ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಮತ್ತೆ ವಿವಾದ ಹುಟ್ಟಿಕೊಂಡಿದ್ದು ಎರಡೂ ಕಡೆಯ ಮನವಿಗಳನ್ನು ಆಲಿಸಲು ಸುಪ್ರೀಂ ಕೋರ್ಟ್ ಹೊಸ ನ್ಯಾಯಪೀಠ ರಚಿಸಲು ಮುಂದಾಗಿದೆ.
ಕರ್ನಾಟಕ ಸರ್ಕಾರಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ 15 ದಿನಗಳಿಗೆ 10ಸಾವಿರ ಕ್ಯೂಸೆಕ್ಸ್ ನೀರು ನೀಡಲು ನಿರ್ದೇಶಿಸಿತ್ತು. ಇದಕ್ಕೆ ಕರ್ನಾಟಕ ಸರ್ಕಾರ ಚಕಾರ ಎತ್ತಿದೆ. ಪ್ರಾಧಿಕಾರದ ತೀರ್ಪನ್ನು ಕರ್ನಾಟಕ ಸರ್ಕಾರ ಪಾಲಿಸುತ್ತಿಲ್ಲ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿಯನ್ನು ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್ ಎರಡೂ ರಾಜ್ಯಗಳ ಮನವಿಯನ್ನು ಆಲಿಸಲು ಹೊದ ಪೀಠ ರಚಿಸುವುದಾಗಿ ಮುಖ್ಯನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.
ಸಿಜೆಐ ನೇತೃತ್ವದ ಪೀಠದ ಮುಂದೆ ಹಿರಿಯ ವಕೀಲ ಮುಕುಲ್ ರೋಹ್ಟಗಿ ಹಾಗೂ ತಮಿಳುನಾಡಿನ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅಮಿತ್ ಆನಂದ್ ತಿವಾರಿ ಮನವಿ ಮಾಡಿದ್ದು, ಇದನ್ನು ಸುಪ್ರೀಂ ಕೋರ್ಟ್ ಸ್ವೀಕರಿಸಿದೆ.
2018ರಲ್ಲಿ ಸುಪ್ರೀಂ ಕೋರ್ಟ್ ಹೇಳಿರುವಂತೆ ಸಪ್ಟೆಂಬರ್ ತಿಂಗಳಿಗೆ ಬೆಳೆಗಳಿಗೆ ಬೇಕಾದ ನಿಗದಿತ ಪ್ರಮಾಣದ 24,000 ಕ್ಯೂಸೆಕ್ಸ್ ನೀರನ್ನು ಬಿಡಲು ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ತಮಿಳು ನಾಡು ಸರ್ಕಾರ ಮನವಿ ಮಾಡಿತ್ತು.
ಈ ಬಗ್ಗೆ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಗೆ ರಾಜ್ಯದಿಂದ ಮೇಲ್ಮನವಿ ಸಲ್ಲಿಸುವಂತೆ ಅಡ್ವೋಕೇಟ್ ಜನರಲ್ ಗೆ ಸೂಚಿಸಿತ್ತು. ಮುಂಗಾರಿನ ಕೊರತೆಯ ಕಾರಣದಿಂದಾಗಿ ಕರ್ನಾಟಕ ಸರ್ಕಾರ 10 ಟಿಎಂಸಿ ನೀರು ಬಿಡಲು ಒಪ್ಪಿದ್ದರೂ ವಿರೋಧ ಪಕ್ಷಗಳ ವಿರೋಧವನ್ನು ಎದುರಿಸಬೇಕಾಯಿತು.