ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್‌ನ ಯುದ್ಧೋನ್ಮಾದವು ಅಮಾಯಕ ಮಕ್ಕಳನ್ನು ಬಲಿಪಡೆಯುತ್ತಿದೆ. ಕಳೆದ ಒಂದು ತಿಂಗಳಿನಿಂದ ಜನವಸತಿ ಪ್ರದೇಶಗಳು ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ತೀವ್ರಗೊಂಡಿದ್ದು, ಪಶ್ಚಿಮ ಏಷ್ಯಾದಲ್ಲಿ ಜನರು ಸರ್ವಸ್ವವನ್ನೂ ಕಳೆದುಕೊಂಡು ಬೀದಿಗೆ ಬೀಳುತ್ತಿದ್ದಾರೆ. ತಿನ್ನಲು ಅನ್ನವಿಲ್ಲ, ಇರಲು ಮನೆಯಿಲ್ಲ, ಉಡಲು ಬಟ್ಟೆಯಿಲ್ಲದ ಇವರ ದಯನೀಯ ಸ್ಥಿತಿಯನ್ನು ಕಂಡರೆ ಎಂತಹ ಕಟುಕ ಹೃದಯವೂ ಕರಗುವಂತಿದೆ.
ಜನವಸತಿ ಪ್ರದೇಶಗಳ ಮೇಲಿನ ದಾಳಿಯಿಂದಾಗಿ ಸಾವು-ನೋವಿನ ಪ್ರಮಾಣ ಹೆಚ್ಚಾಗಿದೆ. ಕೇವಲ ಆರು ತಿಂಗಳ ಹಸುಗೂಸುಗಳು ಸಹ ಗಾಯಗೊಂಡು ಆಸ್ಪತ್ರೆ ಸೇರುತ್ತಿವೆ. ಅನೇಕ ಮಕ್ಕಳು ಆಸ್ಪತ್ರೆಗೆ ತಲುಪುವ ಮೊದಲೇ ಪ್ರಾಣ ಬಿಡುತ್ತಿದ್ದಾರೆ. ಆಸ್ಪತ್ರೆಗಳ ಐಸಿಯುನಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಮಕ್ಕಳನ್ನು ಕಂಡು ವೈದ್ಯರು ಸಹ ಕಣ್ಣೀರು ಹಾಕುತ್ತಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಈ ಮಕ್ಕಳು ಚೇತರಿಸಿಕೊಳ್ಳಲು ಬಹಳ ಸಮಯ ಹಿಡಿಯುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ದುರಂತಕ್ಕೆ ಸಾಕ್ಷಿಯಾಗಿರುವವನು ಆರು ವರ್ಷದ ಬಾಲಕ ಅಮೀರ್ ಹುಸೇನ್. ಹತ್ತು ದಿನಗಳ ಹಿಂದೆ (ಮಾರ್ಚ್ 18) ಟೆಹ್ರಾನ್‌ನಲ್ಲಿರುವ ಅವನ ಮನೆಯ ಮೇಲೆ ಅಮೆರಿಕ-ಇಸ್ರೇಲ್ ಪಡೆಗಳು ಯಾವುದೇ ಮುನ್ಸೂಚನೆ ನೀಡದೆ ವೈಮಾನಿಕ ದಾಳಿ ನಡೆಸಿದ್ದವು. ಕ್ಷಣಾರ್ಧದಲ್ಲಿ ಸಂಭವಿಸಿದ ಭಾರಿ ಸ್ಫೋಟಕ್ಕೆ ಅಮೀರ್ ಮನೆ ಧ್ವಂಸವಾಯಿತು. ಈ ದಾಳಿಯಲ್ಲಿ ಅವನ 10 ವರ್ಷದ ಅಕ್ಕ ಸ್ಥಳದಲ್ಲೇ ಮೃತಪಟ್ಟಳು. ತೀವ್ರವಾಗಿ ಗಾಯಗೊಂಡಿರುವ ಅಮೀರ್ ಪ್ರಸ್ತುತ ಮೊಫಿದ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅವನ ಪೋಷಕರು ಸಹ ತೀವ್ರವಾಗಿ ಗಾಯಗೊಂಡಿದ್ದು, ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ.
ಇರಾನ್‌ನ ಬಾಲಕಿಯರ ಶಾಲೆಯ ಮೇಲೆ ಕ್ಷಿಪಣಿ ದಾಳಿ ನಡೆಸಿ 168 ವಿದ್ಯಾರ್ಥಿನಿಯರು ಮತ್ತು 14 ಶಿಕ್ಷಕರ ಸಾವಿಗೆ ಕಾರಣರಾದವರು ಇವರೇ ಎಂದು ಇಬ್ಬರು ಅಮೆರಿಕದ ನೌಕಾಪಡೆ ಅಧಿಕಾರಿಗಳ ಫೋಟೋಗಳನ್ನು ಇರಾನ್ ಸಾಮಾಜಿಕ ಜಾಲತಾಣ ‘X’ ನಲ್ಲಿ ಹಂಚಿಕೊಂಡಿದೆ. ದಾಳಿ ನಡೆಸಿದ ಯುದ್ಧನೌಕೆಯ ಎಕ್ಸಿಕ್ಯೂಟಿವ್ ಆಫೀಸರ್ ಜೆಫ್ರಿ ಯಿ ಯಾರ್ಕ್ ಮತ್ತು ಕಮಾಂಡಿಂಗ್ ಆಫೀಸರ್ ಲೀ ಆರ್ ಟೇಟ್ ಅವರ ಫೋಟೋಗಳನ್ನು ಭಾರತ, ದಕ್ಷಿಣ ಆಫ್ರಿಕಾ ಮತ್ತು ನೈಜೀರಿಯಾದಲ್ಲಿರುವ ಇರಾನ್ ರಾಯಭಾರ ಕಚೇರಿಗಳು ಬಿಡುಗಡೆ ಮಾಡಿವೆ. ಇವರು ಮೂರು ಬಾರಿ ಟೊಮಾಹಾಕ್ ಕ್ಷಿಪಣಿಗಳನ್ನು ಉಡಾಯಿಸಿ 168 ಮಕ್ಕಳ ಸಾವಿಗೆ ಕಾರಣರಾದ ಅಪರಾಧಿಗಳು ಎಂದು ಇರಾನ್ ಕಿಡಿಕಾರಿದೆ.
