ನಾಸಿಕ್‌ನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಬಿಪಿಒ ಕೇಂದ್ರದಲ್ಲಿ ನಡೆದ ಲೈಂಗಿಕ ಕಿರುಕುಳ ಮತ್ತು ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಈ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್‌ಗೆ ಆಶ್ರಯ ನೀಡಿದ್ದ ಎಐಎಂಐಎಂ (AIMIM) ಕಾರ್ಪೊರೇಟರ್ ಮತೀನ್ ಪಟೇಲ್ ಅವರ ಎರಡು ಅಕ್ರಮ ಆಸ್ತಿಗಳನ್ನು ಛತ್ರಪತಿ ಸಂಭಾಜಿನಗರ ಮಹಾನಗರ ಪಾಲಿಕೆ (CSMC) ಬುಧವಾರ ಧ್ವಂಸಗೊಳಿಸಿದೆ.
ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು ಕಾರ್ಪೊರೇಟರ್ ಮತೀನ್ ಪಟೇಲ್ ಪರವಾಗಿ ಮಾತನಾಡಿದ ಕೆಲವು ದಿನಗಳ ಬಳಿಕ ಈ ಕಾರ್ಯಾಚರಣೆ ನಡೆದಿದೆ. ನಿದಾ ಖಾನ್ ತಲೆಮರೆಸಿಕೊಂಡಿದ್ದಾಗ ಆಕೆಗೆ ಸಹಾಯ ಮಾಡಿದ ಆರೋಪದ ಮೇಲೆ ನಾಸಿಕ್ ಪೊಲೀಸರು ಈಗಾಗಲೇ ಪಟೇಲ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಬುಧವಾರ ಬೆಳ್ಳಂಬೆಳಿಗ್ಗೆ 6 ಗಂಟೆಗೆ ಭಾರಿ ಪೊಲೀಸ್ ಭದ್ರತೆಯಲ್ಲಿ ಆರಂಭವಾದ ಈ ಕಾರ್ಯಾಚರಣೆಯಲ್ಲಿ ಪಟೇಲ್‌ಗೆ ಸೇರಿದ ಎರಡು ಮನೆಗಳು ಮತ್ತು ಒಂದು ಕಚೇರಿಯನ್ನು ಜೆಸಿಬಿ ಯಂತ್ರಗಳ ಮೂಲಕ ನೆಲಸಮ ಮಾಡಲಾಯಿತು. ಈ ಹಿಂದೆ ಪಾಲಿಕೆಯು ಆಸ್ತಿಗಳಿಗೆ ಸಂಬಂಧಿಸಿದ ದಾಖಲೆ ಸಲ್ಲಿಸಲು ಪಟೇಲ್ ಅವರಿಗೆ 72 ಗಂಟೆಗಳ ಗಡುವು ನೀಡಿತ್ತು. ಆದರೆ ಅವರು ಸರಿಯಾದ ದಾಖಲೆ ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಪಟೇಲ್ ಅವರು ಈ ಕ್ರಮದ ವಿರುದ್ಧ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರೂ, ನ್ಯಾಯಾಲಯವು ಪಾಲಿಕೆಯ ಕಾರ್ಯಾಚರಣೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿತು. ಈ ನಡುವೆ, ಎಐಎಂಐಎಂ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಇಮ್ತಿಯಾಜ್ ಜಲೀಲ್ ಅವರು ಈ ಆಡಳಿತಾತ್ಮಕ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಅಧಿಕಾರಿಗಳು ಮನೆ ಕೆಡವಲು ಬಂದಾಗ ಪಟೇಲ್ ಅವರ ಕುಟುಂಬಸ್ಥರು ಹೂವುಗಳನ್ನು ಅರ್ಪಿಸಿ ಸಂವಿಧಾನದ ಪ್ರತಿಯನ್ನು ಹಸ್ತಾಂತರಿಸಿದರು ಎಂದು ಜಲೀಲ್ ತಿಳಿಸಿದ್ದಾರೆ. “ಕೇವಲ ಆರೋಪಗಳ ಆಧಾರದ ಮೇಲೆ ಮತ್ತು ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿದು ಇಂತಹ ಕ್ರಮ ಕೈಗೊಳ್ಳುವುದು ನ್ಯಾಯದ ಅಂತ್ಯಸಂಸ್ಕಾರಕ್ಕೆ ಸಮಾನ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
