ಬೆಂಗಳೂರಿನ ಖಾಸಗಿ ಶಾಲೆಯೊಂದರ ಪ್ರಾಂಶುಪಾಲನೊಬ್ಬ ಅದೇ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣವನ್ನು ಉಲ್ಲೇಖಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವಿಟ್ಟರ್ ಖಾತೆಯ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಇದೇ ಟ್ವಿಟ್ ಶಾಸಕ ಯತ್ನಾಳ್ ಗೆ ತಿರುಗುಬಾಣವಾಗಿ ಪರಿಣಮಿಸುವ ಸಾಧ್ಯತೆ ಎದುರಾಗಿದೆ.
ಇದು ಪೋಕ್ಸೋ ಕಾಯ್ದೆ ಅಡಿಯ ಪ್ರಕರಣವಾಗಿದೆ. ಕೃತ್ಯ ಎಸಗಿದ 65 ವರ್ಷದ ಪ್ರಾಂಶುಪಾಲನನ್ನು ಪಕ್ಷಾತೀತವಾಗಿ ನಾವೆಲ್ಲರೂ ಈ ಪ್ರಕರಣಗಳ ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸುವವರೆಗೂ ಹೋರಾಡಬೇಕಿದೆ ಎಂದು ಟ್ವಿಟ್ಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಟ್ವಿಟ್ ಮಾಡುವ ಭರದಲ್ಲಿ ಶಾಸಕ ಯತ್ನಾಳ್ ಮಾಡಿರುವ ಒಂದು ತಪ್ಪು ಈಗ ಅವರಿಗೇ ಉರುಳಾಗುವ ಸಾಧ್ಯತೆ ಎದುರಾಗಿದೆ.
ಕಾಂಗ್ರೆಸ್ ಪಕ್ಷದ ಕಾನೂನು ಮತ್ತು ಮಾಹಿತಿ ಹಕ್ಕು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿರುವ ಟ್ವಿಟ್ ನ್ನು ಶೇರ್ ಮಾಡಿ ಪೋಕ್ಸೋ ಕಾಯ್ದೆ ಅಡಿ ಅತ್ಯಾಚಾರ ಸಂತ್ರಸ್ಥೆಯ ಹೆಸರು ಬಹಿರಂಗಪಡಿಸುವುದು ಅಪರಾಧ. ಶಾಸಕನಾಗಿ ಬೇಜವಾಬ್ದಾರಿಯಿಂದ ಎಫ್ಐಆರ್ ಮತ್ತು ಸಂತ್ರಸ್ತೆ ಹೆಸರು ಬಹಿರಂಗಪಡಿಸಿರುವ ಯತ್ನಾಳ್ ವಿರುದ್ಧ ತಾವು ಕೂಡಲೇ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಬೇಕು ಎಂದು ಬೆಂಗಳೂರು ಪೊಲೀಸ್ ಕಮೀಷನರ್ ಅವರನ್ನು ಉಲ್ಲೇಖಿಸಿ ಟ್ವಿಟ್ ಮಾಡಿದ್ದಾರೆ.
ಯತ್ನಾಳ್ ಮಾಡಿರುವ ಟ್ವಿಟ್ ನಲ್ಲಿ ಪ್ರಕರಣದ FIR ಪ್ರತಿಯನ್ನು ಶೇರ್ ಮಾಡಿದ್ದಾರೆ. ಅಷ್ಟೆ ಅಲ್ಲದೆ ತಮ್ಮ ಟ್ವಿಟ್ ನಲ್ಲಿ ಸಂತ್ರಸ್ತೆಯ ಹೆಸರನ್ನೂ ಉಲ್ಲೇಖಿಸಿ ಬರೆದಿದ್ದಾರೆ.
ಈ ಬಗ್ಗೆ ಪೀಪಲ್ ಮೀಡಿಯಾ ಜೊತೆಗೆ ಮಾತನಾಡಿದ ವಕೀಲರಾದ ಸೂರ್ಯ ಮುಕುಂದರಾಜ್, “ದೆಹಲಿಯ ನಿರ್ಭಯಾ ಪ್ರಕರಣದ ನಂತರ ಸುಪ್ರೀಂಕೋರ್ಟ್ ಯಾವುದೇ ಕಾರಣಕ್ಕೂ ಅತ್ಯಾಚಾರ ಸಂತ್ರಸ್ತೆಯ ಹೆಸರು, ವಿಳಾಸ, FIR ಪ್ರತಿಯನ್ನು ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ಆಡಳಿತ ವ್ಯವಸ್ಥೆ ಕೂಡಾ ಬಹಿರಂಗವಾಗಿ ಉಲ್ಲೇಖಿಸುವಂತಿಲ್ಲ. ಇದು ಕಾನೂನಿನ ಅಡಿಯಲ್ಲಿ ಅಪರಾಧ ಎಂದೇ ಪರಿಗಣಿಸಲಾಗಿದೆ. ಇತ್ತೀಚೆಗೆ ದೊಡ್ಡ ಮಟ್ಟಕ್ಕೆ ಸುದ್ದಿಯಾಗಿದ್ದ ಮುರುಘಾಮಠ ಪ್ರಕರಣದಲ್ಲೂ ಸಹ ಸಂತ್ರಸ್ತರ ಹೆಸರು ಬಹಿರಂಗಪಡಿಸಿಲ್ಲ.” ಎಂದು ಹೇಳಿದರು.
“ಮೊನ್ನೆ ಮೊನ್ನೆ ಕೂಡಾ ಮಣಿಪುರದಲ್ಲಿ ದೊಡ್ಡ ಸುದ್ದಿ ಆದ ಅತ್ಯಾಚಾರ ಸಂತ್ರಸ್ತೆ ಹೆಸರುಗಳನ್ನು X ಮತ್ತು L ಎಂದು ಬಳಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಹೀಗಿರುವಾಗ ಒಬ್ಬ ಶಾಸಕನಾಗಿರುವ ವ್ಯಕ್ತಿ ಕಾನೂನಿನ ಪರಿಜ್ಞಾನವಿಲ್ಲದೆ, ಸೂಕ್ಷ್ಮ ಸಂವೇದನೆ ಇಲ್ಲದೆ ವರ್ತಿಸಿರುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಈ ವ್ಯಕ್ತಿ ಈಗ ವಿರೋಧ ಪಕ್ಷದ ನಾಯಕನಾಗಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇಷ್ಟೂ ಅರಿವಿರದವರು ವಿರೋಧ ಪಕ್ಷದ ಸ್ಥಾನಕ್ಕೆ ನ್ಯಾಯ ಒದಗಿಸುವರೇ? ಎಂದು ಸೂರ್ಯ ಮುಕುಂದರಾಜ್ ಆರೋಪಿಸಿದ್ದಾರೆ.
ಅಷ್ಟೆ ಅಲ್ಲದೆ ‘ಅತ್ಯಾಚಾರ ಆಗಿರುವ ಅಡಿಯಲ್ಲಿ ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು ಎಂಬುದು ನಮ್ಮ ಆಗ್ರಹ ಕೂಡಾ. ಆದರೆ ಅತ್ಯಾಚಾರಿ ಹಿಂದೂಯೇತರ ಧರ್ಮದವನಾಗಿದ್ದ ಕಾರಣಕ್ಕೆ ಆತನ ಮೇಲೆ ಕ್ರಮಕ್ಕೆ ಆಗ್ರಹಿಸಿರುವ ಶಾಸಕ ಯತ್ನಾಳ್ ಈ ಬಗ್ಗೆ ಕನಿಷ್ಟ ಪ್ರಜ್ಞೆ ಇಟ್ಟು ಟ್ವಿಟ್ ಮಾಡಬೇಕಿತ್ತು. ಈ ಬಗ್ಗೆ ಬೆಂಗಳೂರು ಕಮೀಷನರ್ ಗೆ ಟ್ವಿಟ್ಟರ್ ಮೂಲಕ ಆಗ್ರಹಿಸಿದ್ದೇನೆ. ಇದರ ಹೊರತಾಗಿ ಲಿಖಿತ ದೂರನ್ನೂ ದಾಖಲಿಸುತ್ತೇನೆ’ ಎಂದು ಸೂರ್ಯ ಮುಕುಂದರಾಜ್ ಪ್ರತಿಕ್ರಯಿಸಿದ್ದಾರೆ.