ಚಿಕ್ಕಮಗಳೂರು: ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಮಹಿಳೆಯೊಬ್ಬರು ವೈದ್ಯರೊಬ್ಬರನ್ನು ಎಳೆದಾಡಿ ಅವರ ಮೇಲೆ ಚಪ್ಪಲಿ ಎಸೆದಿದ್ದಾರೆ ಎಂದು ಆರೋಪಿಸಿ ವೈದ್ಯರು ಹಾಗೂ ಸಿಬ್ಬಂದಿ ಹೊರರೋಗಿ ವಿಭಾಗ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ವೈದ್ಯರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ತಸ್ಲೀಮಾ ಮತ್ತು ಇರ್ಫಾನ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಗಲಾಟೆಯೊಂದರಲ್ಲಿ ಗಾಯಗೊಂಡಿದ್ದ ಇರ್ಷಾದ್ ಚಿಕಿತ್ಸೆಗಾಗಿ ಚಿಕ್ಕಮಗಳೂರಿನ ಅರಳುಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಆರ್ಥೋಪೆಡಿಕ್ ತಜ್ಞ ಡಾ.ಬಿ.ಎಸ್.ವೆಂಕಟೇಶ್ ಇರ್ಷಾದ್ ಅವರನ್ನು ತುರ್ತು ಚಿಕಿತ್ಸಾ ವಿಭಾಗದಲ್ಲಿ ತಪಾಸಣೆ ನಡೆಸುತ್ತಿದ್ದಾಗ ಅವರ ಸಂಬಂಧಿಕರ ಗುಂಪು ಒಟ್ಟಾಗಿ ವಾರ್ಡ್‌ಗೆ ಪ್ರವೇಶಿಸಿತು.
ಗಾಯಾಳುಗಳನ್ನು ಪರೀಕ್ಷಿಸಲು ಅನುಕೂಲವಾಗುವಂತೆ ತುರ್ತು ಚಿಕಿತ್ಸಾ ವಿಭಾಗದಿಂದ ಹೊರಗೆ ಹೋಗುವಂತೆ ವೈದ್ಯರು ಹೇಳಿದ ನಂತರ ವಾಗ್ವಾದ ನಡೆಯಿತು.
ಮಾತಿನ ಚಕಮಕಿ ನಡುವೆ ಇರ್ಷಾದ್ ಸಂಬಂಧಿ ತಸ್ಲೀಮಾ ವೈದ್ಯರ ಕೊರಳಪಟ್ಟಿ ಹಿಡಿದು ಎಳೆದಿದ್ದಾರೆ. ಬಳಿಕ ಚಪ್ಪಲಿ ತೆಗೆದು ಅವರತ್ತ ಎಸೆದಿದ್ದಾರೆ. ಕೂಡಲೇ ಆಸ್ಪತ್ರೆಯ ಎಲ್ಲ ವೈದ್ಯರು ಹಾಗೂ ಸಿಬ್ಬಂದಿ ಒಪಿಡಿ ಬಂದ್ ಮಾಡಿ ಜಿಲ್ಲಾ ಶಸ್ತ್ರ ಚಿಕಿತ್ಸಕರ ಕಚೇರಿ ಎದುರು ಜಮಾಯಿಸಿ ವೈದ್ಯರ ಮೇಲೆ ಹಲ್ಲೆ ನಡೆಸಿದ ಎಲ್ಲರನ್ನು ಬಂಧಿಸುವಂತೆ ಒತ್ತಾಯಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಇಲ್ಲದ ಕಾರಣ ತಪಾಸಣೆಗೆ ಬಂದಿದ್ದ ರೋಗಿಗಳು ಪರದಾಡಿದರು.
ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ವೈದ್ಯಕೀಯ ಸಿಬ್ಬಂದಿ ಪಟ್ಟು ಹಿಡಿದರು. ಪ್ರತಿಭಟನಾಕಾರರೆಲ್ಲರೂ ಪಟ್ಟಣದ ಪೊಲೀಸ್ ಠಾಣೆಗೆ ಮೆರವಣಿಗೆಯಲ್ಲಿ ತೆರಳಿ ದೂರು ಸಲ್ಲಿಸಿದರು. ಪಟ್ಟಣದ ಪೊಲೀಸ್ ಠಾಣೆ ಬಳಿ ಜಮಾಯಿಸಿದ ಬಜರಂಗದಳ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಮತ್ತೊಂದೆಡೆ, ಡಾ ವೆಂಕಟೇಶ್ ತನ್ನನ್ನು ಆಕ್ಷೇಪಾರ್ಹ ಭಾಷೆಯಲ್ಲಿ ನಿಂದಿಸಿದ್ದಾರೆ ಎಂದು ಆರೋಪಿಸಿ ತಸ್ಲೀಮಾ ಪ್ರತಿದೂರು ದಾಖಲಿಸಿದ್ದಾರೆ.