“..ಇವತ್ತು ಕೇವಲ ರಾಜಕೀಯ ಉದ್ದೇಶದ ಕಾರಣಕ್ಕೆ ನೆಹರೂ ಅವರ ಚಾರಿತ್ಯ್ರವಧೆ ಮಾಡುವಲ್ಲಿ ಬ್ಯುಸಿಯಾಗಿರುವವರ ನಡುವೆ ಇಂತಹ ಸತ್ಯಗಳು ಮುಂದಿನ ಪೀಳಿಗೆಗೆ ತಿಳಿಯಬೇಕಿದೆ..” ಒಂದು ಅಪರೂಪದ ಮಾಹಿತಿ ತಪ್ಪದೇ ಓದಿ. ಪತ್ರಕರ್ತ ಗಿರೀಶ್ ತಾಳಿಕಟ್ಟೆ ಅವರ ಬರಹದಲ್ಲಿ
ಇವತ್ತು ಚಾಚಾ ನೆಹರೂ ಅವರ ಹುಟ್ಟುಹಬ್ಬ. ಅದನ್ನು ನಾವು ಮಕ್ಕಳ ದಿನಾಚರಣೆಯಾಗಿ ಆಚರಿಸೋದು ನಮಗೆಲ್ಲರಿಗೂ ಗೊತ್ತು. ಯಾಕಂದ್ರೆ, ನೆಹರೂ ಅವರಿಗೆ ಮಕ್ಕಳೆಂದರೆ ತುಂಬಾ ಇಷ್ಟ. ಅದೂ ನಮಗೆ ಗೊತ್ತು. ಚಾಚಾ ನೆಹರೂ ಅವರಿಗೇನೊ ಮಕ್ಕಳೆಂದ್ರೆ ಇಷ್ಟ, ಸರಿ… ಆದ್ರೆ ಮಕ್ಕಳಿಗೆ ಏನಿಷ್ಟ? ಕೇಳೋದೆ ಬೇಡ.. ಮಕ್ಕಳಿಗೆ ಆಟ ಆಡೋದು ಅಂದ್ರೆ ತುಂಬಾ ಇಷ್ಟ. ಮಕ್ಕಳನ್ನು ಇಷ್ಟ ಪಡುತ್ತಿದ್ದ ಚಾಚಾ ನೆಹರೂ ಅವರಿಗು ಕೂಡಾ ಆಟ ಅಂದ್ರೆ ತುಂಬಾ ಅಚ್ಚುಮೆಚ್ಚು. ಚಿಕ್ಕವರಿದ್ದಾಗ ಆಟಗಳಲ್ಲಿ ಬಾಲಕ ನೆಹರೂ ಸದಾ ಮುಂದೆ.
ಚಾಚಾ ನೆಹರೂ ಒಬ್ಬ ಅಪ್ಪಟ ಕ್ರಿಕೆಟ್ ಪ್ರೇಮಿಯಾಗಿದ್ದರು ಎನ್ನುವುದು ನಮ್ಮಲ್ಲಿ ಬಹಳಷ್ಟು ಜನರಿಗೆ ತಿಳಿದಿಲ್ಲ. ಕ್ರಿಕೆಟ್ ಪ್ರೇಮಿ ಮಾತ್ರವಲ್ಲ, ಸ್ವತಃ ಒಬ್ಬ ಫೆಂಟಾಸ್ಟಿಕ್ ಕ್ರಿಕೆಟ್ ಆಟಗಾರನೂ ಆಗಿದ್ದರು. ಸಾಮಾನ್ಯವಾಗಿ ನೆಹರೂ ಎಂದಾಕ್ಷಣ, ಸ್ವಾತಂತ್ಯ್ರ ಹೋರಾಟದ ಹಿನ್ನೆಲೆಯಲ್ಲಿ ತುಂಬಾ ಗಂಭೀರ, ರಾಜಕೀಯ ಮುತ್ಸದ್ಧಿಯಾಗಿ ನಾವು ಕಲ್ಪಿಸಿಕೊಳ್ಳುತ್ತೇವೆ. ಆದರೆ ಒಬ್ಬ ಅಪ್ಪಟ ಜನನಾಯಕನಾದವನಿಗೆ ಕೇವಲ ರಾಜಕೀಯ ಪ್ರಜ್ಞೆ ಮಾತ್ರವಲ್ಲದೆ ಕಲೆ, ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಅಭಿರುಚಿಯೂ ಇರಬೇಕಾಗುತ್ತೆ. ನೆಹರೂ ಅಂತಹ ಅಪ್ಪಟ ಜನನಾಯಕನಾಗಿದ್ದರು. ತಮ್ಮ ಇಳಿವಯಸ್ಸಿನವರೆಗೂ ಕ್ರಿಕೆಟ್ ಬಗ್ಗೆ ಅವರು ಕಾಪಿಟ್ಟುಕೊಂಡು ಬಂದ ಆಸಕ್ತಿ, ಅಭಿರುಚಿಯೇ ಇದಕ್ಕೆ ಸಾಕ್ಷಿ. ನೆನಪಿರಲಿ, ಅವರು ಪ್ರಧಾನಿಯಾದ ಮೇಲೂ, ಕೈಗೆ ಗ್ಲೌಸ್ ಹಾಕಿ ಬ್ಯಾಟ್ ಹಿಡಿದು ಬೌಲರ್‍ಗಳನ್ನು ಎದುರಿಸಿದ್ದುಂಟು; ಕೈಯಲ್ಲಿ ಬಾಲನ್ನು ಗಿರಿಗಿರನೆ ತಿರುಗಿಸಿ ಸ್ಪಿನ್ ಎಸೆದು ಬ್ಯಾಟರ್‍ಗಳನ್ನು ದಂಗುಬಡಿಸಿದ್ದೂ ಉಂಟು.
ಅದು 1953. ಸ್ವಾತಂತ್ಯ್ರ ಲಭಿಸಿ ಕೇವಲ ಆರು ವರ್ಷಗಳಷ್ಟೇ ಗತಿಸಿದ್ದವು. ಹಲವು ಸವಾಲುಗಳ ನಡುವೆ ಭಾರತವನ್ನು ಕಟ್ಟಿನಿಲ್ಲಿಸುವ ಸವಾಲು ರಾಷ್ಟ್ರೀಯ ನಾಯಕರ ಮುಂದಿತ್ತು. ಅಂತಹ ಸಂದರ್ಭದಲ್ಲಿ ಉತ್ತರಪ್ರದೇಶ, ಆಂದ್ರಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಕಾಣಿಸಿಕೊಂಡ ಭೀಕರ ಪ್ರವಾಹದಿಂದ ಜನ ತತ್ತರಿಸಿಹೋಗಿದ್ದರು. ತುರ್ತಾಗಿ ಸಂತ್ರಸ್ತರ ನೆರವಿಗೆ ಏನಾದರು ಮಾಡಲೇಬೇಕಿತ್ತು. ಸರ್ಕಾರದಿಂದ ನೀಡಬಹುದಾದ ನೆರವನ್ನೆಲ್ಲ ನೀಡಿದ ನಂತರವೂ ನೆಹರೂಗೆ ಯಾಕೊ ಸಮಾಧಾನ ಅನ್ನಿಸಲಿಲ್ಲ. ಆ ಜನರಿಗೆ ಇನ್ನೂ ನೆರವಿನ ಅಗತ್ಯವಿದೆ ಅನ್ನಿಸಿದಾಗ, ಅವರ ತಲೆಯಲ್ಲಿ ಒಂದು ಆಲೋಚನೆ ಮೊಳೆಯಿತು. ಹಿರಿಯ ಮುತ್ಸದ್ಧಿ ರಾಜಕಾರಣಿಗಳನ್ನೆಲ್ಲ ಕಲೆಹಾಕಿ ಒಂದು ದತ್ತಿ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿದರೆ ಹೇಗೆ? ಅಲ್ಲಿ ಸಂಗ್ರಹವಾಗುವ ದೇಣಿಗೆಯನ್ನು ಸಂತ್ರಸ್ತರಿಗೆ ನೀಡಬಹುದಲ್ಲವೇ ಎನಿಸಿದ್ದೇ ತಡ, ಅದನ್ನ ಕಾರ್ಯರೂಪಕ್ಕೆ ತಂದರು.
ಪ್ರೈಮ್ ಮಿನಿಸ್ಟರ್-ಇಲೆವೆನ್ ಮತ್ತು ವೈಸ್ ಪ್ರೆಸಿಡೆಂಟ್-ಇಲೆವೆನ್ ಎಂಬ ಎರಡು ತಂಡಗಳನ್ನು ಕಟ್ಟಿ, ಪ್ರೈಮ್ ಮಿನಿಸ್ಟರ್ ಇಲವೆನ್ ತಂಡಕ್ಕೆ ತಾನೇ ಕಫ್ತಾನನಾಗಿ ಕ್ರಿಕೆಟ್ ಮೈದಾನಕ್ಕಿಳಿದರು. ಮತ್ತೊಂದು ತಂಡಕ್ಕೆ ಸರ್ವೇಪಲ್ಲಿ ರಾಧಾಕೃಷ್ಣನ್ ಕಫ್ತಾನರು. ಅವತ್ತಿನ ಸಂಸತ್ತಿನಲ್ಲಿದ್ದ ಘಟಾನುಘಟಿ ರಾಜಕೀಯ ನಾಯಕರೆಲ್ಲ ಆ ತಂಡಗಳಲ್ಲಿ ಆಟಗಾರರಾಗಿ ಭಾಗವಹಿಸಿದ್ದರು. ಎರಡು ದಿನಗಳ ಒಂದು ಟೆಸ್ಟ್ ಪಂದ್ಯವನ್ನು ಆಯೋಜಿಸಲಾಯ್ತು. ಸ್ವಾತಂತ್ಯ್ರ ಚಳವಳಿ ಮತ್ತು ರಾಜಕೀಯ ಒತ್ತಡಗಳ ಕಾರಣಕ್ಕೆ ಸುಮಾರು 40 ವರ್ಷಗಳ ಕಾಲ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದ ಚಾಚಾ ನೆಹರೂ ಅವತ್ತು ನಡೆದ ಆಟದಲ್ಲಿ ಒಬ್ಬ ಅಪ್ಪಟ ವೃತ್ತಿಪರ ಕ್ರಿಕೆಟ್ ಆಟಗಾರನಂತೆಯೇ ಲವಲವಿಕೆಯಿಂದ ಆಟವಾಡಿದರು ಎಂದು ಅಂದಿನ ಬಿಬಿಸಿ ಸುದ್ದಿ ಸಂಸ್ಥೆ ವರದಿ ಮಾಡಿತ್ತು.
ಆಟ ಆಡಿದ್ದು ಮಾತ್ರವಲ್ಲ, ಆ ಪಂದ್ಯಕ್ಕೆ ಕಾಮೆಂಟ್ರಿ ಕೂಡಾ ಮಾಡಿದ್ದರು ಚಾಚಾ ನೆಹರು. ತಮ್ಮ ಕಾಮೆಂಟ್ರಿಯ ನಡುವೆ ಅವರು ಹೇಳಿದ ಒಂದು ಮಾತು ಅವರೆಂತಹ ಆರೋಗ್ಯಕರ ಮನಸ್ಸಿನ ಕ್ರೀಡಾಸಕ್ತ ಎನ್ನುವುದಕ್ಕೆ ಸಾಕ್ಷಿ ಎನ್ನಬಹುದು, “ನಾವಿಲ್ಲಿ ಆಟವನ್ನು ಆಟದ ಸ್ಪೂರ್ತಿಯೊಂದಿಗೆ ಆಡಲು ಅಂಗಳಕ್ಕಿಳಿದಿದ್ದೇವೆ. ಈ ಎರಡು ದಿನಗಳಲ್ಲಿ ಸಾಕಷ್ಟು ರನ್ ಹೊಳೆ ಹರಿಸಿದ್ದೇವೆ, ಹುಬ್ಬೇರಿಸುವಂತ ಸ್ಟ್ರೈಕ್ ಬಾರಿಸಿದ್ದೇವೆ, ಗಂಟೆಗಟ್ಟಲೆ ಬೆವರು ಬಸಿದಿದ್ದೇವೆ. ಆದರೆ ನಾವಿಲ್ಲಿ ಆಟವನ್ನು ಆಟವಾಗಿ ಆಡಲು ಬಂದಿದ್ದೇವೆಯೇ ವಿನಾ ಗೆಲ್ಲಬೇಕೆಂಬ ಹಂಬಲದಿಂದಲ್ಲ, ಸೋಲಬಾರದೆನ್ನುವ ಹಠದಿಂದಲ್ಲ. ಆಟದಲ್ಲಿ ಆಟವಷ್ಟೇ ಮುಖ್ಯ…” ಎಂಥಾ ಮಾತುಗಳು ಇವು. ನಮ್ಮ ಉದ್ದೇಶ ಯಾವುದೇ ಆಗಿದ್ದರೂ, ನಮ್ಮ ಹಳೆಯ ನೆನಪುಗಳು ಏನೇ ಇದ್ದರೂ, ಮೈದಾನಕ್ಕೆ ಇಳಿದ ಮೇಲೆ ಆಟವಷ್ಟೇ ನಮಗೆ ಮುಖ್ಯವಾಗಬೇಕು, ಮತ್ತೇನೂ ಅಲ್ಲ ಅನ್ನೋದನ್ನು ನೆಹರೂ ಮಾತು ಪ್ರತಿಫಲಿಸುತ್ತವೆ.
ನೆಹರೂ ಹೇಳಿದ್ದು ನಿಜ. ಅವತ್ತು ಅಲ್ಲಿ ಸಾಕಷ್ಟು ರನ್ ಹೊಳೆಯೇ ಹರಿದಿತ್ತು. ಪ್ರತಿ ತಂಡ ತಲಾ ಎರಡೆರಡು ಇನ್ನಿಂಗ್ಸ್ ಆಡಿದ ಆ ಪಂದ್ಯದಲ್ಲಿ ಒಟ್ಟು 700 ರನ್‌ಗಳು ಹರಿದುಬಂದಿದ್ದವು, ಕೇವಲ 17 ವಿಕೆಟ್ಟುಗಳ ನಷ್ಟಕ್ಕೆ! ನೆಹರೂ ಅವರ ತಂಡದ ಸುರ್ಜೀತ್ ಸಿಂಗ್ ಮಜೀತಿಯಾ ಸೆಂಚುರಿ ಬಾರಿಸಿದ್ದು ವಿಶೇಷ. ವಿಪರ್ಯಾಸವೆಂದರೆ, ಸಾವಿರಾರು ಪ್ರೇಕ್ಷಕರ ಆಕರ್ಷಣೆಯ ಕೇಂದ್ರವಾಗಿದ್ದ ನೆಹರೂ ಆ ಪಂದ್ಯದಲ್ಲಿ ಗಳಿಸಿದ್ದು ಕೇವಲ 1 ರನ್ ಮಾತ್ರ! ತಮ್ಮ ತಂಡದ ಮೊದಲನೇ ಇನ್ನಿಂಗ್ಸ್ ನಲ್ಲಿ ಅವರಿಗೆ ಬ್ಯಾಟಿಂಗ್ ಸಿಗಲಿಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿ ನೆಹರೂ ಬ್ಯಾಟಿಂಗ್ ಇಳಿದು ಸ್ವಲ್ಪ ಹೊತ್ತಿಗೆ ತಂಡ ಡಿಕ್ಲೇರ್ ಘೋಷಿಸಿತು. ಆದರೆ ಪಂದ್ಯದ ಹೈಲೈಟ್ ದೃಶ್ಯವೆಂದರೆ, ನೆಹರೂ ಹಿಡಿದ ಒಂದು ಕ್ಯಾಚ್. ಇಂಡಿಯನ್ ಪೆಟ್ರೋಲಿಯಂ ಉದ್ಯಮದ ಪಿತಾಮಹ ಎಂದೇ ಕರೆಯಲಾಗುವ, ಉತ್ತರಪ್ರದೇಶದ ದೊಮಾರಿಯಾಗಂಜ್ ಸಂಸದರಾಗಿದ್ದ ಕೇಶವ್ ದೇವ್ ಮಾಳವಿಯಾ ಅವರ ಬ್ಯಾಟಿಗೆ ತಾಕಿದ ಚೆಂಡು, ಕೀಪರ್ ಮತ್ತು ಸ್ಲಿಪ್ ನಡುವೆ ನುಸುಳಿ ಹೋಗುವ ಪ್ರಯತ್ನದಲ್ಲಿದ್ದಾಗ, ಸ್ಲಿಪ್‌ನಲ್ಲಿ ನಿಂತಿದ್ದ ಚಾಚಾ ನೆಹರೂ ಅನುಭವಿ ಆಟಗಾರನಂತೆ ಗಬಕ್ಕನೆ ಚೆಂಡನ್ನು ತನ್ನ ಕೈತೆಕ್ಕೆಗೆ ತೆಗೆದುಕೊಂಡದ್ದನ್ನು ನೋಡಿ ನೆರೆದಿದ್ದ ಜನ ಹುಚ್ಚೆದ್ದು ಕಿರುಚಾಡಿದ್ದರು. ಕಾಮೆಂಟರಿ ಹೇಳುತ್ತಿದ್ದ ಹರೀಂದ್ರನಾಥ ಚೆಟ್ಟೋಪಾಧ್ಯಾಯ “ಸಂಸದ ಮಾಳವೀಯ ಪ್ರಧಾನಿ ನೆಹರೂ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡ್ರು” ಎಂದದ್ದು ಜನರನ್ನು ಮತ್ತಷ್ಟು ಮನರಂಜನೆ ನೀಡಿತ್ತು. ಪಂದ್ಯವನ್ನು ವಿವರವಾಗಿ ವರದಿ ಮಾಡಿದ್ದ ದಿ ಹಿಂದೂ ಪತ್ರಿಕೆ “ಜನರಿಗೆ ಆಟದ ನಡುವೆ ಬೇಸರವೇನಾದರೂ ಕಾಡಿದರೆ, ಒಂದೋ ಅವರು ನೆಹರೂ ಹೆಸರನ್ನು ಕಿರುಚಾಡಿ ರೋಮಾಂಚನಗೊಳ್ಳುತ್ತಿದ್ದರು, ಇಲ್ಲವಾದರೆ ಹರೀಂದ್ರನಾಥ ಚೆಟ್ಟೋಪಾಧ್ಯಾಯರ ಹಾಸ್ಯಮಯ ಕಾಮೆಂಟರಿ ಕೇಳಿಸಿಕೊಂಡು ನಗೆಗಡಲಲ್ಲಿ ತೇಲಾಡುತ್ತಿದ್ದರು” ಎಂದು ದಾಖಲಿಸಿತ್ತು. ನೆಹರೂ ಹೇಳಿದಂತೆ ಪಂದ್ಯದ ಫಲಿತಾಂಶ ಗೆಲವೂ ಆಗಲಿಲ್ಲ, ಸೋಲೂ ತರಲಿಲ್ಲ. ಪಂದ್ಯ ಡ್ರಾ ಆಗಿತ್ತು. ಅಂದಹಾಗೆ, ಆ ಪಂದ್ಯದಲ್ಲಿ ನೆಹರೂ ಒಂದು ಓವರ್ ಬೌಲಿಂಗ್ ಕೂಡಾ ಮಾಡಿದ್ದರು. ವಿಶೇಷವೆಂದರೆ, ಇಡೀ ಎರಡು ದಿನ ವಿಶ್ರಾಂತಿ ತೆಗೆದುಕೊಳ್ಳದೆ ಮೈದಾನದಲ್ಲೆ ಕಾಲ ಕಳೆದರು. ಫೀಲ್ಡಿಂಗ್ ಸಮಯದಲ್ಲು ಅವರು ಪೂರ್ಣ ಪ್ರಮಾಣದಲ್ಲಿ ತಮ್ಮ ಪಾತ್ರ ನಿಭಾಯಿಸಿದ್ದರು.
ಆಟಗಾರನಾಗಿ ಮತ್ತು ಕಮೆಂಟುದಾರನಾಗಿ ಮಾತ್ರವಲ್ಲ, ಪಂದ್ಯ ಮುಗಿದ ಬಳಿಕ ಹರಾಜುಗಾರನಾಗಿಯೂ ನೆಹರೂ ಅತ್ಯುತ್ಸಾಹದಿಂದ ಭಾಗಿಯಾಗಿದ್ದರು. ನಿಜ ಹೇಳಬೇಕೆಂದರೆ, ಆ ಪಂದ್ಯ ಆಯೋಜಿಸಿದ್ದೇ ದೇಣಿಗೆ ಸಂಗ್ರಹದ ಉದ್ದೇಶದಿಂದ. ಹಾಗಾಗಿ ಅದೇ ಮುಖ್ಯವಾದ ಘಟ್ಟವಾಗಿತ್ತು. ಅವತ್ತು ಆಟಲ್ಲಿ ಬಳಸಲಾದ ಕ್ರೀಡಾ ಸಲಕರಣೆಗಳ ಜೊತೆಗೆ, ಸಂತ್ರಸ್ತ ಜನರಿಗೆ ನೆರವಾಗಬೇಕೆಂಬ ಉದ್ದೇಶದಿಂದ ನೆಹರೂ ತಮ್ಮ ಖಾಸಗಿ ಕ್ರೀಡಾ ಸಂಗ್ರಹದ ಅತ್ಯಮೂಲ್ಯ ವಸ್ತುಗಳನ್ನೂ ಹರಾಜು ಹಾಕಿದರು. ಅದರಲ್ಲಿ ಒಂದು, ವೆಸ್ಟ್ ಇಂಡೀಸ್ ಮತ್ತು ಇಂಡಿಯಾ ಟೀಮ್‌ಗಳ ಆಟಗಾರರು ಸಹಿ ಮಾಡಿದ್ದ ಬ್ಯಾಟ್! 1948ರಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಭಾರತಕ್ಕೆ ಆಡಲು ಬಂದಿತ್ತು. ಪಂದ್ಯವೊಂದರ ನಂತರ, ಎರಡೂ ತಂಡಗಳ ಆಟಗಾರರು ಸಹಿ ಮಾಡಿ ಆ ಬ್ಯಾಟನ್ನು ನೆಹರೂ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಮತ್ತೊಂದು, 1951ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಕಾಮನ್‌ವೆಲ್ತ್ ಕ್ರಿಕೆಟ್ ಕೂಟದ ತಂಡ ಉಡಗೊರೆಯಾಗಿ ಕೊಟ್ಟಿದ್ದ ಇನ್ನೊಂದು ಬ್ಯಾಟ್. ಕ್ರಿಕೆಟ್ ಮೇಲಿನ ಪ್ರೀತಿಗಾಗಿ ಇವೆರಡನ್ನೂ ನೆಹರೂ ತಮ್ಮ ಸಂಗ್ರಹದಲ್ಲಿ ಕಾಳಜಿಯಿಂದ ಇಟ್ಟುಕೊಂಡಿದ್ದರು. ಆದರೆ ದೇಶದ ಜನ ಪ್ರವಾಹದಿಂದ ಸಂತ್ರಸ್ತರಾಗಿರುವಾಗ ಅವು ಮುಖ್ಯವಲ್ಲ ಎಂದೆಣಿಸಿ, ಅವುಗಳನ್ನು ಹರಾಜು ಹಾಕಿ ಆ ಮೊತ್ತವನ್ನು ಪರಿಹಾರ ದೇಣಿಗೆಯಾಗಿ ನೀಡಿದರು. ಹೀಗೆ ದೇಶಕ್ಕೆ ದೇಣಿಗೆ ನೀಡುವುದು ನೆಹರೂ ಕುಟುಂಬಕ್ಕೆ ಹೊಸದೇನೂ ಆಗಿರಲಿಲ್ಲ. ಆಗಿನ ಕಾಲಕ್ಕೆ ಪ್ರಖ್ಯಾತ ವಕೀಲರೆನಿಸಿದ್ದ ಅವರ ತಂದೆ ಮೋತಿಲಾಲ್ ನೆಹರೂ ಅವರು ಆಗರ್ಭ ಶ್ರೀಮಂತರು. ಅಂತವರು ಸ್ವಾತಂತ್ಯ್ರ ಚಳವಳಿಗಾಗಿ ಹಿಂದೆಮುಂದೆ ನೋಡದೆ ದೇಣಿಗೆ ನೀಡುತ್ತಾ ಬಂದರು. ಯಾವ ಮಟ್ಟಕ್ಕೆಂದರೆ ತಮ್ಮ ಸ್ವಂತ ಭವ್ಯ ಬಂಗಲೆ, ಆನಂದ್ ಭವನ’ವನ್ನೇ ಸ್ವಾತಂತ್ಯ್ರ ಚಳವಳಿಗೆ ದಾನವಾಗಿ ಘೋಷಿಸಿದರು. ಅದು
ಸ್ವರಾಜ್ಯ ಭವನ’ ಹೆಸರಿನಲ್ಲಿ ಇಡೀ ಸ್ವಾತಂತ್ಯ್ರ ಚಳವಳಿಯ ಕೇಂದ್ರಸ್ಥಾನವಾಗಿ ಬದಲಾಯಿತೆಂದರೂ ತಪ್ಪಲ್ಲ. ತಮ್ಮ ತಂದೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಸಲುವಾಗಿ, ನವೆಂಬರ್ 24, 1931ರಂದು ನೆಹರೂ ಅಧಿಕೃತವಾಗಿ ಆ ಬಂಗಲೆಯನ್ನು ದೇಶಕ್ಕೆ ಹಸ್ತಾಂತರಿಸಿದ್ದರು.
ನೆಹರೂ ಅವರ ಕೊನೇ ದಿನಗಳವರೆಗೆ ಅವರಿಗೆ ಪರ್ಸನಲ್ ಸೆಕ್ರೆಟರಿಯಾಗಿ ಕೆಲಸ ಮಾಡಿದ ಎಂ.ಒ ಮಥಾಯ್ ಅವರು ತಮ್ಮ `ರೆಮಿನಿಸೆನ್ಸ್ ಆಫ್ ನೆಹರೂ ಏಜ್’ ಕೃತಿಯಲ್ಲಿ ಉಲ್ಲೇಖಿಸಿರುವುದನ್ನು ಪರಿಗಣಿಸುವುದಾದರೆ, ನೆಹರೂ ಈ ದೇಶಕ್ಕಾಗಿ ಮಾಡಿದ ತ್ಯಾಗ ಎಂತದ್ದೆಂಬುದು ಅರ್ಥವಾಗುತ್ತದೆ. ದೇಶಕ್ಕೆ ಸ್ವಾತಂತ್ಯ್ರ ಬಂದ ಹೊಸದರಲ್ಲಿ, ಬ್ರಿಟಿಷರ ನಿರಂತರ ಲೂಟಿಯಿಂದ ದೇಶ ಬರಿದಾಗಿತ್ತು. ಆಗ ನವನಿರ್ಮಾಣದ ಸಂಕಲ್ಪ ಹೊತ್ತ ನೆಹರೂ ಅವರ ಮುಂದೆ ದೇಶದ ಆರ್ಥಿಕ ಬಡತನ ದೊಡ್ಡ ಸವಾಲಾಗಿ ನಿಂತಿತ್ತು. ದೇಶದ ದೊಡ್ಡದೊಡ್ಡ ಉದ್ಯಮಿಗಳಿಂದ ದೇಣಿಗೆ ಸಂಗ್ರಹಿಸಿ ದೇಶನಿರ್‍ಮಾಣಕ್ಕೆ ಮುಂದಾಗಬೇಕೆಂಬ ಸಲಹೆ ಬಂತು. ಆಗ ಬೇರೆಯವರನ್ನು ಕೇಳುವುದಕ್ಕು ಮೊದಲೇ, ಸ್ವತಃ ನೆಹರೂ ತಮ್ಮ ಬಳಿಯಿದ್ದ ಪೂರ್‍ವಿಕರ 196 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ದೇಶಕ್ಕೆ ದೇಣಿಗೆಯಾಗಿ ನೀಡಿದ್ದರು. ಅವತ್ತಿನ ಕಾಲಕ್ಕೆ 196 ಕೋಟಿ ರೂಪಾಯಿ ಅಂದರೆ, ಇವತ್ತಿಗದು ಹದಿನೈದು ಸಾವಿರ ಕೋಟಿಗೂ ಹೆಚ್ಚಾಗುತ್ತದೆ. ತಮ್ಮ ಆಸ್ತಿಯ 98% ಅನ್ನು ನೆಹರೂ ದೇಶದ ನಿರ್‍ಮಾಣಕ್ಕಾಗಿ ದಾನ ಮಾಡಿದ್ದರು ಎನ್ನುತ್ತವೆ ದಾಖಲೆಗಳು.
ಎಂ.ಒ ಮಥಾಯ್ ಅವರು ತಮ್ಮ ಕೃತಿಯಲ್ಲಿ ನೆಹರೂ ಅವರ ದಾನ-ದೇಣಿಗೆಯ ಅತಿರೇಕವನ್ನು ಹೀಗೆ ದಾಖಲಿಸ್ತಾರೆ, “ಸೆಪ್ಟೆಂಬರ್ 02, 1946ರಂದು ದೇಶದ ನವನಿರ್‍ಮಾಣಕ್ಕೆಂದು ಪಂಡಿತ್ ಜಿ ತಮಗೆ ಪೂರ್ವಿಕರಿಂದ ಬಂದ 198 ಕೋಟಿ ಮೌಲ್ಯದ ಆಸ್ತಿ, ಬಂಗಲೆ, ಹಾಗೂ ಬ್ಯಾಂಕಿನಲ್ಲಿದ್ದ ಒಂದೂವರೆ ಕೋಟಿ ರೂಪಾಯಿಯನ್ನು ಸಾರ್ವಜನಿಕ ಬೊಕ್ಕಸಕ್ಕೆ ದಾನ ಮಾಡಿದ್ರು. ಅವರ ಲೆಕ್ಕಪತ್ರ, ಹಣಕಾಸು ವ್ಯವಹಾರವನ್ನೆಲ್ಲ ನಾನೇ ನೋಡ್ಕೊಂಡು ಬರ್‍ತಿದ್ದೆ. ಅವರು ಪ್ರಧಾನಿಯಾದಾಗ, ಅವರ ಪರ್ಸ್‌ನಲ್ಲಿ ಹೆಚ್ಚೆಂದರೆ ಇನ್ನೂರು ರೂಪಾಯಿ ಮಾತ್ರ ಇರ್ತಿತ್ತು. ಅದೂ ನಾನು, ಅವರ ಖರ್ಚಿಗೆಂದು ಇಡ್ತಾ ಇದ್ದದ್ದು. ಒಂದು ಸಲ, ಕೋಮುಗಲಭೆಯ ಸಂತ್ರಸ್ತರ ದೇಣಿಗೆ ಸಂಗ್ರಹಿಸುವುದಕ್ಕೆಂದು ಕಾರ್ಯಕ್ರಮದ ಮಧ್ಯೆ ಯಾರೋ ಬಂದಾಗ, ಆ ಇನ್ನೂರು ರೂಪಾಯಿಯನ್ನೂ ಎತ್ತಿ ಡಬ್ಬಿಗೆ ಹಾಕಿದರು. ಆಗಿನಿಂದ, ನಾನು ಆ ಇನ್ನೂರು ರೂಪಾಯಿಯನ್ನೂ ಇಡೋದು ನಿಲ್ಲಿಸಿದೆ” ಎನ್ನುತ್ತಾರೆ ಮಥಾಯ್…
ಇವತ್ತು ಕೇವಲ ರಾಜಕೀಯ ಉದ್ದೇಶದ ಕಾರಣಕ್ಕೆ ನೆಹರೂ ಅವರ ಚಾರಿತ್ಯ್ರವಧೆ ಮಾಡುವಲ್ಲಿ ಬ್ಯುಸಿಯಾಗಿರುವವರ ನಡುವೆ ಇಂತಹ ಸತ್ಯಗಳು ಮುಂದಿನ ಪೀಳಿಗೆಗೆ ತಿಳಿಯಬೇಕಿದೆ.
ಕ್ರಿಕೆಟ್ ವಿಷಯಕ್ಕೆ ಮರಳುವುದಾದರೆ, ಅವತ್ತು ನೆಹರೂ ಅವರಿಂದ ಪ್ರೇರಿತರಾಗಿ ದೆಹಲಿ ಗುರುದ್ವಾರ ಸಮಿತಿಯ ಮುಖ್ಯಸ್ಥ ಬಚ್ಛೀತ್ತರ್ ಸಿಂಗ್, ತೆಹರಿ ರಾಜಮನೆತನದ ರಾಜಮಾತೆ ಕಮಲೇಂದು ಮತಿಶಾ, ಉಪ ರಕ್ಷಣಾ ಸಚಿವ ಸರ್ದಾರ್ ಸುರ್‍ಜೀತ್ ಸಿಂಗ್ ಮಜೀಥೀಯಾ ಮೊದಲಾದವರು ಕೂಡಾ ಹರಾಜಿನಲ್ಲಿ ಭಾಗಿಯಾಗಿ ಅಪಾರ ದೇಣಿಗೆ ನೀಡಿದರು. ಏನಿಲ್ಲವೆಂದರು, ಅವತ್ತು ಸುಮಾರು 80,000 ರೂಪಾಯಿ ಹರಾಜಿನಲ್ಲಿ ಸಂಗ್ರಹವಾಯ್ತು. ಕೊನೆಗೆ ಮಾತನಾಡಿದ ನೆಹರೂ, “ದೂರದ ಜಪಾನ್, ಯೂರೋಪ್‌ಗಳಲ್ಲಾದ ಪ್ರಕೃತಿ ವಿಕೋಪಗಳ ಬಗ್ಗೆ ಓದಿದಾಗ ನಾವೆಲ್ಲ ತುಂಬಾ ವ್ಯಥೆ ಪಟ್ಟಿದ್ದೆವು. ಆದರೆ ಈಗ ನಮ್ಮ ಕಣ್ಣಮುಂದೆಯೇ, ನಮ್ಮದೇ ಸಾವಿರಾರು ಹಳ್ಳಿಗಳು ನೀರಿನಲ್ಲಿ ಮುಳುಗಿಹೋಗಿ, ಲಕ್ಷಾಂತರ ಸೋದರ-ಸೋದರಿಯರು ರೋಧಿಸುತ್ತಿರೋದನ್ನು ನೋಡಿದಾಗ ಹೇಗೆನಿಸಬೇಡ. ನಮ್ಮ ಕೈಲಾದ ನೆರವು ನೀಡುವುದಕ್ಕೆಂದೇ ಈ ಪಂದ್ಯದ ನೆಪ. ದಯವಿಟ್ಟು ಇಲ್ಲಿ ನೆರೆದಿರುವ ಎಲ್ಲರೂ ತಮ್ಮ ಕೈಲಾದ ಸಹಾಯ ಮಾಡಿ” ಎಂದು ದೈನೇಸಿಯಾಗಿ ಬೇಡಿಕೊಂಡಿದ್ದರು. ಅಪಾರ ದೇಣಿಗೆಯು ಸಂಗ್ರಹವಾಯ್ತು. ಲಾಸ್ಟ್ ಬಟ್ ನಾಟ್ ಲೀಸ್ಟ್, ನೆಹರೂ ತಮ್ಮ ಕೈಬೆರಳಿನಲ್ಲಿದ್ದ ವಜ್ರದುಂಗುರವನ್ನು ತೆಗೆದು ಪ್ರವಾಹ ಸಂತ್ರಸ್ತರ ಪರಿಹಾರ ದೇಣಿಗೆಯಾಗಿ ನೀಡಿದರು. ಒಟ್ಟಾರೆಯಾಗಿ ಎಲ್ಲಾ ಹಣವನ್ನು ಪ್ರವಾಹ ಸಂತ್ರಸ್ತರಿಗೆ ಕಳುಹಿಸಿಕೊಡಲಾಯ್ತು.
ಚಾಚಾ ನೆಹರೂ ಅವರ ಕ್ರಿಕೆಟ್ ಪ್ರೇಮ ಇಷ್ಟಕ್ಕೇ ಸೀಮಿತವಾಗುವುದಿಲ್ಲ. ಯಾವುದೇ ವಿದೇಶಿ ತಂಡ ಭಾರತಕ್ಕೆ ಭೇಟಿ ನೀಡುವಾಗಲೂ, ಉಭಯ ತಂಡದ ಆಟಗಾರರಿಗೆ ಶುಭಾಶಯ ಹೇಳಿ ಪತ್ರ ಬರೆಯುತ್ತಿದ್ದರು. ತಮ್ಮ ರಾಜಕೀಯ ಒತ್ತಡದ ನಡುವೆ ಬಿಡುವಿದ್ದರೆ ಹೋಗಿ ಪ್ರೇಕ್ಷಕರ ನಡುವೆ ಕೂತು ವೀಕ್ಷಿಸುತ್ತಿದ್ದರು. ನೆಹರೂ ವೀಕ್ಷಿಸಲು ಹೋಗಿದ್ದ ಅಂತಹ ಒಂದು ಪಂದ್ಯದಲ್ಲಿ ನಡೆದ ಕಹಿಘಟನೆಯ ಬಗ್ಗೆ ಅವರು ವಿಷಾದದ ಮಾತಾಡಿದ್ದೂ ಉಂಟು. 1960-61ರಲ್ಲಿ ಪಾಕಿಸ್ತಾನ ತಂಡ ಐದು ಟೆಸ್ಟ್ ಪಂದ್ಯಗಳನ್ನಾಡೋದಕ್ಕೆ ಅಂತ ಭಾರತಕ್ಕೆ ಭೇಟಿ ನೀಡಿತ್ತು. ಒಂದು ಪಂದ್ಯದಲ್ಲಿ ಪ್ರೇಕ್ಷಕರು ಸಂಯಮ ಕಳೆದುಕೊಂಡು ಅತಿರೇಕದಿಂದ ವರ್ತಿಸಿದ್ದರು. ಆ ಘಟನೆಯ ಬಗ್ಗೆ ನಮ್ಮ ಕರ್ನಾಟಕದವರೇ ಆದ ಸ್ವಾತಂತ್ಯ್ರ ಹೋರಾಟಗಾರ, ಪತ್ರಕರ್ತ, ಹಿರಿಯ ವಕೀಲರಾಗಿದ್ದ ಜೋಅಕಿಮ್ ಆಳ್ವ ಅವರು ಪ್ರಧಾನಿ ನೆಹರೂ ಅವರಿಗೆ ಪತ್ರ ಬರೆದು ಪ್ರೇಕ್ಷಕರ ವರ್ತನೆಯ ಬಗ್ಗೆ ಆಘಾತ ವ್ಯಕ್ತಪಡಿಸುತ್ತಾರೆ. 1961ರ ಫೆಬ್ರವರಿಯಲ್ಲಿ ಅದಕ್ಕೆ ಉತ್ತರ ಬರೆಯುವ ನೆಹರೂ, “ನೀವು ಉಲ್ಲೇಖಿಸಿದ ಅಂತಹ ವರ್ತನೆಗಳು ಸರಿಯಾದುದಲ್ಲ ಅನ್ನೋದನ್ನು ನಾನೂ ಒಪ್ತೀನಿ. ನಾನೂ ಸ್ವಲ್ಪ ಹೊತ್ತು ಆ ಪಂದ್ಯ ನೋಡುವುದಕ್ಕೆಂದು ಹೋಗಿದ್ದೆ. ನಾನಿದ್ದಾಗಲೂ, ಅಂತಹದ್ದೊಂದು ಕಹಿಘಟನೆ ನಡೆಯಿತು. ಭಾರತದ ಆಟಗಾರನೊಬ್ಬ ಅಕಸ್ಮಾತ್ ಆಗಿ ಒಂದೋ ಎರಡೋ ಬಾರಿ ಕ್ಯಾಚ್ ಕೈಚೆಲ್ಲಿದ. ಅಷ್ಟಕ್ಕೇ ಪ್ರೇಕ್ಷಕರು ಆತನ ವಿರುದ್ಧ ಕೂಗಾಡುತ್ತಿದ್ದರು. ಲೇವಡಿ ಮಾಡುತ್ತಿದ್ದರು. ಇದು ನಿಜಕ್ಕೂ ಖಂಡನೀಯ. ನನಗೂ ಬೇಸರವಾಗಿದೆ” ಎಂದು ಹೇಳಿದ್ದರು.
ಕ್ರೀಡೆಯನ್ನು ಯಾವತ್ತೂ ಕ್ರೀಡಾಸ್ಫೂರ್ತಿಯಿಂದ ನೋಡಬೇಕು, ಅದರಲ್ಲಿ ಸೋಲುಗೆಲುವು ಮುಖ್ಯವಾಗಬಾರದು ಎನ್ನುವ ಸ್ಫೋರ್ಟ್ಸ್‌ಮನ್‌ಶಿಪ್ ಅವತ್ತು ಕೂಡಾ ನೆಹರೂ ಅವರಲ್ಲಿ ಹಾಗೇ ಇದ್ದದ್ದು ಆ ಪತ್ರದಿಂದ ನಮಗೆ ಅರ್ಥವಾಗುತ್ತೆ. ಭಾರತವು ಕಾಮನ್‌ವೆಲ್ತ್ ಒಕ್ಕೂಟದಲ್ಲಿ ಉಳಿಯಲಿದೆ ಎಂದು ನೆಹರೂ ತೆಗೆದುಕೊಂಡ ನಿರ್ಧಾರದಿಂದಲೇ, ಭಾರತದಲ್ಲಿ ಕ್ರಿಕೆಟ್ ಅಸ್ತಿತ್ವ ಉಳಿದು, ಇವತ್ತು ಇಷ್ಟು ಉಚ್ಛ್ರಾಯ ಸ್ಥಿತಿ ತಲುಪಲು ಸಾಧ್ಯವಾಗಿದೆ; ಇಲ್ಲದಿದ್ದರೆ, ಇಂಪೀರಿಯಲ್ ಕ್ರಿಕೆಟ್ ಕಮಿಟಿ (ಇವತ್ತಿನ ಐಸಿಸಿ) 1949ರಲ್ಲೇ ಭಾರತವನ್ನು ತನ್ನ ಐಸಿಸಿ ಸದಸ್ಯತ್ವದಿಂದ ತೆಗೆದುಹಾಕುತ್ತಿತ್ತು; ಅದರಿಂದಾಗಿ ಸ್ಪರ್ಧೆಯ ಅವಕಾಶವಿಲ್ಲದೆ ಕ್ರಿಕೆಟ್ ಸೊರಗುತ್ತಿತ್ತು ಎಂದು ಕೆಲವರು ಹೇಳುತ್ತಾರೆ. ಅದು ನಿಜವೂ ಇರಬಹುದು. ಆದರೆ ಕಾಮನ್‌ವೆಲ್ತ್ ಒಕ್ಕೂಟದಲ್ಲಿ ಉಳಿಯುವ ನಿರ್ಧಾರ ತೆಗೆದುಕೊಳ್ಳುವಾಗ ಅಪಾರ ದೂರದೃಷ್ಟಿ ಮತ್ತು ಜಾಗತಿಕ ವಿದ್ಯಮಾನಗಳ ಒಳನೋಟವುಳ್ಳ ಜನನಾಯಕನಾಗಿ ಅವರಿಗೆ ಸಾಮಾಜಿಕ, ಆರ್ಥಿಕ, ಜಾಗತಿಕ ಅನುಕೂಲ-ಅಸ್ತಿತ್ವಗಳ ಪ್ರಶ್ನೆಗಳು ಮುಖ್ಯವಾಗಿದ್ದವೇ ವಿನಾಃ ಕ್ರಿಕೆಟ್ ಅನ್ನು ಉಳಿಸಬೇಕೆಂಬ ಆಸೆ ಪ್ರಧಾನವಾಗಿರಲಿಕ್ಕಿಲ್ಲ. ಒಟ್ಟಿನಲ್ಲಿ ನೆಹರೂ ಅವರ ಆ ನಿರ್ಧಾರದ ಪರೋಕ್ಷ ಅನುಕೂಲ ಕ್ರಿಕೆಟ್‌ಗೆ ಸಿಕ್ಕಿದ್ದು ಮಾತ್ರ ಸತ್ಯ.
- ಗಿರೀಶ್ ತಾಳಿಕಟ್ಟೆ, ಪತ್ರಕರ್ತರು