ತಿರುವಣ್ಣಾಮಲೈ: ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಪೂರ್ವ ಘಟ್ಟದಲ್ಲಿರುವ ಜವ್ವಾಡು ಬೆಟ್ಟದಲ್ಲಿ ಹಬ್ಬದ ವಾತಾವರಣ ಮೂಡಿದ್ದು, ಇಲ್ಲಿ ವಾಸಿಸುವ ಸಾವಿರಾರು ಬುಡಕಟ್ಟು ನಿವಾಸಿಗಳು ಸಂಭ್ರಮಾಚರಣೆ ಮಾಡುತ್ತಿದ್ದಾರೆ.
ಅವರ ಸಮುದಾಯಕ್ಕೆ ಸೇರಿದ ಶ್ರೀಪತಿ (23) ತಮಿಳುನಾಡು ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಅವರು ರಾಜ್ಯದ ಮೊದಲ ಮಹಿಳಾ ಸಿವಿಲ್ ನ್ಯಾಯಾಧೀಶರಾಗಿ ಹೊರಹೊಮ್ಮಿದ್ದಾರೆ.
ಈ ಆದಿವಾಸಿ ಜನಾಂಗದ ವಿದ್ಯಾರ್ಥಿನಿಗೆ ಶೈಕ್ಷಣಿಕ ಮಾರ್ಗದರ್ಶನ ನೀಡಿದ ಶಿಕ್ಷಕಿ ಮಹಾಲಕ್ಷ್ಮಿ, ಸವಾಲುಗಳ ನಡುವೆ ಶ್ರೀಪತಿಯ ಸ್ಥೈರ್ಯ ಮತ್ತು ಬದ್ಧತೆ ಅವಳನ್ನು ಇಂದಿನ ಸ್ಥಿತಿಗೆ ತಂದಿದೆ ಎಂದು ಹೇಳಿದರು.
“ಅವಳು ಗರ್ಭಿಣಿಯಾಗಿದ್ದರೂ ಪರೀಕ್ಷೆಗೆ ಚೆನ್ನಾಗಿ ತಯಾರಿ ನಡೆಸುತ್ತಿದ್ದಳು. ಮತ್ತು ಪರೀಕ್ಷೆಯ ಸಮಯದಲ್ಲೇ ಆಕೆಗೆ ಹೆರಿಗೆ ದಿನಾಂಕ ನಿಗದಿಯಾಗಿತ್ತು. ಪರೀಕ್ಷೆಗೆ ಎರಡು ದಿನಗಳಿರುವಾಗ ಶ್ರೀಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ವೈದ್ಯಕೀಯ ಆರೈಕೆಯಲ್ಲಿರುವಾಗಲೇ, ಪರೀಕ್ಷೆ ಬರೆಯಲು ಚೆನ್ನೈನಿಂದ 200 ಕಿ.ಮೀ ಸಮೀಪವಿರುವ ತಿರುವಣ್ಣಾಮಲೈಗೆ ಪ್ರಯಾಣಿಸಿದಳು. ಆಕೆ ಈಗ ತನ್ನ ಧ್ಯೇಯವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾಳೆ” ಎಂದು ಮಹಾಲಕ್ಷ್ಮಿ ಹೇಳಿದರು.
ಅವರ ಪ್ರಕಾರ, ಶ್ರೀಪತಿ ತನ್ನ ಶಕ್ತಿಯ ಆಧಾರಸ್ತಂಭಗಳಾದ ತನ್ನ ಪತಿ ವೆಂಕಟ್ರಮಣ ಮತ್ತು ಅವಳ ತಾಯಿಗೆ ಸದಾ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ.
ಜವ್ವಾಡು ಬೆಟ್ಟದ ಪಕ್ಕದಲ್ಲಿರುವ ಬುಡಕಟ್ಟು ಜನಾಂಗದ ಕುಗ್ರಾಮವಾದ ಪುಲಿಯೂರಿನ ನಿವಾಸಿಯಾಗಿರುವ ವೆಂಕಟರಾಮನ್ ಅವರು ಮದುವೆಯ ನಂತರ ಪತ್ನಿಯನ್ನು ಕಾನೂನು ಪದವಿ ಓದಲು ಪ್ರೋತ್ಸಾಹಿಸಿದರು.
ಮದುವೆಯ ನಂತರ ತನ್ನ ಆಸೆಗಳಿಗೆ ಅಡ್ಡಿಯಾಗಿ ನಿಲ್ಲದೆ ಗಂಡನೇ ದೊಡ್ಡ ಆಸರೆಯಾಗಿದ್ದರು ಎಂದು ಹೆಮ್ಮೆಯಿಂದ ಹೇಳುತ್ತಾರೆ ಶ್ರೀಪತಿ. ಶ್ರೀಪತಿಯವರ ತಾಯಿಯೂ ದೊಡ್ಡ ಪ್ರೇರಕರಾಗಿದ್ದರು. ತನ್ನ ಮಗಳನ್ನು ಗಂಡನ ಹಳ್ಳಿಯಲ್ಲಿ ಓದಿಸಲು ಸಾಧ್ಯವಾಗದ ಕಾರಣ, ಅವರು ಪಟ್ಟಣಕ್ಕೆ ಹೋಗಿ ತನ್ನ ಮಗಳು ಶ್ರೀಪತಿಯನ್ನು ಶಾಲೆಗೆ ಸೇರಿಸಿದರು.
ಬಿಎ ಮತ್ತು ಎಲ್‌ಎಲ್‌ಬಿ (ಬಿಎಲ್) ವ್ಯಾಸಂಗ ಮಾಡಿರುವ ಶ್ರೀಪತಿ ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೊದಲು ಆರು ತಿಂಗಳ ತರಬೇತಿಯನ್ನು ಪಡೆಯಬೇಕಿದೆ.
TNPSC ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ಶ್ರೀಪತಿ ಮಂಗಳವಾರ ಆಪ್ತ ಸ್ವಾಗತದ ನಡುವೆ ತನ್ನ ತವರು ಮನೆಗೆ ಮರಳಿದರು. ಅವರ ಸಾಧನೆಗೆ ಅಭಿನಂದಿಸಿ ಅವರನ್ನು ಆದಿವಾಸಿ ಗ್ರಾಮದ ಶಾಲಾ ಬಾಲಕರು, ಬಾಲಕಿಯರು, ಗ್ರಾಮಸ್ಥರು ಮೆರವಣಿಗೆಯಲ್ಲಿ ಕರೆತಂದು ಅಭಿನಂದಿಸಿದರು.
⏪ಪೀಪಲ್ ಮೀಡಿಯಾ⏩ ವಾಟ್ಸಪ್ ಗುಂಪಿಗೆ ಸೇರಲು ಕೆಳಗಿನ ಲಿಂಕ್ ಒಪನ್ ಮಾಡಿ👇
https://chat.whatsapp.com/BoGCVVQyXYVE5m7RhIQRWv
ಶ್ರೀಪತಿಯವರನ್ನು ತಮಿಳು ನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಅಭಿನಂದಿಸಿದ್ದು, ಅವರ ಈ ಕುರಿತು ತಮ್ಮ ಟ್ವಿಟರ್ ಅಕೌಂಟಿನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
“ತಿರುವಣ್ಣಾಮಲೈ ಜಿಲ್ಲೆಯ ಜವ್ವಧು ಬೆಟ್ಟಗಳ ಬಳಿಯ ಪುಲಿಯೂರ್ ಗ್ರಾಮದ ಶ್ರೀಮತಿ ಶ್ರೀಪತಿ ತಮ್ಮ 23ನೇ ವಯಸ್ಸಿನಲ್ಲಿ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ದೊಡ್ಡ ಸೌಲಭ್ಯಗಳಿಲ್ಲದ ಗುಡ್ಡಗಾಡು ಹಳ್ಳಿಯ ಬುಡಕಟ್ಟು ಹುಡುಗಿಯೊಬ್ಬಳು ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ಮಟ್ಟವನ್ನು ತಲುಪಿರುವುದನ್ನು ನೋಡಿ ನನಗೆ ಸಂತೋಷವಾಗಿದೆ.
ತಮಿಳು ಮಾಧ್ಯಮದಲ್ಲಿ ಓದಿದವರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಆದ್ಯತೆಯಾಗಿ ನಮ್ಮ ದ್ರಾವಿಡ ಮಾದರಿ ಸರ್ಕಾರ ತಂದ ಸರ್ಕಾರಿ ಆದೇಶದ ಮೂಲಕ ಶ್ರೀಪತಿ ಅವರನ್ನು ನ್ಯಾಯಾಧೀಶರಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿದು ನನಗೆ ಹೆಮ್ಮೆ ಇದೆ. ಆಕೆಯ ಯಶಸ್ಸಿಗೆ ಬೆಂಬಲ ನೀಡಿದ ತಾಯಿ ಮತ್ತು ಪತಿಗೆ ಅಭಿನಂದನೆಗಳು!
ಸಾಮಾಜಿಕ ನ್ಯಾಯ ಎಂಬ ಪದವನ್ನು ಉಚ್ಚರಿಸಲು ಸಹ ಬಯಸದ ಕೆಲವು ಜನರಿಗೆ ಶ್ರೀಪತಿ ಮತ್ತು ಇತರರ ಗೆಲುವು ತಮಿಳುನಾಡಿನ ಉತ್ತರವಾಗಿದೆ.“