18 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ?: ಪ್ರತ್ಯೇಕ ಕಾನೂನು ರೂಪಿಸುವ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಭರವಸೆ

ದೇಶದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ಹದಿಹರೆಯದವರು ಸಾಮಾಜಿಕ ಮಾಧ್ಯಮ (ಸೋಶಿಯಲ್ ಮೀಡಿಯಾ) ವೇದಿಕೆಗಳನ್ನು ಬಳಸುವುದರ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆ ಕಂಡುಬಂದಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಭಾರತೀಯ ಕಾನೂನುಗಳನ್ನು, ಅದರಲ್ಲೂ ವಿಶೇಷವಾಗಿ ಅಪ್ರಾಪ್ತರ ರಕ್ಷಣೆಗೆ ಸಂಬಂಧಿಸಿದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡಲು ಪ್ರತ್ಯೇಕ ಶಾಸನ ರೂಪಿಸುವ ಕುರಿತು ಪರಿಶೀಲನೆ ನಡೆಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಚ್.ಎಸ್. ಫೂಲ್ಕಾ ಹಾಗೂ ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಭಾರತೀಯ ಕಾನೂನಿನ ಪ್ರಕಾರ 18 ವರ್ಷದೊಳಗಿನ ಅಪ್ರಾಪ್ತರು ಸಾಮಾಜಿಕ ಮಾಧ್ಯಮ ಕಂಪನಿಗಳೊಂದಿಗೆ ಯಾವುದೇ ರೀತಿಯ ಕಾನೂನುಬದ್ಧ ಒಪ್ಪಂದಗಳನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು. ಇಂತಹ ಒಪ್ಪಂದಗಳನ್ನು ತಡೆಗಟ್ಟಲು ಮತ್ತು ಅಪ್ರಾಪ್ತರನ್ನು ರಕ್ಷಿಸಲು ಈ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಕಡ್ಡಾಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಸುಪ್ರೀಂ ಕೋರ್ಟ್ ಗಮನಕ್ಕೆ ತಂದರು.

ಸಾಮಾಜಿಕ ಮಾಧ್ಯಮ ಕಂಪನಿಗಳು ಮಕ್ಕಳ ಸುರಕ್ಷತಾ ಕ್ರಮಗಳನ್ನು ಸ್ವಯಂಪ್ರೇರಿತವಾಗಿ ಪಾಲಿಸಲಿ ಎಂದು ಕಾಯುವ ಬದಲು, ಸೋಶಿಯಲ್ ಮೀಡಿಯಾ ಹಾಗೂ ಇತರ ಎಲ್ಲಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಕಡ್ಡಾಯವಾಗಿ ಅನ್ವಯವಾಗುವಂತೆ ಕಾನೂನುಬದ್ಧ ನಿಯಮಗಳನ್ನು ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು ಎಂದು ನ್ಯಾಯಪೀಠ ಸಲಹೆ ನೀಡಿತು.

ಈ ಮಹತ್ವದ ವಿಷಯವನ್ನು ಪರಿಶೀಲಿಸಲು ಮತ್ತು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲು ಸಿದ್ಧವಿರುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌‌ಗೆ ಭರವಸೆ ನೀಡಿದೆ. ಈ ಕುರಿತು ರೂಪಿಸುವ ನಿಯಮಗಳು ಕೇವಲ ಸಾಂದರ್ಭಿಕ ಮಾರ್ಗಸೂಚಿಗಳಾಗಿ ಉಳಿಯದೆ, ಕಡ್ಡಾಯವಾಗಿ ಪಾಲಿಸಬೇಕಾದ ಕಾನೂನುಬದ್ಧ ಬಲವನ್ನು ಹೊಂದಿರಬೇಕು ಎಂದು ನ್ಯಾಯಮೂರ್ತಿ ಜೋಯ್‌ಮಾಲ್ಯ ಬಾಗ್ಚಿ ಸ್ಪಷ್ಟಪಡಿಸಿದರು. ಜೊತೆಗೆ, ಸಾಮಾಜಿಕ ಮಾಧ್ಯಮ ವೇದಿಕೆಗಳು ಮಕ್ಕಳಿಗೆ ಸಂಬಂಧಿಸಿದಂತೆ ಭಾರತದ ಪ್ರಸ್ತುತ ಕಾನೂನುಗಳನ್ನು ವಾಸ್ತವವಾಗಿ ಪಾಲಿಸುತ್ತಿವೆಯೇ ಅಥವಾ ಇಲ್ಲವೇ ಎಂಬುದನ್ನು ಕೇಂದ್ರ ಸರ್ಕಾರ ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಬಾಗ್ಚಿ ಸೂಚಿಸಿದರು.

Related Articles

ಇತ್ತೀಚಿನ ಸುದ್ದಿಗಳು