಾಗಿ ಅದುಮಿ ಹಿಡಿದಂತಾಯಿತು. ಕೊಸರಿ ಕೊಳ್ಳಲು ತನ್ನ ಕೈಗಾಗಿ ಪರದಾಡಿದಳು. ಚಂದ್ರಹಾಸ ಉಡದಂತೆ ಅವಳ ಕೈ ಗಳನ್ನು ಹಿಂದೆ ಬಂಧಿಸಿ ಬಿಟ್ಟಿದ್ದ. ತಲೆ ತಗ್ಗಿಸಿ ಯಾರೆಂದು ನೋಡಬೇಕೆಂದು ಕೊಂಡಳು. ಕೂಡಲೆ ತನ್ನ ಜೀವ ತೆಗೆಯಲು ಸಜ್ಜಾದ ಹೊಗೆಯ ಘಾಟು ನೆನಪಾಯಿತು. ಹಲ್ಲು ಕಚ್ಚಿ ಅವ್ವಾ… ಎಂದು ಕೀರಲು ದನಿ ಎತ್ತಿ ಚೀರಿದಳು. ಅಷ್ಟರಲ್ಲಾಗಲೆ ಎದೆಯ ಮೇಲೆ ಆಡುತ್ತಿದ್ದ ಕೈ ಹೊಕ್ಕುಳು ನೇವರಿಸುತ್ತಾ ಕೆಳಗಿಳಿಯ ತೊಡಗಿತ್ತು. ದುಃಖ ತಡೆಯಲಾರದ ಲಕ್ಷ್ಮಿ ತನ್ನಲ್ಲಿದ್ದ ಅಲ್ಪ ಸ್ವಲ್ಪ ಸತ್ವವನ್ನೆಲ್ಲಾ ಒಗ್ಗೂಡಿಸಿ “ಅಯ್ಯೋ ಅವ್ವ ನನ್ನ ಸೀರೆ ಸೆರ್ಗ್ ಬಿದ್ದೋಗೈತೆ ಯಾಕಿಂಗ್ ನನ್ನ್ ಮರಿಯಾದಿ ತೆಗಿತಿದ್ದೀರಿ” ಎಂದು ತನ್ನ ಕೀರಲು ದನಿ ಎತ್ತಿ ಕೂಗಿದಳು. ಅದು ಅಲ್ಲಿದ್ದ ಗಂಗೆ, ಚಂದ್ರಹಾಸ, ನಂಜಪ್ಪನ ಹೊರತಾಗಿ ಯಾರಿಗೂ ಕೇಳಲಿಲ್ಲ.
ಅಷ್ಟರಲ್ಲಾಗಲೇ ಅಲ್ಲಿ ಸೇರಿದ್ದ ಜನರೆಲ್ಲಾ ಘಾಟು ತಾಳಲಾರದೆ ಮನೆಯ ಹೊರಗೆ ಬಂದು ನಿಂತಿದ್ದರು. ನಂಜಪ್ಪ ಲಕ್ಷ್ಮಿಯ ಬಾಯಿ ಮುಚ್ಚಲು ನೋಡಿದ. ಲಕ್ಷ್ಮಿ ಬಲವಾಗಿ ಅವನ ಕೈ ಕಚ್ಚಿ ಮತ್ತೆ “ಅವ್ವಾ….” ಎಂದು ಚೀರಿದಳು. ಆ ಕೈಯ ಓಡಾಟವನ್ನು ಗಮನಿಸಿದ ಗಂಗೆಯೂ ಕೂಡ ಬೆಚ್ಚಿ ಅಕ್ಕನ ದನಿಗೆ ತನ್ನ ದನಿ ಸೇರಿಸಿ ಜೋರಾಗಿ “ಅವ್ವಾ… ಬಾವ್ವ ಇಲ್ಲ್ ನೋಡು” ಎಂದು ಕೂಗಿಕೊಂಡಳು.
ಮಕ್ಕಳ ಕೂಗು ಅವ್ವನ ಎದೆ ಇರಿದಂತಾಗಿ ಒಳಗೋಡಿ ಬಂದಳು. ಅಷ್ಟರಲ್ಲಿ ನಂಜಪ್ಪ ಕೋಪದಿಂದ ಕುದಿಯುತ್ತಾ ಇನ್ನಷ್ಟು ಮೆಣಸಿನ ಕಾಯಿ ತರಿಸಿ ಬಾಣಲೆಗೆ ಸುರಿಸಿದ. “ಬೇವರ್ಸಿ ನನ್ನ್ ಮಗುಂದೆ ಬುಟ್ಟೋಯ್ತಿಯೋ ಇಲ್ವೊ ಬೊಗ್ಳೋ….” ಎಂದು ಹಲ್ಲು ಕಡಿಯುತ್ತಾ ಲಕ್ಷ್ಮಿ ಯ ಮುಖವನ್ನು ಅದರ ಮುಂದೆ ಜಗ್ಗಿ ಹಿಡಿದು ನಿಂತ. ಮಗಳ ಪರಿಸ್ಥಿತಿ ಕಂಡು ಎದೆ ಹೊಡೆದು ಕೊಂಡ ಅವ್ವ “ಮುಂಡೆ ಮಕ್ಳ ಬುಡ್ರೊ ನನ್ನ ಮಗುಳನ್ನ” ಎಂದು ನಂಜಪ್ಪ ಮತ್ತು ಚಂದ್ರಹಾಸನನ್ನು ದೂರ ತಳ್ಳಿದಳು. ಉಸಿರಾಡಲಾರದೆ ಅರ್ಧ ಜೀವವಾಗಿ ನಿತ್ರಾಣಳಾಗಿದ್ದ ಲಕ್ಷ್ಮಿಯನ್ನು ಗಟ್ಟಿಯಾಗಿ ಹಿಡಿದು ಅಳುತ್ತಾ, ನಡುಮನೆಗೆ ಕರೆದು ಕೊಂಡು ಬಂದಳು. ಸೆರಗ ತುದಿಯಿಂದ ಗಾಳಿ ಹಾಕಿ ಗಂಗೆಯ ಕೈಲಿಷ್ಟು ನೀರು ತರಿಸಿ ಕುಡಿಸಿದಳು. ತೆಳ್ಳನೆಯ ಬಟ್ಟೆಯಿಂದ ಮಗಳ ಮುಖ ವರೆಸುತ್ತಾ “ಆ ಮುಂಡೆ ಮಕ್ಳು ಕೈಗೆ ನಿನ್ ಕೊಟ್ ಎಂತ ತೆಪ್ಪ್ ಮಾಡ್ಬುಟ್ಟೆ ಮಗ ನಾನು” ಎಂದು ತನ್ನ ಕೆನ್ನೆಯನ್ನು ಪಟ ಪಟನೆ ಬಡಿದು ಕೊಳ್ಳ ತೊಡಗಿದಳು.
ವಾಣಿ ಸತೀಶ್
ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.