ನವದೆಹಲಿ: 2002 ರ ಗುಜರಾತ್ ದಂಗೆಯಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಇಡೀ ಕುಟುಂಬವನ್ನು ಕೊಂದಿದ್ದ 11 ಆರೋಪಿಗಳನ್ನು ಬಿಡುಗಡೆ ಮಾಡಿರುವುದರ ವಿರುದ್ಧ ಬಿಲ್ಕಿಸ್ ಬಾನೋ ಪ್ರಶ್ನಿಸಿ ಬುಧವಾರದಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು 1992ರ ಕ್ಷಮಾದಾನ ನೀತಿಯಡಿ ಗುಜರಾತ್ ಸರ್ಕಾರ ಈ ನೀಚ ಕೃತ್ಯ ಎಸಗಿದ್ದ ಹನ್ನೊಂದು ಜನರನ್ನು ಬಿಡುಗಡೆ ಮಾಡಿದ್ದು, ಈ ವಿರುದ್ಧ ರಾಷ್ಟ್ರಾದ್ಯಂತ ಆಕ್ರೋಶ ವ್ಯಕ್ತವಾಗಿದ್ದರೂ, ಹಿಂದೂ ಸಂಘಟನೆಯೊಂದು ಅತ್ಯಾಚಾರಿಗಳನ್ನು ವೀರರಂತೆ ಪರಿಗಣಿಸಿ ಸ್ವಾಗತಿಸಿದ್ದರು.
ಅತ್ಯಾಚಾರಿಗಳನ್ನು ಬಿಡುಗಡೆ ಮಾಡುವ ನಿರ್ಧಾರದಲ್ಲಿ ಭಾಗಿಯಾಗಿದ್ದ ಮತ್ತು ಅವರನ್ನು “ಸಂಸ್ಕಾರಿ ಬ್ರಾಹ್ಮಣರು” ಎಂದು ಬಣ್ಣಿಸಿದ್ದ, ಈ ವರೆಗೂ ಆರು ಬಾರಿ ಶಾಸಕರಾಗಿರುವ ಬಿಜೆಪಿ ನಾಯಕ ʼಚಂದ್ರಸಿನ್ಹ ರೌಲ್ಜಿʼ ಅವರು ಈ ಬಾರಿ ಗೋಧ್ರಾದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಇದೇ ಸಂದರ್ಭದಲ್ಲಿ ಬಿಲ್ಕಿಸ್ ಬಾನೋ ಅವರ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್ ಮುಂದೆ ಧ್ವನಿ ಎತ್ತಿದ್ದಾರೆ.
ಬಿಲ್ಕಿಸ್ ಬಾನೋ 21ನೇ ವರ್ಷದವರಿದ್ದಾಗ, ಗೋಧ್ರಾ ರೈಲು ದಹನದ ನಂತರ ಗುಜರಾತ್‌ನಲ್ಲಿ 59 ಯಾತ್ರಾರ್ಥಿಗಳು ಸಾವನ್ನಪ್ಪಿದ ನಂತರ ನಡೆದ ಗಲಭೆಯಲ್ಲಿ ತನ್ನ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದವರನ್ನು ಸಾಮೂಹಿಕ ಅತ್ಯಾಚಾರವನ್ನೆಸಗಿ ಒಂಬತ್ತು ಜನರನ್ನು ಕೊಂದಿದ್ದ 11 ಜನರನ್ನು ಗುಜರಾತ್ ಸರ್ಕಾರ ಆಗಸ್ಟ್ 15 ರಂದು ಬಿಡುಗಡೆ ಮಾಡಲಾಗಿತ್ತು.
ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳ ಶೀಘ್ರ ಬಿಡುಗಡೆಯನ್ನು ನಿರ್ಬಂಧಿಸುವ 2014 ರ ವಿಮೋಚನಾ ನೀತಿಯನ್ನು ಅನುಸರಿಸಿದ್ದರೆ ಗುಜರಾತ್ ಸರ್ಕಾರ ಈ ರೀತಿಯ ಬಿಡುಗಡೆ ಮಾಡುವ ಕ್ರಮ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ ಎಂದು ಬಿಲ್ಕಿಸ್ ಬಾನೋ ಹೇಳಿದ್ದಾರೆ.