ಗಣಪತಿ ಪೂಜೆ ಲಿಂಗಾಯತರ ಸಂಸ್ಕೃತಿ ಅಲ್ಲ ಎಂದು ಹೇಳಿದ ಕೂಡಲೇ ಕೆಲ ಹಾರವರ ಮೆದುಳಲ್ಲಿ ಹಾವು ಹೊಕ್ಕಂತಾಗುತ್ತದೆ. ಅವತ್ತೂ ಈ ಪುರೋಹಿತರ ಆಚಾರ ಅನಾಚಾರಗಳನ್ನು ಧಿಕ್ಕರಿಸಿಯೇ ಲಿಂಗಾಯತ ಧರ್ಮ ಹುಟ್ಟಿದ್ದು. ಈಗಲೂ ಈ ಪುರೋಹಿತಶಾಹಿ ಮನಸ್ಥಿತಿಯವರ ಮತಾಂಧತೆಯನ್ನು ಧಿಕ್ಕರಿಸಿಯೇ ಲಿಂಗಾಯತ ಧರ್ಮವನ್ನು ಉಳಿಸಿ ಕೊಳ್ಳಬೇಕಿದೆ – ಶಶಿಕಾಂತ ಯಡಹಳ್ಳಿ
“ಕಾಲ್ಪನಿಕ ದೇವರು ಗಣಪತಿಯನ್ನು ಪೂಜಿಸುವುದು ಪ್ರಾರ್ಥಿಸುವುದು ನಮ್ಮ ಸಂಸ್ಕೃತಿ ಅಲ್ಲಾ, ಅದು ಮೌಢ್ಯಾಚರಣೆ. ಗಣಪತಿ ಪೂಜೆ ಸ್ತೋತ್ರ ಶ್ಲೋಕಗಳ ಬದಲಾಗಿ ವಚನಗಳನ್ನೇ ಪ್ರಾರ್ಥನೆಯಂತೆ ಪಠಿಸಬೇಕು..” ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ನವೆಂಬರ್ 1 ರಂದು ಸಾಣೆಹಳ್ಳಿಯಲ್ಲಿ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆ ಸಮಾರಂಭದಲ್ಲಿ ಹೇಳಿದ್ದೇ ತಡ ಸನಾತನಿಗಳ ಬುಡಕ್ಕೆ ಬಾಂಬ್ ಬಿದ್ದಂತಾಗಿದೆ.
ದೇವರುಗಳ ದೇವ, ವಿಘ್ನನಾಶಕ ಗಣಪತಿಯನ್ನೇ ಕಾಲ್ಪನಿಕ ದೇವರು ಎಂದು ನಿರಾಕರಿಸಿದರೆ, ಪೂಜೆ ಪ್ರಾರ್ಥನೆಗಳೇ ವ್ಯರ್ಥವೆಂದು ಹೇಳಿದರೆ ಈ ಹಿಂದುತ್ವವಾದಿ ಮತಾಂಧರು ಸುಮ್ಮನಿರಲು ಸಾಧ್ಯವೇ? ಹಲವು ದಿಕ್ಕುಗಳಿಂದ ವಿರೋಧಗಳ ಬಾಣಗಳು ತೂರಿ ಬರತೊಡಗಿದವು. ಹಿಂದೂಗಳ ಭಾವನೆಗಳಿಗೆ ಧಕ್ಕೆ ಆಯಿತೆಂದು ಧರ್ಮಾಂಧರು ಧರೆ ಹತ್ತಿ ಉರಿದಂತೆ ತಲ್ಲಣಿಸಿದರು. ಗಣಪತಿಗೆ ಅವಮಾನ ಅಂದ್ರೆ ಸುಮ್ಮನೇನಾ?
ವಿಷಭಟ್ಟನೆಂದೇ ಕುಖ್ಯಾತಿ ಪಡೆದ ವಿಷವಾಣಿ ಪತ್ರಿಕೆ ಸಂಪಾದಕನ ಸರ್ವಾಂಗಗಳಲ್ಲೂ ಕೋಮುಜ್ವಾಲೆ ಪ್ರಜ್ವಲಿಸಿತು. “ಸ್ವಾಮೀಜಿಯಾದವರು ಇಂತಹ ಉಪದ್ವ್ಯಾಪಿ ಹಾಗೂ ಅನರ್ಥಕಾರಿ ಹೇಳಿಕೆಗಳನ್ನು ಕೊಡುವುದನ್ನು ನಿಲ್ಲಿಸಬೇಕು. ಜನರ ನಂಬಿಕೆಗಳಿಗೆ ಧಕ್ಕೆ ತರುವ ಹುಡುಗಾಟಿಕೆ ಶೋಭೆ ತರುವುದಿಲ್ಲ. ಸಾಣೇಹಳ್ಳಿ ಸ್ವಾಮೀಜಿ ನಾಟಕ ಮಾಡಿಕೊಂಡು ಆರಾಮಾಗಿರಲಿ. ದೇವರ ತಂಟೆ ಬೇಡ” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಷಭಟ್ಟರು ವಿಷಕಾರಿದರು.
ಇಷ್ಟಕ್ಕೂ ಸ್ವಾಮಿಗಳು ಈ ಗಣಪತಿ ಪೂಜೆ ಪ್ರಾರ್ಥನೆ ಮಾಡಬೇಡಿ ಎಂದು ಹೇಳಿದ್ದು ಈ ಭಟ್ಟನ ಕುಲಬಾಂಧವರಿಗೂ ಅಲ್ಲ, ಬ್ರಾಹ್ಮಣ್ಯದ ಪ್ರತಿಪಾದಕರಿಗೂ ಅಲ್ಲಾ. ತಮ್ಮ ಲಿಂಗಾಯಿತ ಸಮುದಾಯದವರನ್ನು ಕುರಿತು ಈ ರೀತಿ ಸತ್ಯವನ್ನೇ ಹೇಳಿದ್ದು ಮಾತಾಂಧರಿಗೆ ಅಪಥ್ಯವೆನಿಸಿದ್ದರೆ ಅದು ಸ್ವಾಮಿಗಳ ಉಪದ್ವ್ಯಾಪಿತನವಲ್ಲ. ಈ ಮತಾಂಧರ ಬೌದ್ಧಿಕ ದಿವಾಳಿತನ.
ಬಸವಾದಿ ಶರಣರು 12 ನೇ ಶತಮಾನದಲ್ಲೇ ಪುರೋಹಿತಶಾಹಿ ಪ್ರಣೀತ ಧರ್ಮ, ಮೌಢ್ಯಾಚರಣೆ ಹಾಗೂ ಅವರ ಕಪೋಲ ಕಲ್ಪಿತ ದೇವರುಗಳನ್ನು ಧಿಕ್ಕರಿಸಿ ಎಲ್ಲಾ ಜಾತಿ ಜನಾಂಗದ ಶ್ರಮಜೀವಿಗಳನ್ನು ಒಳಗೊಂಡಂತೆ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಯಾವ ವಚನಗಳಲ್ಲೂ ಗಣಪತಿಯನ್ನಾಗಲಿ ಇಲ್ಲವೇ ಮುಕ್ಕೋಟಿ ಕಾಲ್ಪನಿಕ ದೇವರುಗಳನ್ನಾಗಲೀ ಪೂಜಿಸಲು ಇಲ್ಲವೇ ಪ್ರಾರ್ಥಿಸಲು ಶರಣರು ಯಾವ ವಚನಗಳಲ್ಲೂ ಪ್ರಸ್ತಾಪಿಸಿಲ್ಲ.
“ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳನಿಕ್ಕುವೆ, ತರ್ಕದ ಬೆನ್ನ ಭಾರನೆತ್ತುವೆ” ಎಂದು ವಚನದ ಮೂಲಕ ಹೇಳಿದ ಬಸವಣ್ಣನವರು ಬ್ರಾಹ್ಮಣರ ಸೃಷ್ಟಿಗಳಾದ ವೇದ ಆಗಮ ಶಾಸ್ತ್ರಗಳನ್ನೇ ನಿರಾಕರಿಸಿದರು.
“ವೇದಗಳೆಂಬವು ಬ್ರಹ್ಮನ ಬೂಟಾಟ; ಶಾಸ್ತ್ರಗಳೆಂಬವು ಸರಸ್ವತಿಯ ಗೊಡ್ಡಾಟ, ಆಗಮಗಳೆಂಬುವು ಋಷಿಯ ಮರುಳಾಟ, ಪುರಾಣಗಳೆಂಬುವು ಪೂರ್ವದವರ ಒದ್ದಾಟ, ಇಂತು ಇವನ್ನು ಅರಿದವರ ನೇತಿಗೆಳೆದು ನಿಜದಲ್ಲಿ ನಿಂದಿಪ್ಪಾತನೇ ಗುಹೇಶ್ವರನಲ್ಲಿ ಅಚ್ಚಲಿಂಗೈಕ್ಯನು” ಎಂದು ಅಲ್ಲಮ ಪ್ರಭುಗಳು ತಮ್ಮ ವಚನದಲ್ಲಿ ವೇದ ಶಾಸ್ತ್ರ ಪುರಾಣಗಳ ಬೂಟಾಟಿಕೆಯನ್ನು ಕಠಿಣಾತಿ ಕಠಿಣ ಶಬ್ದಗಳಲ್ಲಿ ವಿರೋಧಿಸಿದ್ದಾರೆ.
ಪುರೋಹಿತಶಾಹಿ ಪ್ರಣೀತ ದೇವರುಗಳ ಬಗ್ಗೆ ಬಸವಣ್ಣನವರು “ಮಡಿಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ, ಹಣಿಗೆ ದೈವ, ಬಿಲ್ಲನಾರಿ ದೈವ ಕಾಣಿರೋ! ಕೊಳಗ ದೈವ, ಗಿಣ್ಣಿಲು ದೈವ ಕಾಣಿರೋ! ದೈವ ದೈವವೆಂದು ಕಾಲಿಡಲಿಂಬಿಲ್ಲ, ದೈವನೊಬ್ಬನೇ ಕೂಡಲಸಂಗಮದೇವ” ಎಂದು ಏಕದೇವೋಪಾಸನೆ ಕುರಿತು ಸ್ಪಷ್ಟವಾಗಿ ಹೇಳುವ ಮೂಲಕ ಈ ಕಾಲ್ಪನಿಕ ದೈವಗಳನ್ನು ಲೇವಡಿ ಮಾಡಿದ್ದಾರೆ. ಲಿಂಗಾಯತರಿಗೆ, ಬಸವ ಧರ್ಮದ ಅನುಯಾಯಿಗಳಿಗೆ ಕೂಡಲ ಸಂಗಮ ಅಂದರೆ ಬಸವಣ್ಣನವರು ಸಾಂಕೇತಿಕವಾಗಿ ಕೊಟ್ಟ ಇಷ್ಟಲಿಂಗವೊಂದೇ ದೇವರು. ಅದನ್ನು ಹೊರತು ಪಡಿಸಿ ಬೇರೆ ದೇವರ ಪೂಜೆ ಪ್ರಾರ್ಥನೆ ಬೇಕಿಲ್ಲ. ಪುರೋಹಿತ ವರ್ಗ ಸೃಷ್ಟಿಸಿದ ಯಾವುದೇ ದೇವರುಗಳನ್ನು ಆರಾಧಿಸುವವರು ಲಿಂಗಾಯತರಾಗಲು ಸಾಧ್ಯವಿಲ್ಲ.
ಇದನ್ನೇ ಇನ್ನೂ ಸ್ಪಷ್ಟವಾಗಿ ಬಸವಣ್ಣನವರು ಕಲ್ಲು ದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ, ಮರದ ದೇವರು ದೇವರಲ್ಲ, ಪಂಚಲೋಹದ ದೇವರು ದೇವರಲ್ಲ, ಸೇತುಬಂಧ ರಾಮೇಶ್ವರ ಗೋಕರ್ಣ ಕಾಶಿ ಕೇದಾರ ಪುಣ್ಯಕ್ಷೇತ್ರಗಳಲಿರುವ ದೇವರು ದೇವರಲ್ಲ. ತನ್ನ ತಾನರಿದು ತಾನಾರೆಂದು ತಿಳಿದೊಡೆ ತನಗೆ ತಾನೇ ದೇವ ನೋಡಾ ಅಪ್ರಮಾಣ ಕೂಡಲಸಂಗಮದೇವಾ” ಎಂದು ವಚನಿಸುವ ಮೂಲಕ ಎಲ್ಲಾ ಪುರೋಹಿತರ ದೇವರುಗಳನ್ನೂ ನಿವಾಳಿಸಿ ತನ್ನ ತಾನರಿತವರನ್ನೇ ದೇವರಾಗಿಸಿದ್ದಾರೆ. ಇದಕ್ಕಿಂತಾ ಮಿಗಿಲಾದ ದಾರ್ಶನಿಕತೆ ಬೇರೆಲ್ಲಿದೆ.
ಗಣಪತಿಯ ವಾಹನವೆಂದು ನಂಬಿಸಲಾದ ಇಲಿಯ ಕುರಿತ ತಮ್ಮ ವಚನದಲ್ಲಿ “ಬೇಡವೋ ಇಲಿಚಯ್ಯಾ, ಮೊನ್ನೆ ಬಂದು ಶಿವದಾರವ ಕಡಿದೆ, ಇಂದು ಬಂದು ವಸ್ತ್ರವ ಕಡಿದೆ, ನಿನಗಂಜರು ನಿನ್ನ ಗಣಪತಿಗಂಜರು, ಕೂಡಲಚೆನ್ನಸಂಗನ ಶರಣರು ಕಂಡಡೆ ನಿನ್ನ ಹಲ್ಲ ಮುರಿವರು” ಎಂದು ಬಸವಣ್ಣನವರು ಲೇವಡಿ ಮಾಡಿದ್ದಾರೆ.
ಹೋಮ ಹವನಗಳಲಿ ಅಗ್ನಿದೇವನಿಗೆ ಹವಿಸ್ಸು ಅರ್ಪಿಸುವ ಕುರಿತು “ಕಿಚ್ಚು ದೈವವೆಂದು ಹವಿಯನಿಕ್ಕುವ ಹಾರವರ ಮನೆಯಲ್ಲಿ ಕಿಚ್ಚೆದ್ದು ಸುಡುವಾಗ ಬಚ್ಚಲ ನೀರ, ಬೀದಿಯ ದೂಳ ಹೊಯ್ದು ಬೊಬ್ಬಿಟ್ಟೆಲ್ಲರ ಕರೆವರಯ್ಯಾ ಕೂಡಲಸಂಗಮದೇವಾ.. ಎಂದು ಬಸವಣ್ಣನವರು ಸೊಗಸಾಗಿ ವಿಡಂಬನೆ ಮಾಡಿದ್ದಾರೆ.
ಕಾಲ್ಪನಿಕ ದೇವರುಗಳ ಅಸ್ತಿತ್ವವನ್ನು ನಿರಾಕರಿಸಿದ ಕುರಿತ ಇವು ಕೇವಲ ಕೆಲವು ಸ್ಯಾಂಪಲ್ ವಚನಗಳಷ್ಟೇ. ಇನ್ನೂ ಅಗಣಿತ ವಚನಗಳಲ್ಲಿ ಈ ಪುರೋಹಿತಶಾಹಿಗಳು ಪ್ರಜೆಗಳನ್ನು ಶೋಷಿಸಲು ಸೃಷ್ಟಿಸಿದ ದೇವರು, ಧರ್ಮ, ವೇದ ಶಾಸ್ರ್ತ ಪುರಾಣ ಆಗಮಗಳನ್ನು ಕುರಿತು ನಿಷ್ಠುರ ಶಬ್ದಗಳಲ್ಲಿ ವಚನಕಾರರು ಪ್ರಶ್ನಿಸಿದ್ದಾರೆ, ಲೇವಡಿ ಮಾಡಿದ್ದಾರೆ. ಅವುಗಳ ಮುಂದೆ ಸಾಣೇಹಳ್ಳಿ ಸ್ವಾಮೀಜಿಯವರು ಹೇಳಿದ ಮಾತು ನಗಣ್ಯ. ಇಷ್ಟಕ್ಕೇ ಈ ಧರ್ಮಾಂಧರು ಉರಿ ತಾಳದೇ ಬೆಂಕಿ ಉಗುಳುತ್ತಿದ್ದಾರೆಂದರೆ ಆ ಕಾಲದ ಪುರೋಹಿತರ ದುಸ್ಥಿತಿ ಹೇಗಿದ್ದಿರಬಹುದು?
ಸ್ವಾಮೀಜಿಗಳು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಯಾಕೆಂದರೆ ಅವರು ಲಿಂಗಾಯತ ಧರ್ಮದ ಧಾರ್ಮಿಕ ವಕ್ತಾರರು. ಅವರ ಧರ್ಮದ ಆಚರಣೆಗಳ ಬಗ್ಗೆ ತಮ್ಮ ಸಮುದಾಯದವರನ್ನು ಎಚ್ಚರಿಸುವುದು ಅವರ ಕರ್ತವ್ಯ. ಈ ಬ್ರಾಹ್ಮಣ್ಯದ ಬೇರುಗಳು ಕೇವಲ ಬ್ರಾಹ್ಮಣರಲ್ಲಿ ಮಾತ್ರವಲ್ಲ ಎಲ್ಲಾ ಜಾತಿಗಳಲ್ಲೂ ಪಸರಿಸಿವೆ. ಆದರೆ ಲಿಂಗಾಯತ ಎನ್ನುವುದು ಹಿಂದುತ್ವ ಧರ್ಮದ ಶಾಖೆಯಲ್ಲ. ಅದೊಂದು ಸ್ವತಂತ್ರ ಧರ್ಮ. ಆ ಧರ್ಮಕ್ಕೆ ಬಸವಣ್ಣನಂತಹ ಸ್ಥಾಪಕರಿದ್ದಾರೆ, ವಚನಗಳ ಸಂಗ್ರಹಗಳ ಗ್ರಂಥಗಳಿವೆ, ಇಷ್ಟಲಿಂಗವೇ ಆರಾಧ್ಯ ದೈವವಾಗಿದೆ. ಏಕದೇವೋಪಾಸಕ ಧರ್ಮವಾದ ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗುವುದು ಬಾಕಿ ಇದೆ. ಆದರೆ ಈ ಬ್ರಾಹ್ಮಣ್ಯದ ಬಹುದೇವೋಪಾಸನೆ ಹಾಗೂ ಪುರೋಹಿತರ ಎಲ್ಲಾ ಆಚರಣೆಗಳನ್ನೂ ಪಾಲಿಸುವ ವೀರಶೈವರು ಈ ಹಿಂದುತ್ವವಾದಿಗಳ ಕುಮ್ಮಕ್ಕಿನಿಂದ ಲಿಂಗಾಯತ ಧರ್ಮಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. ಯಾರು ಅದೇನೇ ಅಡೆ ತಡೆ ಒಡ್ಡಿದರೂ ಲಿಂಗಾಯತ ಸ್ವತಂತ್ರ ಧರ್ಮ ಅನ್ನುವುದು ನಿಜವಾದ ಲಿಂಗಾಯತರ ಅಭಿಮತ.
ಈ ನಾಡಿನಲ್ಲಿ ಲಿಂಗಾಯತ ಮಠಗಳು ಇಲ್ಲದೇ ಹೋಗಿದ್ದರೆ ಶೂದ್ರ ದಲಿತ ಸಮುದಾಯಕ್ಕೆ ಶಿಕ್ಷಣ ಸಿಗುತ್ತಿರಲಿಲ್ಲ. ಯಾವುದೇ ಜಾತಿ, ಮತ, ಪಂಥ, ಧರ್ಮ ಬೇಧ ಮಾಡದೇ ಅಕ್ಷರ ದಾಸೋಹ ಹಾಗೂ ವಿದ್ಯಾರ್ಥಿಗಳಿಗೆ ಅನ್ನ ದಾಸೋಹವನ್ನು ಬಹುತೇಕ ಲಿಂಗಾಯತ ಮಠಗಳು ವ್ಯವಸ್ಥೆ ಮಾಡುತ್ತಾ ಬಂದಿವೆ. ಅದಕ್ಕೆ ಸಿದ್ಧಗಂಗಾ ಮಠ ಸಮೂಹ ಹಾಗೂ ಸಿರೆಗೆರೆ ಮಠ ಸಮೂಹಗಳೇ ಸಾಕ್ಷಿಯಾಗಿವೆ. ಪಂಚಾಚಾರ್ಯರು ಸ್ಥಾಪಿಸಿದ ಯಾವ ಬ್ರಾಹ್ಮಣ್ಯದ ಮಠಗಳಲ್ಲಿ ಇದು ಸಾಧ್ಯವಿದೆ?
ಬಹುದೇವೋಪಾಸಕರಾದ ವೀರಶೈವರು ಲಿಂಗಾಯತ ಸಮುದಾಯದ ಗುರುಗಳೆಂದು ಪ್ರತಿಷ್ಠಾಪನೆಯಾಗಿದ್ದಾರೆ. ವೀರಶೈವ ಮಠಗಳ ಸ್ವಾಮಿಗಳು ಅಡ್ಡಪಲ್ಲಕ್ಕಿಯಲ್ಲಿ ಮೆರವಣಿಗೆ ಹೊರಡುತ್ತಾರೆ. ಎಲ್ಲಾ ಕಾಲ್ಪನಿಕ ದೇವರುಗಳನ್ನೂ ಪೂಜಿಸುತ್ತಾರೆ ಹಾಗೂ ಪ್ರಾರ್ಥಿಸಲು ಲಿಂಗಾಯತರನ್ನು ಪ್ರಚೋದಿಸುತ್ತಾರೆ. ಲಿಂಗಾಯತರ ಮನೆಗಳಲ್ಲಿ ಮದುವೆ ನಾಮಕರಣ ಗೃಹಪ್ರವೇಶ ಹೀಗೆ ಯಾವುದೇ ಶುಭಕಾರ್ಯಗಳಿದ್ದರೂ ಈ ವೀರಶೈವ ಸ್ವಾಮಿಗಳನ್ನೇ ಪೂಜೆಗೆ ಕರೆಸಲಾಗುತ್ತದೆ. ಲಿಂಗಾಯತರಾದವರು ಸತ್ತರೂ ಹೆಣದ ತಲೆ ಮೇಲೆ ಕಾಲಿಟ್ಟು ಸ್ವರ್ಗಕ್ಕೆ ಕಳುಹಿಸಲು ಇದೇ ಅಯ್ನೋರು ಬೇಕು. ಅಷ್ಟರ ಮಟ್ಟಿಗೆ ಲಿಂಗಾಯತರ ಮೇಲೆ ಈ ಜಂಗಮ ಸ್ವಾಮಿಗಳು ನಿಯಂತ್ರಣವನ್ನು ಹೊಂದಿದ್ದಾರೆ. ಇಂತವರ ಪ್ರಭಾವಗಳಿಂದಲೇ ಬಹುತೇಕ ಲಿಂಗಾಯತರ ಮನೆಗಳ ಪೂಜಾ ಮಂದಿರಗಳಲ್ಲಿ ಅನೇಕಾನೇಕ ದೇವರುಗಳ ಫೋಟೋ ಹಾಗೂ ವಿಗ್ರಹಗಳು ಜಾಗ ಪಡೆದು ಪೂಜಿಸಲ್ಪಡುತ್ತವೆ. ಗಣಪತಿಗೆ ಅಗ್ರಪೂಜೆ ಸಲ್ಲಿಸಲಾಗುತ್ತದೆ. ಸತ್ಯನಾರಾಯಣ ಪೂಜೆ ನಡೆಸಲಾಗುತ್ತದೆ. ಎಲ್ಲಾ ದೇವರುಗಳ ಹಬ್ಬಗಳಲ್ಲಿ ನಡೆಸುವ ಪೂಜೆ ಪುನಸ್ಕಾರಗಳಿಗೆ ಪೂಜಾರಿಗಳನ್ನೋ ಭಟ್ಟರನ್ನೋ ಐನೋರನ್ನೋ ಕರೆಸಿ ಶಾಸ್ತ್ರೋಕ್ತವಾಗಿ ಮಾಡಿಸಲಾಗುತ್ತದೆ. ಗುಡಿ ಗುಂಡಾರಗಳಿಗೆ ಹೋಗಿ ಹರಕೆ ಕಟ್ಟಲಾಗುತ್ತದೆ. ಪ್ರದಕ್ಷಿಣೆ ಹಾಕಲಾಗುತ್ತದೆ.
ಇದು ಖಂಡಿತಾ ಬಸವ ದ್ರೋಹದ ಕೆಲಸ. ಶಿವಶರಣರ ಆಶಯಗಳಿಗೆ ವಿರುದ್ಧವಾಗಿ ನಡೆಯುವ ಈ ಆಚರಣೆಗಳನ್ನು ಮಾಡುವವರು ನಿಜವಾದ ಲಿಂಗಾಯತರೇ ಅಲ್ಲಾ. ಇಷ್ಟಲಿಂಗವ ಬಿಟ್ಟು ಅನ್ಯ ದೇವರುಗಳ ನಂಬುವವರು ಲಿಂಗಾಯತರೇ ಅಲ್ಲಾ ಎಂದು ಶರಣರೇ ಸಾರಿದ್ದಾರೆ. ಅದನ್ನು ಅರ್ಥಮಾಡಿಕೊಂಡು ನಡೆಯುವ ಲಿಂಗಾಯತರು ಈಗ ಎಲ್ಲಿದ್ದಾರೆ? ಎಷ್ಟಿದ್ದಾರೆ?
ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಬೇಕು ಎಂದು ಆ ಸಮುದಾಯದವರು ಆಗ್ರಹಿಸುತ್ತಾರೆ. ಲಿಂಗಾಯತ ಸಮುದಾಯದ ಬಹುತೇಕರು ಬಸವ ಮಾರ್ಗ ಬಿಟ್ಟು ಬ್ರಾಹ್ಮಣ್ಯದ ದಾರಿ ಹಿಡಿದಿರುವಾಗ ಯಾವ ಲಿಂಗಾಯತರಿಗೆ ಮೀಸಲಾತಿ ಕೊಡಬೇಕು?. ಕೇವಲ ಅನುಕೂಲಕ್ಕಾಗಿ, ಸರಕಾರಿ ಸವಲತ್ತುಗಳಿಗಾಗಿ, ಮೀಸಲಾತಿಗಾಗಿ ಲಿಂಗಾಯತರು ಎಂದು ಗುರುತಿಸಿಕೊಳ್ಳುವುದು ಆತ್ಮವಂಚಕ ಪ್ರವೃತ್ತಿ. ಬಸವ ಧರ್ಮವನ್ನು ಆಚರಿಸದ, ವಚನಗಳನ್ನು ಅನುಸರಿಸದ, ಏಕದೇವೋಪಾಸನೆಯಿಂದ ವಿಮುಖವಾಗಿರುವ ಯಾರೂ ನಿಜವಾದ ಲಿಂಗಾಯತರಲ್ಲ. ಲಿಂಗಾಯತರ ಮನೆ ಮನಗಳಲ್ಲಿ ಬೇರು ಬಿಟ್ಟಿರುವ ಈ ಬಹುದೇವೋಪಾಸಕ ಸಂಸ್ಕೃತಿ ಹಾಗೂ ಪುರೋಹಿತಶಾಹಿ ಆಚರಣೆಗಳನ್ನು ಹೋಗಲಾಡಿಸಿ ಬಸವಧರ್ಮದ ವಿಚಾರಗಳನ್ನು ತುಂಬುವ ಕೆಲಸ ಮಾಡಬೇಕಾದವರು ಲಿಂಗಾಯತ ಮಠದ ಸ್ವಾಮಿಗಳು ಹಾಗೂ ಬಸವ ತತ್ವ ಪ್ರತಿಪಾದಕರು.
ಅದರ ಭಾಗವಾಗಿಯೇ ಸಾಣೇಹಳ್ಳಿಯ ಸ್ವಾಮೀಜಿಗಳು ‘ಗಣಪತಿ ಪೂಜೆ ಲಿಂಗಾಯತರ ಸಂಸ್ಕೃತಿ ಅಲ್ಲಾ’ ಎಂದು ಹೇಳಿದ್ದಾರೆ. ಕೇವಲ ಗಣಪತಿ ಪೂಜೆ ಪ್ರಾರ್ಥನೆ ಅಷ್ಟೇ ಅಲ್ಲಾ ಬಹುದೇವೋಪಾಸನೆಯೇ ಲಿಂಗಾಯತರ ಗುಣಧರ್ಮವಲ್ಲ ಎಂದು ಸ್ವಾಮಿಗಳು ಹೇಳಬೇಕಾಗಿದೆ. ಅವರ ಹೇಳಿಕೆಯನ್ನು ಎಲ್ಲಾ ಲಿಂಗಾಯತರ ಮಠಗಳು ಹಾಗೂ ಮಠಾಧಿಪತಿಗಳು ಸಮರ್ಥಿಸಿ ಕೊಳ್ಳಬೇಕಾಗಿದೆ. ಆದರೆ ಲಿಂಗಾಯತ ಮಠಗಳ ಸ್ವಾಮಿಗಳಲ್ಲೇ ಕೆಲವರು ಬಹುದೇವೋಪಾಸನೆಯ ಪರವಾಗಿದ್ದಾರೆ. ಪುರೋಹಿತರ ಕರ್ಮ ಸಿದ್ಧಾಂತ, ಪುನರ್ಜನ್ಮ, ಪಾಪ ಪುಣ್ಯಗಳನ್ನು ನಂಬುವವರೂ ಇದ್ದಾರೆ. ಅಷ್ಟೇ ಯಾಕೆ ಸಾಣೇಹಳ್ಳಿ ಶಾಖಾಮಠದ ಮೂಲ ಮಠವಾದ ಸಿರೆಗೆರೆಯ ಪೀಠಾಧಿಪತಿಗಳ ನಿವಾಸದ ಅಂಗಣದಲ್ಲೇ ಸರಸ್ವತಿಯ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಹಾಗೂ ಅವರೂ ಪುನರ್ಜನ್ಮ ಸಿದ್ಧಾಂತದಲ್ಲಿ ನಂಬಿಕೆ ಇಟ್ಟವರಾಗಿದ್ದಾರೆ. ಹೀಗಾಗಿ ಲಿಂಗಾಯತ ಸಮುದಾಯವೇ ಈ ದೈವಾರಾಧನೆಯ ವಿಷಯದಲ್ಲಿ ಗೊಂದಲದಲ್ಲಿದೆ. ಬಸವ ತತ್ವದ ಬಗ್ಗೆ ಸ್ಪಷ್ಟತೆಯನ್ನು ಕೊಡುವ ಕೆಲಸವನ್ನು ನಿಜದ ಶರಣರು ಕಾಯಕವೆಂಬಂತೆ ಮಾಡಬೇಕಿದೆ. ತನ್ನ ತಾನರಿವಂತೆ ಲಿಂಗಾಯತರನ್ನು ಪ್ರೇರೇಪಿಸಬೇಕಿದೆ. ಕೇವಲ ವಚನಗಳ ಪ್ರವಚನ ಮಾಡುವ ಜೊತೆಗೆ ವಚನಗಳನ್ನು ಬದುಕಿನ ದಾರಿಯಾಗುವಂತೆ ಲಿಂಗಾಯತರಿಗೆ ಮನದಟ್ಟು ಮಾಡಿಕೊಡಬೇಕಾಗಿದೆ. ಅದಕ್ಕೆ ಮುನ್ನುಡಿಯಾಗಿ ಪಂಡಿತಾರಾಧ್ಯ ಸ್ವಾಮಿಗಳು ಹೇಳಿದಂತೆ ಲಿಂಗಾಯತರಾದವರು ಮೊದಲು ಗಣಪತಿ ಪೂಜೆ ಭಜನೆ ಪ್ರಾರ್ಥನೆ ನಿಲ್ಲಿಸಿ ಇಷ್ಟಲಿಂಗವನ್ನು ಒಪ್ಪಿಕೊಳ್ಳಬೇಕಿದೆ, ಬಸವ ತತ್ವವನ್ನು ಅಪ್ಪಿಕೊಳ್ಳಬೇಕಿದೆ. ಆತ್ಮವಂಚನೆ ಇಲ್ಲದಂತೆ ನಿಜವಾದ ಅರ್ಥದಲ್ಲಿ ಲಿಂಗಾಯತರು ಲಿಂಗಾಯತರಾಗಬೇಕಿದೆ.
ಇನ್ನು ಈ ವಿಷಭಟ್ಟನಂತವರು 12 ನೇ ಶತಮಾನದಲ್ಲೂ ಇದ್ದರು, ಈಗಲೂ ಇದ್ದಾರೆ. ಈ ಉಪದ್ವ್ಯಾಪಿ ಅತಿರೇಕವಾದಿಗಳಿಗೆ ಮತಾಂಧತೆಯೇ ಶೋಭೆಯಾಗಿದೆ. ಸಾಣೇಹಳ್ಳಿ ಸ್ವಾಮಿಗಳು ನಾಟಕ ಮಾಡಿಕೊಂಡು ಆರಾಮಾಗಿರಲಿ ಎನ್ನುವ ಈ ಕೋಮುವ್ಯಾಧಿ ಪೀಡಿತನಿಗೆ ಸಾಣೆಹಳ್ಳಿ ಮಠ ಸಮಾಜದಲ್ಲಿ ಸೌಹಾರ್ದತೆಯನ್ನು ಕಾಪಾಡಲು ನಾಟಕವನ್ನು ಸಶಕ್ತ ಮಾಧ್ಯಮವಾಗಿ ಬಳಸುತ್ತಿದೆ ಎನ್ನುವ ಅರಿವೂ ಇಲ್ಲವಾಗಿದೆ. ಈ ಕೋಮುಪೀಡೆಗಳು ಶತಮಾನಗಳಿಂದ ಸಮಾಜದಲ್ಲಿ ಹರಡಿದ ಮೌಢ್ಯಗಳ ತ್ಯಾಜ್ಯ, ಮತಾಂಧತೆಯ ವ್ಯಾಜ್ಯಗಳನ್ನು ಗುಡಿಸುವ ಕೆಲಸವನ್ನು ನಾಟಕಗಳ ಮೂಲಕ ಮಾಡಲಾಗುತ್ತಿದೆ. ನಾಟಕದ ಶಕ್ತಿ ಗೊತ್ತಿಲ್ಲದ ಈ ಅಕ್ಷರ ಹಾದರ ಪೀಡಿತರಿಗೆ ಮತಾಂಧತೆಯ ಪಿತ್ತ ನೆತ್ತಿಗೇರಿದೆ.
ಯಾರಾದರೂ ಪುರೋಹಿತಶಾಹಿ ಮೌಢ್ಯಗಳನ್ನು ಪ್ರಶ್ನಿಸಿದರೆ ಜನರ ಭಾವನೆಗಳಿಗೆ ಧಕ್ಕೆ ಆಯ್ತು ಎಂದು ಆರೋಪಿಸುತ್ತಲೇ ಇರುತ್ತಾರೆ. ಈ ಮತಾಂಧರಿಗೆ ಮಾತ್ರ ಭಾವನೆಗಳಿವೆ ಬೇರೆಯವರಿಗೆ ಇಲ್ಲವೆಂಬುದು ಇವರ ಅಸಹನೆಯ ಭಾವನೆಯಾಗಿದೆ. ಲಿಂಗಾಯತರಾದವರಿಗೂ ಭಾವನೆಗಳಿವೆ ಎಂಬುದು ಇಂತಹ ಧರ್ಮಾಂಧರಿಗೆ ಎಂದೂ ಅರ್ಥವಾಗುವುದಿಲ್ಲ. ಏಕದೇವೋಪಾಸಕರಾದ ಲಿಂಗಾಯತರ ಮೇಲೆ ಬಹುದೇವೋಪಾಸನೆಯನ್ನು ಹೇರುವುದು ಹಾಗೂ ಅದಕ್ಕಾಗಿ ಒತ್ತಾಯಿಸುವುದರಿಂದ ನಿಜವಾದ ಲಿಂಗಾಯತರ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಪುರೋಹಿತಶಾಹಿ ಆಚರಣೆಗಳನ್ನು ಲಿಂಗಾಯತರೂ ಆಚರಿಸಬೇಕು ಎಂದು ಆಗ್ರಹಿಸುವುದು ಲಿಂಗಾಯತರ ಅಸ್ಮಿತೆಯನ್ನೇ ಪ್ರಶ್ನಿಸುವಂತಿದೆ. ಗಣಪತಿ ಪೂಜೆ ಲಿಂಗಾಯತರ ಸಂಸ್ಕೃತಿ ಅಲ್ಲಾ ಎಂದು ಹೇಳಿದ ಕೂಡಲೇ ಕೆಲ ಹಾರವರ ಮೆದುಳಲ್ಲಿ ಹಾವು ಹೊಕ್ಕಂತಾಗುತ್ತದೆ. ಅವತ್ತೂ ಈ ಪುರೋಹಿತರ ಆಚಾರ ಅನಾಚಾರಗಳನ್ನು ಧಿಕ್ಕರಿಸಿಯೇ ಲಿಂಗಾಯತ ಧರ್ಮ ಹುಟ್ಟಿದ್ದು. ಈಗಲೂ ಈ ಪುರೋಹಿತಶಾಹಿ ಮನಸ್ಥಿತಿಯವರ ಮತಾಂಧತೆಯನ್ನು ಧಿಕ್ಕರಿಸಿಯೇ ಲಿಂಗಾಯತ ಧರ್ಮವನ್ನು ಉಳಿಸಿ ಕೊಳ್ಳಬೇಕಿದೆ. ನಿಜವಾದ ಲಿಂಗಾಯತರೆಲ್ಲರೂ ಮೊದಲು “ಎಲ್ಲ ದೇವರುಗಳನು ನೂಕಾಚೆ ದೂರಾ ಇಷ್ಟಲಿಂಗವ ಪೂಜಿಸುವ ಬಾರಾ” ಎನ್ನಬೇಕಿದೆ. ಇದಕ್ಕೆ ಹಿಂದುತ್ವವಾದಿಗಳಿಂದ ಅದೆಷ್ಟೇ ಪ್ರತಿರೋಧ ಬಂದರೂ ಹೆದರದೇ ಬಸವಣ್ಣನವರ ಈ ವಚನ ಲಿಂಗಾಯತರ ಚಿತ್ತದಲ್ಲಿ ಸದಾ ಬಿತ್ತಿರಲಿ.
“ನ್ಯಾಯನಿಷ್ಠುರಿ; ದಾಕ್ಷಿಣ್ಯ ಪರ ನಾನಲ್ಲ. ಲೋಕವಿರೋಧಿ ಶರಣನಾರಿಗೂ ಅಂಜುವವನಲ್ಲ”
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇ಼ಷಕರು
ಇದನ್ನೂ ಓದಿ- ಸಮಾನತೆ ವಿರೋಧಿ ಸನಾತನ ಧರ್ಮ ಹಾಗೂ ಸಂವಿಧಾನ