ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸಾಫ್ಟ್‌ವೇರ್ ಕಂಪನಿ ಮುಖ್ಯಸ್ಥ ಸೇರಿ 6 ಮಂದಿ ಮೃತಪಟ್ಟಿದ್ದಾರೆ. ನೆಲಮಂಗಲ ತಾಲೂಕಿನ ತಾಳೆಕೆರೆ ಬಳಿ ನಡೆದ ಈ ಸರಣಿ ಅಪಘಾತದಿಂದ ಟ್ರಾಫಿಕ್ ಸಮಸ್ಯೆ ಕಂಡುಬಂದಿದ್ದು, ಸ್ಥಳೀಯರು ಮತ್ತು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
IAST ಸಾಫ್ಟ್‌ವೇರ್ ಸಲ್ಯೂಷನ್ ಮುಖ್ಯಸ್ಥ ಚಂದ್ರಮ್ ಯಾಗಪ್ಪಗೋಳ್( 48), ಗೌರಾಬಾಯಿ (42), ದೀಕ್ಷಾ (12), ಜಾನ್ (16), ವಿಜಯಲಕ್ಷ್ಮಿ (36), ಆರ್ಯ (6) ಎಂಬುವವರು ಈ ಕಾರಿನಲ್ಲಿ ತೆರಳುತ್ತಿದ್ದರು. ಕಾರಿನ ಮೇಲೆ ಬೃಹತ್ ಕಂಟೇನರ್ ಲಾರಿ ಬಿದ್ದ ಪರಿಣಾಮ ರಭಸಕ್ಕೆ ಕಾರು ಸಂಪೂರ್ಣ ಅಪ್ಪಚ್ಚಿಯಾಗಿದ್ದು, ಕಾರಿನಲಿದ್ದ ಒಟ್ಟು 6 ಮಂದಿಯೂ ಸಾವಿಗೀಡಾಗಿದ್ದಾರೆ. ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್ ನಡುವೆ ಈ ಸರಣಿ ಅಪಘಾತ ಸಂಭವಿಸಿದೆ.
ವೇಗವಾಗಿ ಬಂದ ಲಾರಿಗಳ ನಡುವೆ ಅಪಘಾತ ಸಂಭವಿಸಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿದೆ. ಸ್ಥಳಕ್ಕೆ ನೆಲಮಂಗಲ ಪೊಲೀಸರು ಆಗಮಿಸಿದ್ದು, ಕಂಟೇನರ್ ಲಾರಿಯನ್ನು ತೆರವುಗೊಳಿಸುತ್ತಿದ್ದಾರೆ. ಕಂಟೇನರ್ ಲಾರಿ ಬಿದ್ದ ರಭಸಕ್ಕೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.