ದೆಹಲಿ: ನೀಟ್ ಯುಜಿ-2026 (NEET UG-2026) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇಂತಹ ಘಟನೆಗಳು ಸಂಭವಿಸುತ್ತಿರುವುದು ಅತ್ಯಂತ ಕಟು ವಾಸ್ತವ ಮತ್ತು ಇಡೀ ದೇಶವೇ ತಲೆತಗ್ಗಿಸುವಂತಹ ವಿಷಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವ್ಯವಸ್ಥೆಯಲ್ಲಿ ನಿಜವಾದ ಜವಾಬ್ದಾರಿತನ ಮೂಡದ ಹೊರತು ಇಂತಹ ಗಂಭೀರ ಸಮಸ್ಯೆಗಳು ಕೊನೆಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ನಾವು ಯಾವುದೇ ಕಾರಣಕ್ಕೂ ನಮ್ಮ ದೇಶದ ಯುವಜನತೆಯನ್ನು ನಿರಾಶೆಗೊಳಿಸಬಾರದು ಎಂದು ತಿಳಿಸಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮೂಲಕ ಪ್ರತಿ ವರ್ಷ ನಡೆಸಲಾಗುವ ನೀಟ್ ಪರೀಕ್ಷೆಯ ಒಟ್ಟಾರೆ ನಿರ್ವಹಣೆ ಮತ್ತು ಮುಕ್ತಾಯ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ಸುಧಾರಿಸಲು ಕೈಗೊಂಡಿರುವ ಕ್ರಮಗಳ ಸಂಪೂರ್ಣ ವಿವರಗಳನ್ನು ಒಳಗೊಂಡ ವಿಶೇಷ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ಕಡ್ಡಾಯ ನಿರ್ದೇಶನ ನೀಡಿದೆ.
ವಿಶೇಷ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದು ಮತ್ತು ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಳ್ಳುವ ಮೂಲಕ ಎನ್‌ಟಿಎ ಸಂಸ್ಥೆಯಲ್ಲಿ ಸಾಂಸ್ಥಿಕ ನೈಪುಣ್ಯತೆ ಹಾಗೂ ತಾಂತ್ರಿಕ ಸಾಮರ್ಥ್ಯವನ್ನು ಹೇಗೆ ಅಭಿವೃದ್ಧಿಪಡಿಸಲಾಗುತ್ತದೆ ಎಂಬುದನ್ನು ಅಫಿಡವಿಟ್‌ನಲ್ಲಿ ಸವಿಸ್ತಾರವಾಗಿ ವಿವರಿಸಬೇಕು ಎಂದು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರನ್ನೊಳಗೊಂಡ ಪೀಠವು ಆದೇಶಿಸಿದೆ.
2024 ಮತ್ತು 2026ರ ನೀಟ್ ಪರೀಕ್ಷಾ ವಿವಾದಗಳಂತಹ ಘಟನೆಗಳು ಭವಿಷ್ಯದಲ್ಲಿ ಮತ್ತೆ ಮರುಕಳಿಸದಂತೆ ತಡೆಯಲು ಅಗತ್ಯವಿರುವ ಭೌತಿಕ ಹಾಗೂ ತಾಂತ್ರಿಕ ಸಾಮರ್ಥ್ಯಗಳನ್ನು ಎನ್‌ಟಿಎ ಹೊಂದುವಂತೆ ಮಾಡುವುದೇ ಸರ್ಕಾರದ ಪ್ರಮುಖ ಆದ್ಯತೆಯಾಗಿರಬೇಕು ಎಂದು ಕೋರ್ಟ್ ಹೇಳಿದೆ. ಈ ನಿಟ್ಟಿನಲ್ಲಿ ಮುಂದಿನ ಆರು ವಾರಗಳ ಒಳಗಾಗಿ ಅಫಿಡವಿಟ್ ಸಲ್ಲಿಸುವಂತೆ ಸರ್ಕಾರಕ್ಕೆ ಗಡುವು ವಿಧಿಸಿದೆ. ವಿಚಾರಣೆಯ ಸಂದರ್ಭದಲ್ಲಿ ಎನ್‌ಟಿಎ ಮತ್ತು ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರಾದ ಡಾ. ಕೆ. ರಾಧಾಕೃಷ್ಣನ್ ಅವರು ಸಲ್ಲಿಸಿದ ವರದಿಗಳನ್ನು ನ್ಯಾಯಾಲಯವು ಪರಿಶೀಲನೆಗೆ ಒಳಪಡಿಸಿತು.
ಯುಪಿಎಸ್‌ಸಿಯನ್ನು ನೋಡಿ ಬುದ್ಧಿ ಕಲಿಯಿರಿ:
ದೇಶದಲ್ಲಿ ಇಷ್ಟೆಲ್ಲಾ ಕಠಿಣ ರಕ್ಷಣಾ ವ್ಯವಸ್ಥೆಗಳು ಮತ್ತು ಉನ್ನತ ಮಟ್ಟದ ಉಸ್ತುವಾರಿ ಸಮಿತಿಗಳು ಇದ್ದಾಗ್ಯೂ ಇಷ್ಟೊಂದು ದೊಡ್ಡ ಪ್ರಮಾಣದ ನಿಯಮ ಉಲ್ಲಂಘನೆ ಹಾಗೂ ಪತ್ರಿಕೆ ಸೋರಿಕೆ ಹೇಗೆ ಸಾಧ್ಯವಾಯಿತು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ದೇಶದ ಅತ್ಯುನ್ನತ ನಾಗರಿಕ ಸೇವೆಗಳ ಪರೀಕ್ಷೆಯನ್ನು ನಡೆಸುವ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಸಂಸ್ಥೆಗೆ ಈ ವ್ಯವಸ್ಥೆಯನ್ನು ಹೋಲಿಸಿದ ನ್ಯಾಯಾಲಯ, ಯುಪಿಎಸ್‌ಸಿ ನಡೆಸುವ ಯಾವುದೇ ಪರೀಕ್ಷೆಗಳಲ್ಲಿ ಇಂತಹ ಘಟನೆಗಳು ಎಂದಿಗೂ ಸಂಭವಿಸಿಲ್ಲ ಎಂದು ಮಾರ್ಮಿಕವಾಗಿ ನೆನಪಿಸಿತು.
ಎನ್‌ಟಿಎ ಮತ್ತು ಕೇಂದ್ರ ಸರ್ಕಾರವು ಯುಪಿಎಸ್‌ಸಿಯ ಪಾರದರ್ಶಕ ಪರೀಕ್ಷಾ ವ್ಯವಸ್ಥೆಯಿಂದ ಸೂಕ್ತ ಪಾಠಗಳನ್ನು ಕಲಿಯುವ ಅಗತ್ಯವಿದೆ ಎಂದು ಪೀಠವು ಇದೇ ವೇಳೆ ಸಲಹೆ ನೀಡಿದೆ. ಇಸ್ರೋ ಮಾಜಿ ಅಧ್ಯಕ್ಷರಾದ ರಾಧಾಕೃಷ್ಣನ್ ಸಮಿತಿಯ ಶಿಫಾರಸುಗಳನ್ನೂ ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿದೆ.
