Sunday, April 28, 2024

ಸತ್ಯ | ನ್ಯಾಯ |ಧರ್ಮ

ಸಚಿವ-ಶಾಸಕರ ಜಿದ್ದಾಜಿದ್ದಿ ; ಮಲಗಿದ ಶ್ರೀರಾಮುಲು, ಕೂತ ನಾಗೇಂದ್ರ

ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿದ ಅತಿವೃಷ್ಟಿಯಿಂದಾಗಿ ಆ ಭಾಗದ ಜನಜೀವನ ಹಾಗೂ ರೈತಾಪಿ ಕಾಯಕಕ್ಕೆ ದೊಡ್ಡ ಪ್ರಮಾಣದ ಹೊಡೆತ ಬಿದ್ದಿರುವುದು ಎಲ್ಲರೂ ತಿಳಿದ ವಿಷಯ. ಸಧ್ಯ ಈಗ ಒಂದು ಹಂತಕ್ಕೆ ಮಳೆ ನಿಂತಿದೆ. ಈ ಸಂಬಂಧ ಹಾನಿಗೊಳಗಾದ ಪ್ರದೇಶದ ದುರಸ್ತಿ ಕಾಮಗಾರಿ ವಿಚಾರದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ನಾಟಕೀಯ ಬೆಳವಣಿಗೆಯೊಂದು ನಡೆದಿದೆ. ಇದು ಸ್ಥಳೀಯ ಶಾಸಕ ಮತ್ತು ಸಚಿವರ ಜಿದ್ದಾಜಿದ್ದಿಗೆ ಕಾರಣವಾಗಿದೆ.

ಬಳ್ಳಾರಿ ಜಿಲ್ಲೆಯ ಮೇಲ್ಸೇತುವೆ ರಿಪೇರಿ ಕಾಮಗಾರಿ ಸಂಬಂಧ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ದುರಸ್ತಿ ಕಾಮಗಾರಿ ನಿರ್ವಹಿಸಿದ ಕ್ರೆಡಿಟ್ ತಗೆದುಕೊಳ್ಳಲು ನಾ ಮುಂದು ತಾ ಮುಂದು ಎಂದು ಹಠಕ್ಕೆ ಬಿದ್ದು ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಕಾಮಗಾರಿ ದುರಸ್ತಿ ಸಂದರ್ಭದಲ್ಲಿ ಈ ಇಬ್ಬರೂ ರಾಜಕಾರಣಿಗಳು ನಡೆದುಕೊಂಡ ರೀತಿ ಸಧ್ಯ ಬಳ್ಳಾರಿ ಭಾಗದಲ್ಲಿ ತಮಾಷೆಯ ಚರ್ಚೆಗೆ ಗ್ರಾಸವಾಗಿದೆ.

ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಹರಿಯುತ್ತಿರುವ ವೇದಾವತಿ ನದಿಗೆ ಇತ್ತೀಚೆಗೆ ದಾಖಲೆಯ ಲಕ್ಷ ಕ್ಯೂಸೆಕ್ ಗೂ ಅಧಿಕ ಪ್ರಮಾಣದ ನೀರು ಹರಿದು ಬಂದಿದ್ದು, ಮೇಲ್ಸೇತುವೆಯ ಪಿಲ್ಲರ್ ಕುಸಿದ ಪರಿಣಾಮ ಈ ಭಾಗ ಮತ್ತು ನೆರೆಯ ಆಂಧ್ರಪ್ರದೇಶದ ಕರ್ನೂಲು ಭಾಗದ ರೈತರಿಗೂ ಹೆಚ್ಚು ಹಾನಿ ಆಗಿತ್ತು. ಪಿಲ್ಲರ್ ಕುಸಿದ ಹಿನ್ನೆಲೆಯಲ್ಲಿ ಕಳೆದ 20 ದಿನಗಳಿಂದ ಈ ಭಾಗಕ್ಕೆ ನೀರು ಹರಿಸುವುದನ್ನು ನಿಲ್ಲಿಸಲಾಗಿತ್ತು. ಇದರಿಂದ 20 ಗ್ರಾಮಗಳಲ್ಲಿ ಭತ್ತ ಬೆಳೆದ ರೈತರಿಗೆ ತೀವ್ರ ಸಮಸ್ಯೆ ಉಂಟಾಗಿತ್ತು.

ಈ ಸಂಬಂಧ ರೈತರ ಅಹವಾಲುಗಳನ್ನು ಸ್ವೀಕರಿಸಿದ ಶಾಸಕ ನಾಗೇಂದ್ರ ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯ ರೈತರು, ಸಂಘಟನೆಗಳು, ಸ್ಥಳೀಯ ಮುಖಂಡರು ಮತ್ತು ಗುತ್ತಿಗೆದಾರರ ಜೊತೆಗೆ ಮಾತನಾಡಿ, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಜೊತೆಗೆ ಪಕ್ಕದ ಆಂದ್ರಪ್ರದೇಶದ ಜನಪ್ರತಿನಿಧಿಗಳ ಜೊತೆಗೆ ಮಾತನಾಡಿ ಸ್ಥಳಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿ, ತಾತ್ಕಾಲಿಕ ಪಿಲ್ಲರ್ ನಿರ್ಮಾಣಕ್ಕೆ ಕಾಮಗಾರಿ ಶುರು ಮಾಡಿದ್ದರು.

ಇನ್ನೊಂದು ಮೂಲದಿಂದ ಇದರ ಬಗ್ಗೆ ಮಾಹಿತಿ ಅರಿತ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಚರ್ಚಿಸಿ, “ನಾನು ಇಲ್ಲೇ ಇದ್ದು ರೈತರಿಗೆ ನೀರು ಬಿಡಿಸಿಯೇ ಇಲ್ಲಿಂದ ತೆರಳುವುದು. ಅಲ್ಲಿಯವರೆಗೆ ಇಲ್ಲಿಂದ ನಿರ್ಗಮಿಸುವುದಿಲ್ಲ” ಎಂದು ಕಾಮಗಾರಿ ಸ್ಥಳದಲ್ಲೇ ವಾಸ್ತವ್ಯ ಹೂಡಿದರು. ಇನ್ನೂ ಮುಂದುವರಿದು ಅಲ್ಲಿಗೇ ಹಾಸಿಗೆ ತರಿಸಿ ಕಾಮಗಾರಿ ಸ್ಥಳದಲ್ಲೇ ನಿದ್ರೆಗೂ ಜಾರಿದರು.

ಇತ್ತ ಶಾಸಕ ನಾಗೇಂದ್ರ ಕೂಡಾ ನಾನೇನು ಕಮ್ಮಿನಾ ಎಂಬಂತೆ ಕಾಮಗಾರಿ ಸ್ಥಳದಲ್ಲೇ ಇದ್ದು ನಿದ್ರೆಯೂ ಮಾಡದೇ ರಾತ್ರಿ ಕಳೆದರು. ಅಷ್ಟೂ ಕಾಮಗಾರಿಯನ್ನು ನಾನೇ ನಿದ್ರೆ ಬಿಟ್ಟು ಮಾಡಿಸುವೆ ಎಂದು “ರೈತರ ಜಮೀನಿಗೆ ನೀರು ಹರಿಸಿಯೇ ನಾನು ಇಲ್ಲಿಂದ ತೆರಳುವೆ. ಅಲ್ಲಿಯವರೆಗೂ ನಿದ್ರೆ ಕೂಡಾ ಮಾಡಲ್ಲ” ಎಂದು ಕಾಮಗಾರಿ ಸ್ಥಳದಲ್ಲೇ ಚಳಿಗೆ ಬೆಂಕಿ ಹಾಕಿಕೊಂಡು ನಿದ್ರೆ ಬಿಟ್ಟು ಕಾಮಗಾರಿ ಮುಗಿಯುವ ವರೆಗೂ ಕಾದು ನೀರು ಹರಿದ ನಂತರವೇ ಅಲ್ಲಿಂದ ತೆರಳಿದ್ದಾರೆ.

ಸಧ್ಯ ಶಾಸಕರು ಮತ್ತು ಸಚಿವರಿಬ್ಬರ ಜಿದ್ದಾಜಿದ್ದಿನ ನಡುವೆ ರೈತರ ಜಮೀನಿಗೆ ನೀರು ಹರಿದು ಇಲ್ಲಿನ ರೈತ ಸಮುದಾಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಇವರ ಈ ಪೈಪೋಟಿಯ ಪ್ರಸಂಗ ಈಗ ಬಳ್ಳಾರಿ ಜಿಲ್ಲಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

Related Articles

ಇತ್ತೀಚಿನ ಸುದ್ದಿಗಳು