ಜಮ್ಮು-ಕಾಶ್ಮೀರದ ಡೋಡಾ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಭಾರತೀಯ ಸೇನೆಯ 10 ಸೈನಿಕರು ಸಾವನ್ನಪ್ಪಿದ್ದು, 7 ಮಂದಿ ಗಂಭೀರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ ಸಂಭವಿಸಿದೆ.
ಡೋಡಾ ಜಿಲ್ಲೆಯ ಎಸ್‌ಕೆ ಪಯೆನ್ ಪ್ರದೇಶದ ಬಳಿ ಮಧ್ಯಾಹ್ನ ಸುಮಾರು 2.30ರ ಸುಮಾರಿಗೆ ಈ ದುರಂತ ಸಂಭವಿಸಿದೆ. 17 ಸೈನಿಕರು ಸಂಚರಿಸುತ್ತಿದ್ದ ಭಾರತೀಯ ಸೇನೆಯ ಕ್ಯಾಸ್ಪರ್ (ಬುಲೆಟ್‌ಪ್ರೂಫ್) ವಾಹನವು ನಿಯಂತ್ರಣ ತಪ್ಪಿ ಸುಮಾರು 200 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಅಧಿಕಾರಿಗಳ ಪ್ರಕಾರ, ಕಳಪೆ ರಸ್ತೆ ಸ್ಥಿತಿ, ಪ್ರತಿಕೂಲ ಹವಾಮಾನ ಹಾಗೂ ಕಡಿಮೆ ಗೋಚರತೆಯೇ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ. ಡೋಡಾದ ಭದ್ರವಾಹ್–ಚಂಬಾ ಅಂತರರಾಜ್ಯ ರಸ್ತೆಯ ಖನ್ನಿ ಟಾಪ್ ಬಳಿ ವಾಹನ ಚಲಿಸುತ್ತಿದ್ದಾಗ ಚಾಲಕನಿಗೆ ನಿಯಂತ್ರಣ ಕಳೆದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಭಾರತೀಯ ಸೇನೆ, “ಪ್ರತಿಕೂಲ ಹವಾಮಾನ ಮತ್ತು ಕಡಿಮೆ ಗೋಚರತೆಯಿಂದಾಗಿ ಸೇನಾ ವಾಹನ ಸ್ಕಿಡ್ ಆಗಿ ಕಂದಕಕ್ಕೆ ಬಿದ್ದಿದೆ. ಗಾಯಗೊಂಡ ಸೈನಿಕರನ್ನು ಸ್ಥಳೀಯ ಕಾಶ್ಮೀರಿಗಳ ಸಹಕಾರದಿಂದ ತಕ್ಷಣವೇ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ತಕ್ಷಣದ ನೆರವು ನೀಡಿದ ನಾಗರಿಕರಿಗೆ ನಾವು ಕೃತಜ್ಞರಾಗಿದ್ದೇವೆ” ಎಂದು ತಿಳಿಸಿದೆ.
ಪ್ರಾಥಮಿಕವಾಗಿ ಮೂವರು ಸೈನಿಕರು ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಮತ್ತಷ್ಟು ಸೈನಿಕರು ಗಾಯಗಳಿಗೆ ತುತ್ತಾಗಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ಸೇನೆಯ ಚಿನಾರ್ ಕಾರ್ಪ್ಸ್ ದೃಢಪಡಿಸಿದೆ.
ಅಪಘಾತದ ನಂತರ ಸೇನೆ ಹಾಗೂ ಪೊಲೀಸ್ ತಂಡಗಳು ಸಂಯುಕ್ತವಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಗಾಯಾಳುಗಳನ್ನು ಭದ್ರವಾಹ್‌ನ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ಸೈನಿಕರನ್ನು ಹೆಲಿಕಾಪ್ಟರ್ ಮೂಲಕ ಉಧಂಪುರದ ಸೇನಾ ಆಸ್ಪತ್ರೆಗೆ ವರ್ಗಾಯಿಸಲಾಗುತ್ತಿದೆ.
ಮೃತ ಸೈನಿಕರ ಕುಟುಂಬಗಳಿಗೆ ಭಾರತೀಯ ಸೇನೆ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
