Home ಇನ್ನಷ್ಟು ಕೋರ್ಟು - ಕಾನೂನು ವಂದೇ ಮಾತರಂ ಹಾಡುವುದು ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

ವಂದೇ ಮಾತರಂ ಹಾಡುವುದು ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

0

ದೆಹಲಿ: ಅಧಿಕೃತ ಕಾರ್ಯಕ್ರಮಗಳು ಮತ್ತು ಶಾಲೆಗಳಲ್ಲಿ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಹಾಡುವುದನ್ನು ಕಡ್ಡಾಯಗೊಳಿಸಿ ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ವಂದೇ ಮಾತರಂ ಗಾಯನವು ಕಡ್ಡಾಯವೇನಲ್ಲ ಮತ್ತು ಇದನ್ನು ಹಾಡದವರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಲು ಅವಕಾಶವಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ. ಈ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ನಿರಾಕರಿಸಿದ ನ್ಯಾಯಪೀಠವು, ಇದು ಕೇವಲ ಒಂದು ಶಿಷ್ಟಾಚಾರದ (Protocol) ಭಾಗವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಸೂರ್ಯಕಾಂತ್, ಜಸ್ಟಿಸ್ ಜಾಯ್‌ಮಾಲ್ಯ ಬಾಗ್ಚಿ ಮತ್ತು ಜಸ್ಟಿಸ್ ವಿಪುಲ್ ಎಂ. ಪಂಚೋಲಿ ಅವರನ್ನೊಳಗೊಂಡ ಧರ್ಮಾಸನವು ಈ ಅರ್ಜಿಯನ್ನು “ಅಪಕ್ವ ಅಥವಾ ಅವಸರದ ಕ್ರಮ” ಎಂದು ಬಣ್ಣಿಸಿತು. ಕೇಂದ್ರ ಸರ್ಕಾರದ ಆದೇಶವು ಕೇವಲ ಒಂದು ಸಲಹೆಯಾಗಿದ್ದು (Advisory), ಇದರಲ್ಲಿ ಯಾವುದೇ ದಂಡನಾತ್ಮಕ ನಿಬಂಧನೆಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅರ್ಜಿದಾರರಾದ ಮೊಹಮ್ಮದ್ ಸಯೀದ್ ನೂರಿ ಅವರು ಅನಗತ್ಯವಾಗಿ ಆತಂಕಕ್ಕೊಳಗಾಗಿದ್ದಾರೆ ಎಂದು ನ್ಯಾಯಾಧೀಶರು ಈ ಸಂದರ್ಭದಲ್ಲಿ ತಿಳಿಸಿದರು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರು, “ದೇಶಭಕ್ತಿಯನ್ನು ಜನರ ಮೇಲೆ ಬಲವಂತವಾಗಿ ಹೇರಲು ಸಾಧ್ಯವಿಲ್ಲ ಮತ್ತು ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ನಂಬಿಕೆಯನ್ನು ರಕ್ಷಿಸುತ್ತದೆ” ಎಂದು ಪ್ರತಿಪಾದಿಸಿದರು. ನಮ್ಮ ಸಂಪ್ರದಾಯವು ಸಹನೆಯನ್ನು ಕಲಿಸುತ್ತದೆಯೇ ಹೊರತು ಬಲವಂತವನ್ನಲ್ಲ ಎಂದು ಅವರು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು, “ರಾಷ್ಟ್ರಗೀತೆಯ ವಿಷಯದಲ್ಲೂ ಬಲವಂತ ಮಾಡಬಾರದು ಎಂದು ನೀವು ಹೇಳುತ್ತೀರಾ?” ಎಂದು ಪ್ರಶ್ನಿಸಿತು.

ಸಂವಿಧಾನದ 51(ಎ) ವಿಧಿಯ ಅಡಿಯಲ್ಲಿ ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಸಂಸ್ಥೆಗಳನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ಸಂದರ್ಭದಲ್ಲಿ ನೆನಪಿಸಿದರು. ರಾಷ್ಟ್ರಗೀತೆಯನ್ನು ಗೌರವಿಸಬೇಕು ಎಂದು ನಾಗರಿಕರಿಗೆ ಸಲಹೆ ನೀಡುವ ಅಗತ್ಯವಿದೆಯೇ ಎಂದು ಅವರು ಪ್ರಶ್ನಿಸಿದರು. ಆದರೆ, ವಕೀಲ ಹೆಗ್ಡೆ ಅವರು ಸಂವಿಧಾನದಲ್ಲಿ ‘ವಂದೇ ಮಾತರಂ’ ಬಗ್ಗೆ ನಿರ್ದಿಷ್ಟ ಉಲ್ಲೇಖವಿಲ್ಲ ಎಂದು ವಾದಿಸಿದರು.

ಅಂತಿಮವಾಗಿ ಸುಪ್ರೀಂ ಕೋರ್ಟ್, ರಾಷ್ಟ್ರಧ್ವಜಕ್ಕೆ ಇರುವಂತೆಯೇ ರಾಷ್ಟ್ರೀಯ ಗೀತೆಗೂ ಒಂದು ಶಿಷ್ಟಾಚಾರವಿದೆ ಎಂದು ವಿವರಿಸಿತು. ಒಂದು ವೇಳೆ ವಂದೇ ಮಾತರಂ ಹಾಡದ ಕಾರಣಕ್ಕೆ ಯಾರ ಮೇಲಾದರೂ ತಾರತಮ್ಯ ಎಸಗಿದರೆ ಅಥವಾ ಕಾನೂನು ಕ್ರಮದ ನೋಟಿಸ್ ಜಾರಿಗೊಳಿಸಿದರೆ ಮಾತ್ರ ಅಂತಹ ಸಂದರ್ಭದಲ್ಲಿ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಸ್ಪಷ್ಟಪಡಿಸಿತು. ಅಲ್ಲಿಯವರೆಗೆ ಇಂತಹ ಅರ್ಜಿಗಳಿಗೆ ಅವಕಾಶವಿಲ್ಲ ಎಂದು ಹೇಳುವ ಮೂಲಕ ಅರ್ಜಿಯನ್ನು ವಜಾಗೊಳಿಸಿತು.

You cannot copy content of this page

Exit mobile version