ಹರಿಹರ ಗುರುಪೀಠದಲ್ಲಿ ಮಕ್ಕಳ ದೌರ್ಜನ್ಯ ಆರೋಪ: ಸಿಡಬ್ಲ್ಯೂಸಿ ಪರಿಶೀಲನೆ : ‘ಶ್ವಾಸ ಗುರು’ವಿಗೆ ಉಸಿರುಗಟ್ಟಿಸುತ್ತಾ ಪ್ರಕರಣ!?

ದಾವಣಗೆರೆ : ಮಕ್ಕಳ ಮೇಲೆ ದೌರ್ಜನ್ಯ ಮತ್ತು ಕಿರುಕುಳದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಹರಿಹರದಲ್ಲಿರುವ ವೀರಶೈವ ಪಂಚಮಸಾಲಿ ಗುರುಪೀಠಕ್ಕೆ ಮಕ್ಕಳ ಕಲ್ಯಾಣ ಸಮಿತಿ (CWC) ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದಾವಣಗೆರೆ ಮಕ್ಕಳ ಕಲ್ಯಾಣ ಸಮಿತಿಗೆ ಬಂದಿದ್ದ ದೂರುಗಳ ಆಧಾರದ ಮೇಲೆ ಅಧ್ಯಕ್ಷೆ ಮಂಜುಳಾ ಮಹೇಶ್ ನೇತೃತ್ವದ ತಂಡ ಮಠಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿತು. ಈ ವೇಳೆ ಮಠದ ಮುಖ್ಯಸ್ಥರಾದ ವಚನಾನಂದ ಸ್ವಾಮೀಜಿಗಳನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸಿದರು ಎಂದು ತಿಳಿದುಬಂದಿದೆ.

ಪರಿಶೀಲನಾ ತಂಡದಲ್ಲಿ ಮಹಿಳಾ ಮತ್ತು ಪುರುಷ ಅಧಿಕಾರಿಗಳ ಜೊತೆಗೆ ಪೊಲೀಸ್ ಸಿಬ್ಬಂದಿಯೂ ಭಾಗವಹಿಸಿದ್ದರು. ಅಧಿಕಾರಿಗಳು ಮಠದಲ್ಲಿರುವ ಮಕ್ಕಳ ವಾಸಸ್ಥಳ, ಓದುವ ವ್ಯವಸ್ಥೆ, ನಿದ್ರಿಸುವ ಸ್ಥಳ ಹಾಗೂ ದೈನಂದಿನ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಜೊತೆಗೆ ಮಕ್ಕಳೊಂದಿಗೆ, ಅವರ ಸ್ನೇಹಿತರೊಂದಿಗೆ ಮತ್ತು ಮಠದ ಆಡಳಿತ ಮಂಡಳಿಯವರೊಂದಿಗೆ ಮಾತುಕತೆ ನಡೆಸಿದರು.

ಈ ಕುರಿತು ಮಠದ ಕಾನೂನು ಸಲಹೆಗಾರ ಪ್ರಕಾಶ್ ಪಾಟೀಲ್ ಪ್ರತಿಕ್ರಿಯಿಸಿ, “ಇದು ಹಾಸ್ಟೆಲ್ ಅಲ್ಲ, ಮಕ್ಕಳ ಆರೈಕೆ ಕೇಂದ್ರವಾಗಿದ್ದು, ಬಡ ಮಕ್ಕಳಿಗೆ ನೆರವಾಗುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. ಯಾವುದೇ ಅನಧಿಕೃತ ಹಾಸ್ಟೆಲ್ ನಡೆಸಲಾಗುತ್ತಿಲ್ಲ,” ಎಂದು ಸ್ಪಷ್ಟಪಡಿಸಿದರು.

ಆದರೆ, ಮಕ್ಕಳ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸದಿರುವುದನ್ನು ಗಮನಿಸಿದ ಸಮಿತಿ, ಮಠದ ನಿರ್ವಹಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ. ಇದು ನಿಯಮ ಉಲ್ಲಂಘನೆಯಾಗಿರಬಹುದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

ಮಕ್ಕಳಿಂದ ಬಂದ ದೂರುಗಳ ಕುರಿತು ಸ್ಪಷ್ಟ ಮಾಹಿತಿ ಪಡೆಯಲು ಮೂವರು ಮಕ್ಕಳಿಗೆ ಕೌನ್ಸೆಲಿಂಗ್ ನಡೆಸಲಾಗಿದ್ದು, ಅದರ ವರದಿ ಸೋಮವಾರದೊಳಗೆ ಲಭ್ಯವಾಗುವ ನಿರೀಕ್ಷೆಯಿದೆ. ವರದಿ ಬಂದ ನಂತರ ಪ್ರಕರಣದ ಸ್ವರೂಪ ಇನ್ನಷ್ಟು ಸ್ಪಷ್ಟವಾಗಲಿದೆ ಎಂದು ಸಿಡಬ್ಲ್ಯೂಸಿ ಅಧ್ಯಕ್ಷೆ ಮಂಜುಳಾ ಮಹೇಶ್ ತಿಳಿಸಿದ್ದಾರೆ.

ಪ್ರಕರಣ ಜುವೆನೈಲ್ ಜಸ್ಟಿಸ್ ಕಾಯ್ದೆಯ ಅಡಿಯಲ್ಲಿ ಬರುವುದರಿಂದ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಮುಂದಿನ ಹಂತದಲ್ಲಿ ಚಾಲಕರು ಮತ್ತು ಟ್ರಸ್ಟಿಗಳನ್ನು ಕೂಡ ವಿಚಾರಣೆಗೊಳಪಡಿಸಲಾಗುವುದು ಎಂದು ಸಿಡಬ್ಲ್ಯೂಸಿ ಸದಸ್ಯ ನಾಗರಾಜ್ ನಾಯಕ್ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು