ಬೆಂಗಳೂರು : ಮೇ -27: ಆಧುನಿಕ ಭಾರತದ ನಿರ್ಮಾಣದಲ್ಲಿ ನೆಹರೂ ಅವರ ಪಾತ್ರ ದೊಡ್ದದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಅವರು ಇಂದು ವಿಧಾನಸೌಧದ ಪೂರ್ವ ದಿಕ್ಕಿನಲ್ಲಿರುವ ಮಾಜಿ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರ ಪುಣ್ಯ ಸ್ಮರಣೆ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ ಮಾತನಾಡಿದರು.
ದೇಶದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿದರು
ನೆಹರೂ ಅವರು ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದ ಮೊದಲ ಪ್ರಧಾನಮಂತ್ರಿಗಳಾಗಿ 17 ವರ್ಷಗಳ ಕಾಲ ಜನರ ಸೇವೆ ಮಾಡಿದ್ದಾರೆ. ಸಮಾಜವಾದಿ ಮತ್ತು ಮಿಶ್ರ ಆರ್ಥಿಕತೆಗೆ ಹೆಚ್ಚು ಒತ್ತು ನೀಡಿ ಬೃಹತ್ ಅಣೆಕಟ್ಟುಗಳ ನಿರ್ಮಾಣ, ಶಿಕ್ಷಣ, ಸಹಕಾರ ಕ್ಷೇತ್ರಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ನೆಹರೂ ಅವರು ಕಾರಣಕರ್ತರು ಎಂದರು.
ನೆಹರೂ ಅವರ ಹಾದಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ
ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿ ದೇಶದ ಪ್ರಗತಿಯನ್ನು ವೈಜ್ಞಾನಿಕವಾಗಿ ಸಾಧಿಸುವ ಪ್ರಯತ್ನ ಮಾಡಿದ್ದರು. ಅವರು ಅಗಲಿ 62 ವರ್ಷಗಳಾಗಿವೆ. ಈ ಸಂದರ್ಭದಲ್ಲಿ ಅವರನ್ನು ಸ್ಮರಿಸಿ ಅವರ ಹಾದಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದಾಗಿ ತಿಳಿಸಿದರು.ಅವರ ಆದರ್ಶಗಳು ಸದಾ ಮೇಲ್ಪಂಕ್ತಿಯಲ್ಲಿವೆ ಎಂದರು.
