ನೇಪಾಳ ಹಿಂದೂ ರಾಷ್ಟ್ರ. ನೇಪಾಳಕ್ಕೆ ಹೋದವರು ಅಲ್ಲಿರುವ ಕನ್ಯಾ ದೇವತೆಯನ್ನು ಸಹನೋಡಿಕೊಂಡು ಬರುವುದು ಸಹಜ. ಅದೊಂದು ತರಹ ಸಂಪ್ರದಾಯ ಎನ್ನುವಂತೆಯೇ ಆಗಿಹೋಗಿದೆ. ಊರಿಗೆ ಹೋದೋಳು ನೀರಿಗೆ ಬರದೆ ಇರ್ತಾಳಾ? ಅನ್ನೋ ಹಾಗೆ ನೇಪಾಳಕ್ಕೆ ಹೋದೋರು ಆ ಪುಟ್ಟ ದೇವತೆ ನೋಡಿಕೊಂಡು ಬರಲೇಬೇಕು.
ಕೇವಲ ಎರಡು ವರ್ಷಗಳ ಹೆಣ್ಣು ಮಗುವಿಗೆ ಸುಮಾರು ೩೨ ಕಠಿಣ ರೀತಿಯ ಪರೀಕ್ಷೆಗಳನ್ನು ನಡೆಸಿ ನಂತರ ದೇವತೆಯಾಗಿ ಆಯ್ಕೆ ಮಾಡಲಾಗುತ್ತದೆ.
ಇದೊಂದು ತರಹ ಮೋಸ್ಟ್ ವಾಂಟೆಡ್ ಕಸ್ಟಮ್ ಆಫ್ ನೇಪಾಳ ಆಗಿಹೋಗಿದೆ. ಅಲ್ಲಿಗೆ ಹೋದವರು ಕುಮಾರಿ ಘರ್ ಎಂಬ ವಿಶೇಷ ಸ್ಥಳಕ್ಕೆ ಹೋಗಿರುತ್ತಾರೆ. ಅಲ್ಲಿ ಇಂತಿಷ್ಟು ಸಮಯಕ್ಕೆ ಅಂತ ಪೂರ್ವ ನಿಯೋಜಿತವಾದಂತೆ ಆಕೆ ಸ್ವಲ್ಪ ಮೇಲಂತಸ್ತಿನ ಜಾಗದಲ್ಲಿ ಕುಳಿತು ಎಲ್ಲರಿಗೆ ಕಾಣಿಸಿಕೊಳ್ಳುತ್ತಾರೆ.
ಈ ಪ್ರಹಸನ ನೋಡಿದವರಿಗೆ ಆ ಹೆಣ್ಣು ಮಗುವಿನಲ್ಲಿ ವಿಶೇಷವೇನು? ಎಂಬ ಆಲೋಚನೆ ಬರಬಹುದು. ಏಕೆಂದರೆ ಎಲ್ಲರ ಹಾಗೆಯೇ ಇರುವುದು ಸಹ ಒಂದು ಸುಂದರ ಹೆಣ್ಣು ಮಗು. ಆದರೆ ಮುಖಕ್ಕೆ ಬಣ್ಣ ಹೆಚ್ಚಿದ್ದ ಕಾರಣ, ಭಿನ್ನ ರೀತಿಯ ಪೋಷಾಕು ಧರಿಸಿದ್ದ ಕಾರಣಕ್ಕೆ ಆಕೆ ಭಿನ್ನ ಅನ್ನಿಸುತ್ತಾಳೆ.
ಈ ಕುಮಾರಿಯರ ಸಂಸ್ಕೃತಿಯ ಹುಟ್ಟುಗಾರ ಜಯಪ್ರಕಾಶ ಮಲ್ಲ. ,ಈತ ಮಲ್ಲ ಸಾಮ್ರಾಜ್ಯದ ಕೊನೆಯ ದೊರೆ. ಆತ ತಲೇಜು ದೇವರನ್ನು ಬೇಟಿಯಾಗುತ್ತಿದ್ದನಂತೆ. ಆತನಿಂದಲೇ ಇದು ಪ್ರಾರಂಭವಾದದ್ದು ೮೭೭ರಲ್ಲಿ ಅಂದರೆ ೧೭೫೭ADಯಲ್ಲಿ.
ನಿವಾರಿಯರ ಉಚ್ಛಜಾತಿಯಲ್ಲಿನ ಶುದ್ದ ಬಾಲಕಿಯನ್ನು ಹುಡುಕಲು ದೇವಿಯ ಆಜ್ಞೆ ಆದಂತೆ ಶುರುವಾಗಿದೆ. ಇಲ್ಲಿ ಹಲವಾರು ಕುಮಾರಿಯರ ಸಂಸ್ಕೃತಿ ಇರುವ ಇಲ್ಲಿ ಕಠ್ಮಂಡುವಿನ ಕುಮಾರಿ ಪ್ರಧಾನವಾಗಿ ರಾಜಕುಮಾರಿ ಎಂಬಂತೆ ಪೂಜಿಸಲ್ಪಡುತ್ತಾಳೆ.
ಇತಿಹಾಸದಿಂದ ಏನೇ ಕತೆ, ಪುರಾಣ, ಸಂಪ್ರದಾಯ ನಡೆಸಿಕೊಂಡು ಬರಲಿ ಹೀಗೆ ದೇವತೆಯಾಗುವ ಹೆಣ್ಣುಮಗು ತನ್ನ ಪ್ರಥಮ ಪಿರಿಯಡ್ಸ್ ಆಗುವ ವರೆಗೂ ಅರಮನೆಯ ಹೊರಗೂ ಕಾಲಿಡುವಂತಿಲ್ಲ.
ಸುಮಾರು ೧೧ ಅಥವಾ ೧೨ ವರ್ಷಕ್ಕೆ ಹೊರ ಪ್ರಪಂಚಕ್ಕೆ ಕಾಲಿಡುವ ಈ ಕುಮಾರಿಗಳು ಏಕ್ಧಂ ಅಜ್ಞಾತ ವಾಸದಲ್ಲಿದ್ದಂತೆ ಇದ್ದು ಹೊರ ಬದುಕಿಗೆ ಬಂದಿರುತ್ತಾರೆ.
ಅವರಿಗೆ ಯಾವುದೇ ವಿಷಯದ ಸಾಮಾನ್ಯ ಜ್ಞಾನ ಅರಿವಿಗೆ ಬರಲು ಸಮಯ ಹಿಡಿಯುತ್ತದೆ ಎಂದರೆ ಅಚ್ಚರಿಯೇನಿಲ್ಲ. ಏಕೆಂದರೆ ಅಲ್ಲಿಯವರೆಗೂ ಕುಮಾರಿಯರು ಅರಮನೆಯ ಬೆಚ್ಚುಬೊಂಬೆ ಅಥವಾ ತೊಗಲು ಗೊಂಬೆಯ ಪ್ರದರ್ಶನದ ಭಾಗವಾಗಿರುತ್ತಾರೆ.
ಹೀಗೆ ಆಯ್ಕೆ ಆಗುವಾಗ ಅತ್ತರೆ ಮನೆಗೆ ವಾಪಾಸ್ ಕಳಿಸಲಾಗುತ್ತದೆ. ನೇಪಾಳದ ನಿವಾರಿ ಜನಾಂಗದ ದೇವತೆಯರು ಭವಿಷ್ಯದಲ್ಲಿ ಸಾಮಾನ್ಯ ಜಗತ್ತಿನೊಡನೆ ಹೊಂದಿಕೊಳ್ಳಲು ಏಗಬೇಕಾಗುತ್ತದೆ.
ಗೌಪ್ಯತೆ ಯಲ್ಲಿ ನಡೆಯುವ ಮೊದಮೊದಲನೆಯ ಸಂಪ್ರದಾಯ ಇತ್ಯಾದಿ ಏನೂ ನೆನಪಿರುವುದೂ ಇಲ್ಲ. ಹೀಗಾಗಿ ಇವೆಲ್ಲಾ ಹೊರಲೋಕಕ್ಕೆ ಬಾರದ ವಿಚಾರಗಳು. ಮುಂದೆ ಬುದ್ದಿ ಬೆಳೆದ ಕುಮಾರಿಯರ ಅರಿವಿಗೆ ಬರುವುದು ಅಲ್ಪ ಪ್ರಮಾಣದ ವಿಷಯಗಳೇ. ಏಕೆಂದರೆ ಪ್ರಾಥಮಿಕ ಹಂತದ ಆಯ್ಕೆ ಇವೆಲ್ಲಾ ಅರಿಯದ ವಯಸ್ಸಿನಲ್ಲೇ ನಡೆದಿರುತ್ತವೆ.
ಸುಮಾರು ಎರಡರಿಂದ ಮೂರರ ವಯೋಮಾನಕ್ಕೆ ಕುಮಾರಿಯರು ಮನೆಯಿಂದ ಹೊರಟು ದೇವತೆಯಾಗಿ ಆಯ್ಕೆಯಾದರೆ ಸುಮಾರು ಎಂಟು, ಒಂಬತ್ತು ವರ್ಷಗಳು ನಿರಂತರ ಕುಮಾರಿಯರಿಗೆ ನೋಡಿಕೊಳ್ಳುವವರು ಸುತ್ತಲೂ ಇರುತ್ತಾರೆ. ಹೀಗಾಗಿ ಹೊರ ಜಗತ್ತಿಗೆ ಬಂದಾಗ ಬಹಳಷ್ಟು ಸಂಕಷ್ಟ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಈ ಕಾರಣಕ್ಕಾಗಿಯೇ ಕೆಲವು ಕುಮಾರಿಯರು ಮಾನಸಿಕ ಖಿನ್ನತೆಗೆ ಒಳಗಾದದ್ದು ಸಹ ಇದೆ.
ಕಠ್ಮಂಡು ಕಣಿವೆಯಲ್ಲಿದ್ದ ೧೨ ಕುಮಾರಿಯರ ನಡುವೆ ರಾಜಕುಮಾರಿಯಾಗಿದ್ದ ಪ್ರೀತಿ ಶಾಖ್ಯ ಎಂಬ ಬಾಲಕಿ ಈ ಒರ್ವ ವಿದ್ಯಾರ್ಥಿನಿ.
ಕೆಂಬಣ್ಣವನ್ನೇ ಮೆತ್ತಿದಂತೆ ಕಾಣುವ, ಆಭರಣಗಳ ರಾಶಿ ಹೊತ್ತಂತಿರುವ ಈ ಕುಮಾರಿಯರಿಗೆ ಕುಮಾರಿ ಘರ್ ಬಿಟ್ಟರೆ ಮಣ್ಣಿನ ಮೇಲೆ ಕಾಲಿಡುವುದಕ್ಕೂ ಜನ ಬಿಡರು. ದೇವಿಯ ಬಣ್ಣ ಕೆಂಪು ಹೀಗಾಗಿ ಆ ದೇವತೆ ಕೆಂಬಣ್ಣದ ವಸ್ತ್ರ ಧರಿಸಿ ತನ್ನ ಸಿಂಹಾಸನದ ಮೇಲೆ ಅಲಂಕರಿಸಿ ಬಂದವರಿಗೆ ‘ರಾಜ ಕುಮಾರಿʼ ಆಶೀರ್ವಾದ ನೀಡಬೇಕಾಗಿರುತ್ತದೆ. ಹೀಗೆ ಮಾಡಲು ಹಲವಾರು ಗಂಟೆಗಳು ಆಕೆ ಕೂತಲ್ಲೇ ತಣ್ಣಗೆ ಕೂತಿರಬೇಕಾಗುತ್ತದೆ.
ಮಕ್ಕಳ ವಯಸ್ಸಲ್ಲಿ ಮಕ್ಕಳಂತಿರದೆ, ಆಡದೆ ಪಾಡದೆ ನಲಿಯದೆ ಹೀಗೆ ದೇವತೆಗಳಾಗುವ ಈ ಪದ್ಧತಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಲ್ಲದೆ ಮತ್ತೇನು?
– ನಳಿನಾ ಚಿಕ್ಕಮಗಳೂರು