– ಗ್ರಾಮಾಭಿವೃದ್ದಿ ಯೋಜನೆಯನ್ನು ಭಜರಂಗದಳದ ಲೆವೆಲ್ಲಿಗೆ ಇಳಿಸಿದ ಭಾಷಣಕಾರರು
– ಡಾ ಡಿ ವಿರೇಂದ್ರ ಹೆಗ್ಗಡೆಯವರಿಗೆ ಇವರಿಗಿಂತ ಬೇರೆ ಶತ್ರುಗಳು ಬೇಕಿಲ್ಲ !
– ಹೆಗ್ಗಡೆಯವರನ್ನು ‘ಕೋಮುವಾದಿ ಪಟ್ಟ’ದಲ್ಲಿ ಕೂರಿಸಲು ಧರ್ಮಸಂರಕ್ಷಣಾ ಸಮಾವೇಶ !
– ನವೀನ್ ಸೂರಿಂಜೆಯವರ ಬರಹದಲ್ಲಿ
ಧರ್ಮಸ್ಥಳ, ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ನಡೆದ ಅಸಹಜ ಸಾವು, ಅತ್ಯಾಚಾರ, ಕೊಲೆಗಳ ಕುರಿತಾದ ಎಸ್ಐಟಿ ತನಿಖೆಯನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ‘ಧರ್ಮ ಸಂರಕ್ಷಣಾ ಸಮಾವೇಶ’ ಹಲವು ಸುಳ್ಳುಗಳಿಗೆ ವೇದಿಕೆಯಾಯಿತು.
ಧರ್ಮಸಂರಕ್ಷಣಾ ಸಮಾವೇಶದಲ್ಲಿ ಮಾತನಾಡಿದ ಭಾಷಣಕಾರರೊಬ್ಬರು “ಧರ್ಮಸ್ಥಳದ ಬೆಳ್ತಂಗಡಿ ಭಾಗದಲ್ಲಿ ಈ ಕ್ರೈಸ್ತ ಮಿಷಿನರಿಗಳ ಪ್ರಭಾವದಿಂದ ಹಿಂದೂಗಳ ತುಳಸೀ ಕಟ್ಟೆಯನ್ನು ಒಡೆಸಿ ಅಲ್ಲಿ ಶಿಲುಬೆಯನ್ನು ನೆಡಲಾಗಿತ್ತು. ಗ್ರಾಮಾಭಿವೃದ್ದಿ ಯೋಜನೆ ಹಳ್ಳಿ ಹಳ್ಳಿಗಳಿಗೂ ಹೋಗಿ ಯಾವ ಅಮಿಷಗಳಿಗೂ ಬಲಿಯಾಗದಂತೆ ನೋಡಿಕೊಂಡ ನಂತರ ಒಡೆಸಿದ ತುಳಸೀಕಟ್ಟೆಗಳು ಮತ್ತೆ ಮನೆಯ ಅಂಗಳದಲ್ಲಿ ಎದ್ದು ನಿಲ್ಲುವಂತೆ ಮಾಡಿದ್ದು ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆ” ಎಂದು ಕೋಮುಪ್ರಚೋದನೆ ಮಾಡಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಷಯ ಅದಲ್ಲ, ನಿಜಕ್ಕೂ ಬೆಳ್ತಂಗಡಿ ಭಾಗದಲ್ಲಿ ಕ್ರೈಸ್ತ ಮಿಷನರಿಗಳು ಹಿಂದೂಗಳ ತುಳಸೀಕಟ್ಟೆಯ ಜಾಗದಲ್ಲಿ ಶಿಲುಬೆ ಸ್ಥಾಪಿಸಿದ್ದರೆ? ಶಿಲುಬೆ ತೆಗೆದು ತುಳಸೀಕಟ್ಟೆ ಮರುಸ್ಥಾಪನೆ ಮಾಡಿದ್ದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯೇ? ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ.
ಮೊದಲನೆಯದಾಗಿ, ಬೆಳ್ತಂಗಡಿ-ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನಕ್ಕಾಗಲೀ, ಗ್ರಾಮಾಭಿವೃದ್ದಿ ಯೋಜನೆಗಾಗಲೀ, ಕ್ರೈಸ್ತ ಮಿಷಿನರಿಗಳ ಜೊತೆ ಸಂಘರ್ಷ ನಡೆದ ಇತಿಹಾಸವೇ ಇಲ್ಲ. ಮತಾಂತರ, ತುಳಸೀಕಟ್ಟೆ ಒಡೆದು ಶಿಲುಬೆ ನೆಟ್ಟ ಪ್ರಕರಣಗಳು ಈವರೆಗೂ ಬೆಳ್ತಂಗಡಿ, ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿಲ್ಲ. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಎನ್ನುವುದು ಕ್ರೈಸ್ತ ಮಿಷನರಿಗಳ ವಿರುದ್ಧದ ಹೋರಾಟಕ್ಕಾಗಿ ರೂಪಿತವಾದ ಸಂಘಟನೆ ಎಂದು ಈವರೆಗೂ ಯಾರೂ ಘೋಷಿಸಿಕೊಂಡಿಲ್ಲ. ಅಂತಹ ಆರೋಪವೂ ಅದರ ಮೇಲಿಲ್ಲ ! ಹೀಗಿದ್ದರೂ, ಧರ್ಮಸ್ಥಳವನ್ನೂ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯನ್ನೂ ಕ್ರೈಸ್ತ ಮಿಷನರಿಗಳಿಗೆ ಎತ್ತಿಕಟ್ಟಿ, ತುಳಸೀ ಕಟ್ಟೆ ಮತ್ತು ಶಿಲುಬೆಯ ನಂಬಿಕೆಗಳನ್ನು ಎತ್ತಿಕಟ್ಟುವ ಕೃತ್ಯ ಧರ್ಮಸಂರಕ್ಷಣಾ ಸಮಾವೇಶದಿಂದ ನಡೆಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವಿರೇಂದ್ರ ಹೆಗ್ಗಡೆಯವರಿಗೆ ಧರ್ಮಸಂರಕ್ಷಣಾ ಸಮಾವೇಶದ ಭಾಷಣಕಾರರಿಗಿಂತ ದೊಡ್ಡ ಶತ್ರುಗಳು ಇನ್ಯಾರು ಬೇಕು?
ವಾಸ್ತವವಾಗಿ ಧರ್ಮಸ್ಥಳದ ಡಾ ಡಿ ವಿರೇಂದ್ರ ಹೆಗ್ಗಡೆಯವರು ಕ್ರೈಸ್ತ ಮಿಷನರಿಗಳ ಜೊತೆ, ಕ್ರೈಸ್ತ ಸಂಘಟನೆಗಳ ಜೊತೆ ಬಹಳ ಆತ್ಮೀಯತೆ ಹೊಂದಿದ್ದಾರೆ. ಡಾ ಡಿ ವಿರೇಂದ್ರ ಹೆಗ್ಗಡೆಯವರ ರಾಜಕೀಯ ಸಿದ್ದಾಂತ, ಆರ್.ಎಸ್.ಎಸ್ ನಲ್ಲಿ ಅವರ ಭಾಗೀಧಾರಿಕೆ ಏನೇ ಇದ್ದರೂ ಅವರು ಈವರೆಗೂ ಕೋಮುವಾದಿ ದ್ವೇಷ ಭಾಷಣ ಮಾಡಿಲ್ಲ. ಆರ್ಎಸ್ಎಸ್, ವಿಶ್ವ ಹಿಂದೂ ಪರಿಷತ್ ಸಮಿತಿಗಳ ಅಧ್ಯಕ್ಷರಾಗಿ ಅದರ ದೊಡ್ಡ ದೊಡ್ಡ ನಾಯಕರ ಜೊತೆ ಗುರುತಿಸಿಕೊಂಡರೂ, ಭಜರಂಗದಳ, ಹಿಂದೂ ಜಾಗರಣಾ ವೇದಿಕೆ, ಶ್ರೀರಾಮಸೇನೆಯಂತಹ ಹೊಡಿ ಬಡಿ ನಾಯಕರ ಜೊತೆ ಗುರುತಿಸಿಕೊಂಡಿಲ್ಲ. ಆ ಕಾರಣಕ್ಕಾಗಿಯೇ ಎಡಪಂಥೀಯರು, ವಿಚಾರವಾದಿಗಳು ಧರ್ಮಸ್ಥಳದ ದೌರ್ಜನ್ಯ, ಹಲ್ಲೆ, ಕೊಲೆ, ಅತ್ಯಾಚಾರ, ಭೂಕಬಳಿಕೆ, ಮೈಕ್ರೋ ಫೈನಾನ್ಸ್, ದಲಿತ ದೌರ್ಜನ್ಯ, ಅಸ್ಪೃಶ್ಯತೆ ಬಗ್ಗೆ ಮಾತನಾಡುತ್ತಾರೆಯೇ ವಿನಃ ಡಾ ಡಿ ವಿರೇಂದ್ರ ಹೆಗ್ಗಡೆಯವರನ್ನಾಗಲೀ, ದೇವಸ್ಥಾನವನ್ನಾಗಲೀ ವೈಯಕ್ತಿಕ ನಿಂದನೆ ಮಾಡುವುದಿಲ್ಲ. ಒಂದು ‘ಪಟ್ಟಭದ್ರ ವ್ಯವಸ್ಥೆ’ಯನ್ನು ವಿರೋಧಿಸಿದ ತಕ್ಷಣ ಆ ವ್ಯವಸ್ಥೆಯೊಳಗಿರುವ ಎಲ್ಲರೂ ಎಲ್ಲಾ ರೀತಿಯಲ್ಲೂ ಕೆಟ್ಟವರು ಎಂದರ್ಥವಲ್ಲ. ಅಷ್ಟರಮಟ್ಟಿಗೆ ವಿರೇಂದ್ರ ಹೆಗ್ಗಡೆಯವರು ತಮ್ಮ ಘನತೆಯನ್ನು ಉಳಿಸಿಕೊಂಡಿದ್ದಾರೆ. ಆದರೆ ಧರ್ಮಸಂರಕ್ಷಣಾ ಸಮಾವೇಶದ ಭಾಷಣಕಾರರು ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರ ಗ್ರಾಮಾಭಿವೃದ್ದಿ ಯೋಜನೆಯನ್ನು ಭಜರಂಗದಳದ ಲೆವೆಲ್ಲಿಗೆ ಇಳಿಸಿದರು.
ಇಷ್ಟಕ್ಕೂ ವಿರೇಂದ್ರ ಹೆಗ್ಗಡೆಯವರು ಕ್ರೈಸ್ತ ಸಮುದಾಯದ ವಿರೋಧಿಯೇ ? ಬೆಳ್ತಂಗಡಿಯಲ್ಲಿ ನಿರಾಶ್ರಿತರ ನಿಸ್ವಾರ್ಥ ಸೇವೆ ಮಾಡುತ್ತಿರುವ ‘ಸಿಯೋನ್’ ಆಶ್ರಮ ಡಾ. ಯು ಸಿ ಪೌಲೋಸ್ ಅವರನ್ನು ಮಾತನಾಡಿಸಿದರೆ ವಿರೇಂದ್ರ ಹೆಗ್ಗಡೆಯವರಿಗೂ ಕ್ರಿಶ್ಚಿಯನ್ನರಿಗೂ ಇರುವ ಸಂಬಂಧ, ಸಂಪರ್ಕ ತಿಳಿದು ಬರುತ್ತದೆ. ಧರ್ಮಸ್ಥಳಕ್ಕೆ ದೇಶದ ಮೂಲೆಮೂಲೆಯಿಂದ ಎಷ್ಟು ಭಕ್ತರು ಬರುತ್ತಾರೋ, ದೊಡ್ಡ ಸಂಖ್ಯೆಯಲ್ಲಿ ಮಾನಸಿಕ ಅಸ್ವಸ್ಥರು, ಬಿಕ್ಷುಕರೂ ಬರುತ್ತಾರೆ. ರಾಜ್ಯದ ಮೂಲೆಮೂಲೆಗಳಿಂದ ಬಸ್ ವ್ಯವಸ್ಥೆ ಇರುವುದೂ ಇದಕ್ಕೆ ಕಾರಣ. ಇವತ್ತು ಡಾ ಯು ಸಿ ಪೌಲೋಸ್ ಅವರ ಆಶ್ರಮ ಇಲ್ಲದೇ ಇದ್ದರೆ ಬೆಳ್ತಂಗಡಿ, ಉಜಿರೆ ಪೇಟೆಯಲ್ಲಿ ಮಾನಸಿಕ ಅಸ್ವಸ್ಥರು, ಬಿಕ್ಷುಕರ ಸಂಖ್ಯೆ ಏರಿಕೆಯಾಗುತ್ತಿತ್ತು. ಧರ್ಮಸ್ಥಳದ ಸ್ವಚ್ಚತೆಗೆ ಈ ಕ್ರಿಶ್ಚಿಯನ್ ಆಶ್ರಮವೂ ಕಾರಣ. ಅದು ಗೊತ್ತಿದ್ದೇ ಡಾ ಡಿ ವಿರೇಂದ್ರ ಹೆಗ್ಗಡೆಯವರು ಕ್ರಿಶ್ಚಿಯನ್ನರ ಸಿಯೋನ್ ಆಶ್ರಮವನ್ನು ಪೋಷಿಸಿದ್ದಾರೆ. ಇವತ್ತು ಡಾ ಡಿ ವಿರೇಂದ್ರ ಹೆಗ್ಗಡೆಯವರು ಇಲ್ಲದೇ ಇದ್ದರೆ ನಮ್ಮ ಸಿಯೋನ್ ಆಶ್ರಮವೇ ಇರುತ್ತಿರಲಿಲ್ಲ ಎಂದು ಡಾ. ಯು ಸಿ ಪೌಲೋಸ್ ಹೇಳುತ್ತಾರೆ.
ಹಾಗಾಗಿ ಹಿಂದುತ್ವವಾದಿ ಭಾಷಣಕಾರರು ‘ಕರಾವಳಿಯ ಹಿಂದೂಗಳ ಮತಾಂತರ’ದ ಬಗ್ಗೆ ಮಾತನಾಡುವ ಮೊದಲು ಕ್ರೈಸ್ತ ಮಿಷನರಿಗಳ ಅಧ್ಯಯನ ನಡೆಸಬೇಕು. ಕರಾವಳಿಯ ದೈವಾರಾಧನೆ ಉಳಿವಿನಲ್ಲಿ ಕ್ರೈಸ್ತ ಮಿಷಿನರಿಗಳ ಪಾತ್ರ ಅಗಾಧವಾದುದು.
ಬೆಳ್ತಂಗಡಿ ಮಾತ್ರವಲ್ಲ, ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರೋತ್ತರದಲ್ಲಿ ನಡೆದ ಹಿಂದೂಗಳ ಕ್ರಿಶ್ಚಿಯನ್ ಮತಾಂತರದ ಬಗ್ಗೆ ಸರಳವಾಗಿ ಅರ್ಥೈಸಿಕೊಳ್ಳಲು ನಾವು ರಮಾನಾಥ್ ಕೋಟೆಕಾರ್ ಬರೆದ ‘ಬಿಲ್ಲವರು ಮತ್ತು ಬಾಸೆಲ್ ಮಿಷನ್’ ಪುಸ್ತಕವನ್ನು ಓದಬೇಕು. ಈ ಪುಸ್ತಕವನ್ನು ಓದುವಾಗ ಕೋಮುವಾದಿ ಕಣ್ಣುಗಳಿಂದ ಓದದೇ, ಬಿಲ್ಲವರೂ ಸೇರಿದಂತೆ ಕರಾವಳಿಯ ಹಿಂದುಳಿದ ವರ್ಗ, ದಲಿತರು, ಕೊರಗರು ಸೇರಿದಂತೆ ಆದಿವಾಸಿಗಳ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಕಣ್ಣೋಟವಿಟ್ಟುಕೊಂಡು ಓದಬೇಕು. ‘ಭೂಮಿ ಮತ್ತು ಸಂಪತ್ತಿನ ಸಮಾನ ಹಂಚಿಕೆಯ ಎಡಪಂಥೀಯ ಕಣ್ಣೋಟ’ದಲ್ಲಿ ಓದಿದರೆ ಇನ್ನೂ ಉತ್ತಮ.
ಸ್ವಾತಂತ್ರ್ಯಪೂರ್ವದಲ್ಲಿ ಇದ್ದ ಹಿಂದುಳಿದ ವರ್ಗಗಳ ಮತಾಂತರ ಸ್ವಾತಂತ್ರ್ಯದ ಬಳಿಕ ಕಡಿಮೆಯಾಯ್ತು. ಅದಕ್ಕೆ ಕಾರಣ ಭೂಸುದಾರಣಾ ಕಾಯ್ದೆ ಮತ್ತು ಕನಿಷ್ಠ ವೇತನಕ್ಕಾಗಿ ನಡೆದ ಎಡಪಂಥೀಯ ಹೋರಾಟ. ಸ್ವಾತಂತ್ರ್ಯದ ಬಳಿಕವೂ ಹಿಂದೂ ಸಮಾಜದಲ್ಲಿ ಇದ್ದ ಜೀತ, ಅಸಮಾನತೆ, ಅಜಲು, ಭೂಮಿ ಇಲ್ಲದಿರುವಿಕೆಯ ಹಿಂದುಳಿದ ವರ್ಗಗಳ ಸಾಮಾಜಿಕ ಸ್ಥಿತಿಗತಿಗಳು ಮತಾಂತರಕ್ಕೆ ಪ್ರೇರೇಪಿಸುತ್ತಿದ್ದವು. ಘನತೆಯ ಬದುಕಿಗಾಗಿ ಹಿಂದುಳಿದ ವರ್ಗಗಳು ಮತಾಂತರವಾಗುತ್ತಿದ್ದವು. ಇದನ್ನು ಘಟನೆಯ ಸಹಿತ ‘ಬಿಲ್ಲವರು ಮತ್ತು ಬಾಸೆಲ್ ಮಿಷನ್’ ಪುಸ್ತಕ ಹೇಳುತ್ತದೆ. ಈ ಪುಸ್ತಕದಲ್ಲಿ ಉಲ್ಲೇಖಿತವಾಗಿರುವ ಮತಾಂತರ ಘಟನೆಯ ಕಾಲಮಾನ ಮತ್ತು ಆ ಬಳಿಕ ನಡೆದ ಕಮ್ಯೂನಿಷ್ಟ್ ಚಳವಳಿಯ ಕಾಲಮಾನಗಳನ್ನು ಹೋಲಿಕೆ ಮಾಡಿ ನೋಡಿದರೆ, ಕರಾವಳಿಯಲ್ಲಿ ಹಿಂದುಳಿದ ವರ್ಗಗಳ ಮತಾಂತರ ನಿಲ್ಲಲು ಕಮ್ಯೂನಿಷ್ಟ್ ಚಳವಳಿಯೂ ಒಂದು ಕಾರಣ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಧರ್ಮಸ್ಥಳ ದೇವಸ್ಥಾನ ಮತ್ತು ಹೆಗ್ಗಡೆಯವರ ಒಕ್ಕಲಿನಲ್ಲಿದ್ದ ಗೇಣಿದಾರರಿಗೆ ಭೂಸುಧಾರಣಾ ಕಾಯ್ದೆಯಂತೆ ಭೂಮಿ ದೊರಕಲೂ ಎಡಪಂಥೀಯರ ಹೋರಾಟ ಕಾರಣವಾಗಿತ್ತು. ಹೆಗ್ಗಡೆಯವರು ಭೂಸುಧಾರಣಾ ಕಾಯ್ದೆಯಂತೆ ಭೂಮಿಯನ್ನು ನೀಡಲು ಸಿದ್ದರಿರಲಿಲ್ಲ. ಎಡಪಂಥೀಯರ ಮಧ್ಯಪ್ರವೇಶ ಇಲ್ಲದೇ ಇರುತ್ತಿದ್ದರೆ ಬೆಳ್ತಂಗಡಿಯ ಬಡ ರೈತರಿಗೆ ಭೂಮಿ ಸಿಗದೇ ಮತಾಂತರದ ಸಂಖ್ಯೆ ಜಾಸ್ತಿಯಾಗುತ್ತಿತ್ತು, ಹೆಗ್ಗಡೆಯವರ ಆಸ್ತಿಯೂ ಜಾಸ್ತಿ ಇರುತ್ತಿತ್ತು!
ಇವತ್ತಿನವರೆಗೆ ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರನ್ನಾಗಲೀ, ಧರ್ಮಸ್ಥಳ ದೇವಸ್ಥಾನವನ್ನಾಗಲೀ, ಧರ್ಮಸ್ಥಳದ ಯೋಜನೆಯನ್ನಾಗಲೀ ಕ್ರಿಶ್ಚಿಯನ್-ಮುಸ್ಲಿಂ ವಿರೋಧಿ ಎಂದು ಹೇಳುವುದು ತಪ್ಪಾಗುತ್ತದೆ. ಅವರು ಕೋಮುವಾದಿಯಲ್ಲ. ಕೋಮುವಾದ ಪೋಷಕ. ಧರ್ಮಸ್ಥಳದಲ್ಲಿ ಇರುವ ಫ್ಯೂಡಲ್ ವ್ಯವಸ್ಥೆ, ಅಲ್ಲಿ ನಡೆಯುವ ಅತ್ಯಾಚಾರ, ಕೊಲೆ, ಹಲ್ಲೆ, ಭೂ ಕಬಳಿಕೆ, ಮೈಕ್ರೋ ಫೈನಾನ್ಸ್ ದೌರ್ಜನ್ಯ, ದಲಿತರ ಮೇಲಿನ ದೌರ್ಜನ್ಯಗಳನ್ನು ವಿರೋಧಿಸುವುದು ಎಂದರೆ ಧರ್ಮಾಧಿಕಾರಿಯನ್ನೋ, ದೇವಸ್ಥಾನವನ್ನೋ ವಿರೋಧಿಸಿದಂತಲ್ಲ. ಹಾಗಾಗಿ, ತುಳಸೀಕಟ್ಟೆ ಮತ್ತು ಶಿಲುಬೆ ಸಂಘರ್ಷ ಎಂಬ ಸುಳ್ಳು ಕತೆ ಸೃಷ್ಟಿಸಿ ಅದಕ್ಕೆ ಧರ್ಮಸ್ಥಳವನ್ನು ಥಳಕು ಹಾಕುವವರು ಧರ್ಮಸ್ಥಳದ ನಿಜವಾದ ಶತ್ರುಗಳು ! ಅವರುಗಳು ಹೆಗ್ಗಡೆಯವರ ಭುಜದಲ್ಲಿ ಕೋಮು ಬಂದೂಕನ್ನು ಇಟ್ಟವರು. ಕೋಮುವಾದಿಯಲ್ಲದ ವಿರೇಂದ್ರ ಹೆಗ್ಗಡೆಯವರನ್ನು ‘ಕೋಮುವಾದಿ ಪಟ್ಟ’ದಲ್ಲಿ ಕೂರಿಸಲು ಹವಣಿಸುತ್ತಿರುವ ಧರ್ಮಸಂರಕ್ಷಣಾ ಭಾಷಣಕಾರರ ಬಗ್ಗೆ ಎಚ್ಚರವಿರಬೇಕು.