ಬೆಂಗಳೂರು: ಬೀದಿ ವ್ಯಾಪಾರಿಗಳನ್ನು ಬೆಂಗಳೂರು ಸಂಚಾರಿ ಪೊಲೀಸರು ಕಾನೂನು ಬಾಹಿರವಾಗಿ ಎತ್ತಂಗಡಿ ಮಾಡುತ್ತಿರುವುದು ಸಂವಿಧಾನಬಾಹಿರವಾಗಿದ್ದು, ದ್ವೇಷ ಬಿತ್ತುವ ಹಿಂದುತ್ವ ಸಂಘಟನೆಗಳ ಆಜ್ಞಾಪಾಲಕರಂತೆ ವರ್ತಿಸುತ್ತಿರುವುದರ ಕುರಿತು ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟʼ ಕಳವಳ ವ್ಯಕ್ತಪಡಿಸಿದೆ. ಬೆಂಗಳೂರಿನ ವಿವಿ ಪುರಂನಲ್ಲಿ ಈ ವಾರ ನಡೆದ ಹಬ್ಬದಲ್ಲಿ ಹಿಂದುಯೇತರ ವ್ಯಾಪಾರಿಗಳಿಗೆ ಅವಕಾಶ ನೀಡಬಾರದೆಂದು ಹಿಂದುತ್ವ ಸಂಘಟನೆಯೊಂದು ಪೋಲಿಸ್ ಆಯುಕ್ತರಿಗೆ ಮತ್ತು ಬಿಬಿಎಂಪಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಒಕ್ಕೂಟʼವು ಧರ್ಮ ಧರ್ಮಗಳ ನಡುವೆ ಆಗುತ್ತಿರುವ ಈ ರೀತಿಯ ಬೆಳವಣಿಗೆಗಳು ಸಂವಿಧಾನದ ಆಶಯಗಳ ವಿರೋಧವಾಗಿದ್ದರೂ ಸರ್ಕಾರ ಮೌನವಾಗಿರುವ ಬಗ್ಗೆ ಪ್ರಶ್ನಿಸಿದೆ.
ಈ ಕುರಿತು AICCTU ಅಂಗ ಸಂಸ್ಥೆಯಾದ ʼಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟʼದ ಪತ್ರಿಕಾ ಹೇಳಿಕೆ ಈ ಕೆಳಗಿನಂತಿದೆ:
• ಧರ್ಮವನ್ನು ದುರುಪಯೋಗ ಪಡಿಸಿಕೊಂಡು, ಬೀದಿ ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆಯಲು ಹೊರಟ ಹಿಂದುತ್ವ ಸಂಘಟನೆಗಳ ನಿಲುವು ಖಂಡನೀಯ ಮತ್ತು ಜಾತ್ಯತೀತ ವಿರೋಧಿ ನಡೆಯಾಗಿದೆ
• ಬೀದಿ ವ್ಯಾಪಾರಿಗಳಿಗಿರುವ ನಿಜವಾದ ಸಂಕಷ್ಟಗಳೆಂದರೆ ಕಾನೂನು ಬಾಹಿರ ಎತ್ತಂಗಡಿ ಮತ್ತು ಅವರ ಕಲ್ಯಾಣಕ್ಕಾಗಿರುವ ಬೀದಿ ವ್ಯಾಪಾರಿಗಳ ಕಾನೂನು ಜಾರಿಗೆ ಬರದೇ ಇರುವುದು ಹಾಗು ಬೆಲೆ ಏರಿಕೆ.
ಈ ವಾರ ನಡೆದ ಬೆಂಗಳೂರಿನ ವಿವಿ ಪುರಂ ಹಬ್ಬದಲ್ಲಿ ಹಿಂದುಹೇತರ ವ್ಯಾಪಾರಿಗಳಿಗೆ ಅವಕಾಶ ನೀಡಬಾರದೆಂದು ಹಿಂದುತ್ವ ಸಂಘಟನೆಯೊಂದು ಪೋಲಿಸ್ ಆಯುಕ್ತರಿಗೆ ಮತ್ತು ಬಿಬಿಎಂಪಿ ಆಯುಕ್ತರಿಗೆ ಮನವಿ ಸಲ್ಲಿಸಿತ್ತು. ಈ ಮನವಿಯಲ್ಲಿ ಸಂವಿಧಾನದ ಆಶಯಗಳನ್ನು ಧಿಕ್ಕರಿಸುವಂತೆ ಸರ್ಕಾರಕ್ಕೆ ಬೆದರಿಕೆ ಹೊಡ್ಡಿದ್ದಾಗಿಯೂ, ಸರ್ಕಾರ ಮೌನ ತಳೆದಿರವುದನ್ನು ನೋಡಿದರೆ, ಸರ್ಕಾರವೇ ಸಂವಿಧಾನ ವಿರೋಧಿ ಎಂಬುವುದು ಸ್ಪಷ್ಟವಾಗುತ್ತಿದೆ. ಸರ್ಕಾರದ ಇಂತಹ ನೀಚ ನಡೆಗಳು ಬೀದಿ ವ್ಯಾಪಾರಿಗಳಲ್ಲಿ ಆತಂಕವನ್ನುಂಟುಮಾಡುತ್ತಿವೆ ಮತ್ತು ಅವರ ಜೀವನೋಪಾಯವನ್ನು ಕಳೆದಕೊಳ್ಳುವ ಭಯದ ವಾತಾವರಣದಲ್ಲಿ ಜೀವಿಸುವಂತಾಗಿದೆ.
ಬೀದಿ ವ್ಯಾಪಾರಿಗಳು ಎಂದೂ ಸಹ ಅವರ ನಡುವೆ ಧರ್ಮ ಅಡ್ಡಗೋಡೆಯಾಗಿ ನಿಲ್ಲಲು ಬಿಟ್ಟಿಲ್ಲ. ವ್ಯಾಪಾರಿಗಳಿರುವ ಮಾರುಕಟ್ಟೆಗಳು ಮಿನಿ ಭಾರತವಿದ್ದಂತೆ. ಅಲ್ಲಿ ಎಲ್ಲಾ ಧರ್ಮ ಮತ್ತು ಜಾತಿಯ ವ್ಯಾಪಾರಿಗಳಿರುತ್ತಾರೆ. ಬೀದಿ ವ್ಯಾಪಾರಿಗಳನ್ನು ಒಟ್ಟು ಗೂಡಿಸುವುದು ಅವರ ಶ್ರಮ ಮತ್ತು ಹಸಿವೇ ವಿನಃ ಧರ್ಮ- ಜಾತಿಗಳಲ್ಲ. ಇವರು ಯಾವ ಸರ್ಕಾರದಿಂದಲ್ಲೂ ಭಿಕ್ಷೆ ಬೇಡಿ ಬದುಕುತ್ತಿಲ್ಲ. ಬದಲಿಗೆ ಪ್ರತಿನಿತ್ಯ ಸವಾಲುಗಳನ್ನೇ ಎದುರಿಸಿಕೊಂಡು ಬದುಕುತ್ತಿರುವ ಜನ ಎಂದು ಹೇಳಿದ್ದಾರೆ.
ಧರ್ಮವನ್ನು ದುರುಪಯೋಗಿಸಿಕೊಂಡು ಈ ರೀತಿ ವ್ಯಾಪಾರಿಗಳ ಬಹಿಷ್ಕಾರ ಹಾಕುವುದು ದೇಶದ ಸಂವಿಧಾನದ ಮೌಲ್ಯಗಳು ಮತ್ತು ಆಶಯಗಳಿಗೆ ವಿರುದ್ಧವಾಗಿರುವುದಲ್ಲದೆ ಮಾನವೀಯತೆಗೆ ವಿರುದ್ಧವಾದ ನಡೆಯಾಗಿದೆ. ದೇಶದ ಸಂವಿಧಾನ ಎಲ್ಲರಿಗೂ ಸಮಾನತೆ, ಘನತೆಯ ಬದುಕಿನ ಆಶಯವನ್ನು ನೀಡಿದೆ. ಮತ್ತು ಬೀದಿ ವ್ಯಾಪಾರಿಗಳ ( ಜೀವನೋಪಾಯ ರಕ್ಷಣೆ ಹಾಗು ನಿಯಂತ್ರಣ ) ಕಾಯ್ದೆಯು, ಭಾರತ ದೇಶದ ಎಲ್ಲಾ ಪ್ರಜೆಗಳಿಗೆ ಬೀದಿ ವ್ಯಾಪಾರದ ಹಕ್ಕನ್ನು ಕೊಟ್ಟಿದೆ.
ಕಳೆದ ಎರಡು ವಾರಗಳಿಂದ ಕಾನೂನು ಅರಿಯದ ಸಂಚಾರಿ ಪೊಲೀಸರು ಕಾನೂನು ಬಾಹಿರವಾಗಿ ಬೀದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡುತ್ತಿದ್ದಾರೆ. ಕೆ.ಆರ್. ಮಾರುಕಟ್ಟೆ, ವೈಟ್ ಫೀಲ್ಡ್, ಹೆಣ್ಣೂರು ಮುಂತಾದ ಪ್ರದೇಶಗಳಲ್ಲಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿ, ಮಹಾನ್ ಕಾರ್ಯ ಸಾಧಿಸಿದವರಂತೆ ಫೋಟೋ ತೆಗೆದು ಅದನ್ನು ರಾಜಾರೋಷವಾಗಿ ಟ್ವಿಟ್ಟರ್‌ನಲ್ಲಿ ಹಾಕುತ್ತಿದ್ದಾರೆ. ಇದರ ಜೊತೆ ಹಲವು ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್‌ಗಳು ಸಹ ಬೀದಿ ವ್ಯಾಪಾರಿಗಳ ಎತ್ತಂಗಡಿಗೆ ಒತ್ತಾಯ ಮಾಡುತ್ತಿದ್ದಾರೆ. ಈ ಕಾನೂನು ಬಾಹಿರ ಎತ್ತಂಗಡಿಗೆ ಕೆಲ ಶ್ರೀಮಂತ ಸಾರ್ವಜನಿಕರು ಸಹ ಬೆಂಬಲ ಸೂಚಿಸುತ್ತಿರುವುದು ಬೀದಿ ವ್ಯಾಪಾರಿಗಳಿಗೆ ತೀವ್ರವಾದ ನೋವುಂಟು ಮಾಡಿರುವುಲ್ಲದೆ, ಅವರ ಘನತೆಗೆ ದಕ್ಕೆ ಉಂಟುಮಾಡಿದೆ. ಅವರ ಮಕ್ಕಳ ಘನತೆಯ ಬದುಕಿಗಾಗಿ ಬೀದಿ ವ್ಯಾಪರಿಗಳು ಪಡುವ ಶ್ರಮ ಅವರಿಗೆ ಗೊತ್ತು ಮತ್ತು ಇವರ ಕಷ್ಟಗಳಿಗೆ ಬಿಬಿಎಂಪಿಯಾಗಲೀ ಅಥವಾ ಪೊಲೀಸವರಾಗಲಿ ಸ್ಪಂದಿಸುತ್ತಿಲ್ಲ, ಬದಲಿಗೆ ಬೀದಿ ವ್ಯಾಪಾರಿಗಳನ್ನು ವಿಂಗಡಿಸುವ ದುರುದ್ಧೇಶವಿಟ್ಟುಕೊಂಡು ಕೊಡುವ ಮನವಿಗಳಿಗೆ ಸ್ಪಂದಿಸುತ್ತಿರುವುದು ಅತೀವ ನೋವಿನ ಸಂಗತಿ.
ಕುಕ್ಕೆಯಲ್ಲಿ ಮೊದಲ ಬಾರಿಗೆ ಮುಸ್ಲಿಂ ವ್ಯಾಪಾರಿಗಳು ಪಾಲ್ಗೊಂಡಿಲ್ಲ ಎಂದು ಕೇಳಿ ತುಂಬಾ ನೋವಾಗಿದೆ ಮತ್ತು ಅದು ಖಂಡನೀಯ. ಜನ ಪ್ರತಿನಿಧಿಗಳು, ಅಧಿಕಾರಿಗಳು, ಶ್ರೀಮಂತ ಸಮಾಜ ಸಂವಿಧಾನವನ್ನು ಮರೆತಂತಿದೆ. ಆದರೆ ಬೀದಿ ವ್ಯಾಪಾರಿಗಳು ಮರೆತಿಲ್ಲ. ಬೆಂಗಳೂರಿನಲ್ಲಿ ಈ ರೀತಿ ವಿಂಗಡಣೆ ಮಾಡಲು ಬೀದಿ ವ್ಯಾಪಾರಿಗಳು ಬಿಡುವುದಿಲ್ಲ ಎಂಬುದನ್ನು ಶಪಥ ಮಾಡುತ್ತಿದ್ದೇವೆ.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉದಯ್ ಗರುಡಾಚಾರ್ ರವರು, ಸಂವಿಧಾನಕ್ಕೆ ಬದ್ಧರಾಗಿದ್ದು ಈ ರೀತಿಯ ಬಹಿಷ್ಕಾರಕ್ಕೆ ಅವಕಾಶವಿಲ್ಲವೆಂದು ಹೇಳಿದ್ದಾರೆ. ಇದು ಸ್ವಾಗಾತಾರ್ಹ. ಇದೇ ನಿಲುವು ನಮ್ಮ ರಾಜ್ಯದ ಮುಖ್ಯಮಂತ್ರಿಯವರದ್ದಾಗಿರಬೇಕು ಎಂದು ಬೀದಿ ವ್ಯಾಪಾರಿಗಳು ಬಯಸುತ್ತಾರೆ. ಪೊಲೀಸ್ ಅಧಿಕಾರಿಗಳು ಹಾಗು ಆಡಳಿತ ವ್ಯವಸ್ಥೆ ಸಮಾನತೆಯನ್ನು ಜಾರಿಗೆ ತರಬೇಕು ಮತ್ತು ಧರ್ಮದ ಹೆಸರಲ್ಲಿ ಸಂವಿಧಾನ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಈ ರೀತಿಯ ಕಿಡಿಗೇಡಿಗಳನ್ನು ಸರ್ಕಾರ ಕೂಡಲೇ ಬಂಧಿಸಬೇಕು.