Home ಇನ್ನಷ್ಟು ಕೋರ್ಟು - ಕಾನೂನು ಒಬ್ಬ ವ್ಯಕ್ತಿಯ ಪೌರತ್ವವನ್ನು ನಿರ್ಧರಿಸುವ ಹಕ್ಕು ಚುನಾವಣಾ ಆಯೋಗಕ್ಕಿಲ್ಲ: ಸುಪ್ರೀಂ ಕೋರ್ಟ್

ಒಬ್ಬ ವ್ಯಕ್ತಿಯ ಪೌರತ್ವವನ್ನು ನಿರ್ಧರಿಸುವ ಹಕ್ಕು ಚುನಾವಣಾ ಆಯೋಗಕ್ಕಿಲ್ಲ: ಸುಪ್ರೀಂ ಕೋರ್ಟ್

0
ಸುಪ್ರೀಂ ಕೋರ್ಟ್

ದೆಹಲಿ: ಚುನಾವಣಾ ಆಯೋಗವು (Election Commission) ಹಮ್ಮಿಕೊಂಡಿರುವ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯನ್ನು ಸುಪ್ರೀಂಕೋರ್ಟ್ ಸಾಂವಿಧಾನಿಕವಾಗಿ ಎತ್ತಿಹಿಡಿದಿದೆ. ಇದೇ ವೇಳೆ ದೇಶದ ನಾಗರಿಕತ್ವದ ಕುರಿತು ಅತ್ಯಂತ ಮಹತ್ವದ ಆದೇಶ ನೀಡಿರುವ ಸರ್ವೋಚ್ಚ ನ್ಯಾಯಾಲಯ, “ಯಾವುದೇ ಒಬ್ಬ ವ್ಯಕ್ತಿಯ ಪೌರತ್ವವನ್ನು (Citizenship) ನಿರ್ಧರಿಸುವ ಕಾನೂನಾತ್ಮಕ ಹಕ್ಕು ಚುನಾವಣಾ ಆಯೋಗಕ್ಕೆ ಇಲ್ಲ” ಎಂದು ಸ್ಪಷ್ಟಪಡಿಸಿದೆ.

ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ದ್ಿಸದಸ್ಯ ಪೀಠವು ಈ ಪ್ರಮುಖ ತೀರ್ಪನ್ನು ಪ್ರಕಟಿಸಿದೆ. ಮತದಾರರ ಪಟ್ಟಿ ಪರಿಷ್ಕರಣೆಯನ್ನು ಸವಾಲು ಮಾಡಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ, “ಕೇವಲ ಮತದಾರರ ಪಟ್ಟಿಯಿಂದ ಒಬ್ಬ ವ್ಯಕ್ತಿಯ ಹೆಸರನ್ನು ತೆಗೆದುಹಾಕಿದ ತಕ್ಷಣವೇ ಆತನ ಭಾರತೀಯ ಪೌರಸತ್ವ ರದ್ದಾಗುತ್ತದೆ ಎಂದರ್ಥವಲ್ಲ” ಎಂದು ತಿಳಿಸಿದೆ.

ಮತದಾರರ ಪಟ್ಟಿಯ ಪರಿಷ್ಕರಣೆಯು ಕೇವಲ ಚುನಾವಣೆಗಳಲ್ಲಿ ಮತದಾನ ಮಾಡುವ ಪ್ರಕ್ರಿಯೆಗೆ ಮಾತ್ರ ಸೀಮಿತವಾಗಿದ್ದು, ಪಟ್ಟಿಯಲ್ಲಿ ಹೆಸರನ್ನು ಸೇರಿಸಬೇಕೇ ಅಥವಾ ಬೇಡವೇ ಎಂದು ನಿರ್ಧರಿಸುವ ಅಧಿಕಾರ ಮಾತ್ರ ಆಯೋಗಕ್ಕಿದೆ ಎಂದು ನ್ಯಾಯಪೀಠ ಹೇಳಿದೆ.

ಕೇಂದ್ರ ಗೃಹ ಸಚಿವಾಲಯಕ್ಕೆ ಪಟ್ಟಿ ರವಾನಿಸಲು ಆದೇಶ:

ಪೌರತ್ವದ ಮೇಲಿನ ಅನುಮಾನದಿಂದಾಗಿ ಯಾರ ಹೆಸರನ್ನಾದರೂ ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದರೆ, ಅಂತಹ ವ್ಯಕ್ತಿಗಳ ಸಂಪೂರ್ಣ ವಿವರಗಳನ್ನು ಚುನಾವಣಾ ಆಯೋಗವು ಕೇಂದ್ರ ಗೃಹ ಸಚಿವಾಲಯಕ್ಕೆ (MHA) ರವಾನಿಸಬೇಕು ಎಂದು ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಈ ಪ್ರಕ್ರಿಯೆಯನ್ನು ಮುಂದಿನ ನಾಲ್ಕು ವಾರಗಳ ಒಳಗಾಗಿ ಪೂರ್ಣಗೊಳಿಸಿ ಕೇಂದ್ರ ಸರ್ಕಾರಕ್ಕೆ ವರದಿ ಒಪ್ಪಿಸಬೇಕು ಎಂದು ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಕೇಂದ್ರ ಸರ್ಕಾರವು ಚುನಾವಣಾ ಆಯೋಗದಿಂದ ಈ ವಿವರಗಳನ್ನು ಪಡೆದುಕೊಂಡ ನಂತರ, ‘ಪೌರಸತ್ವ ಕಾಯ್ದೆ 1955’ ರ ಅಡಿಯಲ್ಲಿ ಆಯಾ ವ್ಯಕ್ತಿಗಳ ನಾಗರಿಕತ್ವದ ಕ್ಲೈಮುಗಳ (Claims) ಕುರಿತು ಕಾನೂನುಬದ್ಧವಾಗಿ ಸೂಕ್ತ ತನಿಖೆ ನಡೆಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಮುಂದಿನ ವಿಧಾನಸಭಾ ಚುನಾವಣೆ ಅಥವಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಆರಂಭವಾಗುವ ಮುನ್ನವೇ ಈ ಪರಿಶೀಲನಾ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಗಡುವು ವಿಧಿಸಿದೆ.

ಒಂದು ವೇಳೆ ಕೇಂದ್ರ ಸರ್ಕಾರದ ತನಿಖೆಯಲ್ಲಿ ಅವರು ಭಾರತದ ನಿಜವಾದ ನಾಗರಿಕರು ಎಂದು ಸಾಬೀತಾದರೆ, ತಕ್ಷಣವೇ ಅವರ ಹೆಸರುಗಳನ್ನು ಮರಳಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ತನ್ನ ಮಾರ್ಗಸೂಚಿಗಳಲ್ಲಿ ಸ್ಪಷ್ಟಪಡಿಸಿದೆ.

You cannot copy content of this page

Exit mobile version