ಅನನ್ಯ ಭಟ್ ಎಂಬ ಮಗಳ ಬಗ್ಗೆ ಎಸ್ಐಟಿಗೆ ಸುಳ್ಳು ಮಾಹಿತಿ ನೀಡಿ ಸಾಮೂಹಿಕ ಶವಸಂಸ್ಕಾರ ಪ್ರಕರಣದ ತನಿಖೆಯ ಹಾದಿ ತಪ್ಪಿಸಿದ್ದ ಸುಜಾತಾ ಭಟ್ ಮತ್ತೊಂದು ಗೊಂದಲಕಾರಿ ಹೇಳಿಕೆ ನೀಡಿದ್ದಾರೆ. ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ತನಿಖೆಯಲ್ಲಿ ದೂರುದಾರರಲ್ಲಿ ಒಬ್ಬರಾದ ಸುಜಾತಾ ಭಟ್, ವಿಶೇಷ ತನಿಖಾ ತಂಡ (ಎಸ್‌ಐಟಿ) ತನಗೆ ಮೊಬೈಲ್ ಫೋನ್ ಉಡುಗೊರೆಯಾಗಿ ನೀಡಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ (ಯೂಟ್ಯೂಬ್) ನೀಡಿದ ಸಂದರ್ಶನವೊಂದರಲ್ಲಿ ಸುಜಾತಾ ಭಟ್ ಈ ಹೇಳಿಕೆ ನೀಡಿದ್ದು, ಈಗ ಎಸ್ಐಟಿ ತಂಡದ ಬಗ್ಗೆಯೂ ಅನುಮಾನ ಹುಟ್ಟುವಂತೆ ಮಾಡಿದೆ.
ಸಂದರ್ಶನದಲ್ಲಿ ಸುಜಾತಾ ಭಟ್ ಅವರು ವಿಚಾರಣೆಯ ಸಮಯದಲ್ಲಿ ಎಸ್‌ಐಟಿ ಅಧಿಕಾರಿಗಳು ತನಗೆ ಉತ್ತಮ ಆತಿಥ್ಯವನ್ನು ನೀಡಿದರು, ಉತ್ತಮ ಆಹಾರ ಮತ್ತು ಚಾಕೊಲೇಟ್‌ಗಳನ್ನು ಒದಗಿಸಿದರು ಎಂದು ಹೇಳಿದರು. “ಅವರು ನನಗೆ ಆತಿಥ್ಯವನ್ನು ನೀಡಿದರು. ಅವರು ಸಮಯಕ್ಕೆ ಸರಿಯಾಗಿ ಆಹಾರವನ್ನು ಒದಗಿಸಿದರು ಮತ್ತು ನಾನು ಹೊರಡುವಾಗ ನನಗೆ ಮೊಬೈಲ್ ಫೋನ್ ಅನ್ನು ಸಹ ನೀಡಿದರು” ಎಂದು ಅವರು ಹೇಳಿದರು.
ಈ ಹಿಂದೆ ಧರ್ಮಸ್ಥಳ ಪ್ರಕರಣದ ಸಾಕ್ಷಿ ದೂರುದಾರ ಚಿನ್ನಯ್ಯರಿಗೆ ತನಿಖೆ ಸಂದರ್ಭದಲ್ಲಿ ಬೆದರಿಕೆ ಹಾಕಿದ್ದ ಆರೋಪ ಇರುವ ಪೊಲೀಸ್ ಅಧಿಕಾರಿ ಮಂಜುನಾಥ ಗೌಡ ಅವರನ್ನು ಸುಜಾತಾ ಭಟ್ ಹಾಡಿ ಹೊಗಳಿದ್ದಾರೆ. “ಎಸ್‌ಐಟಿ ಅಧಿಕಾರಿಗಳಾದ ಮಂಜುನಾಥ ಗೌಡ ಮತ್ತು ಗುಣಪಾಲ್ ಒಳ್ಳೆಯ ಜನರು, ಮತ್ತು ಯಾವುದೇ ಕಾರಣವಿಲ್ಲದೆ ಮಂಜುನಾಥ ಗೌಡ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಲಾಗಿದೆ ಎಂದು ಸುಜಾತಾ ಭಟ್ ಹೇಳಿದ್ದಾರೆ.
ವಾಸ್ತವವಾಗಿ ಎಸ್‌ಐಟಿ ಒಂದು ತನಿಖಾ ತಂಡವಾಗಿದೆ. ಉಡುಗೊರೆ ನೀಡುವ ಸಂಸ್ಥೆಯಲ್ಲ. ಯಾವುದೇ ಸಾಕ್ಷಿ ಅಥವಾ ದೂರುದಾರರಿಗೆ ಉಡುಗೊರೆಗಳನ್ನು ನೀಡಲು ಎಸ್‌ಐಟಿಗೆ ಯಾವುದೇ ಅಧಿಕಾರವಿಲ್ಲದ ಕಾರಣ ಅದು ಅದರ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟು ಹಾಕಿದಂತಾಗಿದೆ.
ಅಕಸ್ಮಾತ್ ಸುಜಾತಾ ಭಟ್‌ಗೆ ಯಾವುದೇ ಎಸ್ಐಟಿ ಅಧಿಕಾರಿಗಳು ಮೊಬೈಲ್ ಕೊಡುಗೆ ನೀಡಿದ್ದೇ ಆದಲ್ಲಿ ಅದನ್ನು ಈ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು. ಮತ್ತು ಆ ನಿಟ್ಟಿನಲ್ಲೂ ತನಿಖೆ ನಡೆಸಬೇಕು ಎಂದು ಧರ್ಮಸ್ಥಳ ಸಾಮೂಹಿಕ ಶವಸಂಸ್ಕಾರದ ಪ್ರಕರಣದ ಹೋರಾಟಗಾರರು ಒತ್ತಡ ತರುವ ಸಾಧ್ಯತೆ ಇದೆ ಎನ್ನಲಾಗಿದೆ.