ಭಾರತದ ಸಂಸದೀಯ ನಿಯೋಗದ ಭೇಟಿಯ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಸಂಸದ ತೇಜಸ್ವಿ ಸೂರ್ಯ ಶಿಷ್ಟಾಚಾರವನ್ನು ಉಲ್ಲಂಘಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿದ್ದಾರೆ ಎಂಬ ವದಂತಿಯ ನಂತರ ಈಗ ಕಾಂಗ್ರೆಸ್ ನಾಯಕರ ತೀವ್ರ ಟೀಕೆಗೆ ತೇಜಸ್ವಿ ಸೂರ್ಯ ಒಳಗಾಗಿದ್ದಾರೆ. ತೇಜಸ್ವಿ ಸೂರ್ಯನ ಈ ನಡೆ “ಭಾರತದ ಸಾಂಸ್ಥಿಕ ಸಮಗ್ರತೆ ಮತ್ತು ರಾಜತಾಂತ್ರಿಕ ನಿಲುವಿಗೆ ಮಾಡಿದ ಅವಮಾನ” ಎಂದು ಕಾಂಗ್ರೆಸ್ ಬಣ್ಣಿಸಿದೆ.
ಭಾರತದ ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನದ ನಿಲುವಿನ ಬಗ್ಗೆ ಮನವರಿಕೆ ಮಾಡಲು ಭಾರತವು ವಿದೇಶಗಳಿಗೆ ತಲುಪುವ ಭಾಗವಾಗಿ ಶಶಿ ತರೂರ್ ನೇತೃತ್ವದ ನಿಯೋಗದ ಅಮೆರಿಕ ಭೇಟಿಯ ಸಂದರ್ಭದಲ್ಲಿ ಈ ಸಭೆ ನಡೆದಿತ್ತು. ಸಭೆಯಲ್ಲಿ ಮೂವರು ಬಿಜೆಪಿ ಸಂಸದರಾದ ಭುವನೇಶ್ವರ್ ಕಲಿತಾ (ಅಸ್ಸಾಂನ ರಾಜ್ಯಸಭಾ ಸದಸ್ಯ), ಶಶಾಂಕ್ ಮಣಿ ತ್ರಿಪಾಠಿ (ದಿಯೋರಿಯಾ ಸಂಸದ) ಮತ್ತು ತೇಜಸ್ವಿ ಸೂರ್ಯ (ಬೆಂಗಳೂರು ದಕ್ಷಿಣ ಸಂಸದ) – ಇತರರು ಇದ್ದರು.
ಈ ಸಂದರ್ಭದಲ್ಲಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿ ತಮ್ಮ ಖಾಸಗಿ ನಿವಾಸಕ್ಕೆ ಅನಧಿಕೃತ ಭೇಟಿ ನೀಡಿದಾಗ ಟ್ರಂಪ್ ಅವರ ಅಧಿಕಾರಿಗಳಿಂದ ಮತ್ತು ಅವರ ಪ್ರತಿಕ್ರಿಯೆಯಿಂದ ತೇಜಸ್ವಿ ಸೂರ್ಯ ತೀವ್ರ ಮುಜುಗರಕ್ಕೊಳಗಾದರು ಎಂದು ವರದಿಗಳು ಹೊರಬಿದ್ದಿವೆ. ಅಷ್ಟೇ ಅಲ್ಲದೆ ತೇಜಸ್ವಿ ಸೂರ್ಯ ಅವರ ಈ ನಡೆ ಭಾರತದ ರಾಜತಾಂತ್ರಿಕತೆಯನ್ನು ಅಣಕಿಸುವಂತಿದೆ ಎಂದು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ.
ಕರ್ನಾಟಕದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಭೇಟಿಯ ಕುರಿತು ಹಲವಾರು ಪ್ರಶ್ನೆಗಳನ್ನು ಎತ್ತಿ ತೇಜಸ್ವಿ ಸೂರ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ತಮ್ಮ X ಖಾತೆಯಲ್ಲಿ ಹಂಚಿಕೊಂಡಂತೆ, “ಬಿಜೆಪಿ ಸಂಸದರ ಅಪಕ್ವ ವಿಧಾನದ ಈ ಸುದ್ದಿಯ ವರದಿ ನಿಜವಾಗಿದ್ದರೆ, ಅದು ನಾಚಿಕೆಗೇಡಿನ ಸಂಗತಿ. ತೇಜಸ್ವಿ ಸೂರ್ಯ ಈ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ:”
• ಹಾಲಿ ಸಂಸದರೊಬ್ಬರು ಅತಿಥೇಯ ರಾಷ್ಟ್ರದ ಮುಖ್ಯಸ್ಥರನ್ನು ಭೇಟಿ ಮಾಡಲು ಎಲ್ಲಾ ಸ್ಥಾಪಿತ ರಾಜತಾಂತ್ರಿಕ ಶಿಷ್ಟಾಚಾರಗಳನ್ನು ಹೇಗೆ ಉಲ್ಲಂಘಿಸಿದರು?
• ಯಾವುದೇ ಹಂತದಲ್ಲಿ ವಿದೇಶಾಂಗ ಸಚಿವಾಲಯಕ್ಕೆ (MEA) ಮಾಹಿತಿ ನೀಡಲಾಗಿದೆಯೇ ಅಥವಾ ಸಮಾಲೋಚಿಸಲಾಗಿದೆಯೇ?
• ಅಧಿಕೃತ ನಿಯೋಗದ ಭಾಗವಾಗಿದ್ದಾಗ, ಈ ಹಠಾತ್ ಪ್ರವೃತ್ತಿಯ ಮತ್ತು ಅಪಕ್ವ ನಡವಳಿಕೆಯನ್ನು ಸಮರ್ಥಿಸಿದ್ದು ಹೇಗೆ?
• ಈ ಯುವ ಬಿಜೆಪಿ ಸಂಸದ ಯಾರು ಮತ್ತು ಈ ಸಭ್ಯತೆಯ ಉಲ್ಲಂಘನೆಯನ್ನು ಪರಿಹರಿಸಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ?” ಎಂದು ತೇಜಸ್ವಿ ಸೂರ್ಯ ಹೆಸರು ಪ್ರಸ್ತಾಪಿಸದೇ X ನಲ್ಲಿ ಬರೆದಿದ್ದಾರೆ.
ಜೊತೆಗೆ “ಬಿಜೆಪಿ ಸಂಸದರು ಜಾಲತಾಣದಲ್ಲಿ ಫೋಟೋ ಹಾಕಲು ಕನಿಷ್ಠ ಶಿಷ್ಟಾಚಾರವನ್ನು ಉಲ್ಲಂಘಿಸುವ ಸ್ವಾತಂತ್ರ್ಯವನ್ನು ಹೊಂದಿರುವಂತೆ ತೋರುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಈ ಘಟನೆ ಇನ್ನಷ್ಟು ಆತಂಕಕಾರಿಯಾಗಿದೆ: ಅಮೆರಿಕ ಅಧ್ಯಕ್ಷರು ಪಾಕಿಸ್ತಾನದೊಂದಿಗೆ ಬಹಿರಂಗವಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ ಮತ್ತು ಆಪರೇಷನ್ ಸಿಂಧೂರ್‌ನಲ್ಲಿ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದಕ್ಕಾಗಿ ಕೀರ್ತಿಯನ್ನು ಪಡೆದುಕೊಂಡಿದ್ದಾರೆ.”
“ಇದು ಖಂಡಿತ ವ್ಯರ್ಥ ರಾಜಕೀಯ ಗಾಸಿಪ್ ಅಲ್ಲ, ಭಾರತದ ಸಾಂಸ್ಥಿಕ ಸಮಗ್ರತೆ ಮತ್ತು ರಾಜತಾಂತ್ರಿಕ ನಿಲುವಿಗೆ ಗಂಭೀರ ಅವಮಾನ. ಇದು ಬಿಜೆಪಿಯ ಜಾಣ ಮೌನಕ್ಕಿಂತ ರಾಷ್ಟ್ರ ಸಂಸದರ ಉತ್ತರವನ್ನು ಬಯಸುತ್ತದೆ. ಇದು ಹೊಣೆಗಾರಿಕೆಯನ್ನು ಬಯಸುತ್ತದೆ” ಎಂದು ಪ್ರಿಯಾಂಕ್ ಖರ್ಗೆ ಅಭಿಪ್ರಾಯ ಪಟ್ಟಿದ್ದಾರೆ.