ಹೈದರಾಬಾದ್: ಬಿಜೆಪಿಯ ಮಾಜಿ ಸಂಸದೆ ಹಾಗೂ ಹಿರಿಯ ನಾಯಕಿ ವಿಜಯಶಾಂತಿ ರಾಜೀನಾಮೆ ನೀಡಿದ್ದಾರೆ. ಬುಧವಾರ ಪಕ್ಷದ ರಾಜ್ಯಾಧ್ಯಕ್ಷ ಕಿಶನ್ ರೆಡ್ಡಿ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿಯಲ್ಲಿ ತಮಗೆ ಆದ್ಯತೆ ಸಿಗುತ್ತಿಲ್ಲ ಎಂದು ಸುಮಾರು ಒಂದು ವರ್ಷದಿಂದ ವಿಜಯಶಾಂತಿ ಅತೃಪ್ತರಾಗಿದ್ದರು. ಹಿಂದಿನ ಉಪಚುನಾವಣೆಯಲ್ಲಿ ಅವರನ್ನು ಬದಿಗೊತ್ತಿ ನಂತರ ಸಭೆಗಳಿಗೆ ಕರೆಯುವುದನ್ನು ನಿಲ್ಲಿಸಿದ್ದಾರೆ ಎಂದು ಅವರು ಅಸಹನೆ ವ್ಯಕ್ತಪಡಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನಿರೀಕ್ಷೆ ಮಾಡಿದ್ದರೂ ಸಿಕ್ಕಿರಲಿಲ್ಲ. ಇತ್ತೀಚೆಗಷ್ಟೇ ಬಿಜೆಪಿ ರಚಿಸಿರುವ ಚುನಾವಣಾ ಸಮಿತಿಗಳಲ್ಲಿ ಆಂದೋಲನ ಸಮಿತಿಯ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿತ್ತು. ಆದರೆ ಆಕೆಗೆ ಸಮಾಧಾನವಾಗಲಿಲ್ಲ. ಅವರು ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ಪ್ರಸ್ತುತ ತೆಲಂಗಾಣ ರಾಜ್ಯವು ಚುನಾವಣೆಗೆ ಅಣಿಯಾಗುತ್ತಿದ್ದು, ಈ ಸಂದರ್ಭದಲ್ಲಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಚುನಾವಣಾಸಕ್ತರ ಗಮನ ಸೆಳೆದಿದೆ. ಅವರು ತಮ್ಮ ಮುಂದಿನ ನಡೆಯ ಕುರಿತು ಯಾವುದೇ ವಿವರಗಳನ್ನು ನೀಡಿಲ್ಲವಾದರೂ, ಅವರು ಕಾಂಗ್ರೆಸ್ ಸೇರಲಿದ್ದಾರೆನ್ನುವ ಗುಸು ಗುಸು ಎಲ್ಲೆಡೆ ಹರಡಿದೆ.