ಮಾಜಿ ಸಚಿವ ಮುರುಗೇಶ್ ನಿರಾಣಿಯವರ ಪುತ್ರ ಹಾಗೂ ಉದ್ಯಮಿ ವಿಜಯ್ ನಿರಾಣಿ ನಿರ್ದೇಶಕರಾಗಿರುವ ನಿರಾಣಿ ಶುಗರ್ಸ್ ಲಿಮಿಟೆಡ್ ಕಂಪನಿಯಲ್ಲಿ ಅಕ್ರಮವಾಗಿ ನಿರ್ಮಿಸಲಾದ ತ್ಯಾಜ್ಯ ವಿಲೇವಾರಿ ಘಟಕದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತವಾಗಿ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಮುಧೋಳದ ಕುಳಲಿ ಗ್ರಾಮದಲ್ಲಿರುವ ನಿರಾಣಿ ಶುಗರ್ಸ್‌ನ ಡಿಸ್ಟಿಲರಿ ಫ್ಯಾಕ್ಟರಿಯಲ್ಲಿ ತ್ಯಾಜ್ಯ ನಿರ್ವಹಣಾ ಘಟಕವೊಂದನ್ನು (ಇಟಿಪಿ) ಸ್ಥಾಪಿಸಿದ್ದರು. ಆ ಘಟಕಕ್ಕೆ ಅನುಮತಿ ಪಡೆದಿರಲಿಲ್ಲ. ಆ ಘಟಕದಲ್ಲಿ 2018ರ ಡಿ. 16ರಂದು ಬಾಯ್ಲರ್ ಸ್ಫೋಟಗೊಂಡಿತ್ತು. ಆ ದುರ್ಘಟನೆಯಲ್ಲಿ ಆರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರಾಥಮಿಕ ತನಿಖೆ ನಡೆಸಿದ್ದ ಪೊಲೀಸರು ವಿಜಯ್ ನಿರಾಣಿಯವರ ವಿರುದ್ಧ 2019ರಲ್ಲಿ ಪ್ರಕರಣ ದಾಖಲಿಸಿದ್ದರು. ಅವರನ್ನು ಹಾಗೂ ಅವರ ಕಾರ್ಖಾನೆಯ ಟೆಕ್ನಿಕಲ್ ನಿರ್ದೇಶಕರಾದ ಎಂ.ಎಸ್.ಹಟ್ಟಿಕಲ್ ಅವರನ್ನು ವಿಚಾರಣೆಗೊಳಪಡಿಸಿದ್ದರು. ಆನಂತರ ಆ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. 2023ರ ಜು. 26ರಂದು ತೀರ್ಪು ನೀಡಿದ್ದ ಕರ್ನಾಟಕ ಹೈಕೋರ್ಟ್, ವಿಜಯ್ ನಿರಾಣಿಯವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಕ್ಕೆ ಬ್ರೇಕ್ ಹಾಕಿತ್ತು.
ಹೈಕೋರ್ಟ್ ಆದೇಶದ ವಿರುದ್ಧ ರಾಜ್ಯ ಸರ್ಕಾರ, ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.ಆ ಅರ್ಜಿಯ ವಿಚಾರಣೆಯ ತೀರ್ಪು ಆ. 26ರಂದು ಹೊರಬಿದ್ದಿದೆ. ಎರಡೂ ಕಡೆಯ ವಾದ – ವಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಹಾಗೂ ಸಂದೀಪ್ ಮೆಹ್ತಾ ಅವರುಳ್ಳ ನ್ಯಾಯಪೀಠ, ವಿಜಯ್ ನಿರಾಣಿ ಹಾಗೂ ಈ ಪ್ರಕರಣದಲ್ಲಿ ಆರೋಪ ಹೊತ್ತಿರುವ ಇತರರ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಲು ತೀರ್ಪು ನೀಡಿದೆ.