ಚಾಮರಾಜನಗರ: ಭಾರತ ಐಕ್ಯತಾ ಯಾತ್ರೆಯಲ್ಲಿ ಪೇ ಸಿಎಂ ಟಿ ಶರ್ಟ್ ಧರಿಸಿದ್ದ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಪೊಲೀಸ್ ದಬ್ಬಾಳಿಕೆ ನಡೆಸಿರುವುದರ ಕುರಿತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪೇ ಸಿಎಂ ಟಿ ಶರ್ಟ್ ಧರಿಸಿದ್ದ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಚಿಕ್ಕರೋಗಿ ಗ್ರಾಮದ ಯುವಕ ಅಕ್ಷಯ್ ಕುಮಾರ್ ಸಿಂದಗಿ ಅವರ ಮೇಲೆ ಹಲ್ಲೆ ನಡೆಸಿದ ಪೊಲೀಸರ ದಬ್ಬಾಳಿಕೆ ಖಂಡನೀಯ. ಭ್ರಷ್ಟಾಚಾರ ಮಾಡುವುದು ಅಪರಾಧವೇ ಹೊರತು ಅದರ ವಿರುದ್ಧ ಧ್ವನಿ ಎತ್ತುವುದು ಅಪರಾಧವಲ್ಲ ಎಂದು ಕಿಡಿಕಾರಿದ್ದಾರೆ.
ಅಷ್ಟಾಗಿಯೂ ಪೊಲೀಸರು ರಸ್ತೆಯಲ್ಲೇ ಟಿ ಶರ್ಟ್ ಬಿಚ್ಚಿಸಿ ಆತನ ಮೇಲೆ ಹಲ್ಲೆ ನಡೆಸಿರುವುದು ಅಮಾನವೀಯ. ಪೊಲೀಸರಿಗೆ ಈ ಅಧಿಕಾರ ಕೊಟ್ಟವರು ಯಾರು? ಇವರೇನು ಪೊಲೀಸರೋ ಅಥವಾ ಪುಂಡರೋ? ಮಾನ್ಯ ಮುಖ್ಯಮಂತ್ರಿಗಳು ಹಲ್ಲೆ ನಡೆಸಿದ ಪೊಲೀಸರನ್ನು ಕೂಡಲೇ ಅಮಾನತು ಮಾಡಬೇಕು. ಇಂತಹ ದುಷ್ಕೃತ್ಯಗಳು ಇಲ್ಲಿಗೇ ಕೊನೆಯಾಗಬೇಕು ಎಂದು ಎಂ.ಬಿ.ಪಾಟೀಲ್ ಆಗ್ರಹಿಸಿದ್ದಾರೆ.