Home ಬ್ರೇಕಿಂಗ್ ಸುದ್ದಿ ಅಭಿನಂದನೆಯಲ್ಲೂ ತಾರತಮ್ಯ ಪ್ರದರ್ಶಿಸಿದ ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿ ಟ್ವಿಟ್ ಗೆ ಖಂಡನೆ

ಅಭಿನಂದನೆಯಲ್ಲೂ ತಾರತಮ್ಯ ಪ್ರದರ್ಶಿಸಿದ ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿ ಟ್ವಿಟ್ ಗೆ ಖಂಡನೆ

0

ಕ್ರಿಕೆಟ್ ವಿಶ್ವಕಪ್ ನ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಚಕ ಪ್ರದರ್ಶನ ನೀಡಿ ಫೈನಲ್ ಪ್ರವೇಶಿಸಿದ ಟೀಮ್ ಇಂಡಿಯಾ ತಂಡಕ್ಕೆ ಎಲ್ಲೆಡೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಅದರಲ್ಲಿ ವಿರಾಟ್ ಕೊಹ್ಲಿಯವರ ಅದ್ಭುತ ಆಟದಷ್ಟೇ ಮೊಹಮ್ಮದ್ ಶಮಿಯವರ ವಿಕೆಟ್ ಕಬಳಿಕೆ ಕೂಡಾ ಹೆಚ್ಚು ಮಹತ್ವ ಪಡೆದಿದೆ.

ಕೊನೆಯ ಹಂತದಲ್ಲಿ ಕಿವೀಸ್ ನ ಎರಡು ನಿರ್ಣಾಯಕ ವಿಕೆಟ್ ಗಳನ್ನು ಮೊಹಮ್ಮದ್ ಶಮಿ ಪಡೆಯದೇ ಇದ್ದರೆ ಭಾರತದ ಫೈನಲ್ ಕನಸು ಕನಸಾಗಿಯೇ ಉಳಿಯುತ್ತಿತ್ತು. ಇದೇ ಕಾರಣಕ್ಕಾಗಿ ಸೆಮಿಫೈನಲ್ ನಲ್ಲಿ ವಿರಾಟ್ ಕೊಹ್ಲಿಯವರ ಶತಕದ ಹೊರತಾಗಿಯೂ ಅದ್ಭುತ ಬೌಲಿಂಗ್ ಪ್ರದರ್ಶನಕ್ಕೆ ಮೊಹಮ್ಮದ್ ಶಮಿ ಮ್ಯಾನ್ ಆಫ್ ದಿ ಮ್ಯಾಚ್ ಗರಿಯನ್ನು ಮುಡಿಗೇರಿಸಿಕೊಂಡರು.

ಟೀಮ್ ಇಂಡಿಯಾದ ಇಂತಹ ಅದ್ಭುತ ಪ್ರದರ್ಶನಕ್ಕೆ ಭಾರತದ ಅನೇಕ ರಾಜಕಾರಣಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿಯವರು ತಮ್ಮ ‘X’ ಖಾತೆಯಲ್ಲಿ ಹಂಚಿಕೊಂಡ ಅಭಿನಂದನೆಯ ಟ್ವಿಟ್ ಒಂದು ಎಲ್ಲೆಡೆ ಟೀಕೆಗೆ ಗುರಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಭಾರತದ ಸಂಭ್ರಮಾಚರಣೆಯಲ್ಲೂ ಬಿಜೆಪಿ ಸಂಸದನ ಮುಸ್ಲಿಂ ದ್ವೇಷದ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದಾರೆ.

ಸಂಸದ ಪ್ರಹ್ಲಾದ್ ಜೋಷಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಂತೆ, ‘ಅಂದು ಇಂದು ಎಂದೆಂದೂ… ಟೀಂಭಾರತ ಜೈ ಹೋ.. ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಮಾಂಚನಕಾರಿ ಆಟದ ಮೂಲಕ ಗೆಲುವಿನ ಕಿರೀಟವನ್ನು ಮುಡಿಗೇರಿಸಿದ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು ಹಾಗೂ ಶತಕದ ಗಡಿ ದಾಟಿ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಅವರಿಗೆ ಅಭಿನಂದನೆಗಳು…’ ಎಂಬುದಾಗಿ ಹಂಚಿಕೊಂಡಿದ್ದಾರೆ.

ಆದರೆ ಪ್ರಹ್ಲಾದ್ ಜೋಷಿ ನಿಜವಾದ ಮ್ಯಾನ್ ಆಫ್ ದಿ ಮ್ಯಾಚ್ ಮುಡಿಗೇರಿಸಿಕೊಂಡ ಮೊಹಮ್ಮದ್ ಶಮಿ ಅವರ ಆಟವನ್ನು ತಪ್ಪಿಯೂ ಕೂಡಾ ಎಲ್ಲಿಯೂ ಉಲ್ಲೇಖಿಸದ ಬಗ್ಗೆ ಅವರ ಖಾತೆಯಲ್ಲೇ ಟೀಕೆಗಳು ವ್ಯಕ್ತವಾಗಿದೆ.

ಮೊಹಮ್ಮದ್ ಶಮಿ ಕೂಡಾ ಟೀಂ ಇಂಡಿಯಾ ಆಟಗಾರ. ಅಷ್ಟೇ ಅಲ್ಲದೆ ಪ್ಲೇಯರ್ ಆಫ್ ದ ಮ್ಯಾಚ್ ಮುಡಿಗೇರಿಸಿಕೊಂಡಿದ್ದಾರೆ. ವಿಶೇಷವಾಗಿ ವರ್ಡ್ ಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಹೆಗ್ಗಳಿಕೆ ಶಮಿ ಅವರದ್ದಾಗಿದೆ. ಅಂದರೆ ಅದು ಭಾರತದ ಹೆಗ್ಗಳಿಕೆ ಕೂಡಾ. ಇಂತಹ ಸಂದರ್ಭದಲ್ಲಿ ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿ, ಶಮಿಯವರ ಈ ಸಾಧನೆ ಉಲ್ಲೇಖಿಸದೇ ಇರುವುದು ಜೋಷಿಯವರ ಧರ್ಮ ದ್ವೇಷವನ್ನು ಪರೋಕ್ಷವಾಗಿ ಎತ್ತಿ ಹಿಡಿದಿದೆ ಎಂಬ ರೀತಿಯಾಗಿ ಟೀಕೆಗಳು ವ್ಯಕ್ತವಾಗಿದೆ.

“ಸೆಮಿಫೈನಲ್ ನಲ್ಲಿ ಏಳು ವಿಕೆಟ್ ಪಡೆದ ಶಮಿಯವರು ಸಹಜವಾಗಿಯೇ ಮ್ಯಾನ್ ಆಫ್ ದಿ ಮ್ಯಾಚ್ ಆದರು.ಅದನ್ನು ನಮ್ಮ ಶತಕವೀರರಾದ ಕೊಹ್ಲಿ ಮತ್ತು ಅಯ್ಯರ್ ಸೇರಿದಂತೆ ಇಡೀ ಟೀಂ ಸಂಭ್ರಮಿಸಿತು ಕೂಡಾ. ಇದ್ಯಾವುದೂ ಶ್ರೀ ಪ್ರಹ್ಲಾದ ಜೋಷಿಯವರಿಗೆ ಅರ್ಥವಾಗಲೇ ಇಲ್ಲ. ಇಂಥವರೇ ನಮ್ಮ ನಾಡಿನ ಇತಿಹಾಸವನ್ನು ಹೀಗೆಯೇ ಬರೆದದ್ದು ಮತ್ತು ಬರೆಯ ಬಯಸುವುದು ಎಂಬುದನ್ನು ಮರೆಯದಿರೋಣ.” ಎಂದು ಚಿಂತಕರಾದ ಪುರುಷೋತ್ತಮ ಬಿಳಿಮಲೆಯವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ‌.

ಇನ್ನೊಂದು ಕಡೆ ಪ್ರಧಾನಿ ನರೇಂದ್ರ ಮೋದಿ ಕೂಡಾ ತಮ್ಮ ಅಭಿನಂದನೆಯ ಟ್ವಿಟ್ ನಲ್ಲಿ ಮೊಹಮ್ಮದ್ ಶಮಿಯವರ ಸಾಧನೆಯ ಬಗ್ಗೆ ಉಲ್ಲೇಖಿಸಿದ್ದಾರೆ. ಆದರೆ ಬಿಜೆಪಿ ಸಂಸದ ಉದ್ದೇಶಪೂರ್ವಕವಾಗಿಯೇ ಶಮಿ ಅವರ ಮುಸ್ಲಿಂ ಧರ್ಮದ ಕಾರಣಕ್ಕೆ ಅವರ ಹೆಸರನ್ನು ಮರೆಮಾಚಿದ್ದಾರೆ ಎಂದು ನೆಟ್ಟಿಗರು ದೂರಿದ್ದಾರೆ.

ಇತ್ತೀಚೆಗೆ ಕೇಂದ್ರ ಸರ್ಕಾರ ‘ಇಂಡಿಯಾ’ ಹೆಸರಿನ ಬದಲಾಗಿ ಬಹುತೇಕ ಕಡೆಗಳಲ್ಲಿ ‘ಭಾರತ’ ಎಂಬುದಾಗಿ ಬಳಸುತ್ತಿರುವುದು ಎಲ್ಲೆಡೆ ಸುದ್ದಿಯಾಗಿದೆ. ಪ್ರಹ್ಲಾದ್ ಜೋಷಿಯವರ ಟ್ವಿಟ್ ನ ಶುರುವಿನಲ್ಲೂ ‘ಟೀಂ ಭಾರತ..’ ಎಂದು ಉಲ್ಲೇಖಿಸಿದ್ದಾರೆ. ‘ಟೀಮ್ ಇಂಡಿಯಾ’ ಎಂಬ ಪದ ಎಲ್ಲೆಡೆ ಜನಜನಿತವಾಗಿದ್ದರೂ ಜೋಷಿಯವರು ‘ಭಾರತ’ ಪದವನ್ನು ಅಷ್ಟು ಸೂಕ್ಷ್ಮತೆಯಿಂದ ಬಳಸಿದ್ದಾರೆ. ಹೀಗಿರುವಾಗ ಶಮಿಯವರ ಆಟವನ್ನು ಉಲ್ಲೇಖಿಸದೇ ಇರುವುದು ಉದ್ದೇಶಪೂರ್ವಕವಾಗಿದೆ ಎಂದೇ ಹೇಳಲಾಗಿದೆ.

You cannot copy content of this page

Exit mobile version