ನರೇಂದ್ರ ಮೋದಿ ಅಮೇರಿಕಾ ಭೇಟಿಗೆ ಅಲ್ಲಿನ ಮಾನವ ಹಕ್ಕುಗಳ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಭಾರತದ ಒಳಗಿನ ಜನಾಂಗೀಯ ದ್ವೇಷ, ಭಾರತದಲ್ಲಿ ಅಲ್ಪಸಂಖ್ಯಾತರನ್ನು ಇಲ್ಲಿನ ಆಡಳಿತ ಪಕ್ಷವೇ ತುಚ್ಛವಾಗಿ ಕಾಣುವುದನ್ನು ಉಲ್ಲೇಖಿಸಿ, ಮೋದಿ ಅಮೇರಿಕಾ ಭೇಟಿಯ ಬಗ್ಗೆ ಅಮೇರಿಕಾ ಮಾನವ ಹಕ್ಕುಗಳ ಸಂಘಟನೆ ವೈಟ್ ಹೌಸ್ ನ್ನು ಉಲ್ಲೇಖಿಸಿ ಗಂಭೀರವಾಗಿ ಟೀಕೆ ಮಾಡಿವೆ.
ಬಾಂಧವ್ಯ ವೃದ್ಧಿ ಮತ್ತು ವಿದೇಶಿ ಬಂಡವಾಳ ಹೂಡಿಕೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಆಹ್ವಾನದ ಬೆನ್ನಲ್ಲೇ ಅಲ್ಲಿನ ಮಾನವ ಹಕ್ಕುಗಳ ಸಂಘಟನೆಗಳು ಈ ಬೆಳವಣಿಗೆಯನ್ನು ಅಮೇರಿಕಾಕ್ಕೆ ಇದು ಅವಮಾನಕರ ಸಂಗತಿ ಎಂದು ಆರೋಪಿಸಿವೆ.
ಇದೇ ಸಂದರ್ಭದಲ್ಲಿ ಸಂಘಟನೆಗಳು ಮತ್ತು ವಿಮರ್ಶಕರು ‘ಭಾರತದಲ್ಲಿನ ಹಿಂದೂ ಧಾರ್ಮಿಕ ರಾಷ್ಟ್ರೀಯತೆಯ ಬಗ್ಗೆ ಎದ್ದಿರುವ ಸಂಘರ್ಷ ಹಾಗೂ ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಜೋ ಬಿಡೆನ್ ನರೇಂದ್ರ ಮೋದಿಯವರನ್ನು ಪ್ರಶ್ನಿಸಬೇಕು. ಭಾರತದಲ್ಲಿ ಇಂತಹದ್ದೊಂದು ಬೆಳವಣಿಗೆ ಜಾತ್ಯತೀತ ಮತ್ತು ವೈವಿಧ್ಯಮಯ ಭಾರತದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗಿದೆ. ಆ ಮೂಲಕ ಇದು ಜನಾಂಗೀಯ ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸಲು ಪ್ರಯತ್ನಿಸುವ ರಾಜಕೀಯ ಮತ್ತು ತೀವ್ರವಾದ ಸಿದ್ಧಾಂತವಾಗಿದೆ. ಭಾರತದಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರು ಹಿಂದೆಂದಿಗಿಂತಲೂ ಹೆಚ್ಚು ಹಿಂಸಾಚಾರ ಮತ್ತು ಕಿರುಕುಳದ ಅಪಾಯದಲ್ಲಿದ್ದಾರೆ, ಅದರಲ್ಲಿ ಮೋದಿಯವರ ಪಾತ್ರವನ್ನು ಅಮೇರಿಕಾ ಪ್ರಶ್ನಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಭಾರತದಲ್ಲಿ ಮೋದಿಯವರ ಆಡಳಿತ ಸರ್ವಾಧಿಕಾರಿ ಧೋರಣೆ ಹೊಂದಿದೆ. 2005 ರಲ್ಲಿ ಮೋದಿ ಅವರು ಪ್ರಧಾನಿಯಾಗುವ ಮೊದಲು, ತೀವ್ರವಾದ ಗಲಭೆ ಮತ್ತು ಮುಸ್ಲಿಮರನ್ನು ಗುರಿಯಾಗಿಸುವ ಹಿಂದೂ ಭಯೋತ್ಪಾದಕ ಉಗ್ರಗಾಮಿ ಗುಂಪುಗಳನ್ನು ಬೆಂಬಲಿಸಿದ್ದಕ್ಕಾಗಿ ಅಮೇರಿಕಾದಿಂದಲೇ VISA ನಿಷೇಧಿಸಲ್ಪಟ್ಟರು. ಆದರೆ ಈಗ ನರೇಂದ್ರ ಮೋದಿಯವರದ್ದು ಮೂರನೇ ವೈಟ್ ಹೌಸ್ ಭೇಟಿಯಾಗಿದೆ. ಇದು ಅಮೇರಿಕಾಗೆ ಮತ್ತು ವೈಟ್ ಹೌಸ್ ಗೆ ಅವಮಾನಕರ ಎಂದು ಆರೋಪಿಸಲಾಗಿದೆ. ಹಾಗೂ ಅಂದು ಮತ್ತು ಇಂದಿನ ನರೇಂದ್ರ ಮೋದಿಯವರ ನಡೆ ಬಲಪಂಥೀಯ, ಮುಸ್ಲಿಂ ವಿರೋಧಿ ಮತ್ತು ಅಲ್ಪಸಂಖ್ಯಾತ ಆಡಳಿತವಾಗಿದೆ” ಎಂದು “ಮಿಡ್ನೈಟ್ಸ್ ಬಾರ್ಡರ್ಸ್: ಎ ಪೀಪಲ್ಸ್ ಹಿಸ್ಟರಿ ಆಫ್ ಮಾಡರ್ನ್ ಇಂಡಿಯಾ” ಲೇಖಕಿ ಸುಚಿತ್ರಾ ವಿಜಯನ್ ಆರೋಪಿಸಿದ್ದಾರೆ.

ಭಾರತವು ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಮತ್ತು ಮತ್ತು ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿ ಅಮೇರಿಕಾಗೆ ಬಲವಾದ ಮಿತ್ರರಾಷ್ಟ್ರವಾಗಿ ನಡೆದುಕೊಂಡು ಬಂದಿದೆ. ಇಂತಹ ಶತಕೋಟಿ ಜನಸಂಖ್ಯೆಯ ದೇಶದಲ್ಲಿ ಏನಾಗುತ್ತದೆಯೋ ಅದು ಜಾಗತಿಕವಾಗಿಯೂ ಮುಂಚೂಣಿ ಪರಿಣಾಮಗಳನ್ನು ಹೊಂದಿರುತ್ತದೆ. ಆ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯಂತಹ ಸರ್ವಾಧಿಕಾರಿ ಮನೋಭಾವದ ವ್ಯಕ್ತಿಯನ್ನು ಅಮೇರಿಕಾ ಶ್ವೇತಭವನಕ್ಕೆ ಆಹ್ವಾನಿಸುವುದು ಜಗತ್ತಿನಾದ್ಯಂತ ಧಾರ್ಮಿಕ ಅಲ್ಪಸಂಖ್ಯಾತರಿಗೆ ಅಪಾಯಕಾರಿ ಸಂದೇಶವನ್ನು ರವಾನಿಸುತ್ತಿದೆ. ಇದು ಅಮೇರಿಕಾ ಮತ್ತು ಅಲ್ಲಿನ ಶ್ವೇತ ಭವನಕ್ಕೆ ಅವಮಾನಕರ ಎಂದು ಸುಚಿತ್ರಾ ವಿಜಯನ್ ಆರೋಪಿಸಿದ್ದಾರೆ.
ಮೋದಿ ಅಮೇರಿಕಾ ಭೇಟಿಗೆ ಸರಿಯಾಗಿ ಅಲ್ಲಿನ ಹ್ಯೂಮನ್ ರೈಟ್ಸ್ ವಾಚ್ ಮತ್ತು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇತ್ತೀಚೆಗೆ BBC ಸಿದ್ದಪಡಿಸಿದ ಸಾಕ್ಷ್ಯಚಿತ್ರದ ಖಾಸಗಿ ಪ್ರದರ್ಶನವನ್ನು ನಿಗದಿಪಡಿಸಿದೆ. ಈ ಸಾಕ್ಷ್ಯಚಿತ್ರದಲ್ಲಿ ನರೇಂದ್ರ ಮೋದಿ ಮತ್ತು 2002 ರ ಗುಜರಾತ್ ಗಲಭೆಯಲ್ಲಿ ಅವರ ಪಾತ್ರದಿಂದ ಕನಿಷ್ಠ 1,000 ಜನರ ಹತ್ಯೆಗೆ ಕಾರಣವಾಗಿತ್ತು. ಅವರಲ್ಲಿ ಹೆಚ್ಚಿನವರು ಮುಸ್ಲಿಮರೇ ಆಗಿದ್ದಾರೆ. ಹತ್ಯಾಕಾಂಡದ ಸಮಯದಲ್ಲಿ, ಹಿಂದೂ ಉಗ್ರಗಾಮಿ ಗುಂಪುಗಳು ಮುಸ್ಲಿಂ ಮನೆಗಳು ಮತ್ತು ಮುಸ್ಲಿಂ ವ್ಯಾಪಾರಿಗಳನ್ನು ಅಕ್ಷರಶಃ ಸುಟ್ಟು ಹಾಕಿದ್ದರು. ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳನ್ನು ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ಕೊಂದು ಹಾಕಿದ್ದರು. ಈ ಸಂದರ್ಭದಲ್ಲಿ ನರೇಂದ್ರ ಮೋದಿ ಗುಜರಾತ್ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಆ ಗಲಭೆಗಳು ಅವರ ಕುಮ್ಮಕ್ಕಿನಿಂದಲೇ ನಡೆದಿತ್ತು. ಈ ಬಗ್ಗೆ ಅಂದಿನ ಮಾಧ್ಯಮಗಳು ವಿಸ್ತೃತವಾಗಿ ವರದಿ ಮಾಡಿದ್ದವು. ಅದನ್ನೇ BBC ಕೂಡಾ ಇತ್ತೀಚೆಗೆ ಸಾಕ್ಷ್ಯಚಿತ್ರದ ಮೂಲಕ ಹೊರತಂದಿತ್ತು. ಆದರೆ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಟ್ವಿಟ್ಟರ್ ನಂತಹ ಸಾಮಾಜಿಕ ಮಾಧ್ಯಮ ಸೇರಿದಂತೆ ಎಲ್ಲಾ ವಲಯಗಳಲ್ಲಿ ಈ ಸಾಕ್ಷ್ಯಚಿತ್ರವನ್ನು ನಿರ್ಬಂಧಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.
2002 ರ ಗುಜರಾತ್ ಗಲಭೆಯ ನಂತರ ಭಾರತ ಹಂತಹಂತವಾಗಿ ಅಲ್ಪಸಂಖ್ಯಾತರಿಗೆ ಸುರಕ್ಷಿತ ಅಲ್ಲದ ದೇಶವಾಗಿ ಬದಲಾಗುತ್ತಿದೆ. ಅದು ನರೇಂದ್ರ ಮೋದಿ ಪ್ರಧಾನಿ ಆದ ನಂತರ ಅದರ ವೇಗ ಹೆಚ್ಚಿಸಿಕೊಂಡಿದೆ. ಇದು ಒಳ್ಳೆಯ ಬೆಳವಣಿಗೆ ಖಂಡಿತಾ ಅಲ್ಲ. ಈ ಬಗ್ಗೆ ಅಮೇರಿಕಾದ ಸೇರಿದಂತೆ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಭಾರತದ ಈ ಬೆಳವಣಿಗೆಗಳನ್ನು ಗಮನಿಸಿಕೊಂಡು ಬಂದಿವೆ. ಈ ಹಿನ್ನೆಲೆಯಲ್ಲಿ ಸಂಘಟನೆಗಳು ಮೋದಿಯ ಅಮೇರಿಕಾ ಭೇಟಿಯ ಬಗ್ಗೆ ವಿರೋಧ ವ್ಯಕ್ತಪಡಿಸಿವೆ. ಹಾಗೂ ಈ ಭೇಟಿ ಅಮೇರಿಕಾಕ್ಕೆ ಅವಮಾನಕರ ಎಂದು ಗಂಭೀರವಾಗಿ ಆರೋಪಿಸಿವೆ.