Home ಜನ-ಗಣ-ಮನ ಹೆಣ್ಣೋಟ ಅರಸಿಕಟ್ಟೆ ಅಮ್ಮುನ್ ಪಾದುಕ್ಕೆ ಶರಣೋ ಶರಣು…

ಅರಸಿಕಟ್ಟೆ ಅಮ್ಮುನ್ ಪಾದುಕ್ಕೆ ಶರಣೋ ಶರಣು…

0


(ಈ ವರೆಗೆ…) ಗಂಗೆಯ ಪುಂಡಾಟಕ್ಕೆ ಮಿತಿಯೇ ಇರುವುದಿಲ್ಲ. ಆನೆಯ ಕಾಲಿನೆಡೆ ಕೋಲು ಹಾಕಿ ಅದನ್ನು ರೊಚ್ಚಿಗೆಬ್ಬಿಸಿ ಕೋಲಾಹಲ ಉಂಟುಮಾಡಿದ್ದಕ್ಕೆ ಮನೆಯವರಿಂದ ಚೆನ್ನಾಗಿ ಏಟುತಿಂದಳು. ಗೆಳತಿ ರುದ್ರಿಯ ಮಾತಿನಂತೆ ಶಾಲೆಗೆ ಎಳ್ಳು ನೀರು ಬಿಟ್ಟು  ಒಲೆಯ ಮುಂದೆ ಸೊಟ್ಟುಗ ಹಿಡಿಯಲಾರಂಭಿಸಿದಳು. ಗಂಗೆಯ ಪುಂಡಾಟ ನಿಂತಿತೇ? ಓದಿ, ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ಮೂವತ್ತೈದನೇಯ ಕಂತು.

ಆಗಷ್ಟೇ ಸೋಪಾನ ಪೇಟೆಯ ತಾಲೂಕು ಕಛೇರಿಯಲ್ಲಿ ಒಂದು ಸಣ್ಣ ಕೆಲಸಕ್ಕೆ ಸೇರಿಕೊಂಡಿದ್ದ ಗಂಗೆಯ ಮೂರನೇ ಅಣ್ಣ ಗಿರಿಧರ, ಮೊದಲ ಬಾರಿಗೆ ತನಗೆ ಸಿಕ್ಕ ಚೂರುಪಾರು ಸಂಬಳದಲ್ಲಿ  ಒಂದು ಚಿತ್ತಾರದ ಸ್ಟೀಲ್ ತಣಿಗೆಯನ್ನು ಕೊಂಡು ತಂದಿದ್ದ. ಮಣ್ಣು, ತಾಮ್ರ, ಕಂಚಿನ ಪಾತ್ರೆಗಳಷ್ಟೇ ರಾರಾಜಿಸಿ ಹಳಸಲಾಗುತ್ತಿದ್ದ ಆ ದಿನಮಾನದಲ್ಲಿ, ಗಿರಿಧರ ಕೊಂಡು ತಂದ ಪಳ್ಳನೆ ತಳತಳಿಸುತ್ತಿದ್ದ ಆ ಊಟದ ತಟ್ಟೆಯೇ ಮನೆಯ ಮೊದಲ ಸ್ಟೀಲ್ ಪಾತ್ರೆ ಆಗಿತ್ತು.

ಗಿರಿಧರನ ಎಲ್ಲಾ ತಮ್ಮಂದಿರಿಗು ಕನ್ನಡಿಯಂತೆ ಹೊಳೆಯುವ ಆ ತಟ್ಟೆಯ ಮೇಲೆ ಕಣ್ಣು ಬಿದ್ದು “ಒಂದಪ ನಿನ್ ತಣಿಗೆ ಕೊಡು ಅಣಯ್ಯ ನಾವು ಉಂಡು ಕೊಡ್ತಿವಿ” ಎಂದು ಗೋಗರೆದು ಸಾಕಾಗಿ, ಕೊನೆಗೆ ಅವ್ವನ ಕೈಲು ಕೇಳಿಸಿ ನೋಡಿದರು ಏನು ಪ್ರಯೋಜನವಾಗಲಿಲ್ಲ.  ತಮ್ಮಂದಿರ ಯಾವ ಕೋರಿಕೆಗೂ ಕರಗದ  ಗಿರಿಧರ  ಎಲ್ಲರ ಹೊಟ್ಟೆ ಉರಿಸುವಂತೆ ಮನೆಯ ತುಂಬಾ ಆ ತಟ್ಟೆಹಿಡಿದು ಓಡಾಡುತ್ತಾ ಎದೆಸೆಟಿಸಿ ಉಂಡು  ಕೈ ತೊಳೆದು, ಮರಳಿ ಆ ತಣಿಗೆಯನ್ನು  ತನ್ನ ಟ್ರಂಕಿಗೆ ಸೇರಿಸಿ ಬೀಗ ಜಡಿದು ಬಿಡುತ್ತಿದ್ದ. ಆ ತಟ್ಟೆಯನ್ನು ಮುಟ್ಟಿ ನೋಡಲು ಕೂಡ ಯಾರಿಗೂ ಅನುಮತಿ ಇರಲಿಲ್ಲ.

ಹೀಗಿರಲಾಗಿ ಒಂದು ದಿನ ರಾತ್ರಿ, ಕೆಲಸ ಮುಗಿಸಿ ತಡವಾಗಿ ಮನೆಗೆ ಬಂದ ಗಿರಿಧರ, ಬಟ್ಟೆ ಬದಲಾಯಿಸಿ ಕೈ ಕಾಲು ಮುಖ ತೊಳೆದು ಊಟದ ತಟ್ಟೆ ತೆಗೆದುಕೊಳ್ಳಲು  ಟ್ರಂಕಿನ ಬೀಗ ತೆಗೆದ. ತನ್ನ ಎಲ್ಲಾ ಬಟ್ಟೆ ಬರೆಗಳನ್ನು ಕಿತ್ತು ಕೆದರಾಡಿದರು  ಅಲ್ಲಿ ತಟ್ಟೆ ಮಾತ್ರ ಕಾಣಲಿಲ್ಲ. ನಿದ್ದೆಯಲ್ಲಿ ತೇಲುತ್ತಿದ್ದ ತಮ್ಮಂದಿರ ಅಂಡಿನ ಮೇಲೆ ನಾಲ್ಕು ಬಿಟ್ಟು ಎಲ್ಲರ ಕಣ್ಣು ಬಿಡಿಸಿ ಪೋಲಿಸರಂತೆ ವಿಚಾರಣೆಗಿಳಿದ. ಗಿರಿಧರನ ಗೂಳಿಯಂತಹ ಕೆಂಗಣ್ಣು ನೋಡಿಯೇ  ನಡುಗುತ್ತಿದ್ದ ತಮ್ಮಂದಿರು ತಾವು ತೆಗೆದುಕೊಂಡಿಲ್ಲವೆಂದು  ಪರಿಪರಿಯಾಗಿ  ಗೋಳಾಡಿ,  ಕಾಲಿಡಿದು ಅವನ  ಕಬ್ಬಿಣದಂತಹ ಕೈ ಹೊಡೆತದಿಂದ ತಪ್ಪಿಸಿಕೊಂಡರು. 

ಈಗ ಗಿರಿಧರನ ಕೋಪವೆಲ್ಲಾ ಅವ್ವನೊಂದಿಗೆ ಒಳ ಕೋಣೆಯಲ್ಲಿ ಮಲಗಿದ್ದ ಗಂಗೆಯ ಕಡೆಗೆ ತಿರುಗಿತು. ದಾಪುಗಾಲಿಡುತ್ತಾ ಒಳಬಂದು ತಲೆ ತುಂಬ ಕಂಬಳಿ ಗುಬುರಾಕಿಕೊಂಡು ಮಲಗಿದ್ದ ಗಂಗೆಯ ಕಂಬಳಿಯನ್ನು ಸರಕ್ಕನೆ ಎಳೆದು ಒಂದು ಬದಿಗೆಸೆದ. “ಏಳಣೆ ಮ್ಯಾಕೆ ನಾಟುಕಾರ್ ಲೌಡಿ. ಏನು ಗೊತ್ತಿಲ್ದವ್ಳಂಗೆ ಬಿದ್ಕೊಂಡಿದ್ದು ಸಾಕು ಈಗ ನನ್ನ ತಣ್ಗೆ ಕೊಟ್ರೆ ಸರಿ ಇಲ್ಲ ಅಂದ್ರೆ ನಿನ್ ಕತೆ ನೆಟ್ಕಿರಕಿಲ ನೋಡು” ಎಂದು ಚೀರಿದ. ನಿದ್ದೆಯ ಮಂಪರಿನಲ್ಲಿದ್ದ ಗಂಗೆಗಾಗಲಿ, ಅವ್ವನಿಗಾಗಲಿ ಅವನ ಮಾತುಗಳು  ಒಂದೂ ಅರ್ಥವಾಗದೆ ದಡಬಡಿಸಿ ಎದ್ದು ಒಬ್ಬರ ಮುಖವನ್ನೊಬ್ಬರು ಮಿಕಿಮಿಕಿ ನೋಡಿದರು. 

 ವಾರ ಎನ್ನುವುದರೊಳಗೆ ಗಂಡನ ಮನೆ ಸೇರಬೇಕಾಗಿದ್ದ ಗಂಗೆಯೇ ತನ್ನ ಊಟದ ತಟ್ಟೆ ಕದ್ದು, ಮುಚ್ಚಿಟ್ಟು ಕೊಂಡಿದ್ದಾಳೆ ಎಂದು ಅದಾಗಲೇ ನಿರ್ಧರಿಸಿ ಬಿಟ್ಟಿದ್ದ ಗಿರಿಧರ, “ಮಾನ್ಗೆಟೌಳೆ ನನ್ನ್ ತಣ್ಗೆನ ಗಂಡುನ್ ಮನೆಗೆ ಹೊತ್ಕೊಂಡ್ ಹೊಂಟಿದ್ಯಂತ ನನ್ಗೊತ್ತು. ಬೆಳಗ್ಗೆ ವಳ್ಗೆ ನನ್ ತಣ್ಗೆನ ನನ್ ಟ್ರಂಕಲಿಟ್ರೆ ಸರಿ.. ಇಲ್ಲ ಅಂದ್ರೆ ನಿನ್ ಗತಿ ಗೋವಿಂದ ಅನ್ನುಸ್ಬುಡ್ತಿನಿ” ಎಂದು ಹಾರಾಡಿ ಬೋರಾಡಿ ಹೊಟ್ಟೆಗೆ ಇಟ್ಟನ್ನು ಹಾಕಿಕೊಳ್ಳದೆ ಬುಸುಗುಟ್ಟುತ್ತಾ ಬಿದ್ದುಕೊಂಡ.

ಅದಾಗಲೇ ಗಂಗೆಯ ಮದುವೆ ವಿಷಯದಲ್ಲಿ ಅಪ್ಪ ಅಣ್ಣಂದಿರ ನಡುವೆ ರಣರಂಗವಾಗಿ ಆಗಷ್ಟೇ ಎಲ್ಲವೂ ತಣ್ಣಗಾಗತೊಡಗಿತ್ತು. ಇನ್ನೇನು ಮದುವೆಯ ತಯಾರಿ ಆರಂಭವಾಯಿತು ಎನ್ನುವಾಗ ಗಿರಿಧರ ಹೀಗೆ ಹೊಸ ವರಾತ ತೆಗೆದುಕೊಂಡು ಕೂತಿದ್ದು ಗಂಗೆಯೊಳಗೆ ಕಸಿವಿಸಿ ಉಂಟುಮಾಡಿತು. ಯಾವುದಕ್ಕೂ ಜಗ್ಗದ ಗಿರಿಧರನ ಮೊಂಡುತನದ ಬಗ್ಗೆ ಅರಿತಿದ್ದ ಗಂಗೆ  ಏನಾದರಾಗಲಿ ಅವನ ಊಟದ ತಟ್ಟೆಯನ್ನು ಹುಡುಕಿ ಈ ಆರೋಪದಿಂದ ಮುಕ್ತಳಾಗಬೇಕೆಂದು ತೀರ್ಮಾನಿಸಿದಳು.

ಗಿರಿಧರನಿಂದ ಒಂದೆರಡು ದಿನ ಸಮಯ ತೆಗೆದು ಕೊಂಡ ಗಂಗೆ, ಒಂದು ಕಡೆಯಿಂದ ಮನೆಯ ಮೂಲೆ ಮುಡುಕಲನ್ನೆಲ್ಲಾ ಜಾಲಾಡಿ ನೋಡಿದರೂ ಎಲ್ಲಿಯೂ ತಟ್ಟೆ ಕಾಣಲಿಲ್ಲ. ಲಕ್ಷ್ಮಿಯ ಸಾವಿನ ನಂತರ ಬಂದೊದಗಿದ ಬಡತನದಿಂದಾಗಿ, ಅಣ್ಣಂದಿರು ದಾರಿ ತಪ್ಪಿ ಒಳಗೊಳಗೆ ಮನೆಯ ದವಸ ಧಾನ್ಯ ಇನ್ನಿತರ ಸಣ್ಣಪುಟ್ಟ ವಸ್ತುಗಳನ್ನೆಲ್ಲ ಮಾರಿ ತಮ್ಮ ಆಸೆ ಪೂರೈಸಿಕೊಳ್ಳುವ ಒಳಹಾದಿ ಹಿಡಿದಿದ್ದು ಗಂಗೆಗೂ ಗೊತ್ತಿತ್ತು. ಸ್ವತಃ ಗಂಗೆಯೇ ಮೂಗುನತ್ತು ಕೊಡಿಸದ ಅವ್ವನ ಬಗ್ಗೆ ಕೋಪಗೊಂಡು, ಆಚೆಮನೆಯ ಸೋದರತ್ತೆಗೆ ಕದ್ದು ನಾಕು ಸೇರು ಜೋಳ ಮಾರಿ, ಒಂದು ಮೂಗುನತ್ತು ಖರೀದಿಸಿ ಏರಿಸಿ ಕೊಂಡಿದ್ದಳು. ಕೇಳಿದ ಅವ್ವನಿಗೆ “ಆಚೆಮನೆ ಅವ್ವ ಕೊಡ್ಸ್ತು” ಎಂದು ಸುಳ್ಳು ಹೇಳಿ ಪಾರಾಗಿದ್ದಳು. ಅಣ್ಣಂದಿರಿಂದಲೇ ಈ ಚಾಳಿ ಕಲಿತಿದ್ದ ಗಂಗೆಗೆ ಚಂದ್ರಹಾಸ ಮತ್ತು ನಂಜಪ್ಪನ ಮೇಲೆಯೇ ಬಲವಾಗಿ ಅನುಮಾನ ಮೂಡಿತ್ತು. 

ಕೂಡಲೇ ಅಕ್ಕ ಪಕ್ಕದ ಮನೆಗಳಿಗೆಲ್ಲ ಹೋಗಿ “ಅಪ್ಪಿತಪ್ಪಿ ಏನಾರ ನಮ್ದೊಂದು ಸ್ಟೀಲಿನ್ ತಣ್ಗೆ  ನಿಮ್ಮನಿಗ್ ಬಂದೈತ” ಎಂದು ವಿಚಾರಿಸಿಕೊಂಡು ತಿರುಗಿದಳು. ಕೆಲವರು ನಯವಾಗಿಯೇ “ಇಲ್ಲ ಕನವ್ವ ಗಂಗೂ”ಎಂದು ಹೇಳಿದರೆ ಇನ್ನು ಕೆಲವು ಬಜಾರಿ ಹೆಂಗಸರು ಮೈ ಮೇಲೆ ದೆವ್ವ ಬಂದವರಂತೆ “ಅಯ್ಯೋ ನಿನ್ನ್ ಕುಕ್ರುಸ ನಮ್ಮುನ್ನೇನು ಕಳ್ರು ಕದಿಮ್ರ ಅನ್ಕೊಂಡಿದ್ದಿಯ ನಮ್ಮನೆಗೆ ಆ ಸ್ಟೀಲಿನ್ ತಣ್ಗೆ ಕೇಳ್ಕೊಂಡು ಬಂದಿದಿಯಲ್ಲ ಎಷ್ಟ್ ಧೈರ್ಯ ನಿಂಗೆ” ಎಂದು ಬಾಯಿ ಮಾಡಿ ಕಳಿಸಿದರು.

 ಇಷ್ಟಕ್ಕೆ ಸುಮ್ಮನಾಗದ ಗಂಗೆ, ಮನೆಯ ಮುಂದೆ ಹೋಗುವವರಿಗೆಲ್ಲಾ  ಕಳೆದು ಹೋಗಿರುವ ಸ್ಟೀಲ್ ತಟ್ಟೆಯ ಕಥೆ  ಹೇಳತೊಡಗಿದಳು. ಹೀಗೆ ಅವತ್ತು ಮಧ್ಯಾಹ್ನ ಹೊಳೆಗೆರೆಯಿಂದ ಬಟ್ಟೆ ತೊಳೆದುಕೊಂಡು ಬರುತ್ತಿದ್ದ ಮೇಗಳ ಬೀದಿಯ ಸರೋಜಿಯನ್ನು ನಿಲ್ಲಿಸಿ, ಇದೇ ಕಥೆಯನ್ನು ಪುನರಾವರ್ತಿಸಿದಳು. ಇದನ್ನೆಲ್ಲಾ ಕೇಳಿಸಿಕೊಂಡ ಸರೋಜಿ ” ನೆನ್ನೆ ದಿನ ನಿಮ್ಮ್ ನಂಜಪ್ಪಣ್ಣ ಎದ್ರು ಮನೆ ಮುತ್ತಪ್ಪಣ್ಣುಂಗೆ ಒಂದು ಪೇಪರ್ನಲ್ಲಿ ಏನೋ ಸುತ್ತ್ಕೊಡ್ತಿದ್ದ್ ಕಂಡಂಗಾತು ಗಂಗೂ ಒಂದಪ ಇಚಾರಿಸ್ ನೋಡು.  ನಾನ್  ಹೇಳ್ದೆ ಅಂತ ಮಾತ್ರ ಹೇಳ್ಬುಟ್ಟಿ ತಾಯಿ, ಆಮೇಲೆ ನಿಮ್ಮಣ್ಣ ನನ್ ಗಾಳಿ ಬುಡ್ಸ್ಬಟ್ಟಾನು” ಎಂದು ಹೇಳಿ ಹೋದಳು. 

ಚಾಲಾಕಿ ಗಂಗಮ್ಮನಿಗೆ ಇಷ್ಟು ಸುಳಿವು ಸಾಕಾಗಿತ್ತು. ಕೂಡಲೆ ನಟನೆಗೆ ಅಣಿಯಾದಳು. ಮುಸ್ಸಂಜೆ ದೇವರಿಗೆ ದೀಪ ಇಟ್ಟವಳೆ ಹಣೆಗೆ ವಿಭೂತಿ ಪಟ್ಟೆ ಬಳಿದು ಅದರ ನಡುವೆ ದೊಡ್ಡದಾಗಿ ಕೆಂಪನೆಯ ಕುಂಕುಮವನ್ನು ತೀಡಿಕೊಂಡಳು. ಕೆನ್ನೆಯ ಎರಡು ಅಂಚುಗಳಿಗು ದೊಡ್ಡದಾಗಿ ಅರಿಶಿನ ಬಳಿದು ಕೊಂಡು ಅವ್ವ ಕಟ್ಟಿಟ್ಟಿದ್ದ ಮಲ್ಲಿಗೆ ದಂಡೆಯನ್ನು ತಲೆಗೇರಿಸಿದಳು.  ಒಂದು ದೊಡ್ಡ ಕಂಚಿನ ಗಂಗಾಳಕ್ಕೆ ಅಕ್ಕಿ ತುಂಬಿಸಿ ದೇವರ ಮುಂದಿಟ್ಟಿದ್ದ ಕಳಸವನ್ನು ಅದರೊಳಗೆ ಇಟ್ಟಳು. ಕಳಸದ ತೆಂಗಿನ ಕಾಯಿಗೆ ಅರಿಶಿಣ ಕುಂಕುಮ ವಿಭೂತಿಗಳನ್ನು ಎದ್ದು ಕಾಣುವಂತೆ ತೀಡಿ, ಬಗೆಬಗೆಯ ಹೂವುಗಳಿಂದ ವಿಚಿತ್ರವಾಗಿ ಅಲಂಕರಿಸಿ ಮೇಗಳ ಮನೆಯ ಮುತ್ತಣ್ಣನ ಮನೆ ಕಡೆ ಹೊರಟಳು. 

ಬಾಗಿಲು ತೆರೆದ ಮುತ್ತಪ್ಪಣ್ಣನ ಮುಂದೆ ನಿಂತ ಗಂಗೆ “ಅರಸಿಕಟ್ಟೆ ಅಮ್ಮುನ್ ಪಾದುಕ್ಕೆ ಶರಣೋ ಶರಣು” ಎಂದು ದೊಡ್ಡ ಕಂಠದಲ್ಲಿ ಉದ್ಘರಿಸಿದಳು. ಕಳವಳದಿಂದಲೇ ಗಂಗೆಯನ್ನು ನೋಡುತ್ತಿದ್ದ ಮುತ್ತಪ್ಪಣ್ಣ “ಏನವ್ವ ಗಂಗೂ ಇದು” ಎಂದು ಕೇಳಿದ. ಇದಕ್ಕಾಗಿ ಕಾದವಳಂತೆ ಗಂಗೆ “ಮುತ್ತಪ್ಪಣ್ಣ ನಮ್ಮ ಊಟದ್ದು ಸ್ಟೀಲ್ ತಣಿಗೆ ಕಳೆದು ಹೋಗ್ಬುಟೈತೆ ಅದಕ್ಕೆ ಅರ್ಸಿಕಟ್ಟೆ ಅಮ್ಮುನ್ಗೆ ಹರಕೆ ಮಾಡ್ಕೊಂಡು ಈ ಕಳಸ ತಂದಿದಿನಿ. ನಮ್ಮನೇಲಿ ನಿಮ್ ತಣಿಗೆ ಇಲ್ಲ ಅಂತ ಈ ಕಳಸ ಹಿಡ್ಕೊಂಡು ಪ್ರಮಾಣ ಮಾಡ್ಬುಡಿ  ಸಾಕು ನಾನು ಮುಂದಿನ ಮನೆಗೆ ಹೋಯ್ತಿನಿ” ಎಂದು ಹೇಳಿದಳು. 

ಗಾಬರಿಯಾದ ಮುತ್ತಪ್ಪಣ್ಣ ತಡವರಿಸುತ್ತಾ “ಅಲ್ಲ ಕನ್ಮಗ ಯಾರೊಬ್ರು ಮನೆಗೂ ಹೋಗ್ದೆ ನಮ್ಮನಿಗ್ ಬಂದು ಹಿಂಗ್ ಕೇಳ್ತಿದಿಯಲ್ಲ ಸರಿಯಾ” ಎಂದು ಕೇಳಿದ. ಆ ಮಾತಿಗೆ ಗಂಗೆ “ಇಲ್ಲ ಕನ್ ಮುತ್ತಪ್ಪಣ್ಣ ಕೆಳ್ಳೆ ಬೀದಿಯಿಂದ ಮ್ಯಾಗ್ಲು ಬೀದಿ  ಗಂಟ ಎಲ್ರು ಮನೆಯಾಗು ಇದ್ನ ಹಿಡ್ದು ಪ್ರಮಾಣ ಮಾಡವ್ರೆ” ಎಂದು ಹೇಳಿದಳು. ಮುತ್ತಣ್ಣನಿಗೆ ಗಂಗೆಯ ಮಾತಿನ ಮೇಲೆ ನಂಬಿಕೆ ಬಾರದೆ “ಹಂಗಿದ್ರೆ ಹೋಗಿ ನಮ್ಮ ಆಚಿಚೆ ಮನೆಲಿ ಮುಟ್ಟುಸ್ಕೊಂಡ್ ಬಾ ಆಮೇಲೆ ನಾನ್ ಮುಟ್ಟಿ ಪ್ರಮಾಣ ಮಾಡ್ತಿನಿ” ಎಂದು ಹೇಳಿ ಕಳಿಸಿದ. ಗಂಗೆ ಕೂಡಲೇ ಕಾಂತಕ್ಕ ಜಲಜಕ್ಕನ ಮನೆಗೆ ಹೋದಳು. ಆ ಎರಡು ಮನೆಯವರು ಹೊರಗೆ ಬಂದು ಕಳಸಕ್ಕೆ ನಮಸ್ಕರಿಸಿ ಗಂಗೆ ಹೇಳಿಕೊಟ್ಟಂತೆ “ನಮ್ಮನೆಲಿ ನಿಮ್ಮ ಯಾವ ತಣಿಗೆಯೂ ಇಲ್ಲ ಕನವ್ವ” ಎಂದು ಪ್ರಮಾಣ ಮಾಡಿ ಕಳಿಸಿದರು. ಇದನ್ನೆಲ್ಲಾ ನೋಡುತ್ತಾ ಬಾಗಿಲಲ್ಲೇ ನಿಂತಿದ್ದ ಮುತ್ತಪ್ಪಣ್ಣ ಗಂಗೆ ತನ್ನತ್ತ ಬರುವುದನ್ನು ಕಂಡು ಚಡಪಡಿಸುತ್ತಾ ಒಳಗೆ ಹೋದ.

 “ಓ.. ಮುತ್ತಪ್ಪಣ್ಣ” ಎಂದು ಜೋರಾಗಿ ಕೂಗುತ್ತಾ ಹತ್ತಿರ ಬಂದ ಗಂಗೆ, ಈಗ ನೀವು ಪ್ರಮಾಣ ಮಾಡಿ ಎಂದು ಕೇಳಿದಳು. ಗಂಗೆಯನ್ನು ಒಳಗೆ ಕರೆದು ಕೂರಿಸಿಕೊಂಡ ಮುತ್ತಪ್ಪಣ್ಣ ಉಗುಳು ನುಂಗುತ್ತಾ “ಅಲ್ಲ್ ಕನ್ಮಗ ನಿಮ್ಮನೆ ಗಂಡ್ಮಕ್ಕಳು ಸರಿಯಾಗಿಲ್ಲ ಅಂದ್ರೆ ನಾವೇನ್ ಮಾಡಕ್ಕಾದಾದು ಹೇಳು. ನಿಮ್ಮ ನಂಜಪ್ಪ  ಅರ್ಜೆಂಟಾಗಿ ನಾಲಕ್ರುಪಾಯಿ ದುಡ್ಬೇಕು ಅಂತ ಹೇಳಿ ಈ ಸ್ಟೀಲ್ ತಣಿಗೆ ತಂದು ಇಟ್ಟೋಗವ್ನೆ. ನಾವೇನಾದ್ರೂ ತಂದು ಕೊಡು ಅಂದಿದ್ವ. ಇದ್ರಲ್ಲಿ  ನಮ್ ತೆಪ್ಪು ಏನಿದ್ದಾದು ಹೇಳ್ ಮಗ” ಎಂದು ಅಲವತ್ತು ಕೊಂಡು  ಈ ವಿಸ್ಯೆನ ಊರೋರು ಮುಂದೆ ಬಾಯ್ ಬುಡ್ಬ್ಯಾಡ ಕನವ್ವ. ಆ ನಾಕ್ರುಪಾಯ್ ತಂದು ಕೊಟ್ಟು ಈಗ್ಲೆ ತಕ್ಕೊಂಡೋಗು ಕೊಟ್ಟೇನು”  ಎಂದು ಹೇಳಿದ. 

ಹೊಲದಿಂದ ದನ ಹೊಡೆದುಕೊಂಡು ಇತ್ತಲೇ ಬರುತ್ತಿದ್ದ ಬೋಪಯ್ಯ, ಮಗಳ ಈ ಅವತಾರವನ್ನು ಕಂಡು ಕೋಪಗೊಂಡು ” ಇದೇನಿದು ನಿನ್ನ ಅವೌತಾರ ಇನ್ನೊಂದು ವಾರುಕ್ಕೆ ನಿನ್ ಮದ್ವೆ ನೆನಪೈತ…. ಮೊದ್ಲು ನಡಿ ಮನೆಗೆ” ಎಂದು ಗದರಿದ. ಅಪ್ಪನ ಮುಂದೆ ತಲೆ ತಗ್ಗಿಸಿ ನಿಂತ ಗಂಗೆ ಮೃದುವಾಗಿ ನಡೆದ ಘಟನೆಯನ್ನೆಲ್ಲ ಸವಿವರವಾಗಿ ಹೇಳಿದಳು.  “ಅವ್ವನ ಕುರುಡು ಮೋಹದ ಕುಮ್ಮಕ್ಕಿನಲ್ಲಿ ದಾರಿ ತಪ್ಪಿ ಕೈಮೀರಿ ನಿಂತ ಗಂಡು ಮಕ್ಕಳನ್ನು ಕಂಡು ಬೇಸರಿಸಿದ ಬೋಪಯ್ಯ, ತನ್ನ ಜೇಬಿನಲ್ಲಿದ್ದ ಐದು ರೂಪಾಯಿಯನ್ನು ಮುತ್ತಪ್ಪಣ್ಣನ ಕೈಗಿಟ್ಟು “ನೀವು ಹಿರಿಯೋರಾಗಿ ಅವನಿಗೆ ಬುದ್ಧಿ ಹೇಳೋದ್ ಬುಟ್ ಹಿಂಗ್ ಮಾಡಿದಿರಲ ಮುತ್ತಣ್ಣ” ಎಂದು ಗದ್ಗತಿತನಾಗಿ ನುಡಿದು ತನಗಾಗಿ ಬೀದಿಯಲ್ಲೇ ಕಾದು ನಿಂತ ಹಸುಗಳೊಡನೆ ತಾನು ಒಂದು ಹಸುವಾಗಿ ಮನೆಯ ಕಡೆ ಹೆಜ್ಜೆಹಾಕಿದ.‌

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌

ಇದನ್ನು ಓದಿದ್ದೀರಾ? ಪುಂಡು ಗಂಗೆಯ ಘನಂದಾರಿ ಕೆಲಸ

You cannot copy content of this page

Exit mobile version