Home ದೆಹಲಿ ಸಿಬಿಎಸ್‌ಇ ಫಲಿತಾಂಶದಲ್ಲಿ ಭಾರಿ ಅಕ್ರಮದ ಆರೋಪ: ನ್ಯಾಯಾಂಗ ತನಿಖೆ ನಡೆಸುವಂತೆ ರಾಹುಲ್ ಗಾಂಧಿ ಒತ್ತಾಯ

ಸಿಬಿಎಸ್‌ಇ ಫಲಿತಾಂಶದಲ್ಲಿ ಭಾರಿ ಅಕ್ರಮದ ಆರೋಪ: ನ್ಯಾಯಾಂಗ ತನಿಖೆ ನಡೆಸುವಂತೆ ರಾಹುಲ್ ಗಾಂಧಿ ಒತ್ತಾಯ

0

ಹೊಸದೆಹಲಿ: ಸಿಬಿಎಸ್‌ಇ (CBSE) ಪರೀಕ್ಷಾ ಫಲಿತಾಂಶಗಳಲ್ಲಿ ಭಾರಿ ಅಕ್ರಮಗಳು ಮತ್ತು ಲೋಪದೋಷಗಳು ನಡೆದಿವೆ ಎಂದು ಆರೋಪಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಅಗ್ರ ನಾಯಕ ರಾಹುಲ್ ಗಾಂಧಿ, ಈ ಕುರಿತು ತಕ್ಷಣವೇ ಸ್ವತಂತ್ರ ನ್ಯಾಯಾಂಗ ತನಿಖೆ (Judicial Inquiry) ನಡೆಸಬೇಕು ಎಂದು ಬುಧವಾರದಂದು ಕಟ್ಟುನಿಟ್ಟಾಗಿ ಒತ್ತಾಯಿಸಿದ್ದಾರೆ.

ಸಿಬಿಎಸ್‌ಇ ಫಲಿತಾಂಶ ಪ್ರಕಟಣೆಯಲ್ಲಿ ಆಗಿರುವ ಗಂಭೀರ ತಪ್ಪುಗಳು ಮತ್ತು ವ್ಯಾಪಕ ಅವಕತವಕಗಳಿಂದಾಗಿ ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ ಎಂದು ರಾಹುಲ್ ಗಾಂಧಿ ತಮ್ಮ ‘ಎಕ್ಸ್’ (X) ಖಾತೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಈ ಇಡೀ ಪ್ರಕ್ರಿಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಯಾವುದೇ ಜವಾಬ್ದಾರಿತನ ಇಲ್ಲ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.

ಫಲಿತಾಂಶದ ಅಕ್ರಮಗಳ ಸತ್ಯಾಸತ್ಯತೆಯನ್ನು ಹೊರತರಲು ನ್ಯಾಯಾಂಗ ತನಿಖೆಯೊಂದಿಗೆ, ಅತ್ಯಂತ ವೇಗವಾಗಿ ತನಿಖೆ ಪೂರ್ಣಗೊಳಿಸಲು ಪ್ರತ್ಯೇಕ ವಿಶೇಷ ತನಿಖಾ ತಂಡವನ್ನು (SIT) ರಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮೌಲ್ಯಮಾಪನ ಸಂಸ್ಥೆಯ ವಿರುದ್ಧ ಗಂಭೀರ ಆರೋಪ: ಪರೀಕ್ಷಾ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ ‘ಸಿಒಇಎಂಪೀಟಿ’ (COEMPT) ಎಂಬ ಖಾಸಗಿ ಸಂಸ್ಥೆಯ ವಿರುದ್ಧ ರಾಹುಲ್ ಗಾಂಧಿ ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದ್ದಾರೆ. “ಈ ಹಿಂದೆ ಇದೇ ಸಂಸ್ಥೆಯು ತೆಲಂಗಾಣ ರಾಜ್ಯದಲ್ಲಿ ‘ಗ್ಲೋಬ್ ಅರೆನಾ’ (Globe Arena) ಹೆಸರಿನಲ್ಲಿ ಪರೀಕ್ಷಾ ಮೌಲ್ಯಮಾಪನ ಕಾರ್ಯ ನಡೆಸಿತ್ತು.

ಆ ಸಂದರ್ಭದಲ್ಲಿ ಅಂದರೆ 2019 ರ ತೆಲಂಗಾಣ ಇಂಟರ್ಮೀಡಿಯೆಟ್ ಫಲಿತಾಂಶ ಪ್ರಕಟಣೆಯಲ್ಲಿ ಭಾರಿ ಅಕ್ರಮಗಳು ನಡೆದು ದೊಡ್ಡ ವಿವಾದ ಸೃಷ್ಟಿಯಾಗಿದ್ದನ್ನು ಇಡೀ ದೇಶ ನೋಡಿದೆ. ಈಗ ಅದೇ ಸಂಸ್ಥೆಯು ತನ್ನ ಹೆಸರನ್ನು ಮಾತ್ರ ‘ಸಿಒಇಎಂಪೀಟಿ’ ಎಂದು ಬದಲಾಯಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ” ಎಂದು ಅವರು ಬೆಟ್ಟು ಮಾಡಿದ್ದಾರೆ.

ಸಂಸ್ಥೆಯ ಹೆಸರು ಬದಲಾಗಿದೆಯೇ ಹೊರತು ಅವರ ಉದ್ದೇಶ ಮತ್ತು ಕೆಲಸದ ವೈಖರಿ ಬದಲಾಗಿಲ್ಲ ಎಂದು ಆಕ್ಷೇಪಿಸಿದ ಅವರು, ಈ ಹಿಂದೆ ಇಷ್ಟೊಂದು ದೊಡ್ಡ ವಿವಾದಕ್ಕೆ ಸಿಲುಕಿದ್ದ ಕಪ್ಪುಪಟ್ಟಿಗೆ ಸೇರಬೇಕಾದ ಸಂಸ್ಥೆಗೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಸಿಬಿಎಸ್‌ಇ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಮತ್ತೆ ಹೇಗೆ ನೀಡಿತು ಎಂದು ಪ್ರಶ್ನಿಸಿದ್ದಾರೆ.

ಈ ಪ್ರಕ್ರಿಯೆಯಲ್ಲಿ ಯಾವುದೇ ನಿಯಮ ಮತ್ತು ನಿಬಂಧನೆಗಳನ್ನು ಉಲ್ಲಂಘಿಸಲಾಗಿದೆಯೇ ಹಾಗೂ ಈ ಸಂಸ್ಥೆಗೆ ಹೊಣೆಗಾರಿಕೆ ವಹಿಸುವ ಮುನ್ನ ಅವರ ಅರ್ಹತೆಗಳ ಕುರಿತು ಸರಿಯಾದ ತಪಾಸಣೆ ನಡೆಸಲಾಗಿದೆಯೇ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಬಿಎಸ್‌ಇ ಫಲಿತಾಂಶದ ತಪ್ಪುಗಳಿಗೆ ಕೇಂದ್ರ ಸರ್ಕಾರ ಮತ್ತು ಈ ಸಂಸ್ಥೆಯೇ ನೇರ ಹೊಣೆ ಎಂದಿರುವ ರಾಹುಲ್ ಗಾಂಧಿ, ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುತ್ತಾ, “ನಿಮ್ಮ ಕಠಿಣ ಪರಿಶ್ರಮ ಮತ್ತು ನಿಮ್ಮ ಉಜ್ವಲ ಭವಿಷ್ಯವನ್ನು ಬೇರೆಯವರು ಯಾರೂ ದೋಚಲು ಬಿಡುವುದಿಲ್ಲ” ಎಂದು ಭರವಸೆ ನೀಡಿದ್ದಾರೆ.

You cannot copy content of this page

Exit mobile version