Thursday, August 15, 2024

ಸತ್ಯ | ನ್ಯಾಯ |ಧರ್ಮ

ಹಿಂದುತ್ವ ರಾಜಕಾರಣದ ಕಥೆ – 26 : ಆರ್‌ಎಸ್‌ಎಸ್ ಮತ್ತು ಸಾವರ್ಕರ್

ಪನ್ವೇಲಲ್ಲಿ ನಡೆದ ಒಂದು ಭಾಷಣದಲ್ಲಿ ಸಾವರ್ಕರ್‌ ಮಾತನಾಡುವುದು ನೋಡಿ. ʼಒಬ್ಬ ಆರ್‌ಎಸ್‌ಎಸ್‌ ಸ್ವಯಂ ಸೇವಕನ ಗೋರಿಯ ಮೇಲೆ ಹೀಗೆ ಬರೆಯಲಾಗಿತ್ತು. ಈತ ಜನಿಸಿದ. ಆರ್‌ಎಸ್‌ಎಸ್‌ ಸೇರಿದ. ಏನೇನೂ ಸಾಧಿಸದೆ ಸತ್ತು ಹೋದ.ʼ..

ಆರ್‌ಎಸ್‌ಎಸ್ ಮತ್ತು ಫ್ಯಾಸಿಸಂ ನಡುವಿನ ಸಂಬಂಧವು ಹಲವಾರು ರಾಜಕೀಯ ಚಿಂತಕರನ್ನು ಆತರ್ಷಿಸಿದೆ. ಕೆ.ಎನ್ ಪಣಿಕ್ಕರ್, ಸುಮಿತ್ ಸರ್ಕಾರ್, ಕ್ರಿಸ್ಟೋಫ್ ಜಾಫರ್ಲೋಟ್ ಸಹಿತ ಹಲವರು ಅದರ ವಿವಿಧ ಆಯಾಮಗಳ ಕುರಿತು ಸವಿವರವಾಗಿ ಬರೆದುಕೊಂಡಿದ್ದಾರೆ. ಆದರೆ ಮಾರ್ಸಿಯಾ ಕಸೊಲಾರಿ ಅವರ ಅಧ್ಯಯನವು ವಿಭಿನ್ನವಾಗಿ ನಿಲ್ಲುವುದು ಅದು ಐತಿಹಾಸಿಕ ದಾಖಲೆಗಳ ಮೇಲೆ ಬೆಳಕು ಚೆಲ್ಲುವ ಕಾರಣದಿಂದ. ಆರ್‌ಎಸ್‌ಎಸ್‌ನ ಇಟಲಿ ಮತ್ತು ಜರ್ಮನ್ ನೇರ ಸಂಬಂಧಗಳ ಕಡೆಗೆ ಈ ಅಧ್ಯಯನ ಆಳವಾಗಿ ನೋಡುತ್ತದೆ. ಅದರಲ್ಲಿ ಅತ್ಯಂತ ಪ್ರಮುಖ ಕೊಂಡಿಯಾಗಿ ಮುನ್ಜೇ ಅವರ ದಿನಚರಿ ಟಿಪ್ಪಣಿಗಳ ಬಗ್ಗೆ ಕಸೊಲಾರಿ ವಿವರವಾಗಿ ಬರೆಯುತ್ತಾರೆ.
ಹಿಂದೂ ಸಮುದಾಯದ ಸೈನಿಕ ಶಕ್ತಿ ರೂಪೀಕರಣರವೆಂಬ ಕಲ್ಪನೆಯನ್ನು ವಿಕಾಸಗೊಶಿಸಲು ಮುನ್ಜೇ ಮತ್ತೆ ಮತ್ತೆ ಬಂದು ನಿಲ್ಲುವುದು ಇಟಲಿ ಮತ್ತು ಜರ್ಮನ್‌ಗಳಲ್ಲಿ. ಇಟಲಿಯೆಂಬ ‘ಹೆಣ್ಣುಕೆನ್ನಾಯಿ’ಯ ಮಕ್ಕಳಾದ ಬಲಿಲ್ಲ ಮತ್ತು ಅವಾಂಗ್ ಗಾರ್ಡಿಸ್ಟಿ ಸಂಘಟನೆಗಳ ಕುರಿತು ಮುನ್ಜೇ ವಿವರವಾಗಿ ಬರೆಯುತ್ತಾರೆ. ಕಸೊಲಾರಿ ಆ ದಿನಚರಿ ಟಿಪ್ಪಣಿಗಳನ್ನು ಅಧ್ಯಯನ ಮಾಡಿ ಹೀಗೆ ಬರೆಯುತ್ತಾರೆ.
‘ಆ ಸಂಘಟನೆಯು (ಬಲಿಲ್ಲ) ೮ರಿಂದ ೧೮ ವರ್ಷದ ಗಂಡುಮಕ್ಕಳಿಗೆ ಸೈನಿಕ ತರಬೇತಿ ನೀಡುವಷ್ಟು ಶಕ್ತವಾಗಿದೆಯೆಂದೂ ಆ ಮೂಲಕ ಯುವಜನರು ಯುವಫ್ಯಾಸಿಸ್ಟುಗಳಾಗಿ ಬದಲಾಗುತ್ತಾರೆಂದೂ ಅವರು (ಮುನ್ಜೇ) ಹೇಳುತ್ತಾರೆ. ಆದ್ದರಿಂದಲೇ ಇಟಲಿಯು ಯಾವ ತುರ್ತು ಪರಿಸ್ಥಿತಿಯನ್ನೂ ಎದುರಿಸಲು ಸಿದ್ಧವಾಗಿರುವ ೬೦ ಲಕ್ಷ ತರಬೇತಿ ಪಡೆದ, ಶಿಸ್ತುಬದ್ಧ, ಮನುಷ್ಯರ ನಿಯಂತ್ರಣ ತೆಗೆದುಕೊಳ್ಳಲು ಸಾಧ್ಯವಾಗುವ ಸ್ಥಾನದಲ್ಲಿದೆ.ʼ ಅದರ ಫಲವಾಗಿ ಬಲಿಲ್ಲ ಕೇಡರುಗಳಿಗೆ ಒಂದು ನೈತಿಕ ಗುಣ ಲಭಿಸುವ ಜೊತೆಗೆ ಸೈನಿಕರಾಗಲು ಬೇಕಾದ ಮೊದಲ ಮೆಟ್ಟಿಲನ್ನು ಅವರು ತುಳಿದಿದ್ದಾರೆ. ಆದ್ದರಿಂದ ನಾಗರೀಕರು ಮತ್ತು ಸೈನಿಕರು ಎಂಬ ವರ್ಗೀಕರಣ ಮಾಯವಾಗುತ್ತದೆ. ಸಿವಿಲಿಯನ್‌ ಮತ್ತು ಯೂನಿಫಾರ್ಮ್‌ ಧರಿಸಿದ ವ್ಯಕ್ತಿಗಳ ನಡುವಿನ ವ್ಯತ್ಯಾಸ ಇಲ್ಲವಾಗುತ್ತದೆ.ʼ
ಮುನ್ಜೇ ಅವರ ಈ ಫ್ಯಾಸಿಸ್ಟ್‌ ಪ್ರೇಮ ಮಹಾರಾಷ್ಟ್ರದ ಬ್ರಾಹ್ಮಣರೊಳಗೆ ಇದ್ದಕ್ಕಿದ್ದ ಹಾಗೆ ಹುಟ್ಟಿಕೊಂಡ ಸಂಗತಿಯಲ್ಲ ಎಂಬುದನ್ನು ನಾವು ಗಮನಿಸಬಹುದು. ತಿಲಕ್‌ ಸ್ಥಾಪಿಸಿದ ಕೇಸರಿ ಆ ಕೆಲಸವನ್ನು ಮೊದಲು ಕೈಗೆತ್ತಿಕೊಂಡಿತ್ತು. ಅದು ೧೯೨೪ ರಿಂದ ೧೯೩೫ರ ವರೆಗಿನ ಅವಧಿಯಲ್ಲಿ ನಿರಂತರವಾಗಿ ಫ್ಯಾಸಿಸಂ ಮತ್ತು ಮುಸೊಲಿನಿಯ ಕುರಿತು ಪ್ರಚಾರ ಮತ್ತು ಪರಿಚಯದ ಸಂಪಾದಕೀಯವನ್ನು ಪ್ರಕಟಿಸುತ್ತಲೇ ಬಂದಿತ್ತು. ಉದಾರವಾದಿ ಆಡಳಿತದಿಂದ ಸರ್ವಾಧಿಕಾರಿ ಆಡಳಿತದ ಕಡೆಗಿನ ಬದಲಾವಣೆಯನ್ನು ಕೇಸರಿ ಅರಾಜಗತೆಯಿಂದ ಸುವ್ಯವಸ್ಥೆಯ ಕಡೆಗೆ ಎಂದು ಬರೆಯಿತು. ಹೀಗೆ ಒಂದು ಹಂತದಲ್ಲಿ ಸಾಮಾಜಿಕ ಹೋರಾಟಗಳಿಗೆ ನೆಲೆಯೇ ಇಲ್ಲವಾಗಿ ಹೋಗುತ್ತದೆ. ಪಾರ್ಲಿಮೆಂಟಿನ ಸದಸ್ಯರನ್ನು ಆಯ್ಕೆ ಮಾಡುವ ಚುನಾವಣಾ ಪ್ರಕ್ರಿಯೆಯ ಬದಲಿಗೆ ನಾಮನಿರ್ದೇಶನ ಪ್ರಕ್ರಿಯೆ ಬರುತ್ತದೆ ಮತ್ತು ಫ್ಯಾಸಿಸಮ್ಮಿನ ದೊಡ್ಡ ಕೌನ್ಸಿಲ್‌ ಪಾರ್ಲಿಮೆಂಟನ್ನೇ ಇಲ್ಲವಾಗಿಸುತ್ತದೆ ಎಂದು ಈ ಸಂಪಾದಕೀಯಗಳಲ್ಲಿ ಬರೆಯಿತು. ಪ್ರಜಾಪ್ರಭುತ್ವ ಸಂಸ್ಥೆಗಳಿಗಿಂತ ಅದೆಷ್ಟೋ ಉತ್ತಮ ಈ ಏಕವ್ಯಕ್ತಿ ನಿಯಂತ್ರಿಸುವ ಸರಕಾರಗಳೆಂದು ಒತ್ತಿ ಹೇಳಿದವು. ೧೯೨೯ ಆಗಸ್ಟ್‌ ೧೩ರ ಕೇಸರಿಯಲ್ಲಿ ಇಟಲಿ ಮತ್ತು ಯುವತಲೆಮಾರು ಎಂಬ ಲೇಖನವೊಂದು ಪ್ರಕಟವಾಗಿತ್ತು. ದೇಶವನ್ನು ಮುನ್ನಡೆಸಲೆಂದು ಯುವತಲೆಮಾರು ಹಳೆತಲೆಮಾರನ್ನು ದಾಟಿ ಮುಂದಕ್ಕೆ ಬಂದಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಇನ್ನು ಇಟಲಿಗೆ ನಾಗಾಲೋಟವೆಂದು ಆ ಲೇಖನ ವಾದಿಸಿತ್ತು. ಫ್ಯಾಸಿಸ್ಟ್‌ ಮಾದರಿಗನುಸಾರವಾಗಿ ಇಟಲಿ ಸಮಾಜವನ್ನು ಪುನರ್‌ ಸೃಷ್ಟಿಸುವ ಕುರಿತೂ ಲೇಖನ ವಿವರಿಸುತ್ತದೆ. ಇಟಾಲಿಯನ್‌ ಯುವಜನರ ಶಿಸ್ತಿಗೆ ಮುಖ್ಯ ಕಾರಣಗಳು ಜನಸಾಮಾನ್ಯರ ನಡುವೆ ಶಕ್ತಿಯುತವಾಗಿ ಹರಡಿಕೊಂಡ ಧಾರ್ಮಿಕ ಭಾವನೆಗಳು, ಕುಟುಂಬದೆಡೆಗಿನ ಒಲವು ಮತ್ತು ಪರಂಪರೆಯ ಕುರಿತ ಗೌರವಗಳು. ವಿವಾಹ ವಿಚ್ಛೇದನಗಳು ಇಲ್ಲ, ಒಂಟಿ ಬದುಕು ಇಲ್ಲ, ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕಿಲ್ಲ, ಅವರ ಕರ್ತವ್ಯ ಮನೆಯೊಳಗಡೆ ಒಲೆಯ ಮುಂದೆ ಕೂರುವುದು ಮಾತ್ರ. ಯುವಕರ ಫ್ಯಾಸಿಸ್ಟ್‌ ಸಂಘಟನೆಗಳಾಗಿದ್ದ ಬಲಿಲ್ಲ ಮತ್ತು ಅವಾಂಗ್‌ ಗಾರ್ಡಿಸ್ಟಿಗಳನ್ನು ಈ ಲೇಖನ ಎತ್ತಿ ಹಿಡಿದಿತ್ತು.
ಈ ಲೇಖನಗಳಿಗೆಲ್ಲ ಮೂಲಾಧಾರ ೧೯೨೮ರ ಪ್ರಭುತ್ವವನ್ನು ಎದುರಿಸಲು ಸಮಕಾಲೀನ ನೀತಿಗಳು ಎಂಬ ಫ್ಯಾಸಿಸ್ಟ್‌ ಕರಪತ್ರವೆಂದು ಕಸೊಲಾರಿ ವಿವರಿಸುತ್ತಾರೆ. ಕ್ರಾಂತಿಯ ಕಾವಲು ಭಟರೆಂದು ದೇಶದ ಸೈನಿಕರನ್ನು ಇದರಲ್ಲಿ ವ್ಯಾಖ್ಯಾನಿಸಲಾಗಿತ್ತು. ಫ್ಯಾಸಿಸ್ಟ್‌ ಸರಕಾರ ಮನಃಪೂರ್ವಕ ಕೈಗೊಂಡ ಕಾರ್ಯಕ್ರಮಗಳ ಕುರಿತು ಕರಪತ್ರ ಮಾತನಾಡುತ್ತದೆ. ಕ್ರಾಂತಿಕಾರಿ ಪಕ್ಷಗಳ ನಿರ್ಮೂಲನೆ, ಮಾಧ್ಯಮ ನಿಯಂತ್ರಣ, ಬದಲಾವಣೆಯನ್ನು ಒಪ್ಪದ ಅಧಿಕಾರಿಗಳ ವಜಾ, ಕೊನೆಯದಾಗಿ ಮರಣದಂಡನೆ…
ಡಿ.ವಿ. ತಮಾನ್ಕರ್ ಎಂಬ ಚಿತ್ಪಾವನ ಬ್ರಾಹ್ಮಣ ಮುಸೊಲಿನಿಯ ಕುರಿತು ಮತ್ತು ಫ್ಯಾಸಿಸಂ ಕುರಿತು ಕೇಸರಿಯಲ್ಲಿ ಬರೆಯುತ್ತಾರೆ. ನಂತರ ಮರಾಠಾದಲ್ಲಿ ಮುಸೊಲಿನಿ ಆಣಿ ಫ್ಯಾಸಿಷ್ಮೋ (ಮುಸೊಲಿನಿ ಮತ್ತು ಫ್ಯಾಸಿಸಂ) ಎಂಬ ಹೆಸರಿನಲ್ಲಿ ಮುಸೊಲಿನಿಯ ಆತ್ಮಕತೆಯನ್ನು ಬರೆಯುತ್ತಾರೆ.
ಎರಡನೇ ಮಹಾಯುದ್ಧದ ಹೊತ್ತಿಗೆ ಬ್ರಾಹ್ಮಣ ರಾಜಕಾರಣ ಮತ್ತು ಇಟಲಿಯ ಫ್ಯಾಸಿಸಂ ನೇರವಾಗಿ ಸಂಬಂದ ಹೊಂದುತ್ತದೆ ಎಂದು ಸಾಕ್ಷ್ಯಾಧಾರಗಳನ್ನು ಮುಂದಿಟ್ಟುಕೊಂಡು ಕಸೊಲಾರಿ ವಿವರಿಸುತ್ತಾರೆ. ೧೯೩೦ರ ಹೊತ್ತಿಗೆ ಬಾಂಬೆಯ ಇಟಾಲಿಯನ್‌ ಕಾನ್ಸುಲೇಟ್‌ ಪ್ರಾದೇಶಿಕ ರಾಜಕಾರಣದಲ್ಲಿ ಸಂಬಂಧ ಹೊಂದಲು ಗಟ್ಟಿಯಾಗಿ ಪ್ರಯತ್ನಿಸುತ್ತದೆ. ಕಸೊಲಾರಿಯ ಡಾಕ್ಟರೇಟ್‌ ಪ್ರಬಂಧದಲ್ಲಿ ಮಹಾರಾಷ್ಟ್ರ ಮತ್ತು ಬಂಗಾಳದ ಬಲಪಂಥೀಯ ಕ್ರಾಂತಿಕಾರಿಗಳು ಇಟಾಲಿಯನ್‌ ಕಾನ್ಸುಲೇಟ್‌ ಜೊತೆಗೆ ಸಕ್ರಿಯವಾಗಿ ಕಾರ್ಯಾಚರಿಸುತ್ತಿದ್ದ ಕುರಿತು ವಿವರಣೆಗಳಿವೆ.
೧೯೩೮ರಿಂದ ಬಾಂಬೆಯ ಇಟಾಲಿಯನ್‌ ಕಾನ್ಸುಲೇಟ್‌ ಭಾರತೀಯ ವಿದ್ಯಾರ್ಥಿಗಳನ್ನು ಇಟಾಲಿಯನ್‌ ಭಾಷಾ ಕೋರ್ಸುಗಳಿಗೆ ಧಾರಾಳವಾಗಿ ಸೇರಿಸುತ್ತದೆ. ಇಟಲಿ ಮತ್ತು ಫ್ಯಾಸಿಸಂ ಕುರಿತ ಪ್ರಚಾರದ ಭಾಗವಾಗಿ ಈ ವಿದ್ಯಾರ್ಥಿಗಳನ್ನೂ ಸೇರಿಸಬಹುದು ಎಂಬ ಯೋಚನೆ ಇದರ ಹಿಂದೆ ಕೆಲಸ ಮಾಡಿತ್ತು ಎಂದು ಕಸೊಲಾರಿ ಅಭಿಪ್ರಾಯ ಪಡುತ್ತಾರೆ. ಇದರ ಸೂತ್ರದಾರ ಮರಿಯೋ ಕಾರೆಲ್ಲಿಯಾಗಿದ್ದ. ಕಾರೆಲ್ಲಿ ಮಧ್ಯ, ಮಧ್ಯಪ್ರಾಚ್ಯ ಇನ್ಸ್ಟಿಟ್ಯೂಟಲ್ಲಿ ಕಾರ್ಯದರ್ಶಿಯಾಗಿಯೂ ಗ್ರಂಥಪಾಲಕನಾಗಿಯೂ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ. ಈ ಸಂಸ್ಥೆಗಳು ೧೯೩೩ರಲ್ಲಿ ಇಟಾಲಿಯನ್‌ ಸರಕಾರದ ಆಗ್ರಹದ ಮೇರೆಗೆ ಆರಂಭವಾಗಿದ್ದವು. ಮಾಧವ್‌ ಕಾಶಿನಾಥ್‌ ಡಾಮ್ಲೇ ಎಂಬ ಒಬ್ಬ ಚಿತ್ಪಾವನ ವಿದ್ಯಾರ್ಥಿ ಕಾರೆಲ್ಲಿಯ ಆಗ್ರಹದಂತೆ ಮುಸೊಲಿನಯ ಡಾಕ್ಟ್ರಿನ್‌ ಆಫ್‌ ಫ್ಯಾಸಿಸಂ ಮರಾಠಿ ಬಾಷೆಗೆ ತರ್ಜುಮೆ ಮಾಡುತ್ತಾರೆ. ಸ್ವತಹ ಡಾಮ್ಲೆಯೇ ಆರಂಭಿಸಿದ್ದ ಲೋಖಂಡಿ ಮೋರ್ಚಾ ಎಂಬ ಪತ್ರಿಕೆಯಲ್ಲಿ ಈ ಅನುವಾದವನ್ನು ಪ್ರಕಟಿಸಲಾಗಿತ್ತು. ಪತ್ರಿಕೆಯ ಒಡೆತನವೂ ಡಾಮ್ಲೇಯದ್ದೇ ಆಗಿತ್ತು. ಡಾಮ್ಲೆಯ ತಂದೆ ಬಾಂಬೆಯಲ್ಲಿ ಅಚ್ಚಿನಮನೆ ನಡೆಸುತ್ತಿದ್ದರು. ಅಲ್ಲಿಯೇ ಈ ಪತ್ರವನ್ನೂ ಅಚ್ಚು ಹಾಕಲಾಗುತ್ತಿತ್ತು. ನಂತರ ಅಂದಿನ ಬ್ರಿಟಿಷ್‌ ಕಾನೂನಿಗೆ ವಿರುದ್ಧವಾಗಿ ಗಲಭೆ ಹುಟ್ಟಿಸುವ ರೀತಿಯಲ್ಲಿ ಲೇಖನ ಪ್ರಕಟಿಸಲಾಗಿದೆ ಎಂದು ಆರೋಪಿಸಿ ಪತ್ರಿಕೆಯನ್ನು ತಡೆಯಲಾಯಿತು.
ಸಾವರ್ಕರ್‌, ಮುನ್ಜೇ ಅವರುಗಳ ಹಾಗೆಯೇ ಡಾಮ್ಲೇ ಕೂಡ ಬಾಲಗಂಗಾಧರ ತಿಲಕ್‌ ಮುಂದಿಟ್ಟಿದ್ದ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮಿನ ಉತ್ಪನ್ನವಾಗಿದ್ದರು. ಡಾಮ್ಲೇಯ ಕುಟುಂಬದ ಬೇರುಗಳು ಪುಣೆಯಲ್ಲಿದ್ದವು. ಬ್ರಿಟಿಷ್‌ ರಿಪೋರ್ಟುಗಳಲ್ಲಿ ಡಾಮ್ಲೇಯ ಕುರಿತು ಬಣ್ಣಿಸಿರುವುದು ಹೀಗೆ:
ʼಆತ (ಡಾಮ್ಲೇ) ತೀವ್ರವಾದ ರಾಜಕೀಯ ಸಿದ್ಧಾಂತಗಳನ್ನು ಹೊಂದಿದ್ದ ಮತ್ತು ಬಾಲಗಂಗಾಧರ ತಿಲಕ್‌ ಅವರ ಅನುಯಾಯಿಯೆಂದು ಸ್ವತಹ ಹೇಳಿಕೊಳ್ಳುವ ವ್ಯಕ್ತಿ. ಈತ ತನ್ನನ್ನು ತಾನು ಇಟಲಿಯ ಮತ್ತು ನಾಜಿ ಜರ್ಮನಿಯ ಇತಿಹಾಸಗಳಿಂದ ಯುದ್ಧಕವಚ ತೊಟ್ಟುಕೊಂಡ ವ್ಯಕ್ತಿಯೆಂದು ಗುರುತಿಸಿಕೊಳ್ಳುತ್ತಿದ್ದ.ʼ (ಹೋಂ ಸ್ಪೆಷಲ್‌ ಡಿಪಾರ್ಟ್‌ಮೆಂಟ್‌, ೮೩೦(I), ೧೯೩೯, ಜುಲೈ ೧೧ರ ಟಿಪ್ಪಣಿ)
ಡಾಮ್ಲೆಯ ಕುರಿತು ಇವೆಲ್ಲಕ್ಕಿಂತ ಮುಖ್ಯವಾದ ಮಾಹಿತಿಯನ್ನು ಇಟಾಲಿಯನ್‌ ಕಾನ್ಸುಲೇಟ್‌ ಒದಗಿಸುತ್ತದೆ. ಕಸೊಲಾರಿ ಈ ಕುರಿತ ದಾಖಲೆಗಳನ್ನು ಮುಂದಿಡುತ್ತಾರೆ.
ʼಫ್ಯಾಸಿಸ್ಟ್‌ ಸಿದ್ಧಾಂತವನ್ನು ಗಟ್ಟಿಯಾಗಿ ಹಿಡಿದುಕೊಂಡು ಉಕ್ಕಿನ ಸೈನಿಕರು (Iron Guards) ಎಂಬ ಹೆಸರಿನಲ್ಲಿ, ನಮ್ಮದೇ ಮಾದರಿಯಲ್ಲಿ, ಆದರೆ ಭಾರತದ ವಿಶೇಷ ಸಂದರ್ಭಕ್ಕೆ ತಕ್ಕಂತೆ, ಅವರು ಒಂದು ಸಂಘಟನೆಯನ್ನು ಹುಟ್ಟು ಹಾಕುತ್ತಾರೆ. ಅವರು ಮತ್ತು ಗೆಳೆಯರು ಕಪ್ಪು ವಸ್ತ್ರಗಳನ್ನ ಧರಿಸುತ್ತಾರೆ. ಭಾರತದ ಮೊದಲ ಕಪ್ಪು ವಸ್ತ್ರಧಾರಿಗಳು. ಯುದ್ಧ ಆರಂಭವಾದ ಹಿನ್ನೆಲೆಯಲ್ಲಿ ಸಂಘಟನೆಯ ಬೆಳವಣಿಗೆ ಕುಂಠಿತವಾಯಿತು.ʼ (ಏ.ಸಿ.ಎಸ್‌, ಮಿನ್‌ಕುಲ್‌ಪೋಪ್‌, ೧೭ ಬಿಸ್‌, ಸಿ.ಐ.ಟಿ, ರಿಪೋರ್ಟ್‌ ನಂ ೨೨೯೮/ST ೩, ಬಾಂಬೆ ಇಟಾಲಿಯನ್‌ ಕಾನ್ಸುಲೇಟ್‌, ಜನಪರ ಸಾಂಸ್ಕೃತಿಕ ಸಚಿವಾಲಯಕ್ಕೆ ೧೯೩೯ ಅಕ್ಟೋಬರ್‌ ೪ ರಂದು ಬರೆದ ಪತ್ರ).
ತೀವ್ರ ಹಿಂದೂಜನಾಂಗೀಯವಾದದ ಆಚೆಗೆ ಫ್ಯಾಸಿಸ್ಟ್‌ ಪ್ರಭಾವ ವ್ಯಾಪಿಸಿರುವುದನ್ನು ಕಸೊಲಾರಿ ಬೊಟ್ಟು ಮಾಡಿ ತೋರಿಸುತ್ತಾರೆ. ಹಿಂದೂ ಬ್ರಾಹ್ಮಣ ರಾಜಕಾರಣದಲ್ಲಿ ಪ್ರಮುಖನಾಗಿದ್ದ ಎಂ.ಆರ್ ಜಯಕರ್‌ ಅಧ್ಯಕ್ಷರಾಗಿ ಆರಂಭಿಸಿದ ಸ್ವಸ್ತಿಕ್‌ ಲೀಗ್‌ ಅದರಲ್ಲಿ ಮುಖ್ಯವಾದದ್ದು. ೧೯೨೯ ಮಾರ್ಚ್‌ ೧೦ರಂದು ಇದು ಆರಂಭಗೊಂಡಿತ್ತು. ಹಿಂದೂ ಮಹಾಸಭಾದ ನಾಯಕರಾಗಿದ್ದ ಜಯಕರ್ ಮಾತಿನಂತೆ ‘೧೫ರಿಂದ ೧೮ ವರ್ಷದ ನಡುವಿನ ಗಂಡು ಮಕ್ಕಳನ್ನು ಸೇರಿಸಿಕೊಂಡು ಕೆಡೆಟ್ ಕಾರ್ಪ್‌ಗಳನ್ನು ರೂಪಿಸುವುದು ಇದರ ಉದ್ಧೇಶ. ಈ ಕೆಡೆಟ್‌ಗಳು ಪಡೆಯುವ ತರಬೇತಿಯು ಅವರಿಗೆ ಮುಂದೆ (ಸ್ವಸ್ತಿಕ್) ಲೀಗಿಗೆ ಸೇರಲು ಸಹಕಾರಿಯಾಗುತ್ತದೆ.ʼ
ಇದು ಸಂಡೇ ಕ್ರೋನಿಕಲ್‌ ಪತ್ರಿಕೆ ಇಪ್ಪತ್ತೆಂಟನೇ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಒಂದು ಚಿತ್ರವನ್ನು ನೆನಪಿಸುತ್ತದೆ. ಅದರಲ್ಲಿ ಕ್ಯಾಂಪ್‌ ಡಕ್ಸ್‌ ಅಲ್ಲಿ ಅವರ ವಾರ್ಷಿಕ ಶಿಬಿರ ನಡೆಯುವಾಗ ಬಾಗಿಲಲ್ಲಿ ಕಾವಲು ನಿಂತಿರುವ ʼಪುಟಾಣಿ ಸೈನಿಕರನ್ನುʼ ತೋರಿಸುವ ಚಿತ್ರವದು. ೧೪ ರಿಂದ ೧೮ ವರ್ಷದ ಗಂಡುಮಕ್ಕಳ ಯುವ ಸಂಘಟನೆಯಾದ ಅವಾಂಟ್‌ ಗಾರ್ಡಿಸ್ಟಿಯ ಸದಸ್ಯರಿಗೆ ನೇರವಾಗಿ ಯುದ್ಧೋಪಕರಣಗಳ ತರಬೇತಿಯನ್ನು ನೀಡಲಾಗುತ್ತದೆ. ನಮಗಾಗಲೀ ನಮ್ಮ ಕೇಡರುಗಳಿಗಾಗಲೀ ಅಂತಹ ನೇರವಾದ ತರಬೇತಿ ಪಡೆಯುವುದು ಸಾಧ್ಯವಲ್ಲದಿದ್ದರೂ ಗಂಡು ಮಗುವಿಗೆ ನೀಡುವ ಸೈನಿಕ ತರಬೇತಿಯು ಯಾವ ರೀತಿಯಲ್ಲೂ ಹಾಳಾಗುವುದಿಲ್ಲ. ಜೊತೆಗೆ ಕಾಲವು ಅವನನ್ನು ಒಬ್ಬ ಆದರ್ಶಪ್ರಾಯ ಸ್ವಯಂಸೇವಕನಾಗಿ ಬದಲಾಯಿಸುತ್ತದೆ ಕೂಡ. ಆದರೆ ೧೯೪೦ರಲ್ಲಿ ನಾಜಿವಾದ ಅದರ ಭೀಕರ ಮುಖವನ್ನು ಪ್ರದರ್ಶಿಸಲು ಆರಂಭಿಸಿದಾಗ ಹಿಟ್ಲರನ ಸ್ವಸ್ತಿಕ್‌ ಚಿಹ್ನೆಯೊಂದಿಗೆ ಇರುವ ಹೋಲಿಕೆಯನ್ನು ಜಯಕರ್‌ ನಿಷೇಧಿಸಲು ನಿರ್ಬಂಧಿತರಾಗುತ್ತಾರೆ.
‌ʼಹಿಟ್ಲರ್ ಆರ್ಯರು ಮತ್ತು ಆರ್ಯೇತರರ ನಡುವೆ, ಜರ್ಮನ್ನರ ಮತ್ತು ಯಹೂದಿಗಳ ನಡುವೆ ತಾರತಮ್ಯ ಮಾಡುತ್ತಾರೆ. (ಸ್ವಸ್ತಿಕ್)‌ ಲೀಗ್‌, ಅದು ಪೂರ್ಣವಾಗಿ ಒಂದು ಹಿಂದೂ ಸಂಘಟನೆಯಾಗಿದ್ದರೂ ಕೂಡ, ಹಿಂದೂಗಳ ಮತ್ತು ಹಿಂದೂಯೇತರರ ನಡುವೆ ಯಾವ ರೀತಿಯ ತಾರತಮ್ಯವನ್ನೂ ಮಾಡುವುದಿಲ್ಲ. ಹಿಟ್ಲರ್‌ಗೆ ಧಾರಾಳ ಶತ್ರುಗಳಿದ್ದಾರೆ. ಲೀಗ್‌ಗೆ ಶತ್ರುಗಳೆಂದು ಯಾರೂ ಇಲ್ಲ. ಆತ ಪ್ರತಿಕಾರದಾಹಿ. ಲೀಗ್‌ ಕ್ಷಮಾಗುಣವನ್ನು ಧಾರಾಳವಾಗಿ ಹೊಂದಿದೆ. ಆತ ಆಕ್ರಮಶಾಲಿ ಮತ್ತು ಕ್ರೂರಿ, ಲೀಗ್‌ ಹಾಗಲ್ಲ. ಆತ ವಿನಾಶದ ನಿಬಂಧನೆಗಳನ್ನು ಮುಂದಿಟ್ಟುಕೊಂಡು ಯೋಚಿಸುವುದು ಮತ್ತು ಕಾರ್ಯಾಚರಿಸುತ್ತಿರುವುದು. ಆತ ಹಲವಾರು ಕುಟುಂಬಗಳನ್ನೂ ದೇಶಗಳನ್ನೂ ನಾಶಗೊಳಿಸಿದ. ಜೊತೆಗೆ ಪ್ರಪಂಚದ ಶಾಂತಿಯನ್ನೂ. ಹಲ್ಲನ್ನೂ ಆಯುಧವಾಗಿಸಿ ಓಡಾಡುವ ವ್ಯಕ್ತಿ ಆತ. ಲೀಗ್‌ ಕಟ್ಟುವ ಕೆಲಸಕ್ಕಾಗಿ ನೆಲೆಗೊಳ್ಳುತ್ತದೆ. ಆತ ಮಾನವಕುಲದ ಶತ್ರು. ಲೀಗ್‌ ಮಾನವಕುಲದ ರಕ್ಷಕ. ಅದು ಹಲವು ಮನುಷ್ಯ ಜೀವಗಳನ್ನು ಬದುಕುಳಿಸಿದೆ. ಅದರ ರಕ್ಷಾನೌಕೆ ಅಷ್ಟೊಂದು ಫಲಪ್ರದವಾಗಿದೆ. (೧೯೪೦ ಜುಲೈ ಆಗಸ್ಟ್‌, ಸ್ವಸ್ತಿಕ್‌ ಹೆರಾಲ್ಡ್‌ ಪತ್ರಿಕೆಯಲ್ಲಿ ಬಂದ ಹಿಟ್ಲರ್‌ ಮತ್ತು ಸ್ವಸ್ತಿಕ್‌ ಲೀಗ್‌ ಎಂಬ ಲೇಖನ)
ಕಸೋಲಾರಿಯ ಲೇಖನದ ಪ್ರಮುಖ ಭಾಗ ಸಾವರ್ಕರ್‌ ಕುರಿತ ವಿವರಣೆಗಳು. ಅದರ ಚರ್ಚೆಗೆ ಬರುವ ಮೊದಲು ಅರ್‌ಎಸ್‌ಎಸ್‌ ರೂಪೀಕರಣ ಮತ್ತು ಕಾರ್ಯಾಚರಣೆಯ ಮಾದರಿ ನಿರ್ಮಿಸುವುದರಲ್ಲಿ ಸಾವರ್ಕರ್‌ ವಹಿಸಿದ ಪಾತ್ರವೇನು ಎಂಬುದನ್ನು ನಾವು ಗಮನಿಸಬೇಕು. ಬಾಬಾರಾವ್‌ ಸಾವರ್ಕರ್‌, ಆರ್‌ಎಸ್‌ಎಸ್‌ ರೂಪೀಕರಣದಲ್ಲಿ ವಹಿಸಿದ ಪಾತ್ರದ ಕುರಿತು ನಾವು ಈಗಾಗಲೇ ಚರ್ಚಿಸಿದೆವು. ನಾಗಪುರದ ಮಹರ್‌ ಪ್ರದೇಶದಲ್ಲಿ ಸಾಲುಬಾಯ್‌ ಮೋಹಿತೇ ವಾಡಾದಲ್ಲಿ ಆರ್‌ಎಸ್‌ಎಸ್‌ ಮೊಟ್ಟಮೊದಲ ಶಾಖೆ ಆರಂಭಿಸಿತ್ತು. ಬಾಬಾರಾವ್‌ ಆ ಸಂದರ್ಭದಲ್ಲಿ ಹಾಜರಿದ್ದರು. ಪೇಶ್ವೆಗಳು ಬಳಸುತ್ತಿದ್ದ ಭಗವಾ ಎಂಬ ಕಾವಿ ಧ್ವಜವನ್ನೇ ಅರ್‌ಎಸ್‌ಎಸ್‌ನ  ಧ್ವಜವಾಗಿ ಆಯ್ದುಕೊಳ್ಳಲು ಸಲಹೆ ನೀಡಿದ್ದು ಬಾಬಾರಾವ್ ಎಂದು ಸಾವರ್ಕರ್ ಆತ್ಮಕತೆಯಲ್ಲಿ ವಿಕ್ರಂ ಸಂಪತ್ ಹೇಳುತ್ತಾರೆ.‌ ಅದರ ಜೊತೆಗೆ ಆರ್‌ಎಸ್‌ಎಸ್ ಸೇರಲು ಕೈಗೊಳ್ಳಬೇಕಾದ ಪ್ರತಿಜ್ಞೆಯನ್ನೂ ಬಾಬಾರಾವ್ ತಯಾರಿಸುತ್ತಾರೆ. ಆ ಪ್ರತಿಜ್ಞೆಯ ಮೂಲಕವೇ ವಿನಾಯಕ್ ದಾಮೋದರ್ ಸಾವರ್ಕರ್ ಮುಂದಿಟ್ಟಿದ್ದ ಹಿಂದುತ್ವ, ಹಿಂದೂರಾಷ್ಟ್ರ ಮುಂತಾದ ಕಲ್ಪನೆಗಳನ್ನು ಭಾರತದ ರಾಜಕಾರಣದಲ್ಲಿ ಮೊದಲ ಬಾರಿಗೆ ಪ್ರಯೋಗಿಸುವುದು ಎಂದು ವಿಕ್ರಂ ಸಂಪತ್ ಅಭಿಪ್ರಾಯ ಪಡುತ್ತಾರೆ. ಬಾಬಾರಾವ್ ಕಟ್ಟಿದ ತರುಣ್ ಸಭಾ ಕೂಡ ಆರ್‌ಎಸ್‌ಎಸ್ ಜೊತೆ ವಿಲೀನವಾಗುತ್ತದೆ.
ನಾಗಪುರದಿಂದ ಹೊರಗೆ ಮೊದಲ ಶಾಖೆ ಆರಂಭವಾಗುವುದು ೧೮೨೬ ಫೆಬ್ರವರಿ ೧೮ರಂದು ವಾರ್ಧಾದಲ್ಲಿ. ಅದೇ ವರ್ಷದ ಡಿಸೆಂಬರ್ ೨೬ರಂದು ಹೆಡ್ಗೆವಾರ್ ಮೊದಲ ಸರಸಂಘಚಾಲಕ ಆಗಿ ಅಧಿಕೃತವಾಗಿ ಅಧಿಕಾರಕ್ಕೇರುವುದು. ಸಾವರ್ಕರ್ ಸಹೋದರರ ಸಹಕಾರದಿಂದ ಪಶ್ಚಿಮ ಮಹಾರಾಷ್ಟ್ರ ಮತ್ತು ಕರಾವಳಿ ಪ್ರದೇಶಗಳಲ್ಲಿ ಶಾಖೆಗಳನ್ನು ಆರಂಭಿಸುವಲ್ಲಿ ಹೆಡ್ಗೆವಾರ್ ಯಶಸ್ವಿಯಾಗುತ್ತಾರೆ. ಹೆಡ್ಗೆವಾರ್‌ ಸಹವರ್ತಿಯಾಗುದ್ದ ಡಿ.ವಿ ಕೇಲ್ಕರ್, ಹೆಡ್ಗೆವಾರ್ ಮತ್ತು ಸಾವರ್ಕರ್ ನಡುವಿನ ಸಂಬಂಧದ ಬಗ್ಗೆ ತಮ್ಮ ಎಕನಾಮಿಕ್ ವೀಕ್ಲಿ ಲೇಖನದಲ್ಲಿ ನೆನಪಿಸಿಕೊಳ್ಳುತ್ತಾರೆ.
ʼಡಾಕ್ಟರ್‌ (ಹೆಡ್ಗೆವಾರ್)‌ ಅವರ ಮನಸ್ಸಿನ ಮೇಲೆ ಶ್ರೀ ವಿ.ಡಿ ಸಾವರ್ಕರ್‌ ಅವರ ಕ್ರಾಂತಿಕಾರಿ ಭೂತಕಾಲ ಮತ್ತು ಹಿಂದೂಸ್ತಾನವು ಹಿಂದೂಗಳಿಗೆ ಸೇರಿದ್ದು ಎಂಬ ಸಿದ್ಧಾಂತ ಉಂಟುಮಾಡಿದ ಆಳವಾದ ಪ್ರಭಾವವನ್ನು ಇಲ್ಲಿ ಹೇಳಲೇಬೇಕು. ದೇಶ ಸ್ವಾತಂತ್ರ್ಯ ಗಳಿಸಲೆಂದು ನಡೆಸುತ್ತಿರುವ ಎಲ್ಲ ಹೋರಾಟಗಳಿಗೆ ಉತ್ತೇಜನವಾಗಬಲ್ಲ ವ್ಯಕ್ತಿಯಾಗಿ ಡಾಕ್ಟರ್‌ ಸಾವರ್ಕರನ್ನು ಕಂಡಿದ್ದರು. ಆದ್ದರಿಂದ ಅರ್‌ಎಸ್‌ಎಸ್‌ ರೂಪೀಕರಣಗೊಂಡಾಗ ಅವರ ಸೀಮಿತ ಸ್ವಾತಂತ್ರ್ಯದಲ್ಲಿ ಬದುಕಬಹುದಾಗಿದ್ದ ರತ್ನಗಿರಿ ಜಿಲ್ಲೆಗೆ ಡಾಕ್ಟರ್‌ ಓಡೋಡಿ ಬರುತ್ತಾರೆ. ಒಂದು ಮುಂಜಾನೆ ಡಾಕ್ಟರ್‌ ಈ ಲೇಖಕನ ಅಥಿತಿಯಾಗಿ ಬಾಂಬೆಗೆ ಬಂದವರು ತನ್ನ ಭೇಟಿಯ ಉದ್ಧೇಶವನ್ನು ಖಾಸಗಿಯಾಗಿ ಹಂಚಿಕೊಂಡರು. ಆರ್‌ಎಸ್‌ಎಸ್‌ ಸಂಘಟನೆಯ ನಿಯಮಾವಳಿಗಳು ಮತ್ತು ಕಾರ್ಯಕ್ರಮಗಳ ಕುರಿತು ವೀರ್‌ ಸಾವರ್ಕರ್‌ ಜೊತೆ ಚರ್ಚಿಸಲು ಡಾಕ್ಟರ್‌ ಬಯಸಿದ್ದರು.ʼ
ಹಿಂದೂ ಮಹಾಸಭಾದ ಇತರ ನಾಯಕರುಗಳೂ ಆರ್‌ಎಸ್‌ಎಸ್‌ಗೆ ಬೇರೂರಲು ಸಹಾಯ ಮಾಡಿದ್ದರು. ಉತ್ತರದ ಭಾಗದಲ್ಲಿ ದೊಡ್ಡಮಟ್ಟದ ಸಹಾಯ ದೊರಕುವುದು ಸ್ವತಃ ಸಾವರ್ಕರ್‌ ಶುದ್ಧಿಚಳುವಳಿಯ ಮೂಲಕ ರಾಜಕಾರಣಕ್ಕೆ ಕರೆತಂದಿದ್ದ ಭಾಯ್‌ ಪರಮಾನಂದ್‌ ಕಡೆಯಿಂದ. ಫ್ಯಾಸಿಸ್ಟ್‌ ಪಕ್ಷ ಮತ್ತು ಬಲಿಲ್ಲ ಸಂಘಟನೆ ಎಂಬ ರೀತಿಯಲ್ಲಿ ಆರಂಭಿಕ ಕಾಲದಲ್ಲಿ ಆರ್‌ಎಸ್‌ಎಸ್‌ ಮತ್ತು ಹಿಂದೂ ಮಹಾಸಭಾ ಕಾರ್ಯಾಚರಿಸುತ್ತಿತ್ತು. ಆದರೆ ಹಿಂದೂ ಮಹಾಸಭಾ ಒಂದು ರಾಜಕೀಯ ಸಂಘಟನೆಯಾಗಿ ಕಾರ್ಯಾಚರಿಸುತ್ತಿರುವುದರಿಂದ ಅವೆರಡೂ ಬೇರೆ ಬೇರೆ ಸಂಘಟನೆಗಳಾಗಿಯೇ ಮುಂದುವರಿದವು. ಗಾಂಧಿಯ ಆಗಮನದೊಂದಿಗೆ ಕಾಂಗ್ರೆಸ್‌ ಒಳಗಡೆ ಹುಟ್ಟಿಕೊಂಡ ಹಿಂದೂ-ಮುಸ್ಲಿಂ ಸೌಹಾರ್ದತೆ ಮತ್ತು ಬಹುಜನ ರಾಜಕಾರಣವು ತಿಲಕರ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮನ್ನು ಅದಾಗಲೇ ಹೊರತಳ್ಳಿತ್ತು. ತಿಲಕ್‌ವಾದಿ ಬ್ರಾಹ್ಮಣರು ವಿವಿಧ ಪ್ರಾಂತ್ಯಗಳಲ್ಲಿ ಸ್ವರಾಜ್ಯ ಪಾರ್ಟಿ, ರೆಸ್ಪಾನ್ಸಿವಿಸ್ಟ್‌ ಪಾರ್ಟಿ, ಲೋಕಶಾಹಿ ಸ್ವರಾಜ್ಯ ಪಾರ್ಟಿ ಮೊದಲಾದ ಹೆಸರುಗಳಲ್ಲಿ ಹಲವು ಬ್ರಾಹ್ಮಣ ಪಕ್ಷಗಳನ್ನು ಕಟ್ಟಿಕೊಳ್ಳಲು ನಿರ್ಬಂಧಿತರಾಗಿದ್ದ ಕಾಲವದು.‌ ಎನ್.ಸಿ ಕೇಲ್ಕರ್‌, ಡಾ. ಬಿ.ಎಸ್‌ ಮುನ್ಜೇ, ಬಾಪೂಜಿ ಆಣೆ ಮೊದಲಾದವರು ೧೯೨೩ ಜನವರಿ ೧ರಂದು ಹುಟ್ಟಿಕೊಂಡ ಸ್ವರಾಜ್ಯ ಪಾರ್ಟಿಯ ನಾಯಕರಾಗಿದ್ದರು. ಸ್ವರಾಜ್ಯ ಪಾರ್ಟಿಯ ಮಹಾರಾಷ್ಟ್ರ ಯೂನಿಟನ್ನು ಕಟ್ಟಿದ ವ್ಯಕ್ತಿ ನಾವು ಈ ಮೊದಲು ಚರ್ಚಿಸಿದ ಎಂ.ಆರ್‌ ಜಯಕರ್‌ ಆಗಿದ್ದರು. ಇವೆಲ್ಲ ಬ್ರಾಹ್ಮಣರ ನೇತೃತ್ವದಲ್ಲಿ ರೂಪಗೊಂಡ ಪಕ್ಷಗಳು ಎಂದು ಒತ್ತಿ ಹೇಳಬೇಕಾದ ಅಗತ್ಯಿಲ್ಲವಲ್ಲ.
೧೯೨೩ರಲ್ಲಿ ನಡೆದ ಸೆಂಟ್ರಲ್‌ ಮತ್ತು ಪ್ರಾಂತೀಯ ಕೌನ್ಸಿಲ್‌ಗಳ ಚುನಾವಣೆಯಲ್ಲಿ ಸ್ವರಾಜ್ಯ ಪಾರ್ಟಿ ೨೮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅದರಲ್ಲಿ ೨೩ ಜನರು ಗೆದ್ದರು. ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ ಪಾರ್ಟಿ ಚುನಾವಣೆಯನ್ನು ಬಹಿಷ್ಕರಿಸಿದ್ದ ಕಾರಣ ಸ್ವರಾಜ್ಯ ಪಾರ್ಟಿಗೆ ಈ ಗೆಲುವು ಸಾಧ್ಯವಾಗಿತ್ತು. ಎಂ.ಆರ್‌ ಜಯಕರ್‌, ಅಣ್ಣಾ ಸಾಹೇಬ್‌ ಬೋಪಟ್ಕರ್‌, ಎನ್.ಸಿ ಕೇಲ್ಕರ್‌ ಮೊದಲಾದ ಬ್ರಾಹ್ಮಣರು ಸೆಂಟ್ರಲ್‌ ಲೆಜಿಸ್ಲೇಟಿವ್‌ ಕೌನ್ಸಿಲ್‌ಗೆ ಚುನಾಯಿತರಾದರು. ಸೆಂಟ್ರಲ್‌ ಪ್ರಾವಿನ್ಸಿನ ಚುನಾವಣೆಯಲ್ಲಿ ೭೦ರಲ್ಲಿ ೪೧ ಸೀಟುಗಳನ್ನು ಸ್ವರಾಜ್ಯ ಪಾರ್ಟಿ ಗೆದ್ದುಕೊಂಡಿತು. ಬಿ.ಎಸ್‌ ಮುನ್ಜೇ, ಎನ್.ಬಿ ಖರೇ, ಎಸ್.ಬಿ ಟಾಂಬೇ, ಬಾಬಾಸಾಹೇಬ್‌ ಖಪಾರ್ಡೇ ಮೊದಲಾದ ಬ್ರಾಹ್ಮಣರು ಸ್ವರಾಜ್ಯ ಪಾರ್ಟಿಯ ಬ್ಯಾನರ್‌ ಅಡಿಯಲ್ಲಿ ಗೆದ್ದು ಬಂದರು. ಬ್ರಿಟಿಷರೊಂದಿಗೆ ಜೊತೆ ಸೇರಿಕೊಂಡೇ ಈ ಬ್ರಾಹ್ಮಣ ಪಕ್ಷಗಳು ರಾಜಕೀಯ ರಂಗಕ್ಕೆ ಬಂದಿದ್ದವು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಹಿಂದೂ ಮಹಾಸಭಾದ ನಾಯಕತ್ವವು ಆರಂಭದಲ್ಲಿ ಎನ್.ಸಿ ಕೇಲ್ಕರ್‌ ಕೈಯಲ್ಲಿತ್ತು. ೧೯೨೫ ಮತ್ತು ೧೯೨೯ರಲ್ಲಿ ಅವರೇ ಆದ್ಯಕ್ಷರಾಗಿದ್ದರು. ೧೯೨೭ರಿಂದ ೧೯೩೩ರ ವರೆಗೆ ಡಾ. ಬಿ.ಎಸ್‌ ಮುನ್ಜೇ ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದರು. ೧೯೨೯ ಆಗಸ್ಟ್‌ ೨೭ರಂದು ಡಾಕಾ ಪ್ರಾಂತ್ಯದ ಹಿಂದೂ ಸಮಾವೇಶದಲ್ಲಿ ಎನ್‌.ಸಿ ಕೇಲ್ಕರ್‌ ಮಾಡಿದ ಭಾಷಣ ಹಿಂದೂ ರಾಷ್ಟ್ರದ ಇಂಗಿತವನ್ನು ಸ್ಪಷ್ಟಪಡಿಸುತ್ತದೆ. ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸಲು ಮತ್ತು ಸಂಘಟಿಸಲು ನಮಗಿರುವುದು ಒಂದೇ ಭಾರತ ಎಂದು ಆ ಭಾಷಣದಲ್ಲಿ ಹೇಳುತ್ತಾರೆ. ಆ ಭಾರತದಲ್ಲಿ ಮುಹಮ್ಮದೀಯರಿಗೆ ಮತ್ತು ಕ್ರೈಸ್ತರಿಗೆ ಹೆಚ್ಚಿನ ಪ್ರಾಶಸ್ತ್ಯ ಲಭಿಸುತ್ತಿದೆ. ಅದರಲ್ಲೂ ಕ್ರೈಸ್ತರಿಗೆ. ಕ್ರೈಸ್ತರು ಇಲ್ಲದ ದೇಶಗಳೇ ಇಲ್ಲವೆಂದು ಹೇಳಬಹುದು. ಭಾರತದ ಗಡಿಯಾಚೆ ಕಾನ್ಸ್ಟೆಂಟಿನೋಪಲ್‌ ತನಕ ಮುಹಮ್ಮದೀಯರಿಗೂ ನೋಡಬಹುದು. ಭೌತಿಕ ಸಹಾಯ ಲಭಿಸದಿದ್ದರೂ ಅವರಿಗೆ ಅಲ್ಲಿಂದ ಪ್ರಚೋದನೆಗಳು ಸಿಗಬಹುದು. ಆದರೆ ಹಿಂದೂಯಿಸಂ ವಿಷಯಕ್ಕೆ ಬರುವಾಗ ಅವನ ಹಿಂದೂಸ್ತಾನವಲ್ಲದೆ ಒಂದಿಂಚು ಭೂಮಿಯೂ ಬೇರೆ ಸಿಗದು. ಆದ್ದರಿಂದ ಹಿಂದೂಗಳು ಒಟ್ಟಾಗಬೇಕಾದ ಮತ್ತು ಅದರ ಹಲವು ವಿಭಾಗಗಳು ಮತ್ತು ವಿವಿಧ ಜಾತಿಗಳನ್ನು ಒಟ್ಟುಗೂಡಿಸಿಕೊಂಡು ಒಂದು ಜನಾಂಗೀಯ ರಾಜಕಾರಣವನ್ನು ಕಟ್ಟಬೇಕಾದ ಅಗತ್ಯವಿದೆಯೆಂದೂ ಕೇಲ್ಕರ್‌ ಒತ್ತಿ ಹೇಳುತ್ತಾರೆ. ಅದಕ್ಕೆ ಬೇಕಾದ ಬದಲಾವಣೆಗಳನ್ನು ಹಿಂದೂಗಳು ಕೈಗೊಳ್ಳಬೇಕೆಂದೂ ಹೇಳುತ್ತಾರೆ. ತನ್ನ ಭಾಷಣದಲ್ಲಿ ಕೇಲ್ಕರ್‌ ಹೀಗೆ ಅಭಿಪ್ರಾಯಪಡುತ್ತಾರೆ.
ʼಬನಾರಸಿನ ಪಂಡಿತ ಮತ್ತು ಮಲಬಾರಿನ ಬ್ರಾಹ್ಮಣರು ತಾವು ಬದುಕುತ್ತಿರುವುದು ಹೊಸ ಲೋಕದಲ್ಲಿ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಹಗಲು ಬೆಳಕಿನಲ್ಲಿ ತಮ್ಮ ತೊಗಲನ್ನು ಕಳಚಿಕೊಂಡು ಹೊರಜಗತ್ತಿಗೆ ಇಳಿಯಲೇಬೇಕು. ಈಗಿನ ಜಾತಿವ್ಯವಸ್ಥೆಯನ್ನು ಪ್ರಾಯೋಗಿಕ ಅಗತ್ಯತೆಗಳಿಗೆ ತಕ್ಕಂತೆ ತೆಳುವೋ ದಪ್ಪವೋ ಮಾಡಿಕೊಳ್ಳಬೇಕು. ನಾಲ್ಕುವರ್ಣಗಳ ನಡುವಿನ ಉಪವ್ಯವಸ್ಥೆಗಳನ್ನು ಕೊನೆಗೊಳಿಸಲು ಧೈರ್ಯದಿಂದ ಪ್ರಚಾರ ಕಾರ್ಯಗಳನ್ನು ಕೈಗೊಳ್ಳಬೇಕು.ʼ
ಹಿಂದೂ ಮಹಾಸಭಾ ಎಂದು ಹೆಸರಾದರೂ ಕೇಲ್ಕರ್‌ ಮಾತನಾಡುತ್ತಿರುವುದು ಬ್ರಾಹ್ಮಣ ಸಭೆಯಲ್ಲಿ ನಿಂತುಕೊಂಡು ಎಂದು ಅನಿಸುತ್ತದೆಯಾದರೆ, ಯಾರು ಮೇಲುಗೈ ಸಾಧಿಸಲು ಈ ಸಭೆಗಳನ್ನು ಕಟ್ಟಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಯಿತು ಎಂದರ್ಥ. ಬ್ರಾಹ್ಮಣರ ಉಳಿಯುವಿಕೆಗೂ ರಾಜಕೀಯ ಅಧಿಕಾರದ ಪಾಲುದಾರಿಕೆಗೂ ಚಾತುರ್ವರ್ಣವನ್ನು ಪುನರ್‌ ಸಂಘಟಿಸಿಕೊಳ್ಳಬೇಕೆಂದು ಕೇಲ್ಕರ್‌ ಇಲ್ಲಿ ಹೇಳುತ್ತಿರುವುದು. ಎರಡನೇ ವಿಷಯ, ಶತ್ರುಸ್ಥಾನದಿಂದ ಬ್ರಿಟಿಷರನ್ನು ಕೆಳಗಿಳಿಸಿ ಮುಸ್ಲಿಮರನ್ನು ಮತ್ತು ಇತರ ಅಲ್ಪಸಂಖ್ಯಾತರನ್ನು ತಂದು ಕೂರಿಸುವುದು. ಹಿಂದೂಗಳು ತಮ್ಮ ಧರ್ಮಕ್ಕೆ ಕರೆಸಿಕೊಳ್ಳುವ ಮತಾಂತರ (ಶುದ್ಧಿ) ಮತ್ತು ಹಿಂದೂಗಳನ್ನು ಇತರ ಧರ್ಮಗಳಿಗೆ ಮತಾಂತರಿಸುವ ನಡುವಿನ ವ್ಯತ್ಯಾಸದ ಕುರಿತು ಕೇಲ್ಕರ್‌ ಮತ್ತು ಜಯಕರ್‌ ಈ ಸಮ್ಮೇಳನದಲ್ಲಿ ಮಾತನಾಡುತ್ತಾರೆ. ಮೊದಲನೆಯದು ತಾನಾಗಿ ಘಟಿಸುವುದು ಮತ್ತು ಎರಡನೆಯದು ಬಲವಂತದ ಮತಾಂತರ ಎಂಬುದು ಅವರ ವಾದ. ಆರ್ಯಸಮಾಜ ಮತ್ತು ಅದರ ನಂತರದ ರಾಜಕೀಯ ಸಂಘಟನೆಗಳು ಶುದ್ಧಿ ಎಂಬ ಹೆಸರಿನ, ಹಿಂದೂ ಧರ್ಮಕ್ಕೆ ಮತಾಂತರಿಸುವ ಪ್ರಕ್ರಿಯೆಯನ್ನು ತಮ್ಮ ಕಾರ್ಯಕ್ರಮವಾಗಿ ಹೊಂದಿದ್ದವು. ಬೇರೊಂದು ರಾಜಕೀಯ ಸಂಘಟನೆಯಾಗಲಿ, ಮುಸ್ಲಿಂಲೀಗ್‌ ಅಥವಾ ಇತರ ಅಲ್ಪಸಂಖ್ಯಾತ ಸಂಘಟನೆಗಳು ಯಾವುವು ಕೂಡ ಮತಾಂತರವನ್ನು ರಾಜಕೀಯ ಅಜೆಂಡಾವೆಂದು ಘೋಷಿಸಿರಲಿಲ್ಲ. ಹಾಗೆಯೇ, ಹಿಂದೂಸ್ತಾನ್‌, ಹಿಂದುತ್ವ ಎಂಬ ವಿಭಜನಕಾರಿ ಬೀಜಗಳನ್ನು ಹೊತ್ತ ಕಲ್ಪನೆಗಳೊಂದಿಗೆ ಹಿಂದೂ ಬ್ರಾಹ್ಮಣ ರಾಜಕಾರಣ ಮುನ್ನಡೆಯುತ್ತಿರುವ ಹೊತ್ತಿನಲ್ಲಿ ಜಿನ್ನಾ ಆಗಲಿ ಬೇರೆ ಯಾವ ನಾಯಕರೇ ಆಗಲಿ ದ್ವಿರಾಷ್ಟ್ರ ವಾದವನ್ನು ಎತ್ತಿಯೇ ಇರಲಿಲ್ಲ ಎಂಬುದನ್ನೂ ನಾವಿಲ್ಲಿ ಗಮನಿಸಬೇಕು.
ಹೆಣ್ಣುಮಕ್ಕಳ ವಿವಾಹ ಪ್ರಾಯವನ್ನು ಹೆಚ್ಚಿಸಿದ ಏಜ್‌ ಆಫ್‌ ಕನ್ಸೆಂಟ್‌ ಬಿಲ್‌ ಅನ್ನು ವಿರೋಧಿಸಿಕೊಂಡು ತಿಲಕರು ಚಿತ್ಪಾವನ ಬ್ರಾಹ್ಮಣರೊಳಗಿನ ಗಣನೀಯ ಸಂಖ್ಯೆಯ ಜನರನ್ನು ಹಿಂಸಾತ್ಮಕ ಬ್ರಾಹ್ಮಣರನ್ನಾಗಿ ಪರಿವರ್ತಿಸಿದರೆ, ೧೯೨೩ರ ಹಿಂದೂ ಮಹಾಸಭಾದ ಸಮ್ಮೇಳನದಲ್ಲಿ ಅದೇ ತಿಲಕರ ಮಾನಸ ಶಿಷ್ಯರಾಗಿದ್ದ ಕೇಲ್ಕರ್‌ ಪ್ರಾಯಪೂರ್ತಿಯಾಗದ ಹಿಂದೂ ಹೆಣ್ಣುಮಕ್ಕಳ ವಿವಾಹ ಸಾಮಾಜಿಕ ಪಿಡುಗು ಎಂದು ಅಭಿಪ್ರಾಯ ಪಡುತ್ತಾರೆ.
ಹಿಂದೂ ರಾಜಕಾರಣದ ಇತಿಹಾಸವನ್ನು ಕೆದಕಿ ನೋಡಿದರೆ ಇಂತಹ ವೈರುಧ್ಯಗಳು ಧಾರಾಳವಾಗಿ ಸಿಗುತ್ತವೆ. ಹಿಂದುತ್ವವನ್ನು ಸಾಮಾನ್ಯ ರಾಜಕೀಯ ಸಿದ್ಧಾಂತವೆಂಬ ನೆಲೆಯಲ್ಲಿ ಸಮೀಪಿಸುವ ಕಾರಣದಿಂದಲೇ ಇಂತಹ ವೈರುಧ್ಯಗಳಿಗೆ ಢಿಕ್ಕಿ ಹೊಡೆದು ಬೀಳುತ್ತೇವೆ. ಆ ಸಿದ್ಧಾಂತದ ಮೂಲ ಗುರಿ ಬ್ರಾಹ್ಮಣ ರಾಜಕಾರಣವನ್ನು ಸದಾಕಾಲ ಅಧಿಕಾರದಲ್ಲಿಡುವುದೇ ಆಗಿದೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಅಧಿಕಾರದ ಜೊತೆಗೆ ರಾಜಕೀಯ ಅಧಿಕಾರ. ಆದ್ದರಿಂದಲೇ ಹಿಂದುತ್ವ ಸಂಘಟನೆಗಳಿಗೆ ತಾತ್ವಿಕ ಚೌಕಟ್ಟಿನಂತೆಯೇ ದೈಹಿಕ ತರಬೇತಿಯೂ ಮುಖ್ಯವಾಗುವುದು. ಭಾರತದ ಸಮಾನತೆಯ ರಾಜಕಾರಣ ಮುಂದಿಡುವ ಎಲ್ಲವನ್ನೂ ನಿರಾಕರಿಸುವುದು ಅವರ ಸಿದ್ಧಾಂತದ ಮೂಲ ಇಟ್ಟಿಗೆಗಳಲ್ಲಿ ಒಂದು. ಅದರ ಜೊತೆಗೆ ಸಮಾಜವನ್ನು ಶ್ರೇಣೀಕೃತ ವ್ಯವಸ್ಥೆಯಾಗಿ ನೆಲೆ ನಿಲ್ಲಿಸುವುದು. ಆದ್ದರಿಂದ ವೈರುಧ್ಯಗಳನ್ನೇ ನೋಡುತ್ತಾ ನಿಂತರೆ ಹಿಂದುತ್ವ ರಾಜಕಾರಣದ ಕಾರ್ಯಾಚರಣೆಯನ್ನು ಸೈದ್ಧಾಂತಿಕ ಅಥವಾ ಪ್ರಾಯೋಗಿಕವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೊಂದು ಕ್ಲಾಸಿಕ್‌ ಉದಾಹರಣೆಯನ್ನು ತೋರಿಸುತ್ತೇನೆ ನೋಡಿ.
ಹಿಂದುತ್ವ ಎಂಬ ಹೆಸರಿನಲ್ಲಿ ಸಾವರ್ಕರ್‌ ಬರೆದ, ನಂತರ ʼಹಿಂದುತ್ವದ ಮೂಲಭೂತ ತತ್ವಗಳುʼ ಎಂಬ ಹೆಸರಿನಲ್ಲಿ ಪ್ರಸಿದ್ಧವಾದ ರಾಜಕೀಯ ಬ್ರಾಹ್ಮಣಿಸಮ್ಮಿನ ಬೈಬಲ್‌ ಆಧಾರದಲ್ಲಿ ರೂಪುಗೊಂಡ ಸಂಘಟನೆ ಆರ್‌ಎಸ್‌ಎಸ್‌ ಎಂದು ನೋಡಿದೆವು. ಹಿಂದೂ ಮಹಾಸಭಾ ಎಂಬ ರಾಜಕೀಯ ಪಕ್ಷಕ್ಕೆ ಜನರನ್ನು ಕೊಂಡೊಯ್ಯುವ ಫೀಡರ್‌ ಸಂಘಟನೆಯಾಗಿಯೂ ಇದು ಬಹುತೇಕ ಸಂದರ್ಭಗಳಲ್ಲಿ ಕೆಲಸ ಮಾಡಿದೆ. ಆದರೆ ಹಿಂದೂ ಮಹಾಸಭಾವನ್ನು ಮುನ್ನಡೆಸಲು ಸಾವರ್ಕರ್‌ ನೇಮಕಗೊಂಡಾಗ ಆರ್‌ಎಸ್‌ಎಸ್‌ ಕಡೆಯಿಂದ ಬೇಕಾದಷ್ಟು ಬೆಂಬಲ ದೊರೆಯುವುದಿಲ್ಲವೆಂದು ಕಂಡು ಸಾವರ್ಕರ್‌ ಆರ್‌ಎಸ್‌ಎಸ್‌ ಅನ್ನು ಇನ್ನಿಲ್ಲದಂತೆ ಪರಿಹಾಸ್ಯ ಮಾಡುತ್ತಾರೆ. ಪನ್ವೇಲಲ್ಲಿ ನಡೆದ ಒಂದು ಭಾಷಣದಲ್ಲಿ ಸಾವರ್ಕರ್‌ ಮಾತನಾಡುವುದು ನೋಡಿ. ʼಒಬ್ಬ ಆರ್‌ಎಸ್‌ಎಸ್‌ ಸ್ವಯಂ ಸೇವಕನ ಗೋರಿಯ ಮೇಲೆ ಹೀಗೆ ಬರೆಯಲಾಗಿತ್ತು. ಈತ ಜನಿಸಿದ. ಆರ್‌ಎಸ್‌ಎಸ್‌ ಸೇರಿದ. ಏನೇನೂ ಸಾಧಿಸದೆ ಸತ್ತು ಹೋದ.ʼ
 ಈ ಮಾತನ್ನು ಹಿಡಿದುಕೊಂಡು ಸಾವರ್ಕರ್‌ ಆರ್‌ಎಸ್‌ಎಸ್‌ ವಿರೋಧಿಯಾಗಿದ್ದರೆಂದೋ ಆರ್‌ಎಸ್‌ಎಸ್‌ ಸಾವರ್ಕರ್‌ ವಿರೋಧಿಯಾಗಿತ್ತೆಂದೋ ಅರ್ಥ ಮಾಡಿಕೊಂಡರೆ ಹಿಂದುತ್ವರಾಜಕಾರಣದ ಕುಟಿಲತೆ ನಮಗೆ ಅರ್ಥವಾಗುವುದೇ ಇಲ್ಲ. ಒಂದು ಶ್ರೇಣೀಕೃತ ಸಂಬಂಧದ ತುದಿಯಲ್ಲಿ ಕುಳಿತುಕೊಂಡು ಹೇಳುವ ಮಾತುಗಳು ಇವೆಲ್ಲ. ವಿಲ್ಲಿಯನ್ನು ಕೊಲ್ಲಲು ಹೊರಡುವ ಮದನ್‌ ಲಾಲ್‌ ಡಿಂಗ್ರಾನ ಬಳಿ ಈ ಪ್ರಯತ್ನದಲ್ಲಿ ಸೋತರೆ ನಿನ್ನ ಮುಖವನ್ನು ನನಗೆ ತೋರಿಸಬೇಡ ಎಂದು ಹೇಳುವಾಗಿನ ಅದೇ ತರಂಗಾಂತರ ಇರುವ ಮಾತುಗಳೇ ಇವು ಕೂಡ.
೧೯೨೭ರಲ್ಲಿ ಮುನ್ಜೇ ಹಿಂದೂ ಮಹಾಸಭಾದ ಅಧ್ಯಕ್ಷರಾದ ನಂತರ ಈ ದಿಕ್ಕಿನಲ್ಲಿ ಕೆಲಸಗಳು ನಡೆಯುತ್ತವೆ. ತಿಲಕರ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮನ್ನು ಮುಸೊಲಿನಿಯ ಜಾಗತಿಕ ಫ್ಯಾಸಿಸಂ ಜೊತೆಗೆ ಬೆರೆಸಿಕೊಂಡು ಹೊಸತೇ ಒಂದು ರಾಜಕೀಯ ಮಂಡಲಕ್ಕೆ ಹಿಂದೂ ಮಹಾಸಭಾ ಚಲಿಸಲು ತೊಡಗಿತು. ಹಿಂದೂಸಮಾಜ ಎಂಬ ಕಲ್ಪನೆಯನ್ನು ಹಸಿಯಾಗಿ ರಾಜಕೀಯ ಪ್ರಚಾರ ಆಯುಧವಾಗಿಸಿಕೊಳ್ಳುವುದರ ಜೊತೆಗೆ ಬಲಿಲ್ಲ ಮಾದರಿಯಲ್ಲಿ ನಾಗಪುರದಲ್ಲಿ ಒಂದು ರೈಫಲ್‌ ಅಸೋಸಿಯೇಷನನ್ನು ಮುನ್ಜೇ ಆರಂಭಿಸುತ್ತಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page