ಡಿ.ಕೆ.ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಯನ್ನು ವಾಪಸ್ ಪಡೆದಿದ್ದ ರಾಜ್ಯ ಸಚಿವ ಸಂಪುಟ ಸಭೆಯ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಕರ್ನಾಟಕ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರತ್ಯೇಕವಾಗಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಯತ್ನಾಳ್ ಹಾಗೂ ಸಿಬಿಐ ಅಧಿಕಾರಿಗಳು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್, ಕೇಂದ್ರ ಸಂಸ್ಥೆಯೊಂದು ಈ ಪ್ರಕರಣದಲ್ಲಿ ಭಾಗಿಯಾಗಿದೆ. ಇದು ಕೇಂದ್ರ-ರಾಜ್ಯಕ್ಕೆ ಸಂಬಂಧಿಸಿದ ವ್ಯಾಜ್ಯ. ಹೀಗಾಗಿ ಮನವಿ ನಿರ್ವಹಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳುವ ಮೂಲಕ ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು.
ಈ ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸಿ ಯತ್ನಾಳ್ ಮತ್ತು ಸಿಬಿಐ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿ, ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದೆ. ಹಾಗೆಯೇ ನಿಗದಿತ ದಿನದೊಳಗೆ ಸುಪ್ರೀಂಕೋರ್ಟ್ ಗೆ ಉತ್ತರಿಸಲು ಆದೇಶಿಸಿದೆ.