ದೆಹಲಿ: ಸ್ವಇಚ್ಛೆಯಿಂದ ವೇಶ್ಯಾವಾಟಿಕೆ ವೃತ್ತಿಯಲ್ಲಿ ತೊಡಗಿಸಿಕೊಳ್ಳುವುದು ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ರಕ್ಷಣಾ ಕಾರ್ಯಾಚರಣೆಗಳು ಮತ್ತು ಇತರ ಪ್ರಕರಣಗಳ ಹೆಸರಿನಲ್ಲಿ ಅವರನ್ನು ಅನಗತ್ಯವಾಗಿ ಪೀಡಿಸುವುದು ಹಾಗೂ ಕಿರುಕುಳ ನೀಡುವುದನ್ನು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಪರಿಗಣಿಸಲಾಗುವುದು ಎಂದು ನ್ಯಾಯಾಲಯವು ಪೊಲೀಸರಿಗೆ ಕಡಕ್ ಎಚ್ಚರಿಕೆ ನೀಡಿದೆ.
ಯಾವುದೇ ರೀತಿಯ ರಕ್ಷಣಾ ಕಾರ್ಯಾಚರಣೆಗಳ ಸಂದರ್ಭದಲ್ಲಿ ಲೈಂಗಿಕ ವೃತ್ತಿಪರರ ಹೆಸರುಗಳು ಮತ್ತು ಅವರ ವೈಯಕ್ತಿಕ ವಿವರಗಳನ್ನು ಯಾವುದೇ ಕಾರಣಕ್ಕೂ ಮಾಧ್ಯಮಗಳಿಗೆ ಬಹಿರಂಗಪಡಿಸಬಾರದು ಎಂದು ನ್ಯಾಯಾಲಯವು ಆದೇಶಿಸಿದೆ.
ಇದರೊಂದಿಗೆ, ಮಾನವ ಕಳ್ಳಸಾಗಣೆ (ಹ್ಯೂಮನ್ ಟ್ರಾಫಿಕಿಂಗ್) ಮತ್ತು ಬಲವಂತದ ಲೈಂಗಿಕ ವೃತ್ತಿಯನ್ನು ದೇಶದಲ್ಲಿ ಸಂಪೂರ್ಣವಾಗಿ ತಡೆಗಟ್ಟಬೇಕು ಎಂದು ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳು ಮತ್ತು ಪೊಲೀಸ್ ಇಲಾಖೆಗಳಿಗೆ ನಿರ್ದೇಶನ ನೀಡಿದೆ.
ಈ ನಿಟ್ಟಿನಲ್ಲಿ ಮಾನವ ಕಳ್ಳಸಾಗಣೆ ತಡೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಕೆಲವು ಪ್ರಮುಖ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
