ಲೋಕಾಯುಕ್ತ ಎಡಿಜಿಪಿ ಮತ್ತು ಸಂಸದ ಕುಮಾರಸ್ವಾಮಿ ನಡುವಿನ ವಾಕ್ಸಮರ ಈಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು ಕುಮಾರಸ್ವಾಮಿ ತಮ್ಮ ಮೇಲಿರುವ ಆರೋಪಕ್ಕೆ ಸಮಜಾಯಿಷಿ ಕೊಡುವುದು ಬಿಟ್ಟು, ತನಿಖಾಧಿಕಾರಿಗಳನ್ನೇ ಬೀದಿಗೆ ತಂದು ಮಾತನಾಡಿರುವ ಬಗ್ಗೆ ಆರೋಪ ಪ್ರತ್ಯಾರೋಪ ಹೆಚ್ಚಾಗಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಂದಿಯ ಹೋಲಿಕೆಯನ್ನು ಕುಮಾರಸ್ವಾಮಿ ತಮಗೇ ಯಾಕೆ ಮಾಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಜಾರ್ಜ್ ಬರ್ನಾಡ್ ಷಾ ಅವರ ‘ಹಂದಿ ಜೊತೆಗೆ ಗುದ್ದಾಟ ಬೇಡ..’ ಎಂಬ ಉಲ್ಲೇಖವನ್ನು ಉಪಯೋಗಿಸಿರುವ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ತಮ್ಮ ಸಹೋದ್ಯೋಗಿಗಳ ಆತ್ಮಸ್ಥೈರ್ಯ ಹೆಚ್ಚಿಸಲು ಬರೆದಿರುವ ಬರಹವನ್ನೇ ಕುಮಾರಸ್ವಾಮಿಯವರು ತನಗೇ ಹೇಳಿದ್ದು ಅಂದುಕೊಳ್ಳುವುದು ಯಾಕೆ? ಎಂದು ಸಚಿವ ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಾ ಜಿ.ಪರಮೇಶ್ವರ್ ‘ವಾಕ್ಯಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಸೋತಾಗ ಇಂತಾ ಅಪಾರ್ಥ ಸೃಷ್ಟಿ ಆಗುತ್ತದೆ’ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಈ ರೀತಿ ತನಿಖಾಧಿಕಾರಿಗಳನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರೆ ಅಧಿಕಾರಿಗಳು ತಮ್ಮದೇ ರೀತಿಯಲ್ಲಿ ತನಿಖೆಗೆ ಮುಂದಾಗಬೇಕಾಗುತ್ತೆ. ತಮ್ಮ ಮೇಲಿರುವ ಆರೋಪಕ್ಕೆ ಅವರು ತನಿಖಾಧಿಕಾರಿಗಳ ವಿರುದ್ದ ತಿರುಗಿ ಬೀಳುವ ಬದಲು, ಸೂಕ್ತ ರೀತಿಯಲ್ಲಿ ತನಿಖೆ ಎದುರಿಸಲಿ ಎಂದು ಪರಮೇಶ್ವರ್ ಹೇಳಿದ್ದಾರೆ.