ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ಹಾಸನ ಸೆನ್ ಪೊಲೀಸ್ ಠಾಣೆಯ ಪೊಲೀಸರು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಪುತ್ರ ಎಂಎಲ್ ಸಿ ಸೂರಜ್ ರೇವಣ್ಣನನ್ನು ಬಂಧಿಸಿದ್ದಾರೆ.
ಸೂರಜ್ ರೇವಣ್ಣ ಅವರು ಚನ್ನರಾಯಪಟ್ಟಣ ತಾಲೂಕು ಗನ್ನಿಕಡ ಬಳಿ ಇರುವ ತೋಟದ ಮನೆಗೆ ಜೂ. 16ರಂದು ನನ್ನನ್ನು ಕರೆಸಿಕೊಂಡು ನನ್ನ ಮೇಲೆ ಲೈಂಗಿಕ ಕಿರುಕುಳ ನಡೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ಅರಕಲಗೂಡು ತಾಲೂಕಿನ ಜೆಡಿಎಸ್ ಕಾರ್ಯಕರ್ತನೊಬ್ಬ ಹೊಳೆನರಸೀಪುರ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ಬಂಧನವಾಗಿದೆ.
ಶನಿವಾರ ಸಂಜೆ ಹಾಸನದ ಸೆನ್ ಪೊಲೀಸ್ ಠಾಣೆಗೆ ಸೂರಜ್ ರೇವಣ್ಣನನ್ನು ಕರೆತಂದಿದ್ದ ಪೊಲೀಸರು ಇಂದು ಮುಂಜಾನೆ ನಾಲ್ಕು ಗಂಟೆಯವರೆಗೂ ಸುಧೀರ್ಘ ವಿಚಾರಣೆ ನಡೆಸಿದ ನಂತರ ಈ ಬಂಧನವಾಗಿದೆ ಎಂದು ತಿಳಿದು ಬಂದಿದೆ.
ಸೂರಜ್ ರೇವಣ್ಣ ವಿರುದ್ಧ ಸಲಿಂಗ ಕಾಮ ಹಾಗೂ ದೌರ್ಜನ್ಯದ ಆರೋಪ ಮಾಡಿ ಅರಕಲಗೂಡಿನ ಜೆಡಿಎಸ್ ಕಾರ್ಯಕರ್ತ ದೂರು ನೀಡಿದ್ದರು. ಆದರೆ, ಸುಳ್ಳು ಆರೋಪ ಮಾಡಿ ಹಣಕ್ಕಾಗಿ ಪೀಡಿಸಿದ್ದಾರೆ ಎಂದು ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ಹೊಳೆನರಸೀಪುರ ನಗರ ಠಾಣೆಗೆ ಪ್ರತಿ ದೂರು ನೀಡಿದ್ದರು. ಈ ಸಂಬಂಧ ಎಫ್‌ಐಆರ್ ಕೂಡ ದಾಖಲಾಗಿತ್ತು.
ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ನೀಡಿದ್ದ ದೂರಿನ್ವಯ ತಾಂತ್ರಿಕ ಸಾಕ್ಷ್ಯ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದಾರೆ. ಸಂತ್ರಸ್ತ ಯುವಕ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡಿದ ಸಂಬಂಧದ ಆಡಿಯೋ ಗಳನ್ನು ಈಗಾಗಲೇ ವಶಕ್ಕೆ ಪಡೆದಿರುವ ಪೊಲೀಸರು ಇನ್ನಷ್ಟು ಆಡಿಯೋ ಸೇರಿ ಹಲವು ದಾಖಲೆಗಳನ್ನು ಪಡೆಯಲು ತನಿಖೆ ಮುಂದುವರೆಸಿದ್ದಾರೆ.