ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಜೆಡಿಎಸ್ ಪಕ್ಷ ಎನ್’ಡಿಎ ಮೈತ್ರಿಕೂಟದ ಜೊತೆಗೆ ಸೇರಿದ ಎರಡೇ ದಿನದಲ್ಲಿ ಜೆಡಿಎಸ್ ಪಕ್ಷದಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ. ಶನಿವಾರ ಜೆಡಿಎಸ್ ಪಕ್ಷದ ಹಿರಿಯ ನಾಯಕ, ಪಕ್ಷದ ರಾಜ್ಯ ಉಪಾಧ್ಯಕ್ಷರೂ ಆದ ಸೈಯದ್ ಶಫಿವುಲ್ಲಾ ಅವರು ರಾಜೀನಾಮೆ ನೀಡಿದ್ದಾರೆ.
ನಿನ್ನೆ (ಶುಕ್ರವಾರ) ವಿಚಾರವಾದಿ ನಾಯಕಿ, ಜೆಡಿಎಸ್ ಪಕ್ಷದ ವಕ್ತಾರೆ ಯು.ಟಿ ಆಯಿಶಾ ಫರ್ಜಾನ ರಾಜೀನಾಮೆ ಹಿಂದೆಯೇ ಸಯ್ಯದ್ ಶಫಿವುಲ್ಲಾ ಅವರ ರಾಜೀನಾಮೆ ಜೆಡಿಎಸ್ ಪಕ್ಷದ ಚುನಾವಣಾ ಲೆಕ್ಕಾಚಾರ ಉಲ್ಟಾ ಆಗುವ ಸಾಧ್ಯತೆಯನ್ನು ಎತ್ತಿ ಹಿಡಿದಿದೆ.
ಸೈಯದ್ ಶಫಿವುಲ್ಲಾ ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಸಿ.ಎಂ.ಇಬ್ರಾಹಿಂ ಅವರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ‘ನಮ್ಮ ಪಕ್ಷವು ಜಾತ್ಯತೀತ ನೆಲೆಗಟ್ಟಿನ ಮೇಲೆ ನಂಬಿಕೆಯನ್ನಿಟ್ಟುಕೊಂಡು ಸಮಾಜ ಮತ್ತು ಸಮುದಾಯಕ್ಕೆ ಸೇವೆ ಸಲ್ಲಿಸಲು ನಾನು ಶ್ರಮಿಸಿದ್ದೇನೆ ಮತ್ತು ಪಕ್ಷಕ್ಕೆ ಸೇವೆ ಸಲ್ಲಿಸಿದ್ದೇನೆ ಎಂದು ಹೇಳಲು ಬಯಸುತ್ತೇನೆ, ಆದರೆ ನಮ್ಮ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿಯವರು ನಮ್ಮ ಪಕ್ಷದ ರಾಜ್ಯ ಘಟಕ ಎರಡನೇ ಬಾರಿ ಬಿಜೆಪಿ ಜೊತೆಗೆ ಕೈ ಜೋಡಿಸಿದೆ. ಈ ಹಿನ್ನೆಲೆಯಲ್ಲಿ ನಾನು ಪಕ್ಷದಿಂದ ಹಾಗೂ ಪಕ್ಷದ ಚಟುವಟಿಕೆಯಿಂದ ಹೊರಗುಳಿಯಲು ನಿರ್ಧರಿಸಿದ್ದೇನೆ ಎಂದು ಉಲ್ಲೇಖಿಸಿ ಬರೆದಿದ್ದಾರೆ.
ಮುಂದುವರೆದು, ‘ಬಿಜೆಪಿ ಜೊತೆಗೆ ಜೆಡಿಎಸ್ ಪಕ್ಷ ಕೈ ಜೋಡಿಸಿದ ಹಿನ್ನೆಲೆಯಲ್ಲಿ ನನಗೆ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ಕೊಡುವುದು ಬಿಟ್ಟು ಬೇರೆ ದಾರಿಯಿಲ್ಲ’ ಎಂದೂ ತಿಳಿಸಿದ್ದಾರೆ.
ಬಿಜೆಪಿ ಜೊತೆ ಮೈತ್ರಿಯಿಂದ ಅಸಮಾಧಾನಗೊಂಡ ನಾಯಕರು ಪಕ್ಷ ತೊರೆಯುತ್ತಿದ್ದಾರೆ. ಇದೀಗ ಮಾಜಿ ಸಚಿವ ಎನ್.ಎಂ ನಬಿ ಕೂಡಾ ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಇವರ ಜೊತೆಗೆ ನವದೆಹಲಿಯ ಮಾಜಿ ಪ್ರತಿನಿಧಿ ಮೊಹಿದ್ ಅಲ್ತಾಫ್, ಯುವ ಘಟಕದ ಅಧ್ಯಕ್ಷ ಎನ್‌ಎಂ ನೂರ್ ಮತ್ತು ಅಲ್ಪಸಂಖ್ಯಾತ ವಿಭಾಗದ ಮಾಜಿ ಮುಖ್ಯಸ್ಥ ನಾಸಿರ್ ಹುಸೇನ್ ಉಸ್ತಾದ್ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
https://x.com/PTI_News/status/1705586095734566990?s=20
ಶಿವಮೊಗ್ಗ ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ದೇವೇಗೌಡರ ಅತ್ಯಾಪ್ತ ಎಂದೇ ಗುರುತಿಸಿಕೊಂಡಿದ್ದ ಎಂ.ಶ್ರೀಕಾಂತ್ ಕೂಡಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಎಂ. ಶ್ರೀಕಾಂತ್ ಜೊತೆಗೆ ಜೆಡಿಎಸ್ ಕಾರ್ಪೋರೆಟರ್‌ಗಳು, ಮುಖಂಡರು, ನಾಯಕರು ಅಪಾರ ಸಂಖ್ಯೆಯ ಕಾರ್ಯಕರ್ತರು ಸಹ ಕಾಂಗ್ರೆಸ್ ಸೇರ್ಪಡೆ ಆಗುವುದು ಖಚಿತ ಎನ್ನುವ ಸುದ್ದಿ ಹೊರಬಿದ್ದಿದೆ.
ಪಕ್ಷದಿಂದ ಹೀಗೆ ನಾಯಕರ ದಂಡೇ ಕಾಲ್ಕೀಳುತ್ತಿರುವ ಹಂತದಲ್ಲಿ ಜೆಡಿಎಸ್ ಪಕ್ಷದ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆ ಎದ್ದು ಕಾಣುತ್ತಿದೆ. ಸಧ್ಯದ ಬೆಳವಣಿಗೆ ನೋಡಿದರೆ ಇನ್ನಷ್ಟು ನಾಯಕರು ಜೆಡಿಎಸ್ ತೊರೆಯಲಿದ್ದಾರೆ ಎಂಬುದು ಸ್ಪಷ್ಟ.
ನಿರೀಕ್ಷೆಯಂತೆ ಮುಸ್ಲಿಂ ಮುಖಂಡರ ಒಟ್ಟಾರೆ ಮತ ಸಂಪೂರ್ಣವಾಗಿ ಜೆಡಿಎಸ್ ತೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ವಿಶೇಷ ಎಂದರೆ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷದ ಅಧ್ಯಕ್ಷರೂ ಆಗಿರುವ ಸಿ.ಎಂ.ಇಬ್ರಾಹಿಂ ಕೂಡಾ ಪಕ್ಷ ತೊರೆಯುವ ಬಗ್ಗೆ ಉನ್ನತ ಮೂಲಗಳು ತಿಳಿಸಿವೆ.
ಅಷ್ಟೆ ಅಲ್ಲದೆ ಜಾತ್ಯತೀತ ನೆಲೆಗಟ್ಟಿನ ಮೇಲೆ ನಂಬಿಕೆ ಇಟ್ಟಿರುವ ಹೆಚ್ಚಿನ ನಾಯಕರು ಅದರಲ್ಲೂ ಒಕ್ಕಲಿಗ ಮತಗಳೂ ಸಹ ಜೆಡಿಎಸ್ ತೊರೆಯಬಹುದು ಎಂದೇ ಅಂದಾಜಿಸಲಾಗಿದೆ.