Home ದೇಶ ಮಣಿಪುರದಲ್ಲಿ ಶಂಕಿತ ಉಗ್ರರ ಅಟ್ಟಹಾಸ: ಖ್ಯಾತ ಧರ್ಮಗುರು ಸೇರಿ ಮೂವರ ಹತ್ಯೆ, ಕಾಂಗ್‌ಪೋಕ್ಪಿಯಲ್ಲಿ ಉದ್ವಿಗ್ನತೆ

ಮಣಿಪುರದಲ್ಲಿ ಶಂಕಿತ ಉಗ್ರರ ಅಟ್ಟಹಾಸ: ಖ್ಯಾತ ಧರ್ಮಗುರು ಸೇರಿ ಮೂವರ ಹತ್ಯೆ, ಕಾಂಗ್‌ಪೋಕ್ಪಿಯಲ್ಲಿ ಉದ್ವಿಗ್ನತೆ

0

ಚುರಾಚಾಂದ್‌ಪುರದಲ್ಲಿ ಧಾರ್ಮಿಕ ಸಭೆಯೊಂದರಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದ ಥಾಡೋ ಬ್ಯಾಪ್ಟಿಸ್ಟ್ ಅಸೋಸಿಯೇಷನ್ (TBA) ಸದಸ್ಯರನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ಕೋಟ್ಜಿಮ್ ಮತ್ತು ಕೋಟ್ಲೆನ್ ಗ್ರಾಮಗಳ ನಡುವೆ ಸಂಚರಿಸುತ್ತಿದ್ದ ಎರಡು ವಾಹನಗಳ ಮೇಲೆ ಶಂಕಿತ ಉಗ್ರರು ಏಕಾಏಕಿ ಗುಂಡಿನ ಮಳೆಗರೆದಿದ್ದಾರೆ.

ಮೃತರನ್ನು ಮಣಿಪುರ ಬ್ಯಾಪ್ಟಿಸ್ಟ್ ಕನ್ವೆನ್ಷನ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ರೆವರೆಂಡ್ ವಿ. ಸಿತ್ಲೌರ್, ರೆವರೆಂಡ್ ಕೈಗೌಲೆನ್ ಮತ್ತು ಪಾಸ್ಟರ್ ಪಾವುಗೌಲೆನ್ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ನಾಲ್ವರ ಪೈಕಿ ಮೂವರನ್ನು ಇಂಫಾಲ್‌ನ ಶಿಜಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ವೈ. ಖೇಮಚಂದ್ ಸಿಂಗ್ ತಿಳಿಸಿದ್ದಾರೆ.

ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಮುಖ್ಯಮಂತ್ರಿಗಳು, ನಾಗರಿಕರನ್ನು ಗುರಿಯಾಗಿಸುವ ಇಂತಹ ಅರ್ಥಹೀನ ಹಿಂಸಾಚಾರಕ್ಕೆ ನಾಗರಿಕ ಸಮಾಜದಲ್ಲಿ ಸ್ಥಾನವಿಲ್ಲ ಎಂದು ಕಿಡಿಕಾರಿದ್ದಾರೆ. ರಾಜ್ಯವು ಶಾಂತಿಯತ್ತ ಮರಳುತ್ತಿರುವ ಈ ಸಮಯದಲ್ಲಿ ಇಂತಹ ಕೃತ್ಯಗಳು ಅಸ್ವೀಕಾರಾರ್ಹ. ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಲು ಸರ್ಕಾರದ ಎಲ್ಲಾ ಸಂಪನ್ಮೂಲಗಳನ್ನು ಬಳಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಈ ಹತ್ಯೆಗಳ ಬೆನ್ನಲ್ಲೇ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಸಂಪೂರ್ಣ ಬಂದ್ ಘೋಷಿಸಲಾಗಿದೆ. ಆಕ್ರೋಶಗೊಂಡ ಸ್ಥಳೀಯರು ಮಾರುಕಟ್ಟೆಗಳನ್ನು ಬಂದ್ ಮಾಡಿಸಿದ್ದು, ರಾಷ್ಟ್ರೀಯ ಹೆದ್ದಾರಿ-2 ರಲ್ಲಿ ವಾಹನ ಸಂಚಾರವನ್ನು ತಡೆದಿದ್ದಾರೆ. ಈ ನಡುವೆ, ದಾಳಿಯಲ್ಲಿ ತನ್ನ ಪಾತ್ರವಿಲ್ಲ ಎಂದು ಮೈತೇಯಿ ಸಂಘಟನೆಯಾದ ‘ಅರಂಬಾಯಿ ತೆಂಗೋಲ್’ ಸ್ಪಷ್ಟಪಡಿಸಿದೆ.

ಕುಕಿ ಬುಡಕಟ್ಟು ಜನಾಂಗದ ಉನ್ನತ ಸಂಸ್ಥೆಯಾದ ‘ಕುಕಿ ಇನ್ಪಿ ಮಣಿಪುರ’ ಈ ದಾಳಿಯನ್ನು ಖಂಡಿಸಿದೆ. ಮೃತ ರೆವರೆಂಡ್ ವಿ. ಸಿತ್ಲೌರ್ ಅವರು ಸಮಾಜದಲ್ಲಿ ಶಾಂತಿ ಸ್ಥಾಪಿಸಲು ಶ್ರಮಿಸುತ್ತಿದ್ದ ಗೌರವಾನ್ವಿತ ನಾಯಕರಾಗಿದ್ದರು ಎಂದು ಅದು ಸ್ಮರಿಸಿದೆ. ಸದ್ಯ ರಾಜ್ಯದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಸಂಯಮ ಕಾಯ್ದುಕೊಳ್ಳುವಂತೆ ಸರ್ಕಾರ ಮನವಿ ಮಾಡಿದೆ.

You cannot copy content of this page

Exit mobile version