ಆಗಸ್ಟ್ 1 ರಿಂದ ಕೆಎಂಎಫ್ (ಕರ್ನಾಟಕ ಮಿಲ್ಕ್ ಫೆಡರೇಷನ್) ಹಾಲಿನ ಉತ್ಪನ್ನಗಳ ಪರಿಷ್ಕೃತ ದರ ಅನ್ವಯವಾಗಲಿದ್ದು, ಬಹುತೇಕ ಉತ್ಪನ್ನಗಳ ಬೆಲೆ ಏರಿಕೆ ಆಗಲಿದೆ ಎಂದು ಕೆಎಮ್ಎಫ್ ಅಧ್ಯಕ್ಷ ಭೀಮಾ ನಾಯ್ಕ್ ಮಾಹಿತಿ ನೀಡಿದ್ದಾರೆ. ಇತ್ತ ವಿರೋಧ ಪಕ್ಷದಲ್ಲಿರುವ ಬಿಜೆಪಿ ಸಹಜವಾಗಿ ಸರ್ಕಾರದ ನಿಲುವಿಗೆ ವಿರೋಧ ವ್ಯಕ್ತಪಡಿಸಿದೆ.
ಈ ನಡುವೆ ಹಾಲಿನ ದರ ಏರಿಕೆ ಹಿನ್ನೆಲೆಯಲ್ಲಿ ತಿರುಪತಿ ದೇವಸ್ಥಾನಕ್ಕೆ ಸಂಬಂಧಪಟ್ಟ ಸುದ್ಧಿಯೊಂದು ಬಿಜೆಪಿ ಸಾಮಾಜಿಕ ಜಾಲತಾಣ ಸೇರಿದಂತೆ ಬಿಜೆಪಿ ನಾಯಕರ ಬಾಯಲ್ಲಿ ಹೊಸ ಸುದ್ದಿಯಂತೆ ಹರಿದಾಡುತ್ತಿದೆ. ಅದೇನೆಂದರೆ ‘ನಂದಿನಿ ಉತ್ಪನ್ನಗಳ ದರ ಏರಿಕೆ ಹಿನ್ನೆಲೆಯಲ್ಲಿ ತಿರುಪತಿಯಲ್ಲಿ ಇನ್ನು ನಂದಿನಿ ಪದಾರ್ಥಗಳ ಖರೀದಿ ನಿಲ್ಲಿಸಲಾಗಿದೆ’ ಎಂದು.
ಇದನ್ನೇ ಮುಂದಿಟ್ಟುಕೊಂಡು ಕರ್ನಾಟಕಕ್ಕೆ ಇದು ಕಾಂಗ್ರೆಸ್ ಸರ್ಕಾರ ಮಾಡಿದ ದ್ರೋಹ. ನಂದಿನಿ ಉಳಿಸುತ್ತೇವೆ ಎಂದು ಬಂದ ಕಾಂಗ್ರೆಸ್ ಈಗ ನಂದಿನಿ ಅವಸಾನಕ್ಕೆ ದಾರಿ ಮಾಡಿದೆ. 5 ದಶಕಗಳಲ್ಲಿ ಇದೇ ಮೊದಲ ಬಾರಿ ಹೀಗಾಗಿದೆ ಎಂಬಿತ್ಯಾದಿ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಷಯ ಹರಿದಾಡಿದೆ.
ಅಸಲಿ ವಿಚಾರ ಏನೆಂದರೆ ತಿರುಮಲ ತಿರುಪತಿ ದೇವಸ್ಥಾನಕ್ಕೆ (ಟಿಟಿಡಿ) ಕಳೆದ ಒಂದೂವರೆ ವರ್ಷದಿಂದಲೇ ನಂದಿನಿ ಉತ್ಪನ್ನದ ತುಪ್ಪವನ್ನು ಪೂರೈಸಿಲ್ಲ ಎಂದು ಕೆಎಮ್ಎಫ್ ಸ್ಪಷ್ಟಪಡಿಸಿದೆ. ಡೈರಿ ಉತ್ಪನ್ನಗಳ ಬೆಲೆ ಏರಿಕೆಯ ನಂತರ ಟಿಟಿಡಿ ಕರ್ನಾಟಕದಿಂದ ನಂದಿನಿ ತುಪ್ಪವನ್ನು ಸಂಗ್ರಹಿಸುವುದನ್ನು ನಿಲ್ಲಿಸಿದೆ ಎಂದು ಹೇಳಿರುವ ವರದಿಯಲ್ಲಿ ಬಹುತೇಕ ಸತ್ಯಕ್ಕೆ ದೂರವಾದದು. 2021 ಕ್ಕೇ ಕೊನೆಯ ಬಾರಿಗೆ ಟಿಟಿಡಿ ನಮ್ಮ ಉತ್ಪನ್ನಗಳನ್ನು ಖರೀದಿಸಿದ್ದು ಎಂದು ಕೆಎಮ್ಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ಸ್ಪಷ್ಟಪಡಿಸಿದ್ದಾರೆ.
“ಹಲವು ವರ್ಷಗಳಿಂದ ಕೆಎಮ್ಎಫ್ ಟಿಟಿಡಿಗೆ ಹಾಲಿನ ಉತ್ಪನ್ನಗಳನ್ನು ಪೂರೈಸುತ್ತಾ ಬಂದಿದೆ. ಅದರಂತೆ ಟಿಟಿಡಿ ಕೂಡಾ ತಿಂಗಳಿಗೊಮ್ಮೆ ಟೆಂಡರ್ ಮೂಲಕ ತುಪ್ಪ ಖರೀದಿಸುತ್ತಿತ್ತು. ಹಿಂದಿನಿಂದಲೂ ನಾವು (ಕೆಎಮ್ಎಫ್) ಬಿಡ್ ನಲ್ಲಿ ಪಾಲ್ಗೊಂಡು ಅತಿ ಕಡಿಮೆ ಬೆಲೆಗೆ ಪೂರೈಸುತ್ತಿದ್ದೆವು. ಆದರೆ ಸ್ಪರ್ಧಾತ್ಮಕವಾಗಿ ನಾವು ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಪೂರೈಸಿದರೆ ನಮಗೇ ನಷ್ಟವಾಗುತ್ತಿದ್ದ ಕಾರಣ 2021 ರಿಂದಲೇ ಬಿಡ್ ನಲ್ಲಿ ಭಾಗಿಯಾಗುತ್ತಿಲ್ಲ” ಎಂದು ಕೆಎಮ್ಎಫ್ ಎಂ.ಡಿ, ಎಂ.ಕೆ ಜಗದೀಶ್ ಸ್ಪಷ್ಟಪಡಿಸಿದ್ದಾರೆ.
ಸಧ್ಯ ಎಂ.ಕೆ.ಜಗದೀಶ್ ಅವರ ಸ್ಪಷ್ಟನೆಯಿಂದ ಈ ವಿವಾದಕ್ಕೆ ತೆರೆ ಎಳೆದಂತಾಗಿದೆ. ಆ ಮೂಲಕ ಬಿಜೆಪಿ ಸರ್ಕಾರದ ಅವಧಿಯಲ್ಲೇ ನಂದಿನಿ ತುಪ್ಪ ಟಿಟಿಡಿಗೆ ಹೋಗುವುದು ನಿಲ್ಲಿಸಲಾಗಿದೆ ಎಂಬುದಕ್ಕೆ ಸ್ಪಷ್ಟನೆ ಸಿಕ್ಕಂತಾಗಿದೆ.