Home ಇನ್ನಷ್ಟು ಕೋರ್ಟು - ಕಾನೂನು ಒಗ್ಗಟ್ಟಿನ ಕಾಲಕ್ಕೆ ಬಿಕ್ಕಟ್ಟು ಸೃಷ್ಟಿ; ಪ್ರತಿಪಕ್ಷಕ್ಕೆ ಚುನಾವಣೆಯತ್ತ ದೃಷ್ಟಿ

ಒಗ್ಗಟ್ಟಿನ ಕಾಲಕ್ಕೆ ಬಿಕ್ಕಟ್ಟು ಸೃಷ್ಟಿ; ಪ್ರತಿಪಕ್ಷಕ್ಕೆ ಚುನಾವಣೆಯತ್ತ ದೃಷ್ಟಿ

0

ಬಿಕ್ಕಟ್ಟಿನ ಸಮಯದಲ್ಲಿ ಕೇಂದ್ರ ಸರಕಾರವನ್ನು ಮಧ್ಯಸ್ಥಿಕೆ ವಹಿಸಲು ರಾಜ್ಯದಿಂದ ಆಯ್ಕೆಯಾದ 28 ಸಂಸದರೂ ಆಗ್ರಹಿಸಬೇಕಿತ್ತು. ಆದರೆ ಅವರು ಕನಿಷ್ಟ ಮನವಿಯನ್ನೂ ಮಾಡಿಕೊಳ್ಳಲಿಲ್ಲ. 28 ರಲ್ಲಿ 25 ಜನ ಬಿಜೆಪಿ ಎಂಪಿಗಳು ಹಾಗೂ ಒಬ್ಬರು ಜೆಡಿಎಸ್, ಒಬ್ಬರು ಬಿಜೆಪಿಯನ್ನು ಬೆಂಬಲಿಸುವ ಪಕ್ಷೇತರ ಎಂಪಿ ಇದ್ದಾರಲ್ಲಾ ಇವರೆಲ್ಲಾ ಸೇರಿ ತಮ್ಮ ಮಹಾ ನಾಯಕ ಮೋದಿಯವರನ್ನು  ಭೇಟಿಯಾಗಿ ಬಿಕ್ಕಟ್ಟು ಬಗೆಹರಿಸಲು ಒತ್ತಾಯಿಸಬೇಕಿತ್ತು. ಆದರೆ ಆ ತಾಕತ್ತು ಅವರಲ್ಲಿಲ್ಲ – ಶಶಿಕಾಂತ ಯಡಹಳ್ಳಿ, ಹಿರಿಯ ಪತ್ರಕರ್ತರು.

“ರಾಜ್ಯ ಸರಕಾರ ಸುಪ್ರೀಂ ಕೋರ್ಟಿಗೆ ಬೇಗ ಅಪೀಲ್ ಮಾಡಬೇಕಿತ್ತು, ಮಾಡಲಿಲ್ಲ. ಸಮರ್ಥವಾಗಿ ವಾದ ಮಂಡಿಸಬೇಕಿತ್ತು ಮಂಡಿಸಿಲ್ಲ. ಈ ಹಿಂದೆ ಕೂಡಾ ಕಾವೇರಿ ನೀರು ಹರಿಸಬಾರದಿತ್ತು ಹರಿಸಲಾಯ್ತು. ಹೀಗಾಗಿ ಈ ಸರಕಾರ ಕನ್ನಡಿಗರಿಗೆ ದ್ರೋಹ ಮಾಡಿದೆ” ಎಂದು ಬಿಜೆಪಿ ಪಕ್ಷದ ಅಳಿದುಳಿದ ನಾಯಕರು ಹರಿಹಾಯುತ್ತಿದ್ದಾರೆ. ಕುಮಾರಸ್ವಾಮಿಗಳು ಸರಕಾರವನ್ನು ವಿರೋಧಿಸುತ್ತಿದ್ದಾರೆ. ಕನ್ನಡಿಗರ ಬಗ್ಗೆ, ಈ ನಾಡಿನ ರೈತರ ಬಗ್ಗೆ, ಮೈಸೂರಿನಿಂದ ಬೆಂಗಳೂರಿನವರೆಗೆ ಕುಡಿಯುವ ನೀರಿಗೆ ಆಗಬಹುದಾದ ಕೊರತೆಯ ಬಗ್ಗೆ ಈ ವಿರೋಧ ಪಕ್ಷಗಳಿಗೆ ನಿಜವಾದ ಕಾಳಜಿಗಿಂತಲೂ ರಾಜ್ಯ ಸರಕಾರದ ಮೇಲಿನ ಸೇಡಿನ ಭಾವನೆಯೇ ಮುಖ್ಯವಾಗಿದೆ. ಮುಂಬರುವ ಚುನಾವಣೆಯೇ ಗುರಿಯಾಗಿದೆ.

ಇದೇನು ಮೊದಲ ಸಲ ಉದ್ಭವವಾಗಿರುವ ಕಾವೇರಿ ನೀರು ಹಂಚಿಕೆಯ ಸಮಸ್ಯೆ ಏನಲ್ಲ. ಹಿಂದೆಲ್ಲಾ ರಾಜಕೀಯ ಪಕ್ಷಗಳು ಪಕ್ಷಬೇಧ ಮರೆತು ನಾಡಿನ ಹಿತಾಸಕ್ತಿಗಾಗಿ ಆಗ ಆಳುತ್ತಿದ್ದ ಸರಕಾರಕ್ಕೆ ಬೆಂಬಲ ಸೂಚಿಸಿವೆ. ತಮಿಳುನಾಡಿನ ದುರಾಸೆಯ ಬಗ್ಗೆ ಖಂಡಿಸಿವೆ. ಸರ್ವ ಪಕ್ಷದ ಸಭೆಯಲ್ಲಿ ಸಹಮತವೂ ವ್ಯಕ್ತವಾಗಿ ಕನ್ನಡಿಗರ ಪ್ರತಿರೋಧವನ್ನು ಪ್ರತಿಧ್ವನಿಸಲಾಗಿದೆ.

ಆದರೆ.. ಈ ಸಲ ಇವರಿಗೆ ಏನಾಗಿದೆ? ತೀವ್ರ ಬಿಕ್ಕಟ್ಟಿನ ಸಮಯದಲ್ಲಿ ಕರ್ನಾಟಕ ಸರಕಾರಕ್ಕೆ ಸಹಕಾರ ಕೊಡುವ ಬದಲು ಯಾಕೆ ಪ್ರತಿಪಕ್ಷಗಳು ತಿರುಗಿ ಬಿದ್ದಿವೆ. ಇಲ್ಲಸಲ್ಲದ ಆರೋಪಗಳನ್ನು ಮಾಡಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿವೆ? ಮಾಧ್ಯಮಗಳ ಮುಂದೆ ಕೆಸರೆರಚಾಟಕ್ಕಿಳಿದಿವೆ?

ಯಾಕೆಂದರೆ ಲೋಕಸಭಾ ಚುನಾವಣೆ ಹತ್ತಿರದಲ್ಲಿದೆ. ಆಡಳಿತ ವಿರೋಧಿ ಆಕ್ರೋಶ ಹಾಗೂ ಗ್ಯಾರಂಟಿ ಯೋಜನೆಗಳಿಂದಾಗಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಹೀನಾಯವಾದ ಹಿನ್ನಡೆ ಅನುಭವಿಸಿವೆ. ಹತಾಶೆ ಅತಿಯಾಗಿ ತದ್ವಿರುದ್ದ ಸಿದ್ಧಾಂತದ ಈ ಎರಡೂ ಪಕ್ಷಗಳು ಕೂಡಿಕೆ ಮಾಡಿಕೊಂಡಿವೆ. ಕನ್ನಡಿಗರ ಹಿತಾಸಕ್ತಿಗಿಂತ ರಾಜಕೀಯ ದ್ವೇಷವೇ ಈ ಎರಡೂ ಪಕ್ಷಗಳ ಆದ್ಯತೆಯಾಗಿದೆ. ಕಾಂಗ್ರೆಸ್ ಈ ಎರಡೂ ಪಕ್ಷಗಳ ಟಾರ್ಗೆಟ್ ಆಗಿದೆ? ಆದ್ದರಿಂದ ನಾಡಿನ ಸಂಕಷ್ಟದ ಸಮಯದಲ್ಲಿ ಆಳುವ ಸರಕಾರದ ಬೆಂಬಲಕ್ಕೆ ನಿಲ್ಲುವ ಬದಲು ಈ ಪ್ರತಿಪಕ್ಷಗಳು ಸರಕಾರದ ವಿರುದ್ಧ ಆರೋಪಗಳಲ್ಲಿ ನಿರತವಾಗಿವೆ. ಜನರನ್ನು ಪ್ರಚೋದಿಸುತ್ತಿವೆ.

ಆಯ್ತು.. ಪ್ರತಿಪಕ್ಷಗಳು ಹೇಳಿದಂತೆ ಮೊದಲೇ ಸುಪ್ರೀಂ ಕೋರ್ಟಿಗೆ ಸರಕಾರ ಹೋಗಬೇಕಿತ್ತು. ಹೋಗಿದ್ದರೂ ಈಗ ಬಂದ ತೀರ್ಪೇ ಬರುತ್ತಿತ್ತು. ಸುಪ್ರೀಂ ಕೋರ್ಟ್ ಕಾವೇರಿ ಪ್ರಾಧಿಕಾರದ ನಿರ್ಧಾರದಲ್ಲಿ ಮಧ್ಯ ಪ್ರವೇಶಿಸಲು ಆಗಲೂ ನಿರಾಕರಿಸುತ್ತಿತ್ತು. ಸಕ್ಷಮ ಪ್ರಾಧಿಕಾರದ ಮುಂದೆ ಸಮರ್ಥವಾಗಿ ವಾದ ಮಂಡಿಸಬೇಕಿತ್ತು. ಹೌದು.. ಈ ಹಿಂದೆ ಇದೇ ಬಿಜೆಪಿ ಹಾಗೂ ಜೆಡಿಎಸ್ ಸರಕಾರಗಳು ಅಸ್ತಿತ್ವದಲ್ಲಿದ್ದಾಗ ವಾದಮಾಡಿದ ವಕೀಲರುಗಳೇ ಈಗಲೂ ವಾದ ಮಂಡಿಸಿರುವುದು. ಹೀಗಾಗಿ ಸಮರ್ಥವಾಗಿ ವಾದ ಮಂಡನೆ ಆಗಿಲ್ಲವೆನ್ನುವ ಆರೋಪದಲ್ಲಿ ಅರ್ಥವಿಲ್ಲ. ಕನ್ನಡಿಗರ ಹಿತಾಸಕ್ತಿ ಕಾಪಾಡಲು ವಾದ ಮಂಡನೆ ಮೂಲಕ ಸಾಧ್ಯವಾದಷ್ಟೂ ಪ್ರಯತ್ನಿಸಲಾಗಿದೆ. ತಮಿಳುನಾಡು ಬೇಡಿಕೆ ಇಟ್ಟ ನೀರಿನ ಹರಿವಿನ ಪ್ರಮಾಣವನ್ನು 5000 ಕ್ಯೂಸೆಕ್ಸಿಗೆ ಇಳಿಸುವಲ್ಲಿ ಮಾತ್ರ ಈ ವಕೀಲರ ತಂಡ ಸಫಲತೆ ಸಾಧಿಸಿದೆ. ಅಷ್ಟು ನೀರನ್ನು ಬಿಡುವುದೂ ಈಗ ಸಾಧ್ಯವಿಲ್ಲವಾಗಿದೆ. ಕನ್ನಡನಾಡಿನ ಕಾವೇರಿ ನೀರಾಶ್ರಿತ ಜನರಿಗೆ ಕುಡಿಯುವ ನೀರಿಗೆ ಕೊರತೆಯಾಗುವ ಆತಂಕವಾದರೆ, ತಮ್ಮ ಬೆಳೆಗಳಿಗೆ ನೀರಿನ ಕೊರತೆಯಾಗುವ ಚಿಂತೆ ತಮಿಳುನಾಡಿನದ್ದಾಗಿದೆ. ಬೆಳೆಗಳಿಗಿಂತಲೂ ಕುಡಿಯುವ ನೀರು ಅತೀ ಮುಖ್ಯ ಎನ್ನುವುದನ್ನು  ಕಾವೇರಿ ಪ್ರಾಧಿಕಾರ ಅರ್ಥಮಾಡಿ ಕೊಳ್ಳಬೇಕಿತ್ತು, ಮಾಡಿಕೊಂಡಿಲ್ಲ.

ಬಿಕ್ಕಟ್ಟಿನ ಸಮಯದಲ್ಲಿ ಕೇಂದ್ರ ಸರಕಾರವನ್ನು ಮಧ್ಯಸ್ಥಿಕೆ ವಹಿಸಲು ರಾಜ್ಯದಿಂದ ಆಯ್ಕೆಯಾದ 28 ಸಂಸದರೂ ಆಗ್ರಹಿಸಬೇಕಿತ್ತು. ಆದರೆ ಕನಿಷ್ಟ ಮನವಿಯನ್ನೂ ಮಾಡಿಕೊಳ್ಳಲಿಲ್ಲ. 28 ರಲ್ಲಿ 25 ಜನ ಬಿಜೆಪಿ ಎಂಪಿಗಳು ಹಾಗೂ ಒಬ್ಬರು ಜೆಡಿಎಸ್, ಒಬ್ಬರು ಬಿಜೆಪಿಯನ್ನು ಬೆಂಬಲಿಸುವ ಪಕ್ಷೇತರ ಎಂಪಿ ಇದ್ದಾರಲ್ಲಾ ಇವರೆಲ್ಲಾ ಸೇರಿ ತಮ್ಮ ಮಹಾ ನಾಯಕ ಮೋದಿಯವರನ್ನು  ಭೇಟಿಯಾಗಿ ಬಿಕ್ಕಟ್ಟು ಬಗೆಹರಿಸಲು ಒತ್ತಾಯಿಸಬೇಕಿತ್ತು. ಆದರೆ ಆ ತಾಕತ್ತು ಅವರಲ್ಲಿಲ್ಲ. ಕೇಂದ್ರದ ಮಧ್ಯಸ್ಥಿಕೆ ಅನಗತ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರೇ ಹೇಳುವ ಮೂಲಕ ರಾಜ್ಯಗಳ ನಡುವಿನ ಸಮಸ್ಯೆಗೂ ಕೇಂದ್ರಕ್ಕೂ ಸಂಬಂಧವೇ ಇಲ್ಲವೆನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಇಂಡಿಯಾ ಒಕ್ಕೂಟದ ಭಾಗವಾಗಿರುವ ಕರ್ನಾಟಕ ಹಾಗೂ ತಮಿಳುನಾಡಿನ ಆಡಳಿತ ಪಕ್ಷಗಳು ಸಮಸ್ಯೆ ಬಗೆಹರಿಸಲಿ ಎಂದು ಪುಕ್ಕಟೆ ಸಲಹೆಯನ್ನೂ ಕೊಟ್ಟಿದ್ದಾರೆ. 

ಈ ಎರಡೂ ರಾಜ್ಯಗಳ ಮಾತುಕತೆಯಿಂದ ಬಗೆಹರಿಯಬಹುದಾದ ಬಿಕ್ಕಟ್ಟು ಇದಾಗಿದ್ದರೆ ಎಂದೋ ಬಗೆಹರಿಯಬಹುದಾಗಿತ್ತು. ಆದರೆ ತಮಿಳುನಾಡು ಕಾವೇರಿ ನೀರಿನ ವಿಷಯವಾಗಿ ಮೊದಲಿನಿಂದಲೂ ಕ್ಯಾತೆ ತೆಗೆಯುತ್ತಲೇ ಬಂದಿದೆ. ಪ್ರಾದೇಶಿಕ ಪಕ್ಷದ ಅಸ್ಮಿತೆಯನ್ನು ಉಳಿಸಿಕೊಳ್ಳಲು ರೈತರ ಸಮಸ್ಯೆಗೆ ಸ್ಪಂದಿಸಿ ತಮ್ಮ ಮತಬ್ಯಾಂಕನ್ನು ಗಟ್ಟಿಗೊಳಿಸಿಕೊಳ್ಳಲು ತಮಿಳುನಾಡಿನ  ರಾಜಕೀಯ ಪಕ್ಷಗಳು ಪ್ರಯತ್ನಿಸುತ್ತವೆ. ಇಂತಹ ಯಾವುದೇ ಬಿಕ್ಕಟ್ಟು ಸೃಷ್ಟಿಯಾದಾಗಲೂ ಪಕ್ಷಾತೀತವಾಗಿ ತಮಿಳುನಾಡು ಒಂದಾಗುತ್ತದೆ. ಆ ರಾಜ್ಯದ ಎಲ್ಲಾ ಎಂಪಿಗಳು  ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕುತ್ತವೆ. ತೀರ್ಪು ಯಾವಾಗಲೂ ತಮ್ಮ ರಾಜ್ಯದ ಪರವಾಗಿ ಬರುವಂತೆ ನೋಡಿಕೊಳ್ಳುತ್ತವೆ. ಆದರೆ ಗಟ್ಟಿಯಾದ ಪ್ರಾದೇಶಿಕ ಪಕ್ಷ ಇಲ್ಲದೇ ಇರುವ ನಮ್ಮ ರಾಜ್ಯದಲ್ಲಿ ಇದಕ್ಕೆ ವ್ಯತಿರಿಕ್ತವಾದ ವಾತಾವರಣ ಇದೆ. ಇಲ್ಲಿ ರಾಜಕೀಯ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುವಲ್ಲಿ, ಕೆಸರೆರಚಾಟಕ್ಕೆ ತೊಡಗುವುದರಲ್ಲಿ ನಿರತವಾಗುತ್ತವೆ. ತಮಿಳುನಾಡಿನ ಎಂಪಿಗಳಲ್ಲಿ ಇರುವಷ್ಟು ಒಗ್ಗಟ್ಟು ಕರ್ನಾಟಕದ ಎಂಪಿಗಳಲ್ಲಿ ಇಲ್ಲವಾಗಿದೆ. ನಿಜ ಏನೆಂದರೆ ಕರ್ನಾಟಕದ ಈ ಯಾವ ಎಂಪಿಗಳೂ ಮೋದಿ ಹಾಗೂ ಶಾ ಮುಂದೆ ನಿಂತು ಮಾತಾಡಲೂ ಹಿಂಜರಿಯುತ್ತಾರೆ. ಹಾಗೂ ಕಳೆದ ಚುನಾವಣೆಯಲ್ಲಿ ಕರ್ನಾಟಕದಲ್ಲಾದ ಹೀನಾಯ ಸೋಲಿನಿಂದ ಅಸಮಾಧಾನ ಹೊಂದಿರುವ ಬಿಜೆಪಿ ಹೈಕಮಾಂಡ್ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇಲ್ಲಿವರೆಗೂ ರಾಜ್ಯ ಬಿಜೆಪಿಗೆ ಒಬ್ಬ ನಾಯಕನನ್ನು ಆಯ್ಕೆ ಮಾಡಲೂ ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ 25+2 ಎಂಪಿಗಳಿಂದ ಏನನ್ನೂ ನಿರೀಕ್ಷಿಸಲು ಕನ್ನಡಿಗರಿಗೆ ಸಾಧ್ಯವಾಗಿಲ್ಲ. ರಾಜ್ಯ ಸರಕಾರದ ಮೇಲೆ ಗೂಬೆ ಕೂಡಿಸಿ ಪ್ರಯೋಜನವಾದರೂ ಏನು?

ಬಿಜೆಪಿ ಪ್ರತಿಭಟನೆ 

ನೀರಿನ ಹಂಚಿಕೆ ರಾಜ್ಯದ ಸಮಸ್ಯೆಯಾದರೂ ಅದರ ಸೂತ್ರ ಇರುವುದು ಕೇಂದ್ರದ ಕೈಯಲ್ಲಿ. ಸುಪ್ರೀಂ ಕೋರ್ಟ್ ಸಹ ಕೈಚೆಲ್ಲಿ ಕುಳಿತಿರುವಾಗ ಈ ಬಿಕ್ಕಟ್ಟನ್ನು ಬಗೆಹರಿಸಲು ಒಕ್ಕೂಟ ಸರಕಾರ ಮಧ್ಯಸ್ಥಿಕೆ ವಹಿಸುವುದು ಅಪೇಕ್ಷಣೀಯ. ಆದರೆ ಮೋದಿ ಕೇಂದ್ರಿತ ಒಕ್ಕೂಟ ಸರಕಾರ ಅದಕ್ಕೆ ಮುಂದಾಗುವುದಿಲ್ಲ. ಯಾಕೆಂದರೆ ಕಳೆದ ಚುನಾವಣೆಯಲ್ಲಿ ಹೀನಾಯವಾಗಿ ಬಿಜೆಪಿ ಪಕ್ಷವನ್ನು ಸೋಲಿಸಿದ ಕನ್ನಡಿಗರ ಮೇಲೆ ಮೋದಿ ಶಾ ರವರಿಗೆ ತೀವ್ರ ಅಸಮಾಧಾನವಿದೆ. ಮೋದಿಯವರು ರೋಡ್ ಶೋ ಮಾಡಿದಲ್ಲೆಲ್ಲಾ ಬಿಜೆಪಿ ಸೋತಿದ್ದನ್ನು ಇನ್ನೂ ಕಮಲ ಪಕ್ಷದ ಹೈಕಮಾಂಡಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕನ್ನಡಿಗರ ಮೇಲೆ ಸೇಡು ತೀರಿಸಿಕೊಳ್ಳಲು ಕಾವೇರಿ ನೀರು ಹಂಚಿಕೆ ಬಿಕ್ಕಟ್ಟಿಗೆ ಸ್ಪಂದಿಸದೆ ಮೌನವಾಗಿದೆ. ಇನ್ನು ರಾಜ್ಯದ ಬಿಜೆಪಿ ನಾಯಕರುಗಳು ಕೇಂದ್ರದ ಮಧ್ಯಸ್ಥಿಕೆಯ ಅಗತ್ಯವನ್ನೇ ನಿರಾಕರಿಸಿ ರಾಜ್ಯ ಸರಕಾರದ ಮೇಲೆ ಆರೋಪ ಪೀಡಿತರಾಗಿದ್ದಾರೆ. 

 11 ವರ್ಷಗಳ ಹಿಂದೆ ಜಗದೀಶ ಶೆಟ್ಟರ್ ರವರು ಬಿಜೆಪಿ ಸರಕಾರದ ಮುಖ್ಯಮಂತ್ರಿಯಾಗಿದ್ದಾಗ ಇದೇ ಬೊಮ್ಮಾಯಿಯವರು ಜಲಸಂಪನ್ಮೂಲ ಸಚಿವರಾಗಿದ್ದರು. ಆಗಲೂ ಕೆ ಆರ್ ಎಸ್ ನಲ್ಲಿ ಹೆಚ್ಚು ನೀರಿಲ್ಲದಿದ್ದರೂ  ತಮಿಳುನಾಡಿಗೆ ದಿನಕ್ಕೆ 10 ಸಾವಿರ ಕ್ಯೂಸೆಕ್ಸ್ ನೀರು ಬಿಡುತ್ತೇನೆಂದು ಸುಪ್ರೀಂ ಕೋರ್ಟಿಗೆ ಲಿಖಿತ ಭರವಸೆ ಕೊಟ್ಟು ರಾತ್ರೋ ರಾತ್ರಿ ನೀರು ಬಿಟ್ಟಿದ್ದರು. ಇದನ್ನೆಲ್ಲಾ ಮರೆತ ಬೊಮ್ಮಾಯಿಯವರು ಈಗ ದಮ್ಮು ತಾಕತ್ತಿನ ಮಾತನ್ನಾಡುತ್ತಾ ರಾಜ್ಯ ಸರಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ ಹಾಗೂ ಕೇಂದ್ರ ಸರಕಾರದ ಬಗ್ಗೆ ದಿವ್ಯ ಮೌನಕ್ಕೆ ಶರಣಾಗಿದ್ದಾರೆ. ಕರ್ನಾಟಕದ ಜನತೆ ಇದೆಲ್ಲವನ್ನೂ ಗಮನಿಸುತ್ತಲೇ ಇದ್ದಾರೆ. 

ಈಗ ಪ್ರಾಧಿಕಾರದ ಆದೇಶದಂತೆ ನೀರು ಬಿಡಕೂಡದು ಎಂದು ರೈತರು ಬೀದಿಗಿಳಿದು ಹೋರಾಡುತ್ತಿದ್ದಾರೆ. ಇಂದು ಮಂಡ್ಯ ಜಿಲ್ಲೆಯಲ್ಲಿ ಬಂದ್ ಗೆ ಕರೆಕೊಟ್ಟಿದ್ದಾರೆ. ರೈತರ ಆತಂಕಕ್ಕೆ ಸ್ಪಂದಿಸಿದ 150 ಕ್ಕೂ  ಹೆಚ್ಚು ಸಂಘಟನೆಗಳು, ಕನ್ನಡಪರ ಹೋರಾಟಗಾರರು ಮಂಗಳವಾರ ಬೆಂಗಳೂರು ಬಂದ್ ಗೆ ಕರೆಕೊಟ್ಟಿದ್ದಾರೆ. ರಾಜ್ಯಾದ್ಯಂತ ಕಾವೇರಿ ಕಿಚ್ಚು ತೀವ್ರಗೊಳ್ಳುತ್ತಿದೆ. ತಮಿಳುನಾಡಿಗೆ ಕಾವೇರಿಯಲ್ಲಿ ಅಳಿದುಳಿದ ನೀರನ್ನೂ ಬಿಟ್ಟರೆ ಮುಂದಿನ ಮಳೆಗಾಲದವರೆಗೂ ಕುಡಿಯುವ ನೀರಿಗೂ ತತ್ವಾರವಾಗುತ್ತದೆಂಬ ಆತಂಕ ಕನ್ನಡಿಗರದ್ದು. ಈ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನಿಸಬೇಕಾದ ರಾಜ್ಯವನ್ನು ಪ್ರತಿನಿಧಿಸುವ ಸಮಸ್ತ ಎಂಪಿಗಳ ನಿರ್ಲಿಪ್ತ ನಡೆಯನ್ನು ಸಮಸ್ತ ಕನ್ನಡಿಗರೂ ಪ್ರಶ್ನಿಸಬೇಕಿದೆ. ಈ ನಿರ್ವೀರ್ಯ ಎಂಪಿಗಳನ್ನು ಕಂಡಕಂಡಲ್ಲಿ ಘೆರಾವ್ ಮಾಡಬೇಕಿದೆ. ಅವರ ಮನೆಗಳ ಮುಂದೆ ಧರಣಿ ಸತ್ಯಾಗ್ರಹ ಮಾಡಬೇಕಿದೆ. ಕೇಂದ್ರದ ಮೇಲೆ ಒತ್ತಡ ಹೇರಿ ಪ್ರಾಧಿಕಾರದ ತಾರತಮ್ಯದ ನಿರ್ಣಯವನ್ನು ನಿಲ್ಲಿಸಲು ಆಗ್ರಹಿಸಬೇಕಿದೆ. ಜೊತೆಗೆ ರಾಜ್ಯ ಸರಕಾರವು ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷಗಳ ನಾಯಕರ ಮೂಲಕ ತಮಿಳುನಾಡು ಮುಖ್ಯ ಮಂತ್ರಿಗೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕಿದೆ ಹಾಗೂ ರಾಜಕೀಯ ಒತ್ತಡ ಸೃಷ್ಟಿಸಬೇಕಿದೆ. ಬಿಕ್ಕಟ್ಟಿನ ಸಮಯದಲ್ಲಿ ಒಗ್ಗಟ್ಟು ಮರೆತು ರಾಜಕೀಯ ಮಾಡುತ್ತಿರುವ ಪ್ರತಿಪಕ್ಷಗಳಿಗೆ ಮುಂಬರುವ ಚುನಾವಣೆಯಲ್ಲಿ ಕನ್ನಡಿಗರು ಮುಟ್ಟಿ ನೋಡಿಕೊಳ್ಳುವಂತಹ ಪಾಠ ಕಲಿಸಬೇಕಿದೆ. ಕನ್ನಡಿಗರ ಅಸ್ಮಿತೆ ಕಾಪಾಡಲಾರದ ಪ್ರಜಾಪ್ರತಿನಿಧಿಗಳು ಹಾಗೂ ಪಕ್ಷಗಳನ್ನು ನಿರ್ದಾಕ್ಷಿಣ್ಯವಾಗಿ ಸೋಲಿಸಬೇಕಿದೆ. ಕನ್ನಡದ ಹಿತಾಸಕ್ತಿ ಗೆಲ್ಲಬೇಕಿದೆ.

ಶಶಿಕಾಂತ ಯಡಹಳ್ಳಿ

ಹಿರಿಯ ಪತ್ರಕರ್ತರು ಮತ್ತು ರಂಗಕರ್ಮಿ

ಇದನ್ನೂ ಓದಿಸರ್ಕಾರಗಳು ಸಾಂಸ್ಕೃತಿಕ ಜಡತ್ವದಿಂದ ಬಿಡುಗಡೆ ಆಗುವುದು ಯಾವಾಗ?

You cannot copy content of this page

Exit mobile version