Home Uncategorized ಪುಸ್ತಕ ವಿಮರ್ಶೆ | ಬೆಳಗಿನೊಳಗು ಮಹಾದೇವಿಯಕ್ಕ

ಪುಸ್ತಕ ವಿಮರ್ಶೆ | ಬೆಳಗಿನೊಳಗು ಮಹಾದೇವಿಯಕ್ಕ

0

ಲೇ: ಡಾ. ಎಚ್ ಎಸ್‌ ಅನುಪಮಾ

ಪ್ರಕಾಶನ : ಲಡಾಯಿ ಪ್ರಕಾಶನ

ಪುಟಗಳು : 776

ಬೆಲೆ : 650 ರೂ

ಮೊ. : 9480286844

ಭಾಗ 2

ಬೆಳಗಿನೊಳಗು ಮಹಾದೇವಿಯಕ್ಕ ಕಾದಂಬರಿಯ ಪೂರ್ವಾರ್ಧವು ಭಾವ ಮತ್ತು ತರ್ಕ ಪ್ರಧಾನವಾದುದಾದರೆ, ಉತ್ತರಾರ್ಧವು ಬುದ್ಧಿ ಮತ್ತು ಸಂಯೋಜನೆ ಪ್ರಧಾನವಾದುದು. ಉತ್ತರಾರ್ಧದಲ್ಲಿ ಮೂರು ಭಾಗಗಳಿವೆ. ಒಂದು ಕಲ್ಯಾಣದವರೆಗಿನ ಅಕ್ಕನ ನಡಿಗೆಯಾದರೆ, ಇನ್ನೊಂದು ಅವಳ ಕಲ್ಯಾಣದೊಳಗಿನ ಬದುಕು. ಕೊನೆಯದು ಕಲ್ಯಾಣ ತೊರೆದು ಕದಳಿ ಸೇರುವವರೆಗಿನ ನಡಿಗೆ. ಉಡತಡಿ ತೊರೆದು ಉತ್ತರದ ದಿಕ್ಕು ಹಿಡಿದು ಹೊರಟ ಅಕ್ಕ ಧಮ್ಮವೊಳಲು, ಲಕ್ಕಿಗುಂಡಿ, ಇಲಕಲ್, ಸವದತ್ತಿ, ಅಯ್ಯಾಹೊಳೆ, ಕಪ್ಪಡಿಸಂಗಮ, ಸೊಲ್ಲಾಪುರ ಮಾರ್ಗವಾಗಿ ಬಸವಕಲ್ಯಾಣ ತಲುಪುತ್ತಾಳೆ. ಈ ದಾರಿ ಉದ್ದಕ್ಕೂ ಎದುರಾದ ವ್ಯಕ್ತಿಗಳು, ಜನರು, ಅವರ ಪ್ರೀತಿ, ವಿಶ್ವಾಸ, ವಂಚನೆ, ಕಾಮನೆ, ನೆರವು, ಇವಳ ಕುರಿತ ಬೆರಗು, ತಿರಸ್ಕಾರ ಮುಂತಾದವುಗಳದು ಒಂದು ಲೋಕವಾದರೆ, ಹಾದಿ ಉದ್ದಕ್ಕೂ ಅವಳಿಗೆ ಜೊತೆಯಾಗುವ, ನೆರಳಾಗುವ, ನೆರವಾಗುವ ಒಂಟಿ ಹೆಣ್ಣುಗಳದು ಇನ್ನೊಂದು ಲೋಕ. ಬದುಕಿನ ಸಂಕಷ್ಟಗಳಿಂದ ಅವರ್ಯಾರೂ ತಮ್ಮ ಮನಸ್ಸನ್ನು ಕರಟಿಸಿಕೊಂಡವರಲ್ಲ; ಸಾಧಕಿಯರಾಗಿದ್ದಾರೆ; ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ; ರಕ್ತಸಂಬಂಧದ ಆಚೆಗೂ ಪ್ರೀತಿ ಹಂಚುವ, ಇತರರಿಗೆ ಮಾರ್ಗದರ್ಶನ ಮಾಡುವ ವಿವೇಕಿಗಳಾಗಿದ್ದಾರೆ. ಜೈನ ಸನ್ಯಾಸಿನಿ ಶ್ರದ್ಧಾಮತಿ, ಕಾಳಾಮುಖ ಸಂಪ್ರದಾಯದ ಸಾಧಕ, ನಾಥ ಪಂಥದ ಯೋಗಿ, ಕೌಳ ಪಂಥದ ಯೋಗಿನಿ ಮುಂತಾದವರೂ ದಾರಿಯಲ್ಲಿ ಅಕ್ಕನಿಗೆ ಭೇಟಿಯಾಗುತ್ತಾರೆ; ಚರ್ಚೆ ನಡೆಸುತ್ತಾರೆ.

ಈ ಪಯಣದ ಉದ್ದಕ್ಕೂ ಅಕ್ಕ ಓರ್ವ ನಿಶ್ಚಿತ ಗುರಿ ಇಲ್ಲದ ಬಯಲ ದಾರಿಹೋಕಳು. ಅವಳಿಗೇನೂ ಅವಸರವಿಲ್ಲ; ಧಾವಂತವಿಲ್ಲ. ಹೋದಲ್ಲೆಲ್ಲ ದಿನ, ವಾರ, ಪಕ್ಷ, ಮಾಸ, ಋತುಗಳ ಕಾಲ ನಿಂತು ಮುಂದುವರಿಯುತ್ತಾಳೆ. ಅವಳ ಉಡುಗೆ, ಅಂಗಸಾಧನೆಗಳು ಕೆಲವರಲ್ಲಿ ಕುತೂಹಲ ಮೂಡಿಸಿದರೆ, ತಮ್ಮ ವೈಯಕ್ತಿಕ ಸಮಸ್ಯೆ, ಬಸವಾದಿಗಳ ತತ್ತ್ವಗಳ ಅಳವಡಿಕೆಯಲ್ಲಿನ ತಮ್ಮ ಸಂಕಷ್ಟ, ಪೂರ್ವದ ತಮ್ಮ ಮನೆದೇವರನ್ನು ಮತ್ತು ಆಹಾರ ಪದ್ಧತಿಯನ್ನು ತೊರೆಯಲಾಗದ ತೊಳಲಾಟ, ಈ ಆನ್ವಯಿಕತೆಯ ಸಂಕಷ್ಟಗಳಿಗೆ ಕಲ್ಯಾಣದತ್ತ ಹೊರಟ ಅಕ್ಕನಿಂದ ಸ್ಪಷ್ಟೀಕರಣದ ಪರಿಹಾರದ ಬಯಕೆಯಿಂದ ಬಂದವರು ಮತ್ತೆ ಕೆಲವರು. ಅವಳ ವಚನಗಳಿಗೆ ಮಾರುಹೋದವರು ಕೆಲವರು, ಅವಳ ವಚನವೆಂದು ತಿಳಿಯದೇ ಅವಳ ಮುಂದೆಯೇ ಹಾಡಿದವರು ಮತ್ತೆ ಕೆಲವರು. ಒಟ್ಟಿನಲ್ಲಿ ಈ ಹಾದಿಯಲ್ಲಿ ಅಕ್ಕ ಓರ್ವ ಪ್ರವಾಸಿಯ ಸ್ಥಾನಕ್ಕೆ ಇಳಿದು  ಬಿಟ್ಟಂತೆ, ಯಾವ ಸೈದ್ಧಾಂತಿಕ ಚರ್ಚೆಗಳೂ ಅವಳ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರದೆ, ಬಂದು ಹೋಗುವ ಸಂಗತಿಗಳಾಗಿ ಅಥವಾ ಲೇಖಕಿಯ ಸಂಶೋಧನೆಯ ಅನಾವರಣಕ್ಕೆ ವೇದಿಕೆಯಾದಂತೆ ಭಾಸವಾಗುತ್ತದೆ.

ಕಲ್ಯಾಣದಲ್ಲಿ ಅಕ್ಕ ಕಳೆದ ವರ್ಷಕ್ಕೂ ಹೆಚ್ಚಿನ ಅವಧಿಯು 15 ಅಧ್ಯಾಯಗಳಲ್ಲಿ ಹರಡಿಕೊಂಡಿದೆ. ಅಂಬಿಗರ ಚೌಡಯ್ಯ, ಕುಂಬಾರ ಗುಂಡಯ್ಯ, ಕಿನ್ನರಿ ಬೊಮ್ಮಯ್ಯ, ಸೂಳೆ ಸಂಕವ್ವೆ, ನಗೆಯ ಮಾರಿದೇವ, ಮಂಚಣ್ಣ ಮುಂತಾದ ಹಲವರ ಜೊತೆ ಆತ್ಮೀಯ ಸಂವಹನವನ್ನು ಅಕ್ಕ ನಡೆಸುತ್ತಾಳೆ. ಅನುಭವ ಮಂಟಪಕ್ಕೆ ಹೋದ ಅಕ್ಕ, ಅಲ್ಲಿ ಆಯ್ದಕ್ಕಿ ಲಕ್ಕಮ್ಮ, ಸತ್ಯಕ್ಕ, ಕದಿರ ರೆಮ್ಮವ್ವೆ, ಕಾಳವ್ವೆ, ಗೊಗ್ಗವ್ವೆ ಮುಂತಾಗಿ ಹಲವರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಕಾಣುತ್ತಾಳೆ. ಗಂಗಾಂಬಿಕೆ, ನೀಲಾಂಬಿಕೆ ಮತ್ತು ಅಕ್ಕಮ್ಮನ ಸನಿಹಕ್ಕೂ ಹೋಗಿ ಬರುತ್ತಾಳೆ. ಆದರೆ ಯಾರ ಜೊತೆಗೂ ಭಾವ ಸಾಹಚರ್ಯ ಸ್ಥಾಪಿಸಲು ಅವಳಿಗೆ ಸಾಧ್ಯವಾಗುವುದೇ ಇಲ್ಲ.! ಅನುಭವ ಮಂಟಪದಲ್ಲಿ ನಡೆದ ಮೂರು ವಿಷಯಗಳ ಚರ್ಚೆ- ಭವಿ ಮತ್ತು ಭಕ್ತ ಕುರಿತು, ಕಾಯಕದ ಕುರಿತು ಮತ್ತು ಆಹಾರ ಪದ್ಧತಿಯ ಕುರಿತು- ಈ ಭಾಗದಲ್ಲಿ ಗಮನಾರ್ಹವಾಗಿವೆ. ವಿವಿಧ ವಚನಕಾರರ ವಚನಗಳನ್ನು ಸುಸಂಬದ್ಧವಾಗಿ ಮತ್ತು ತಾರ್ಕಿಕವಾಗಿ ಹೆಣೆದು, ಆ ಮೂಲಕ ಶರಣ ಚಳವಳಿಯ ಒಳಗೊಳಗೆ ಹರಿಯುತ್ತಿದ್ದ ಅಂತರ್ ಪ್ರವಾಹಗಳನ್ನು ಕಾಣಿಸುವ ಲೇಖಕಿಯ ಉದ್ದೇಶ ಇಲ್ಲಿ ಪರಿಣಾಮಕಾರಿಯಾಗಿ ಒಡಮೂಡಿದೆ. ಇಂಥ ಚರ್ಚೆಗಳಲ್ಲಿ ದಲಿತ, ದಮನಿತ ವರ್ಗದ ಶರಣ-ಶರಣೆಯರ ಪ್ರಶ್ನೆಗಳು, ಅಭಿಪ್ರಾಯಗಳು ಮತ್ತು ತೀರ್ಮಾನಗಳು ಬಸವಣ್ಣ ಮತ್ತು ಅಲ್ಲಮಪ್ರಭು ಅವರಿಗೆ ಉತ್ತರಿಸಲು, ಮುಖಾಮುಖಿಯಾಗಲು ತೊಡಕಾಗುತ್ತಿದ್ದ ಸಂದರ್ಭಗಳತ್ತ ಕಾದಂಬರಿಯು ಗಮನ ಹರಿಸಿದೆ. ಯಾವುದು ಕಾಯಕ ಯಾವುದು ಕಾಯಕವಲ್ಲ ಎಂಬ ಗಂಭೀರ ಚರ್ಚೆಯು, ಸೂಳೆಗಾರಿಕೆಯೂ ಕಾಯಕವೇ? ಎಂಬಲ್ಲಿಗೆ ನಿಂತಾಗ ಸಭೆಯಲ್ಲಿ ಮಹಾಮೌನ ಆವರಿಸುತ್ತದೆ. ತಕ್ಷಣ ಎದ್ದು ನಿಂತ ಸಂಕವ್ವೆ ಇನ್ನು ಮುಂದೆ ತಾನು ಸೂಳೆಸಂಕವ್ವೆ ಎಂದು ತನ್ನ ಕಾಯಕದ ಮೂಲಕ ಗುರುತಿಸಿ ಕೊಳ್ಳುವುದಾಗಿ ಹೇಳಿದಾಗ, ಅವಳನ್ನು ಹಲವರು ಅನುಕರಿಸುವುದು ಸಭಿಕರನ್ನು ಅಲ್ಲಾಡಿಸಿಬಿಡುತ್ತದೆ. ಅಲ್ಲಿದ್ದ ಪಣ್ಯ ಸ್ತ್ರೀಯರು ಇನ್ನು ಮುಂದೆ ತಾವು ಪುಣ್ಯಸ್ತ್ರೀಯರೆಂದು ಘೋಷಿಸಿದರೆ, ಕೆಲವು ಶರಣೆಯರು ಕೇವಲ ತಮ್ಮ ಹೆಸರಿನಿಂದ ಗುರುತಿಸಿಕೊಳ್ಳುವ ನಿರ್ಧಾರಕ್ಕೆ ಬರುತ್ತಾರೆ. ಪುರುಷಪ್ರಧಾನ ಮೌಲ್ಯಗಳು ಇನ್ನೂ ಢಾಳಾಗಿ ಉಸಿರಾಡುತ್ತಿದ್ದ ಅನುಭವ ಮಂಟಪದೊಳಗಿನ ಈ ಸ್ತ್ರೀ ಅಸ್ಮಿತೆಯ ಕಹಳೆ ಮುಖ್ಯವೆನಿಸುತ್ತದೆ.

ಇನ್ನೊಂದು ಸಂದರ್ಭದಲ್ಲಿ ಭವಿ-ಭಕ್ತರ ಸ್ವರೂಪದ ಚರ್ಚೆಯು ಅನುಭವ ಮಂಟಪದಲ್ಲಿ ಬಿರುಸಿನಿಂದ ಸಾಗಿ, ಕೊನೆಗೆ ಆ ಬಾಣದ ತುದಿ ಬಸವಣ್ಣನಿಗೇ ತಾಗಿದಾಗ, ಎದುರಾದ ವಿಚಿತ್ರ ಸನ್ನಿವೇಶವನ್ನು ‘ಚರ್ಚೆಯು ಭಕ್ತರು ಹೇಗಿರಬೇಕು ಎಂಬುದರತ್ತ ಸಾಗಬೇಕೇ ಹೊರತು, ಭವಿ ಯಾರು? ಅವರನ್ನು ಎಷ್ಟು ಹೊರಗಿಡಬೇಕು ಎಂಬುದರತ್ತ ಅಲ್ಲ’ ಎನ್ನುವ ಮೂಲಕ ಅಕ್ಕ ಚರ್ಚೆಯ ದಿಕ್ಕನ್ನು ಸರಿದಾರಿಗೆ ಹೊರಳಿಸುತ್ತಾಳೆ. ಆಹಾರ ಪದ್ಧತಿಯ ಕುರಿತ ಚರ್ಚೆಯೂ ತುರುಸಿನಿಂದ ಸಾಗಿ, ತಳಸಮುದಾಯದವರ ತಾರ್ಕಿಕ ಪ್ರಶ್ನೆಗೆ ಹಿರಿಯರು ಅಪ್ರತಿಭರಾಗಿ ‘ಅನುಭವ ಮಂಟಪದಲ್ಲಿ ಸಸ್ಯಾಹಾರ, ಅವರವರ ಮನೆಗಳಲ್ಲಿ ಅವರವರ ಆಹಾರ ಒಪ್ಪಿತ’ ಎಂಬ ನಿಲುವಿಗೆ ಬರಲಾಗುತ್ತದೆ. ಇಂಥ ಸಂದರ್ಭಗಳಲ್ಲಿ ತಳಸಮುದಾಯದ ವಚನಕಾರ್ತಿಯರ ಮುಂದೆ ಅಕ್ಕನ ವ್ಯಕ್ತಿತ್ವವು ಪ್ರೇಕ್ಷಕರ ಮಟ್ಟಕ್ಕೆ ಇಳಿದು, ಮಂಕಾಗಿಬಿಡುತ್ತದೆ.

ಗೊಗ್ಗವ್ವೆ, ಬೊಂತಾದೇವಿ, ಕದಿರ ರೆಮ್ಮವ್ವೆ ಮತ್ತು ಅಕ್ಕಮಹಾದೇವಿಯರ ನಡುವೆ ಹಲವು ಸಾಮ್ಯತೆಗಳನ್ನು ಕಾದಂಬರಿಯು ಕಾಣಿಸಿದೆ. ಮೊದಲ ಮೂವರು ಅವಿವಾಹಿತೆಯರಾದರೆ, ಅಕ್ಕ ವಿವಾಹದ ಚೌಕಟ್ಟನ್ನು ತೊರೆದವಳು. ನಾಲ್ವರೂ ಶಿವನನ್ನೇ ಗಂಡನೆಂದು ಒಪ್ಪಿದವರು; ಕನಿಷ್ಟ ಉಡುಗೆಗೆ ನಿಂತವರು; ಜನರ ಅನುಮಾನ ಮತ್ತು ಅವಮಾನಗಳನ್ನು ಎದುರಿಸಿದವರು. ಒಂದು ದಿನ ಇವರು ಒಟ್ಟಾದಾಗ ಇವರೊಳಗೆ ನಡೆದ ಚರ್ಚೆಯು ಶರಣ ಚಳವಳಿಯಲ್ಲಿ ಉಸಿರಾಡುವ ಲೈಂಗಿಕತೆ ಕುರಿತ ಮಡಿವಂತಿಕೆ, ಲಿಂಗ ತಾರತಮ್ಯ ನೀತಿಯತ್ತ ಹೊರಳಿ ಕೊಳ್ಳುತ್ತದೆ. ಹೆಣ್ಣಿನ ಹೊಲೆತನವನ್ನು ಬಸವಣ್ಣನಿಂದಲೂ ಸಂಪೂರ್ಣ ನಿವಾರಿಸಲು ಆಗದ್ದು, ಶಿವನನ್ನು ಮುಂದೆ ಮಾಡಿ ಪಾರ್ವತಿಯ ಅಂಶಗಳನ್ನು ಅಂಚಿಗೆ ತಳ್ಳುತ್ತಿರುವುದು ಇತ್ಯಾದಿ ಅವರ ನಡುವೆ ಚರ್ಚೆಗೆ ಬಂದರೂ ಇದರಲ್ಲಿ ಅಕ್ಕನ ಪಾತ್ರ ಅಂಚಿನಲ್ಲೇ ಉಳಿದಿದೆ. ಇಂಥ ಚರ್ಚೆಗಳು ಹೀಗೆ ಸುಳಿದು ಹಾಗೆ ಸರಿದು ಹೋಗುತ್ತವೆಯೇ ಹೊರತು ಮೀಮಾಂಸೆಯಾಗಿ, ಗಟ್ಟಿ ದನಿಯಾಗಿ ರೂಪಾಂತರಗೊಳ್ಳದಿರುವುದು ಅವರ ಚಿಂತನೆಯ ಮಿತಿಯೋ ಅಥವಾ ಲೇಖಕಿಯು ಚರಿತ್ರೆಗೆ ನಿಷ್ಠರಾಗಿರುವುದರ ಪರಿಣಾಮವೋ ಯೋಚಿಸಬೇಕಿದೆ.

ಅಕ್ಕನಿಗೆ ಕಲ್ಯಾಣದಲ್ಲಿ ಯಾರ ಜೊತೆಯೂ ಆಪ್ತತೆ ಬೆಳೆಯುವುದೇ ಇಲ್ಲ. ಹೀಗ್ಯಾಕೆ ಎಂಬುದಕ್ಕೆ ಚರಿತ್ರೆಯಲ್ಲೂ ಕಾದಂಬರಿಯಲ್ಲೂ ಕಾರಣ ಸಿಗುವುದಿಲ್ಲ! ಕಲ್ಯಾಣದ ಆಗುಹೋಗುಗಳನ್ನು ಕಾದಂಬರಿಯು ವಿಶ್ಲೇಷಿಸುವ ಉದ್ದೇಶಕ್ಕೆ ಅಕ್ಕನ ಹಾಜರಿ ಇಲ್ಲಿ ಬಂದಿದೆ ಎಂದೆನಿಸುತ್ತದೆ. ಹೀಗೆ ಅಂಟಿಯೂ ಅಂಟದಂತೆ ಉಳಿದ ಕಾರಣಕ್ಕಾಗಿ ಅಕ್ಕನಿಗೆ ಕಲ್ಯಾಣದ ಶರಣ ಚಳವಳಿಯ ಸಾಧ್ಯತೆ-ಮಿತಿ-ಭವಿಷ್ಯದ ಆಪತ್ತುಗಳನ್ನು ಗ್ರಹಿಸಲು ಸಾಧ್ಯವಾಯಿತು ಎಂದೂ ಹೇಳಬಹುದು. ‘ಇದು ದೂರದಿಂದ ತಾನು ಕಂಡ ಕಲ್ಯಾಣದಂತಿಲ್ಲ; ಬಸವಣ್ಣ ಅದರೊಳಗೆ ಹಾಲಾಹಲ ಕುಡಿದ ಶಿವನಂತಿದ್ದಾನೆ’ ಎಂಬ ಅರಿವು ಅವಳನ್ನು ಕಲ್ಯಾಣದಿಂದ ಶ್ರೀಶೈಲಕ್ಕೆ ಹೊರಡಿಸುತ್ತದೆ. ಹೀಗಾಗಿ ಸುಮಾರು 160 ಪುಟಗಳ ‘ಶಿಖರಕ್ಕೆ ಬೆಳಕಾಗಿ’ ಎಂಬ ಭಾಗವು ಅಕ್ಕನ ವ್ಯಕ್ತಿತ್ವ-ನಂಬಿಕೆ-ಮುಂದಿನ ನಡೆಗೆ ಅನಿವಾರ್ಯವಾದ ಭಾಗವೋ ಅಥವಾ ಅಕ್ಕನ ಚರಿತ್ರೆಯಲ್ಲಿ ಶರಣ ಚಳವಳಿಯ ಹಾಗೂ ಕಲ್ಯಾಣದ ಚರಿತ್ರೆಯ ಮಂಡನೆಗೆ ಅನಿವಾರ್ಯವಾದ ಭಾಗ ಎನಿಸಿದೆಯೋ ಎಂಬ ಪ್ರಶ್ನೆ ಓದುಗರಲ್ಲಿ ಏಳುತ್ತದೆ.

ಡಾ ಎಚ್‌ ಎಸ್‌ ಅನುಪಮಾ ಅವರ ಬೆಳಗಿನೊಳಗು ಕಾದಂಬರಿಯನ್ನು ಡಾ ಸಬಿಹಾ ಅವರು ಸವಿಸ್ತಾರವಾಗಿ ವಿಮರ್ಶಿಸಿದ್ದಾರೆ. ಈ ಸುದೀರ್ಘ ವಿಮರ್ಶೆಯನ್ನು ಮೂರು ಭಾಗಗಳಲ್ಲಿ ಪೀಪಲ್‌ ಮೀಡಿಯಾವು ಪ್ರಕಟಿಸುತ್ತ್ತಿದೆ. ಇದು ಎರಡನೆಯ ಭಾಗ  

ಡಾ. ಸಬಿಹಾ ಭೂಮೀಗೌಡ

ಲೇಖಕರು, ವಿಮರ್ಶಕರು

You cannot copy content of this page

Exit mobile version