ಇಂದು ಮುಂದುವರೆದ ತಂತ್ರಜ್ಞಾನ ಮನುಷ್ಯನ ಬದುಕನ್ನು ಸುಲಭಗೊಳಿಸುತ್ತಿರುವುದರ ಜೊತೆಜೊತೆಯಲ್ಲೇ ಅದು ಹಲವರನ್ನು ಸಂಕಟದ ಬಲೆಗೂ ದೂಡುತ್ತಿದೆ. ಹೀಗೆ ಜನ ಸಾಮಾನ್ಯರನ್ನಲ್ಲದೆ ಬಲಾಢ್ಯ ಸೆಲೆಬ್ರಿಟಿಗಳನ್ನೇ ತನ್ನ ಬಲೆಗೆ ಬೀಳಿಸಿಕೊಂಡು ಅವರನ್ನು ಕಂಗಾಲು ಮಾಡುತ್ತಿರುವ ಇತ್ತೀಚಿನ ತಂತ್ರಜ್ಞಾನಗಳಲ್ಲಿ ಡೀಪ್ ಫೇಕ್ ಕೂಡಾ ಒಂದು.
ತೀರಾ ಇತ್ತೀಚಿಗಷ್ಟೇ ಕನ್ನಡ ಕುವರಿ, ಕೊಡಗಿನ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ತುಣುಕೊಂದು ಇಂಟರ್ನೆಟ್ ತಾಣಗಳಲ್ಲಿ ತಲ್ಲಣ ಹುಟ್ಟಿಸಿತ್ತು. ಈ ಕುರಿತು ಅಮಿತಾಭ್ ಬಚ್ಚನ್ ಅವರಂತಹ ದಿಗ್ಗಜ ನಟರೇ ಕಳವಳ ವ್ಯಕ್ತಪಡಿಸಿದ್ದರು. ಆ ವಿಡಿಯೋ ಹುಟ್ಟಿಸಿದ್ದ ತಲ್ಲಣದ ಕಂಪನ ಯಾವ ಮಟ್ಟಿಗಿತ್ತೆಂದರೆ ಕೇಂದ್ರ ಸರ್ಕಾರದ ಮಂತ್ರಿಗಳೇ ಅದಕ್ಕೆ ಪ್ರತಿಕ್ರಿಯಿಸಬೇಕಾಯಿತು. ಘಟನೆಯ ಕುರಿತು ಪ್ರತಿಕ್ರಿಯಿಸಿದ್ದ ಮಂತ್ರಿ ಹಾಗೂ ಉದ್ಯಮಿ ರಾಜೀವ್ ಚಂದ್ರಶೇಖರ್ ಡೀಪ್ ಫೇಕ್ ನಿಯಂತ್ರಣಕ್ಕೆ ದಿಟ್ಟ ಕಾನೂನು ತರುವುದಾಗಿ ಘೋಷಿಸಿದ್ದರು.
ಅವರು ಹಾಗೆ ಘೋಷಿಸಿ ಇನ್ನೂ ಸರಿಯಾಗಿ ತಿಂಗಳು ಕೂಡಾ ಕಳೆದಿಲ್ಲ. ಈಗ ಅದೇ ಡೀಪ್ ಫೇಕ್ ಬಲೆ ಭಾರತ ರತ್ನ. ಕ್ರಿಕೆಟ್ ದೇವರು ಎಂದೆಲ್ಲಾ ಕರೆಯಿಸಿಕೊಳ್ಳುವ ಸಚಿನ್ ತೆಂಡುಲ್ಕರ್ ಅವರನ್ನು ತನ್ನ ಮಡಿಲಿಗೆ ಕೆಡವಿಕೊಂಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ತೆಂಡುಲ್ಕರ್ “ಈ ವೀಡಿಯೊ ನಕಲಿಯಾಗಿದ್ದು, ನಿಮ್ಮನ್ನು ಮೋಸಗೊಳಿಸಲೆಂದೇ ಮಾಡಲಾಗಿದೆ. ತಂತ್ರಜ್ಞಾನದ ಈ ರೀತಿಯ ದುರ್ಬಳಕೆ ಸಂಪೂರ್ಣವಾಗಿ ತಪ್ಪು. ಅಂತಹ ವೀಡಿಯೊಗಳು ಅಥವಾ ಅಪ್ಲಿಕೇಶನ್ಗಳು ಅಥವಾ ಜಾಹೀರಾತುಗಳು ನಿಮ್ಮ ಗಮನಕ್ಕೆ ಬಂದರೆ, ತಕ್ಷಣವೇ ಅವುಗಳನ್ನು ವರದಿ ಮಾಡುವಂತೆ ನಿಮ್ಮೆಲ್ಲರಲ್ಲೂ ವಿನಂತಿ ಮಾಡಿಕೊಳ್ಳುತ್ತಿದ್ದೇನೆ.
ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು ಸಹ ಈ ಕುರಿತು ಜಾಗರೂಕರಾಗಿರಬೇಕು ಮತ್ತು ಅವರ ವಿರುದ್ಧ ಸಲ್ಲಿಸಲಾದ ದೂರುಗಳ ಬಗ್ಗೆ ಸಾಧ್ಯವಾದಷ್ಟು ಬೇಗ ಕ್ರಮ ತೆಗೆದುಕೊಳ್ಳಬೇಕು. ತಪ್ಪು ಮಾಹಿತಿ ಮತ್ತು ಸುದ್ದಿಗಳನ್ನು ನಿಲ್ಲಿಸಲು ಮತ್ತು ಡೀಪ್ ಫೇಕ್ ದುರುಪಯೋಗವನ್ನು ಕೊನೆಗೊಳಿಸಲು ಈ ನಿಟ್ಟಿನಲ್ಲಿ ಅವರ ಪಾತ್ರ ಬಹಳ ಮುಖ್ಯವಾದದ್ದು” ಎಂದು ಟ್ವೀಟ್ ಮಾಡಿದ್ದಾರೆ.
ತಮ್ಮ ಟ್ವೀಟ್ನಲ್ಲಿ ಅವರು ಕೇಂದ್ರ ಮತ್ತು ರಾಜ್ಯದ ಹಲವು ಐಟಿ ಸಂಬಂಧಿ ಮಂತ್ರಾಲಯಗಳನ್ನು ಟ್ಯಾಗ್ ಮಾಡಿದ್ದಾರೆ.
ಆದರೆ ಹೀಗೆ ಈ ರೀತಿಯ ಡೀಪ್ ಫೇಕ್ ತಂತ್ರಜ್ಞಾನಕ್ಕೆ ಬಲಿಯಾದವರಲ್ಲಿ ರಶ್ಮಿಕಾ ಮೊದಲನೆಯವರೂ ಅಲ್ಲ ಹಾಗೆಯೇ ಸಚಿನ್ ಕೊನೆಯವರೂ ಅಲ್ಲ. ಈಗಾಗಲೇ ಇದಕ್ಕೆ ಇತರ ಬಾಲಿವುಡ್ ನಟರಾದ ಆಲಿಯಾ ಭಟ್, ಕಾಜೋಲ್ ಮತ್ತು ಕತ್ರಿನಾ ಕೈಫ್ ಕೂಡ ಬಲಿಯಾಗಿದ್ದಾರೆ. ಇತ್ತ ಡೀಪ್ ಫೇಕ್ ನಿಯಂತ್ರಣದ ಕುರಿತು ಚರ್ಚೆಯಾಗುತ್ತಿರುವ ಹೊತ್ತಿನಲ್ಲೇ ಅಲ್ಲೆಲ್ಲೋ ಇನ್ನೊಂದು ಫೇಕ್ ವಿಡೀಯೊ ತಯಾರಾಗುತ್ತಿರಬಹುದು.
ಪ್ರಸ್ತುತ ತೆಂಡುಲ್ಕರ್ ಅವರ ವಿಡಿಯೋದಲ್ಲಿ ಆನ್ ಲೈನ್ ಬೆಟ್ಟಿಂಗ್ ಗೇಮ್ ಮಾದರಿಯ ಅಪ್ಲಿಕೇಷನ್ ಒಂದನ್ನು ಸಚಿನ್ ಪ್ರತಿನಿಧಿಸುವಂತೆ ಚಿತ್ರಿಸಲಾಗಿದೆ. ಅದರಲ್ಲಿ ಅವರು ನನ್ನ ಮಗಳು ಈ ಅಪ್ಲಿಕೇಷನ್ ಬಳಸುತ್ತಿದ್ದರು ಸಾಕಷ್ಟು ಹಣವನ್ನು ಸಹ ದುಡಿಯುತ್ತಿದ್ದಾಳೆ ಎನ್ನುವ ಅರ್ಥ ಬರುವಂತೆ ಅವರು ಮಾತನಾಡುತ್ತಿದ್ದಾರೆ.
ಆದರೆ ನಟಿಯರ ವಿಷಯದಲ್ಲಿ ಇದು ಅಷ್ಟು ಸರಳವಿಲ್ಲ. ದುಷ್ಕರ್ಮಿಗಳು ಅವರ ಮಾನವನ್ನೇ ತಮ್ಮ ವಿಡಿಯೋಗಳಲ್ಲಿ ಹರಾಜು ಹಾಕುವ ಕೆಲಸ ಮಾಡುತ್ತಿದ್ದಾರೆ. ಕಾಜಲ್, ಕತ್ರೀನಾ, ಅಲಿಯಾ ಹಾಗೂ ರಶ್ಮಿಕಾ ಇವರೆಲ್ಲರ ಅಶ್ಲೀಲ ವಿಡಿಯೋಗಳನ್ನು ಹರಿಬಿಡಲಾಗಿತ್ತು. ಅವರು ಆ ಕುರಿತು ಸ್ಪಷ್ಟನೆ ಕೊಟ್ಟರೂ ಜನರು ನಂಬಲಾರದಂತೆ ಈ ವಿಡಿಯೋಗಳನ್ನು ಸೃಷ್ಟಿಸಲಾಗಿತ್ತು.
ಈ ಹಿಂದೆ ಡೀಪ್ ಫೇಕ್ ಚುನಾವಣೆ ಸಮಯದಲ್ಲಿ ಮಾಡಬಹುದಾದ ಉಪದ್ರವಗಳ ಕುರಿತು ಚರ್ಚಿಸಲಾಗಿತ್ತು. ಆದರೆ ಇಂದು ಅದರ ಬಹುತೇಕ ಬಲಿಪಶುಗಳು ನಟ, ನಟಿಯರು ಹಾಗೂ ಕ್ರೀಡಾ ತಾರೆಗಳು ಎನ್ನುವುದು ವಿಪರ್ಯಾಸ,
ಡೀಪ್ ಫೇಕ್ ಹಿನ್ನೆಲೆ
2017ರಲ್ಲಿ ಪರಿಚಿತಗೊಂಡ ಇದರ ತಾಂತ್ರಿಕ ಮಟ್ಟ ಮತ್ತು ಸಾಮಾಜಿಕ ಪರಿಣಾಮವು ವೇಗವಾಗಿ ಬೆಳೆದಿದೆ ಎನ್ನುತ್ತದೆ ಆಮ್ಸ್ಟರ್ಡ್ಯಾಮ್ ಮೂಲದ ಸೈಬರ್ ಸೆಕ್ಯುರಿಟಿ ಕಂಪನಿ ಡೀಪ್ಟ್ರೇಸ್. ಡೀಪ್ಟ್ರೇಸ್ ಕಂಪನಿಯು 2019ರಲ್ಲಿ ಪ್ರಕಟಿಸಿದ ವರದಿಯ ಪ್ರಕಾರ, ಆನ್ಲೈನ್ನಲ್ಲಿ ಒಟ್ಟು 14,678 ಡೀಪ್ಫೇಕ್ ವೀಡಿಯೊಗಳಿವೆ. ಈ ಪೈಕಿ ಅವುಗಳಲ್ಲಿ 96 ಪ್ರತಿಶತ ವೀಡಿಯೊಗಳು ಅಶ್ಲೀಲ ವಿಷಯವನ್ನು ಒಳಗೊಂಡಿವೆ.
ಮಹಿಳೆಯರ ಮಾನಹಾನಿ ಮಾಡುವ ಸಲುವಾಗಿ ಡೀಪ್ಫೇಕ್ ಪೋರ್ನೋಗ್ರಫಿಯನ್ನು ಬಳಸಲಾಗುತ್ತಿದೆ ಎಂದು ಡೀಪ್ಟ್ರೇಸ್ ಹೇಳಿದೆ. ಪ್ರಸ್ತುತ ಜಗತ್ತಿನಾದ್ಯಂತ ಡೀಪ್ ಫೇಕ್ ಪೊರ್ನೋಗ್ರಫಿ ವೇಗವಾಗಿ ಬೆಳೆಯುತ್ತಿದ್ದು, ಮನರಂಜನಾ ಉದ್ಯಮದ ಮಹಿಳೆಯರು ಮತ್ತು ಸಂಗೀತಗಾರರು ಈ ಅಶ್ಲೀಲ ವೀಡಿಯೊಗಳಿಗೆ ಬಲಿಪಶುಗಳಾಗುತ್ತಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಸಾಮಾನ್ಯವಾಗಿ ಡೀಪ್ ಫೇಕ್ ವಿಷಯದಲ್ಲಿ ಪುರುಷರನ್ನೂ ಬಳಸಿಕೊಳ್ಳಲಾಗುತ್ತದೆಯಾದರೂ ಅವರು ಅದರ ಕುರಿತು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಮತ್ತು ಅದು ಅವರ “ಮರ್ಯಾದೆಯ ಪ್ರಶ್ನೆ” ಆಗಿರುವುದಿಲ್ಲ ಎನ್ನುವುದು ಬೇರೆಯದೇ ವಿಷಯ.
“ಈ ಹಿಂದೆಯೂ ಫೋಟೊಗಳನ್ನು ಮಾರ್ಫ್ ಮಾಡಲಾಗುತ್ತಿತ್ತು. ಆದರೆ ಈಗಿನ ಡೀಪ್ ಫೇಕ್ ವಿಷಯಗಳನ್ನು ಎಐ ಬಳಸಿ ಕೂಡಾ ಪತ್ತೆ ಹಚ್ಚುವುದು ಅಸಾಧ್ಯ. ಏಕೆಂದರೆ ಅವು ಅಷ್ಟು ಸಹಜವಾಗಿರುತ್ತವೆ” ಎನ್ನುತ್ತಾರೆ ಮುಂಬೈ ಮೂಲದ ಸೈಬರ್ ಕಾನೂನು ಮತ್ತು ಡೇಟಾ ರಕ್ಷಣೆ ಗೌಪ್ಯತೆ ತಜ್ಞ ಪುನೀತ್ ಭಾಸಿನ್. ಡೀಪ್ ಫೇಕ್ ತಂತ್ರಜ್ಞಾನವೆನ್ನುವುದು ಗೆದ್ದಲಿನಂತೆ ಹರಡುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸುತ್ತಾರೆ.
ಹಾಗಿದ್ದರೆ ಡೀಪ್ ಫೇಕ್ ಎಂದರೇನು?
ಡೀಪ್ ಫೇಕ್ ಎನ್ನುವುದು ಕಂಪ್ಯೂಟರ್, ಎಲೆಕ್ಟ್ರಾನಿಕ್ ಫಾರ್ಮ್ಯಾಟ್ ಮತ್ತು AI ತಂತ್ರಜ್ಞಾನದ ಒಟ್ಟಾರೆ ಸಂಯೋಜನೆ ಎನ್ನುತ್ತಾರೆ ಸೈಬರ್ ಭದ್ರತೆ-ಎಐ ತಜ್ಞ ಪವನ್ ದುಗ್ಗಲ್.
ಸಾಮಾನ್ಯ ಕಂಪ್ಯೂಟರುಗಳಲ್ಲಿ ಡೀಪ್ ಫೇಕ್ ಸೃಷ್ಟಿಸುವುದು ಬಹಳ ಕಷ್ಟವೆನ್ನುತ್ತಾರೆ ಪರಿಣತರು. ಇದನ್ನು ಸಾಮಾನ್ಯವಾಗಿ ಉನ್ನತ ತಂತ್ರಜ್ಞಾನ ಹೊಂದಿರುವ ಡೆಸ್ಕ್ಟಾಪ್ ಬಳಸಿ ಉನ್ನತ ಗುಣಮಟ್ಟದ ಫೋಟೋಗಳು ಮತ್ತು ಗ್ರಾಫಿಕ್ ಕಾರ್ಡ್ಗಳನ್ನು ಬಳಸಿಕೊಂಡು ಡೀಪ್ ಫೇಕ್ ಸೃಷ್ಟಿಸಲಾಗುತ್ತದೆ.
ಸೈಬರ್ ಅಪರಾಧಿಗಳು ಈ ತಂತ್ರಜ್ಞಾನವನ್ನು ಹೆಚ್ಚು ಬಳಸುತ್ತಿದ್ದಾರೆ ಎನ್ನುವುದು ಪವನ್ ದುಗ್ಗಲ್ ಅವರ ಅಭಿಪ್ರಾಯ.
ಈ ಅಪರಾಧಿಗಳು ಸಾಮಾನ್ಯವಾಗಿ ದೊಡ್ಡ ದೊಡ್ಡ ಸೆಲೆಬ್ರೆಟಿಗಳು, ರಾಜಕಾರಣಿಗಳು, ನಟ-ನಟಿಯರನ್ನು ಬ್ಲಾಕ್ ಮೇಲ್ ಮಾಡುವ ಸಲುವಾಗಿ ಇಂತಹ ವಿಡಿಯೋಗನ್ನು ಸೃಷ್ಟಿಸುತ್ತಾರೆ. ಕೆಲವೊಮ್ಮೆ ಇಂತಹ ಜನರ ಇಮೇಜ್ ಡ್ಯಾಮೇಜ್ ಮಾಡುವ ಸಲುವಾಗಿಯೂ ವಿಡಿಯೋಗಳನ್ನು ಸೃಷ್ಟಿಸಲಾಗುತ್ತದೆ. ಇಂತಹ ವಿಡಿಯೋಗಳಿಗೆ ದೊಡ್ಡ ಮಟ್ಟದ ಪ್ರೇಕ್ಷಕರೂ ಇದ್ದು ಅವರನ್ನು ಸೆಳೆದು ವೀವ್ಸ್ ಹೆಚ್ಚಿಸಿಕೊಳ್ಳುವ ಸಲುವಾಗಿಯೂ ಡೀಪ್ ಫೇಕ್ ವಿಡಿಯೋಗಳನ್ನು ಸೃಷ್ಟಿಲಾಗುತ್ತದೆ.
ಡೀಪ್ ಫೇಕ್ ವಿಡಿಯೋಗಳನ್ನು ಗುರುತಿಸಲು ಈ ತಂತ್ರಗಳನ್ನು ಬಳಸಬಹುದು:
ಸಾಮಾನ್ಯವಾಗಿ ಡೀಪ್ ಫೇಕ್ ವಿಡಿಯೋಗಳಲ್ಲಿ ವ್ಯಕ್ತಿ ಕಣ್ಣು ಮಿಟುಕಿಸುವುದಿಲ್ಲ. ಆದರೆ ಸಚಿನ್ ಅವರ ವಿಡಿಯೋ ಇದಕ್ಕೆ ಅಪವಾದ.
ತುಟಿಗಳ ಚಲನೆಯನ್ನು ಗಮನಿಸಿ ನೋಡಿದರೆ ತುಟಿಗಳ ಚಲನೆಗೂ, ಅವರಾಡುತ್ತಿರುವ ಪದಗಳಿಗೂ ಪರಸ್ಪರ ಸಂಬಂಧವಿರುವುದಿಲ್ಲ.
ಜೊತೆಗೆ ವಿಡಿಯೋದಲ್ಲಿರುವ ವ್ಯಕ್ತಿಯ ಹಲ್ಲು ಮತ್ತು ಕೂದಲನ್ನು ಗಮನಿಸುವ ಮೂಲಕವೂ ನಕಲಿ ವಿಡಿಯೋವನ್ನು ಕಂಡುಹಿಡಿಯಬಹುದು. ಡೀಪ್ ಫೇಕ್ ತಂತ್ರಜ್ಞಾನದಲ್ಲಿ ಕೂದಲನ್ನು ಮಾರ್ಪಾಟು ಮಾಡುವುದು ಪ್ರಸ್ತುತ ಬಹಳ ಕಷ್ಟ.
ದೇಶ ಇನ್ನೊಂದು ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿರುವಾಗ ಡೀಪ್ ಫೇಕ್ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕಿರುವುದು ಇಂದಿನ ತುರ್ತು ಎನ್ನುವುದು ದೇಶದ ತಜ್ಞರ ಅಭಿಪ್ರಾಯವಾಗಿದೆ.
.