Wednesday, November 27, 2024

ಸತ್ಯ | ನ್ಯಾಯ |ಧರ್ಮ

ನಿಖಿಲ್ ಸೋಲಿನ `ವಿಷಕಾರಿ’ ನೆರೇಟಿವಿಟಿಯೂ; ಸ್ವಾಮಿಯ ಮಾತಿಗೆ ತಳುಕಿಸಿಕೊಂಡ ಬಿಎಂಟಿಸಿ ಸಾಬರ ಜಗಳವೂ

“..ನಿಖಿಲ್ ಕುಮಾರಸ್ವಾಮಿ, ಚಂದ್ರಶೇಖರ ಸ್ವಾಮಿ ಇಬ್ಬರೂ ಕ್ಷುಲ್ಲಕ ವ್ಯಕ್ತಿಗಳಲ್ಲ. ಇವರಾಡಿದ ಮಾತುಗಳು ಒಕ್ಕಲಿಗ ಸಮುದಾಯದ ಮೇಲೆ ಬೀರಬಹುದಾದ ಪರಿಣಾಮ ಎಂಥಾ ಅಪಾಯಕಾರಿಯದ್ದು ಎಂಬುದನ್ನು ನಾವು ಅಂದಾಜಿಸಬಹುದು. ಒಕ್ಕಲಿಗ ಸಮುದಾಯದ ಪ್ರಜ್ಞಾವಂತರು ಪ್ರತಿಕ್ರಿಯಿಸಲೇಬೇಕಾದ ತುರ್ತು ಕಾಲವಿದು..” ಚಿಂತಕರಾದ ಮಾಚಯ್ಯ ಹಿಪ್ಪರಗಿ ಅವರ ಬರಹದಲ್ಲಿ ತಪ್ಪದೇ ಓದಿ

ಐದಾರು ವರ್ಷಗಳ ಹಿಂದಿನ ಮಾತು. ಗೌರಿ ಲಂಕೇಶ್‌ ಅವರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಮೊದಲ ಆರೋಪಿಯನ್ನು ಬಂಧಿಸಿದ್ದರು. ಆತ ಮದ್ದೂರು ಮೂಲದವನು. ಒಕ್ಕಲಿಗರ ಪ್ರಾಬಲ್ಯವಿರುವ ಹಳೇ ಮೈಸೂರು ಪ್ರಾಂತ್ಯದಲ್ಲಿ ಆ ಸಮುದಾಯವನ್ನು ತಮ್ಮ ಕೈವಶ ಮಾಡಿಕೊಳ್ಳುವ ಉದ್ದೇಶದೊಂದಿಗೆ ಕೋಮುವಾದಿ ಸಂಘಟನೆಗಳು ನಿರಂತರವಾಗಿ ಕಾರ್ಯಪ್ರವೃತ್ತವಾಗಿದ್ದನ್ನು, ಹಾಗೂ ಆ ಪ್ರಯತ್ನಗಳು ವಿಫಲವಾಗುತ್ತಲೇ ಬಂದಿದ್ದನ್ನು ನಾನು ಗಮನಿಸಿದ್ದೆ. ಆದರೆ ಗೌರಿ ಲಂಕೇಶ್ ಅವರ ಹತ್ಯೆ ಕೇಸಿನಲ್ಲಿ ಆ ಭಾಗದ ವ್ಯಕ್ತಿಯೇ ಅರೆಸ್ಟಾದ ನಂತರ, ನನಗೆ ತುಸು ಆತಂಕ ಕಾಡಲಾರಂಭಿಸಿತು. ಧರ್ಮ ಮತ್ತು ಮತೀಯ ದ್ವೇಷವನ್ನು ನೆತ್ತಿಗತ್ತಿಸಿ ಒಕ್ಕಲಿಗ ಸಮುದಾಯದ ಯುವಜನಾಂಗದ ನಡುವೆ ಕೋಮುವಾದಿ ಸಂಘಟನೆಗಳು ಪಸರಿಸಲು ಆರಂಭಿಸಿವೆಯೇ? ಚಿಂತಕ-ಹತ್ಯೆಯಲ್ಲಿ ಬಂಧಿತನಾದ ಆ ವ್ಯಕ್ತಿ, ಇಂತಹ ಕೇಡಿನ ಸೂಚಕವೇ?…… ಅದೊಂದು ಸಂಜೆ ನನ್ನ ಒಕ್ಕಲಿಗ ಮಿತ್ರರೊಬ್ಬರ ಬಳಿ ಈ ಆತಂಕ ಹೇಳಿಕೊಂಡೆ. ಹಿರಿಯ ಸಾಹಿತಿ, ಪ್ರಕಾಶಕರೂ ಆದ ಅವರು ಒಂದೇ ಮಾತಿಗೆ ನನ್ನ ಆತಂಕವನ್ನು ಅಲ್ಲಗಳೆಯುತ್ತಾ, “ಅದು ಸಾಧ್ಯವೇ ಇಲ್ಲ. ಒಕ್ಕಲಿಗರು ಬೇರೆ ಸಮುದಾಯಗಳಂತಲ್ಲ. ನಮಗೆ ಕುವೆಂಪು ಅವರ ಪರಂಪರೆ ಇದೆ. ಒಳ್ಳೆಯದು, ಕೆಟ್ಟದು ತೂಗುವ ಸಾಮರ್ಥ್ಯವಿದೆ. ಹೇಳಿಕೆ ಮಾತುಗಳಿಗೆ ಬಲಿಯಾಗಿ, ಯಾರದೋ ಕೈಗೊಂಬೆಗಳಾಗುವುದಿಲ್ಲ. ನಮ್ಮಲ್ಲಿ ತುಸು ಜಾತಿ ಅಭಿಮಾನ ಹೆಚ್ಚಿರಬಹುದು, ಆದರೆ ಕೋಮುವಾದಿಗಳಾಗುವಷ್ಟು ಮುಠ್ಠಾಳರಲ್ಲ” ಎಂದು ದೃಢವಾಗಿ ಮಾತನಾಡಿದರು. ನನ್ನ ಆತಂಕವನ್ನು ಸಮಾಧಾನಗೊಳಿಸುವಂತಹ ಗಹನವಾದ ತಾರ್ಕಿಕ ಆಯಾಮಗಳು ಅವರ ಮಾತುಗಳಲ್ಲಿ ಗೋಚರಿಸಲಿಲ್ಲವಾದರೂ, ಕೋಮುವಾದವೆಂಬುದು ಅಪಾಯಕಾರಿಯೂ, ಅದಕ್ಕೆ ಬಲಿಯಾಗುವುದೆಂದರೆ ಮುಠ್ಠಾಳತನವೂ ಎಂಬ ಅರಿವಿರುವ ಪ್ರಜ್ಞಾವಂತರು ಒಕ್ಕಲಿಗ ಸಮುದಾಯದಲ್ಲಿದ್ದಾರಲ್ಲಾ; ಅಂತಹ ಸಂದರ್ಭ ಎದುರಾದರೆ ಇವರೆಲ್ಲ ಒಗ್ಗೂಡಿ, ತಮ್ಮ ಸಮುದಾಯವನ್ನು ಎಚ್ಚರಿಸುವರಲ್ಲವೇ ಎಂಬ ಸಣ್ಣ ನೆಮ್ಮದಿಯಿಂದ ಆ ಚರ್ಚೆಯನ್ನು ಅಲ್ಲಿಗೆ ನಿಲ್ಲಿಸಿದ್ದೆವು.

ಆದರೆ ಆ ನೆಮ್ಮದಿ ಈಗ ಸಂಪೂರ್ಣ ಭಗ್ನಗೊಳ್ಳುತ್ತಿದೆ. ಅದಕ್ಕೆ ಕಾರಣವಾದದ್ದು ಇತ್ತೀಚಿನ ಎರಡು ಘಟನೆಗಳು. ಮೊನ್ನೆಯಷ್ಟೇ ಮುಗಿದ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸೋತ ನಂತರ ನಿಖಿಲ್ ಕುಮಾರಸ್ವಾಮಿ ‘ನನ್ನ ಸೋಲಿಗೆ ಒಂದು ನಿರ್ದಿಷ್ಟ ಸಮುದಾಯ ಕಾರಣ. ಅವರು ನನ್ನ ಕೈಹಿಡಿಯಲಿಲ್ಲ’ ಎಂದು ಹೇಳಿದ್ದಾರೆ. ಅವರ ಮಾತು ಮುಸಲ್ಮಾನರನ್ನೇ ಗುರಿಯಾಗಿಸಿಕೊಂಡಿರೋದು ಅರ್ಥವಾಗುತ್ತೆ. ಅದಾಗಿ ಎರಡೇ ದಿನಗಳಿಗೆ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮಿ ‘ಮುಸ್ಲಿಮರಿಗೆ ಮತದಾನದ ಹಕ್ಕು ರದ್ದು ಮಾಡಬೇಕು. ಆಗ ಮಾತ್ರ ಎಲ್ಲಾ ಭಾರತೀಯರು ನೆಮ್ಮದಿಯಿಂದ ಇರಲು ಸಾಧ್ಯ’ ಎಂಬ ವಿವಾದದ ಮಾತನ್ನಾಡಿದ್ದಾರೆ. ಇವರಿಬ್ಬರು ಯಾರೋ ಕ್ಷುಲ್ಲಕ ವ್ಯಕ್ತಿಗಳಲ್ಲ. ಒಬ್ಬಾತ, ಇಡೀ ಒಕ್ಕಲಿಗ ಸಮುದಾಯವನ್ನು ತನ್ನ ರಾಜಕೀಯ ಅಸ್ಮಿತೆಯಾಗಿಸಿಕೊಂಡು ಆ ಮೂಲಕ ಪ್ರಧಾನಿ ಮತ್ತು ಮುಖ್ಯಮಂತ್ರಿ ಹುದ್ದೆಗಳನ್ನು ದಕ್ಕಿಸಿಕೊಂಡ ಕುಟುಂಬವೊಂದರ ಕುಡಿ. ಇನ್ನೊಬ್ಬರು, ಒಕ್ಕಲಿಗರ ಆಧ್ಯಾತ್ಮಿಕ ಮತ್ತು ಧಾರ್ಮಿಕ ಐಡೆಂಟಿಟಿಯಾಗಿ ಗೌರವಿಸಲ್ಪಡುವವರು. ಹಾಗಾಗಿ ಇವರಾಡಿದ ಮಾತುಗಳು ಒಕ್ಕಲಿಗ ಸಮುದಾಯದ ಮೇಲೆ ಬೀರಬಹುದಾದ ಪರಿಣಾಮ ಎಂಥಾ ಅಪಾಯಕಾರಿಯದ್ದು ಎಂಬುದನ್ನು ನಾವು ಅಂದಾಜಿಸಬಹುದು. ಜೊತೆಗೆ, ಒಕ್ಕಲಿಗ ಸಮುದಾಯದ ಪ್ರಸ್ತುತ ಸಾಮಾಜಿಕ ಮನಸ್ಥಿತಿಯ ಸೂಚಕಗಳಾಗಿಯೂ ನಾವು ಈ ಮಾತುಗಳನ್ನು ಪರಿಗಣಿಸಬೇಕಾಗುತ್ತದೆ. ಒಕ್ಕಲಿಗ ಸಮುದಾಯದ ಎಲ್ಲರೂ, ಈ ಇಬ್ಬರ ಮಾತುಗಳನ್ನು ಪ್ರತಿನಿಧಿಸುವುದಿಲ್ಲ ಅಥವಾ ಸಮ್ಮತಿಸುವುದಿಲ್ಲ ಎಂದು ನೀವು ವಾದಿಸಬಹುದು. ನಾನೂ ಅದನ್ನು ಒಪ್ಪಿಕೊಳ್ಳುವೆ. ಆದರೆ, ಯಾವುದೇ ಮಾರಕ ಕಾಯಿಲೆಯ ಶುರುವಾತು ಏಕ್‌ಧಂ ಸರ್ವವ್ಯಾಪಿ ರೂಪದಲ್ಲಿರುವುದಿಲ್ಲ. ದೇಹದ ಯಾವುದೋ ಒಂದು ಭಾಗದ, ಸಣ್ಣ ಲಕ್ಷಣವಾಗಿಯೇ ಅದು ಗೋಚರಿಸೋದು.

ಯಾಕೆ ಈ ಮಾತು ಹೇಳ್ತಾ ಇದೀನಿ ಅಂದ್ರೆ, ಕಳೆದ ವರ್ಷದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಒಕ್ಕಲಿಗರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಲು ಕೋಮುವಾದಿ ಶಕ್ತಿಗಳು ಉರೀಗೌಡ, ನಂಜೇಗೌಡ ಎಂಬ ಕಟ್ಟುಕಥೆಯನ್ನು ಮುನ್ನೆಲೆಗೆ ತಂದಿದ್ದವು. ಆಗ, ಕುಮಾರಸ್ವಾಮಿಯವರು ಆ ದುಷ್ಟ ಯತ್ನದ ವಿರುದ್ಧ ಸಿಡಿದೆದ್ದು ಮಾತಾಡಿದ್ದರು. ಸಮಾಜಕ್ಕೆ ಬೆಂಕಿ ಇಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದರು. ಕೊನೆಗೆ ಆದದ್ದೇನು? ಸ್ವತಃ ಅವರೇ ಕೋಮುವಾದದ ಸಮರ್ಥಕರಾಗಿ ಬದಲಾದರು. ಎಷ್ಟರಮಟ್ಟಿಗೆಂದರೆ, ನಾನು ಮುಸ್ಲಿಂ ಸಮುದಾಯವೊಂದನ್ನೇ ನಂಬಿಕೊಂಡು ರಾಜಕಾರಣ ಮಾಡುತ್ತಿಲ್ಲ ಎಂದಿದ್ದಲ್ಲದೆ ಕೆರೆಗೋಡು ಹನುಮಧ್ವಜ ವಿವಾದ ಹಾಗೂ ನಾಗಮಂಗಲದ ಕೋಮುಗಲಭೆ ಸಂದರ್ಭದಲ್ಲಿ ಕೋಮುವಾದದ ಐಕಾನ್‌ ರೀತಿ ವರ್ತಿಸಿದ್ದರು. ಈಗ ಆ ಕೋಮುವಾದದ ವ್ಯಾಧಿ, ಗೌಡರ ಕುಟುಂಬದ ರಾಜಕಾರಣವನ್ನೂ ದಾಟಿ ಒಕ್ಕಲಿಗರ ಮಠದವರೆಗೆ ವ್ಯಾಪಿಸಿದೆ. ಆ ಮೂಲಕ, ಒಕ್ಕಲಿಗ ಸಮುದಾಯದೊಳಗೆ ಕೋಮುವಾದ ವಿಸ್ತರಿಸುತ್ತಿದೆ ಎಂಬುದನ್ನು ಸಾಕ್ಷೀಕರಿಸಿದೆ.

ನಿಖಿಲ್ ಸೋತಿದ್ದು ಮುಸ್ಲೀಮರಿಂದಲೇ ಎಂಬ ನೆರೇಟಿವಿಟಿಯನ್ನು ಹುಟ್ಟುಹಾಕಿ, ಆ ಮೂಲಕ ಒಕ್ಕಲಿಗರನ್ನು ಮುಸ್ಲಿಂ ಸಮುದಾಯದ ವಿರುದ್ಧ ಎತ್ತಿಕಟ್ಟುವ ವ್ಯವಸ್ಥಿತ ಹುನ್ನಾರಕ್ಕೆ ಚಾಲನೆ ನೀಡಲಾಗಿದೆ. ಇಂಥಾ ನೆರೇಟಿವಿಟಿಗೆ ಕನ್ವಿನ್ಸ್‌ ಆಗಿಯೇ ಸ್ವಾಮಿ ಈ ಮಾತು ಹೇಳಿರೋದು ಅನ್ನೋದರಲ್ಲಿ ಅನುಮಾನವಿಲ್ಲ. ಚನ್ನಪಟ್ಟಣದಲ್ಲಿರುವ ಒಟ್ಟು 2.32 ಲಕ್ಷ ಮತಗಳಲ್ಲಿ ಮುಸ್ಲಿಂ ಮತಗಳಿರೋದು ಕೇವಲ 30 ಸಾವಿರ ಮಾತ್ರ. ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸುವ ಅಥವಾ ಸೋಲಿಸುವ ಏಕಾಂಗಿ ಸಾಮರ್ಥ್ಯ ಈ ಸಂಖ್ಯೆಗಿಲ್ಲ. ಆದರೂ ಮುಸ್ಲಿಂ ದ್ವೇಷವನ್ನು ಹುಟ್ಟುಹಾಕಲು ಅತಾರ್ಕಿಕ ವಾದವನ್ನು ತೇಲಿಬಿಡಲಾಗುತ್ತಿದೆ. ಯಾಕೆ ಇದು ಅತಾರ್ಕಿಕ ಅನ್ನಲು ಸಾಕಷ್ಟು ಕಾರಣಗಳು ಸಿಗುತ್ತವೆ. ಅದರಲ್ಲಿ ಒಂದನ್ನು ನೋಡೋಣ. ಒಂದುವೇಳೆ, ಈ ನೆರೇಟಿವಿಟಿಯ ಪ್ರಕಾರ ಮುಸ್ಲಿಮರು ಸಾರಾಸಾಗಟಾಗಿ ಜೆಡಿಎಸ್‌ಗೆ ಮತ ನೀಡಿಲ್ಲ ಅಂತಲೇ ಭಾವಿಸೋಣ. ಹಾಗಾದರೆ ಅವರು ಮತ ನೀಡಿದ್ದು ಮತ್ತ್ಯಾರಿಗೆ? ಆ ನೆರೇಟಿವಿಟಿಯ ಪ್ರಕಾರ ಸಿ ಪಿ ಯೋಗೇಶ್ವರ್‍‌ಗೆ. ಈ ಯೋಗೇಶ್ವರ್‍‌ ಒಕ್ಕಲಿಗನಲ್ಲವೇ!? ಒಬ್ಬ ಒಕ್ಕಲಿಗ ನಾಯಕನಿಗೆ ಮತ ನೀಡಿದ್ದಕ್ಕಾಗಿ, ಮುಸ್ಲಿಂ ಸಮುದಾಯಕ್ಕೆ ಒಕ್ಕಲಿಗರ ವಿರೋಧಿ ಎಂದು ಎತ್ತಿಕಟ್ಟುವುದು ಎಂಥಾ ಅತಾರ್ಕಿಕವಲ್ಲವೇ?

ಈ ರಾಜಕೀಯ ತರ್ಕಗಳು ಏನೇ ಇರಲಿ, ನಿಖಿಲ್‌ ಸೋಲನ್ನು ನೆಪವಾಗಿಟ್ಟುಕೊಂಡು ಒಕ್ಕಲಿಗರನ್ನು ಮುಸ್ಲೀಮರ ವಿರುದ್ಧ ಎತ್ತಿಕಟ್ಟುವ ಹುನ್ನಾರ ನಡೆಯುತ್ತಿರುವುದು ಮಾತ್ರ ಸತ್ಯ. ಸ್ವಾಮೀಜಿಯ ಹೇಳಿಕೆ ಅದಕ್ಕೊಂದು ನಿದರ್ಶನ ಮಾತ್ರ. ನನ್ನ ಗೆಳೆಯನೊಬ್ಬನ ಇವತ್ತಿನ ತಾಜಾ ಅನುಭವವನ್ನೇ ಕೇಳಿ. ಬೆಳಿಗ್ಗೆ ಬಿಎಂಟಿಸಿ ಬಸ್ಸಿನಲ್ಲಿ ಚಿಲ್ಲರೆ ಹಣಕ್ಕಾಗಿ ಕಂಡಕ್ಟರ್ ಮತ್ತು ಪ್ಯಾಸೆಂಜರ್‍‌ ನಡುವೆ ವಾಗ್ವಾದ ನಡೆಯುತ್ತಿತ್ತಂತೆ. ಇಬ್ಬರೂ ಸಾಬರೆ.. ಹಾಗಾಗಿ ಉರ್ದುವಿನಲ್ಲೆ ಜಗಳ ಕಾಯುತ್ತಿದ್ದರು. ಆಗ ಇದ್ದಕ್ಕಿದ್ದಂತೆ ರಂಗಪ್ರವೇಶಿಸಿದ ದಢೂತಿ ವ್ಯಕ್ತಿಯೊಬ್ಬ “ಏಯ್‌, ಏನೇ ಜಗಳ ಆಡೋದಿದ್ರೂ ಕನ್ನಡದಲ್ಲಿ ಆಡಿ, ಉರ್ದು ಭಾಷೆಯಲ್ಲಿ ಯಾಕೆ ಜಗಳ ಆಡ್ತೀರಾ? ಅಲ್ಲಿ ನೋಡಿದ್ರೆ, ನಿಖಿಲ್‌ ಸೋಲಿಸಿ ಬಂದಿದೀರಿ..” ಎಂದು ಬೆದರಿಕೆ ಹಾಕಿದನಂತೆ. ಮುಂದೆ ಜಗಳ ಯಾವ ರೂಪ ಪಡೆಯಿತು ಅನ್ನೋದು ಮುಖ್ಯವಲ್ಲ. ಆದರೆ, ಎಲ್ಲಿಯದೋ ಚನ್ನಪಟ್ಟಣ ಚುನಾವಣೆಗೂ, ಅಲ್ಲಿನ ಮತದಾರರೇ ಅಲ್ಲದ ಬೆಂಗಳೂರಿನ ಮುಸ್ಲೀಮರಿಗೂ ಏನು ಸಂಬಂಧ? ಇದು ಎರಡು ಸಮುದಾಯಗಳನ್ನು ಎತ್ತಿಕಟ್ಟುವ ಅಪಾಯಕಾರಿ ಯತ್ನ. ಆ ಸ್ವಾಮಿಯ ಅಸಂಬದ್ಧ ಹೇಳಿಕೆ ಬರುವುದಕ್ಕು ಮೊದಲೇ ನಡೆದ ಘಟನೆ ಇದು! ಅಂದರೆ ಈ ನೆರೇಟಿವಿಟಿಯನ್ನು ಎಷ್ಟು ವ್ಯಾಪಕವಾಗಿ ಪೆಡಲ್ ಮಾಡಲಾಗುತ್ತಿದೆ ಅನ್ನೋದನ್ನು ನಾವೀಗ ಅರ್ಥ ಮಾಡಿಕೊಳ್ಳಬೇಕು.

ಈಗ ನನ್ನ ನಿರೀಕ್ಷೆಯ ನೋಟವಿರುವುದು, ಒಕ್ಕಲಿಗ ಸಮುದಾಯದೊಳಗಿರುವ ಪ್ರಜ್ಞಾವಂತರೆನಿಸಿಕೊಂಡವರತ್ತ. ಯಾಕೆಂದರೆ ಯಾವುದೇ ಸಮುದಾಯ ಹೆಜ್ಜೆತಪ್ಪುತ್ತಿರುವಾಗ ಅದನ್ನು ಎಚ್ಚರಿಸುವ ಹೊಣೆ ಆಯಾ ಸಮುದಾಯದ ಪ್ರಜ್ಞಾವಂತರದ್ದೇ ಆಗಿರುತ್ತೆ. ಹೊರಗಿನವರ್‍ಯಾರೋ ಆ ಕೆಲಸ ಮಾಡಲು ಬಂದರೆ ಅದು ಉಪಶಮನಕ್ಕಿಂತ ಉದ್ದೀಪನವಾಗುವ ಅಪಾಯವೇ ಹೆಚ್ಚು. ವಿಶ್ವಮಾನವ ಸಂದೇಶ ಕೊಟ್ಟ ಕುವೆಂಪು ಅವರನ್ನು ತಮ್ಮ ಸಾಂಸ್ಕೃತಿಕ ಪರಂಪರೆಯಾಗಿ ಗುರುತಿಸಿಕೊಳ್ಳುವ ಒಕ್ಕಲಿಗ ಸಮುದಾಯದ ಪ್ರಜ್ಞಾವಂತರು ಈಗ ತಮ್ಮ ಸಮುದಾಯ ಒಳಿತಿಗಾಗಿ ಕಾರ್ಯಪ್ರವೃತ್ತವಾಗುವ ತುರ್ತನ್ನು ಕಾಲ ಎದುರಿಗಿಟ್ಟಿದೆ. ತಮ್ಮ ಸಮುದಾಯದ ಒಬ್ಬ ಗೌರವಾನ್ವಿತ ಸ್ವಾಮಿಯೇ ಕೋಮುವಿಭಜಕ ಮಾತುಗಳನ್ನಾಡುತ್ತಾರೆಂದರೆ, ಅದು ಆ ಸಮುದಾಯವನ್ನು ದಿಕ್ಕುತಪ್ಪಿಸುವ ಅಪಾಯವನ್ನು ನಿರಾಕರಿಸಲು ಆಗದು. ಕುವೆಂಪು ಅವರ ವಿಶ್ವಮಾನವತೆಯನ್ನು ಜೀವಂತಗೊಳಿಸುವ ಹೊಣೆ ಈಗ ಆ ಪ್ರಜ್ಞಾವಂತರ ಮೇಲಿದೆ. ಕೆಲವೊಮ್ಮೆ, ಕೆಟ್ಟತನದೆಡೆಗೆ ನಿರ್ಲಕ್ಷ್ಯವೆನ್ನುವುದು ಸಮ್ಮತಿಗಿಂತಲೂ ಅಪಾಯಕಾರಿಯಾಗಿರುತ್ತದೆ ಅನ್ನೋದನ್ನು ಮರೆಯಬಾರದು.

ಮಾಚಯ್ಯ ಎಂ ಹಿಪ್ಪರಗಿ

Related Articles

ಇತ್ತೀಚಿನ ಸುದ್ದಿಗಳು

You cannot copy content of this page