ತಮಿಳುನಾಡು : ವಿಜಯ್ (Thalapathy Vijay) ತಮಿಳಗ ವೆಟ್ರಿ ಕಳಗಂ (TVK) ಹೆಸರಿನ ಪಕ್ಷ ಸ್ಥಾಪನೆ ಮಾಡಿದ್ದು ತಮಿಳುನಾಡಿನ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಕಾಲಿವುಡ್‌ನ ಸೂಪರ್ ಸ್ಟಾರ್ ಆಗಿದ್ದ ವಿಜಯ್ ಇದೀಗ ರಾಜಕಾರಣಿಯಾಗಿದ್ದಾರೆ. ಹೊಸ ಪಕ್ಷದ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟಾಗಿನಿಂದ ದಳಪತಿ ವಿಜಯ್ ಒಂದಲ್ಲಾ ಒಂದು ವಿವಾದಕ್ಕೆ ಗುರಿಯಾಗುತ್ತಲೇ ಇದ್ದಾರೆ. ಕೆಲದಿನಗಳ ಹಿಂದಷ್ಟೇ ತಮಿಳುನಾಡಿನಲ್ಲಿ ರ್ಯಾಲಿ ವೇಳೆ ಸಾರ್ವಜನಿಕರಿಗೆ ಹಲ್ಲೆ ಮಾಡಿದ ಆರೋಪ ವಿಜಯ್ ಮತ್ತು ಬೌನ್ಸರ್ ಮೇಲೆ ಬಂದಿತ್ತು, ಇದೀಗ ಈ ಪ್ರಕರಣ ಮಾಸುವ ಮುನ್ನವೇ ವಿಜಯ್ ರ್ಯಾಲಿಯಲ್ಲಿ ಮತ್ತೊಂದು ಘನಘೋರ ದುರಂತ ಸಂಭವಿಸಿದೆ.
ಇದೀಗ ತಮಿಳುನಾಡಿನ ಕರೂರಿನಲ್ಲಿ ನಡೆದ ಟಿವಿಕೆ ಪಕ್ಷದ ರ್ಯಾಲಿಯಲ್ಲಿ (TVK party rally) ಕಾಲ್ತುಳಿತ (stampede) ಸಂಭವಿಸಿ 30ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ವಿಜಯ್ ಅವರ TVK ಪಕ್ಷದ ಪರವಾಗಿ ಕರೂರಿನಲ್ಲಿ ನಡೆದ ಪ್ರಚಾರ ರ್ಯಾಲಿಯಲ್ಲಿ 31 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವ ಎಂ. ಸುಬ್ರಮಣಿಯನ್ ಹೇಳಿದ್ದಾರೆ. ಇನ್ನು ಈ ದುರಂತದಲ್ಲಿ 6 ಮಕ್ಕಳು, 16 ಮಹಿಳೆಯರು ಮತ್ತು 9 ಪುರುಷರು ಸೇರಿದಂತೆ ಒಟ್ಟು 31 ಜನರು ಸಾವನ್ನಪ್ಪಿದ್ದಾರೆ ಎಂದು ಸಚಿವರು ಹೇಳಿದರು. ಇನ್ನು 40 ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.