1902 ರಲ್ಲಿ ಉಳ್ಳಾಲ ಮಂಜುನಾಥ್ ಮಲ್ಯ ಮತ್ತು ರುಕ್ಮಾ ಬಾಯಿ ದಂಪತಿಗೆ ಜನಿಸಿದ ಉಳ್ಳಾಲ ಶ್ರೀನಿವಾಸ ಮಲ್ಯರವರು ಮಂಗಳೂರಿನಲ್ಲಿ ಜನಿಸಿದರು ಮತ್ತು ಅಲ್ಲಿಯೇ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು.
1920 ರಲ್ಲಿ ಮಂಗಳೂರಿಗೆ ಗಾಂಧೀಜಿಯವರ ಖಿಲಾಫತ್ ಭೇಟಿಯು, ಯುವಕ ಶ್ರೀನಿವಾಸ್ ಮಲ್ಯರ ಮೇಲೆ ಹೆಚ್ಚಿನ ಪ್ರಭಾವ ಬೀರಿತ್ತು.ಆ ವೇಳೆಗಾಗಲೇ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಲು ನಿರ್ಧರಿಸಿದ್ದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಸ್ವಯಂಸೇವಕರಾಗಿದ್ದರು. ಮಲ್ಯರಲ್ಲಿದ್ದ ಅಪಾರ ಸಾಮರ್ಥ್ಯಗಳು, ಬುದ್ಧಿಶಕ್ತಿ ಮತ್ತು ನಿಷ್ಠೆಯ ಕೆಲಸದಿಂದಾಗಿ ಅವರನ್ನು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಯಿತು. ಅವರು, ಮಂಗಳೂರಿನ ಕಲಮಾದೇವಿ ಚಟ್ಟೋಪಾದ್ಯಾಯರಿಂದಲೂ ಪ್ರಭಾವಿತಗೊಂಡಿದ್ದರು. 1930 ರ ದಶಕದಲ್ಲಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರಿಂದ, ಅನೇಕ ಸಂದರ್ಭಗಳಲ್ಲಿ ಭೂಗತರಾಗಬೇಕಾಯಿತು. ಮಲ್ಯ ರವರು ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು ಮತ್ತು ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಜೈಲುವಾಸವನ್ನು ಅನುಭವಿಸಿದ್ದರು. ಗಾಂಧೀಜಿಯವರ ಖಾದಿ ಮತ್ತು ಗ್ರಾಮೋದ್ಯೋಗ, ದಲಿತರ ದೇವಾಲಯ ಪ್ರವೇಶ, ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಅನುಷ್ಠಾನಗೊಳಿಸುವುದು, ಅಸ್ಪೃಶ್ಯತೆ ನಿರ್ಮೂಲನೆ ಮುಂತಾದ ಕಾರ್ಯಕ್ರಮಗಳನ್ನು ಉತ್ತೇಜಿಸುವಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಶ್ರೀನಿವಾಸ್ ಮಲ್ಯರವರನ್ನು ದೆಹಲಿ ಸಮಿತಿಯ ಸಂವಿಧಾನ ಸಭೆಯ ಸದಸ್ಯರನ್ನಾಗಿ ನೇಮಿಸಲಾಯಿತು. 1948 ರಿಂದ ಅವರ ಮರಣದವರೆಗೂ ಮುಖ್ಯ ಸಚೇತಕರಾಗಿ ಕಾರ್ಯ ನಿರ್ವಹಿಸಿದರು. 1952 ರಲ್ಲಿ ದೇಶದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ, ಲಾಲ್ ಬಹದ್ದೂರ್ ಶಾಸ್ತ್ರಿಯವರೊಂದಿಗೆ ಪಕ್ಷದ ಕಾರ್ಯದರ್ಶಿಯಾಗಿ ನೇಮಕಗೊಂಡರು. ನಂತರ ಅವರು ಮಂಗಳೂರು ಉತ್ತರ ಕ್ಷೇತ್ರಕ್ಕೆ ಸಂಸದರಾಗಿ ನೇಮಕವಾದರು.
ಮಲ್ಯರವರು ತಮ್ಮ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದ್ದರು. ಅವರನ್ನು “ಆಧುನಿಕ ದಕ್ಷಿಣ ಕನ್ನಡ ಜಿಲ್ಲೆಯ ಪಿತಾಮಹ” ಎಂದು ಕರೆಯಲಾಗುತ್ತದೆ.