ಕೊಲ್ಲಂ: ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿದ್ದ ನಿವೃತ್ತ ನ್ಯಾಯಮೂರ್ತಿ ಎಂ ಫಾತಿಮಾ ಬೀವಿ ಅವರು ಕೊಲ್ಲಂನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು.
ಫಾತಿಮಾ ಬೀವಿ ಅವರು ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶೆ ಮಾತ್ರವಲ್ಲ, ದೇಶದ ಉನ್ನತ ನ್ಯಾಯಾಲಯದಲ್ಲಿ ನೇಮಕಗೊಂಡ ಮೊದಲ ಮುಸ್ಲಿಂ ಮಹಿಳೆ ಕೂಡಾ ಹೌದು. ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನಿವೃತ್ತಿಯಾದ ನಂತರ, ನ್ಯಾಯಮೂರ್ತಿ ಫಾತಿಮಾ ಬೀವಿ ಅವರು ತಮಿಳುನಾಡಿನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.
1927ರಲ್ಲಿ ಪಟ್ಟಣಂತಿಟ್ಟದಲ್ಲಿ ಅಣ್ಣಾವೀಟಿಲ್ ಮೀರ್ ಸಾಹಿಬ್ ಮತ್ತು ಖದೀಜಾ ಬೀವಿಯವರ ಪುತ್ರಿಯಾಗಿ ಜನಿಸಿದ ಫಾತಿಮಾ ಬೀವಿ, ತಿರುವನಂತಪುರಂನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಲಾ ಮುಗಿಸಿದ ನಂತರ 1950ರಲ್ಲಿ ವಕೀಲರಾಗಿ ದಾಖಲಿಸಿಕೊಂಡಿದ್ದರು. ಆಗಸ್ಟ್ 2023ರಲ್ಲಿ, ಕೇರಳ ಸರ್ಕಾರದ ಎರಡನೇ ಅತ್ಯುನ್ನತ ಗೌರವವಾದ ಕೇರಳ ಪ್ರಭಾ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಲಾಯಿತು.
ಮಲಯಾಳಿ ಮಹಿಳೆಯರ ಪ್ರಗತಿಯ ಇತಿಹಾಸದಲ್ಲಿ ಜಸ್ಟಿಸ್ ಫಾತಿಮಾ ಬೀವಿ ಅವರ ಜೀವನ ಅವಿಸ್ಮರಣೀಯವಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಫಾತಿಮಾ ಬೀವಿಯವರ ಮೂಲಕ ಸುಪ್ರೀಂ ಕೋರ್ಟ್‌ಗೆ ಮೊದಲ ಮಹಿಳಾ ನ್ಯಾಯಾಧೀಶರನ್ನು ಕೊಡುಗೆಯಾಗಿ ನೀಡಿದ ಸಾಧನೆಯನ್ನು ಕೇರಳ ಸಾಧಿಸಿದೆ ಎಂದರು.
ಸಮಾಜದಲ್ಲಿನ ಅಡೆತಡೆಗಳನ್ನು ನಿವಾರಿಸಲು ಫಾತಿಮಾ ಬೀವಿ ಅವರಿಗೆ ವಿಶೇಷ ಧೈರ್ಯವಿತ್ತು. ಅಂತಹ ಅಡೆತಡೆಗಳಿಂದ ಅವರು ಎದೆಗುಂದಲಿಲ್ಲ. ಅವರು ಅವುಗಳನ್ನು ಸವಾಲಿನಂತೆ ಎದುರಿಸಿದರು. ಇದು ಸಮಾಜಕ್ಕೆ, ವಿಶೇಷವಾಗಿ ಮಹಿಳೆಯರಿಗೆ ಸ್ಫೂರ್ತಿಯಾಗಿದೆ ಎಂದು ಸಿಎಂ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.