Home ರಾಜಕೀಯ ಅಮಿತ್ ಶಾ ಜೊತೆಗಿನ ಚರ್ಚೆಯ ವೈರಲ್ ವಿಡಿಯೋಗೆ ಸ್ಪಷ್ಟನೆ ನೀಡಿದ ತಮಿಳಿಸೈ ಸೌಂದರರಾಜನ್

ಅಮಿತ್ ಶಾ ಜೊತೆಗಿನ ಚರ್ಚೆಯ ವೈರಲ್ ವಿಡಿಯೋಗೆ ಸ್ಪಷ್ಟನೆ ನೀಡಿದ ತಮಿಳಿಸೈ ಸೌಂದರರಾಜನ್

0

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜಕೀಯ ಮತ್ತು ತಮ್ಮ ಮತ ಕ್ಷೇತ್ರ ಕಾರ್ಯಗಳ ಮೇಲೆ ಕಾಳಜಿ ಇರಲಿ ಮತ್ತು ತೀವ್ರವಾಗಿ ಗಮನಹರಿಸುವಂತೆ ಸಲಹೆ ನೀಡಿದ್ದಾರೆ ಎಂದು ತೆಲಂಗಾಣ ಮಾಜಿ ರಾಜ್ಯಪಾಲ ಮತ್ತು ತಮಿಳುನಾಡಿನ ಹಿರಿಯ ಬಿಜೆಪಿ ನಾಯಕಿ ತಮಿಳಿಸೈ ಸೌಂದರರಾಜನ್ ಗುರುವಾರ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಮತ್ತು ಬುಧವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಅಮಿತ್ ಶಾ ಅವರೊಂದಿಗಿನ ತನ್ನ ಮಾತುಕತೆಯ ಸುತ್ತಲಿನ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ ತಮಿಳಿಸೈ ಸೌಂದರರಾಜನ್ ಅವರು ಸಾರ್ವತ್ರಿಕ ಚುನಾವಣೆಯ ನಂತರ ಮೊದಲ ಬಾರಿಗೆ ಆಂಧ್ರಪ್ರದೇಶದಲ್ಲಿ ಶಾ ಅವರನ್ನು ಭೇಟಿಯಾದ ಸಂದರ್ಭದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

“ಚುನಾವಣೆಯ ನಂತರ ಪಕ್ಷ ಸಂಘಟನೆ ಮತ್ತು ಸ್ಥಳೀಯವಾಗಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಕೇಳಲು ಅವರು ನನ್ನನ್ನು ಕರೆದರು. ನಾನು ವಿವರಿಸುತ್ತಿದ್ದಂತೆ, ಸಮಯದ ಕೊರತೆಯಿಂದಾಗಿ, ಅತ್ಯಂತ ಕಾಳಜಿಯಿಂದ, ಅವರು ರಾಜಕೀಯ ಮತ್ತು ಕ್ಷೇತ್ರ ಕಾರ್ಯಗಳನ್ನು ತೀವ್ರವಾಗಿ ಕೈಗೊಳ್ಳಲು ಸಲಹೆ ನೀಡಿದರು. ಇದು ನನಗೆ ತೃಪ್ತಿ ನೀಡಿದೆ” ಎಂದು ತಮಿಳಿಸೈ ತಮ್ಮ X ಖಾತೆಯಲ್ಲಿ ವಿವರಿಸಿದ್ದಾರೆ.

ತಮಿಳಿಸೈ ಅವರು ತಮ್ಮ ಪೋಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಜೆಪಿ ನಡ್ಡಾ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರ ಜೊತೆಗೆ ಪ್ರಧಾನಿ, ಕೇಂದ್ರ ಗೃಹ ಸಚಿವರು ಮತ್ತು ಬಿಜೆಪಿ ಕಚೇರಿಗಳ ಹ್ಯಾಂಡಲ್‌ಗಳನ್ನು ಟ್ಯಾಗ್ ಮಾಡಿದ್ದಾರೆ.

ವಿಜಯವಾಡದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಇದು ನಡೆದಿದ್ದು, 11 ನಿಮಿಷಗಳ ವಿಡಿಯೋ ದಕ್ಷಿಣ ಭಾರತದಾದ್ಯಂತ ಬಾರೀ ವಿವಾದ ಹುಟ್ಟು ಹಾಕಿದೆ. ತಮಿಳಿಸೈ ಹೋಗುವಾಗ ಅಮಿತ್ ಶಾ ಕರೆದ ರೀತಿ, ಅಲ್ಲಿ ತಮಿಳಿಸೈ ಅವರನ್ನು ನಡೆಸಿಕೊಂಡ ನಡೆ ಯಾವುದರಲ್ಲೂ ಅಮಿತ್ ಶಾ ‘ಸಲಹೆ’ ನೀಡಿದ್ದು ಎಂದೆನಿಸಿಲ್ಲ. “ಉತ್ತರದವರ ದರ್ಪ, ದಕ್ಷಿಣದ ನಾಯಕರ ಮೇಲೆ” ಹೇಗಿರುತ್ತದೆ ಎಂಬಂತೆ ಅಮಿತ್ ಶಾ ವರ್ತನೆ ಕಂಡುಬಂದಿತ್ತು. ಘಟನೆ ಸಮಯದಲ್ಲಿ ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಕೇಂದ್ರ ಸಚಿವರಾದ ನಡ್ಡಾ ಮತ್ತು ನಿತಿನ್ ಗಡ್ಕರಿ ಸಮೀಪದಲ್ಲಿ ಕುಳಿತಿದ್ದರು.

ತಮಿಳುನಾಡು ಬಿಜೆಪಿಯಲ್ಲಿ ಅಣ್ಣಾಮಲೈ ಪಾರುಪತ್ಯ ಶುರುವಾದ ದಿನದಿಂದಲೂ ತಮಿಳಿಸೈ ಮತ್ತು ಅಣ್ಣಾಮಲೈ ನಡುವೆ ಸಣ್ಣದೊಂದು ವೈಮನಸ್ಸು ಹೊಗೆಯಾಡುತ್ತಿತ್ತು. ಚುನಾವಣೆ ಸಂದರ್ಭದಲ್ಲೂ ಕೂಡ ಅಣ್ಣಾಮಲೈ ಬೆಂಬಲಕ್ಕೆ ತಮಿಳಿಸೈ ಹೆಚ್ಚಾಗಿ ನಿಲ್ಲದೇ ಇರುವುದೂ ಕೇಂದ್ರ ಬಿಜೆಪಿ ನಾಯಕರ ಗಮನಕ್ಕೆ ಬಂದಿತ್ತು. ಇದನ್ನೇ ಗುರಿಯಾಗಿಸಿಕೊಂಡು ತಮಿಳಿಸೈಗೆ ಖಡಕ್ ವಾರ್ನಿಂಗ್ ಮಾಡಲಾಗಿದೆ ಎಂದೇ ಎಲ್ಲಾ ಮಾಧ್ಯಮಗಳು ಸುದ್ದಿ ಮಾಡಿದ್ದವು.

ಏತನ್ಮಧ್ಯೆ, ಈ ರೀತಿಯ ಅಭಿಪ್ರಾಯಗಳೊಂದಿಗೆ ಸಾರ್ವಜನಿಕವಾಗಿ ವಿಚಾರ ಮುಟ್ಟಿಸುವಂತೆ ಷಾ ತಮಿಳಿಸೈಗೆ ಛೀಮಾರಿ ಹಾಕಿದ್ದಾರೆ ಎಂಬ ಊಹಾಪೋಹಗಳೂ ಸಹ ಹರಿದಾಡಿದೆ. ಅಣ್ಣಾಮಲೈ ಅವರ ಬೆಂಬಲಿಗರು ಈ ದೃಶ್ಯಗಳನ್ನು ತಮಿಳಿಸೈ ಅವರ ‘ಸಾರ್ವಜನಿಕ ಉಪದೇಶ’ ಎಂದೂ ವ್ಯಾಖ್ಯಾನಿಸಿದ್ದಾರೆ.

You cannot copy content of this page

Exit mobile version