ಬೆಂಗಳೂರು: ಇಂದು ಬೆಳಗ್ಗೆ ದಿನಪತ್ರಿಕೆಗಳಲ್ಲಿ ಬೆಂಗಳೂರಿನ ಐತಿಹಾಸಿಕ ದೇವಸ್ಥಾನವಾದ ದೊಡ್ಡಗಣಪತಿ ದೇವಸ್ಥಾನ ಮತ್ತು ಅದರ ಸಮೂಹದ ದೇವಸ್ಥಾನಗಳ ಆಡಳಿತ ಮಂಡಳಿ ನೀಡಿದ್ದ ಟೆಂಡರ್ ಒಂದರ ಜಾಹೀರಾತು ಪ್ರಕಟವಾಗಿತ್ತು. ಅದನ್ನು ನೋಡಿ ಸಿಟ್ಟಿಗೆದ್ದ ಜನಸಾಮಾನ್ಯರು ಮತ್ತು ಸಾಮಾಜಿಕ ಹೋರಾಟಗಾರರು ಅದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಒಂದು ಹೋರಾಟವನ್ನೇ ಆರಂಭಿಸಿದ್ದರು.
ಜಾಹೀರಾತಿನಲ್ಲಿ ಸದರಿ ದೇವಸ್ಥಾನಗಳ ಹಲವು ಸೌಲಭ್ಯಗಳನ್ನು ನಿರ್ವಹಿಸಲು ಸಾರ್ವಜನಿಕರಿಂದ ಟೆಂಡರ್ ಆಹ್ವಾನಿಸಲಾಗಿತ್ತು ದೇವಸ್ಥಾನದ ವ್ಯಾಪಾರ ಮಳಿಗೆ, ಪಾರ್ಕಿಂಗ್, ಇತ್ಯಾದಿಯ ಸೌಲಭ್ಯಗಳ ಜೊತೆಗೆ ಚಪ್ಪಲಿ ಸ್ಟ್ಯಾಂಡ್ ನೋಡಿಕೊಳ್ಳುವ ಕುರಿತಾಗಿಯೂ ಟೆಂಡರ್ ಮತ್ತು ಬಹಿರಂಗ ಹರಾಜಿಗೆ ಆಹ್ವಾನ ನೀಡಲಾಗಿತ್ತು. ಆದರೆ ಎಲ್ಲಾ ವಿಭಾಗಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟ ದೇವಸ್ಥಾನದ ಆಡಳಿತ ಮಂಡಳಿ ಚಪ್ಪಲಿ ಸ್ಟ್ಯಾಂಡ್ ನೋಡಿಕೊಳ್ಳುವ ಆಯ್ಕೆಯನ್ನು ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟಿತ್ತು.
ಈ ಕುರಿತು ಇಂದುಬೆಳಗಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಜ್ಞಾವಂತ ಜನರು ದನಿಯೆತ್ತಿ ಬರೆಯುತ್ತಿದ್ದರೂ. ಕೊನೆಗೂ ಜನಾಭಿಪ್ರಾಯಕ್ಕೆ ಮಣಿದ ಆಡಳಿತ ಮಂಡಳಿ ತನ್ನ ಪ್ರಕಟಣೆಯನ್ನು ಹಿಂಪಡೆದು ಜಾಹೀರಾತು ನೀಡಿದೆ. ಇದೊಂದು ಜನಾಭಿಪ್ರಾಯಕ್ಕೆ ಸಿಕ್ಕ ಮನ್ನಣೆಯಾಗಿದ್ದು, ಜನಾಭಿಪ್ರಾಯವನ್ನು ಸಮಾಜ, ಸರ್ಕಾರದ ಮುಂದಿಡುವ ಧ್ಯೇಯದೊಡನೆ ಕೆಲಸ ಮಾಡುವ ಪೀಪಲ್ ಮೀಡಿಯಾ ಕೂಡಾ ಈ ಕುರಿತು ಒಂದು ವಿವರವಾದ ವರದಿಯನ್ನು ಮಾಡಿತ್ತು.
ಸರಕಾರಿ ಇಲಾಖೆಗೆ ನಿಜಕ್ಕೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಇತರ ವಿಭಾಗಗಳನ್ನು ಮೀಸಲಿಡಬಹುದಿತ್ತು. ಕೇವಲ ಚಪ್ಪಲಿ ಸ್ಟ್ಯಾಂಡುಗಳನ್ನು ಮಾತ್ರ ಅವರ ಪಾಲಿಗೆ ಮೀಸಲಿಟ್ಟಿದ್ದು ಅದರ ಜಾತ್ಯಸ್ಥ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಪೋಸ್ಟ್ ಮಾಡಿದ್ದಾರೆ.